ಧಾರಾವಾಹಿ-103
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮಕ್ಕಳ ಜೊತೆಗಿನ ಸಂತಸದ ದಿನಗಳು


ಕಿರಿಯ ಮಗಳನ್ನು ನೋಡಲು ಆಗಾಗ ಎರಡನೇ ಮಗಳು ಹೋಗಿ ಅವಳ ಯೋಗಕ್ಷೇಮವನ್ನು ನೋಡಿಕೊಂಡು ಬರುತ್ತಿದ್ದಳು. ಆದರೆ ಈ ಬಾರಿ ಸೆಕ್ರೆಟರಿ… “ತಾಯಿಯೂ ಜೊತೆಗೆ ಬರಬೇಕು…ಮುಖ್ಯವಾದ ವಿಷಯವೊಂದರ ಬಗ್ಗೆ ಸಮಾಲೋಚನೆ ನಡೆಸಬೇಕಾಗಿದೆ ಎಂದು ತಿಳಿಸಿದರು…. ಅದರಂತೆ ಒಂದು ದಿನ ಪರ್ಮಿಷನ್ ಪಡೆದು ಶಾಲೆಗೆ ರಜೆ ಹಾಕಿ ಸುಮತಿ ಎರಡನೇ ಮಗಳ ಜೊತೆಗೆ ನವೋದಯ ಶಾಲೆಗೆ ಹೋದಳು. ಬೇಸಿಗೆ ರಜೆಯೂ ಪ್ರಾರಂಭವಾಗುವುದರಲ್ಲಿತ್ತು. ಏನಾದರೂ ಮುಖ್ಯವಾದ ವಿಷಯವಿದ್ದರೆ ಮಾತ್ರ ಹೀಗೆ ಬರಹೇಳುತ್ತಿದ್ದರು. ಸುಮತಿ ಮತ್ತು ಎರಡನೇ ಮಗಳು ನವೋದಯ ಶಾಲೆಯ ಕಛೇರಿಯ ಮುಂದೆ ಸೆಕ್ರೆಟರಿ ಯವರಿಗಾಗಿ ಕಾದು ನಿಂತರು. ಏಕಿರಬಹುದೆಂಬ ಜಿಜ್ಞಾಸೆ ಅವರನ್ನು ಕಾಡಿತು. ಸುಮತಿಯ ಮಕ್ಕಳೆಲ್ಲರೂ ಓದಿನಲ್ಲಿ ಮುಂದಿದ್ದರು. ಹಾಗಾಗಿ ಆತಂಕ ಪಡಬೇಕಾದ ಅಗತ್ಯವಿರಲಿಲ್ಲ. ಆದರೂ ಮನಸ್ಸಿನಲ್ಲಿ ಏನೋ ಒಂದು ತಳಮಳ. ಸ್ವಲ್ಪ ಹೊತ್ತಿಗೆಲ್ಲಾ ಕಿರಿಯ ಮಗಳ ಜೊತೆ ಮಾತನಾಡುತ್ತಾ ಸೆಕ್ರೆಟರಿ ಬಂದರು. ಅವರನ್ನು ಕಂಡೊಡನೆ ಸುಮತಿ ಮೈತುಂಬಾ ಸೆರಗು ಹೊದ್ದು ವಿನಯಪೂರ್ವಕವಾಗಿ ನಮಸ್ಕರಿಸಿದಳು. ಜೊತೆಗೆ ಎರಡನೇ ಮಗಳು ಕೂಡ ಕರವನ್ನು ಜೋಡಿಸಿ ಶಿರಬಾಗಿ ವಂದಿಸಿದಳು. ಎರಡನೆಯ ಮಗಳನ್ನು ಕಂಡಾಗ ಅವರ ಮುಖವರಳಿತು. ಸದಾ ನಗಮುಖದ ಉತ್ಸಾಹದ ಚಿಲುಮೆಯಾದ ಆಕೆಯನ್ನು ಕಂಡರೆ ಅದೇನೋ ಪ್ರೀತಿ. ಬಹಳ ಪ್ರಬುದ್ಧತೆಯಿಂದ ಕೂಡಿದ ಆಕೆಯ ನಡೆ-ನುಡಿ ಅವರಿಗೆ ಬಹಳ ಪ್ರಿಯವಾಗಿತ್ತು. ಇನ್ನೂ ಹದಿನಾರರ ಬಾಲೆ ಆದರೂ ತಾಯಿಯ ಜವಾಬ್ದಾರಿಯಲ್ಲಿ ತಾನೂ ಸಹಭಾಗಿಯಾಗುವ ಹಾಗೂ ತಂಗಿಯರನ್ನು ಅಕ್ಕರೆಯಿಂದ ನೋಡಿಕೊಳ್ಳುವ ಪರಿ ಅವರಿಗೆ ಬಹಳ ಹಿಡಿಸಿತ್ತು.
ಅವಳ ತಲೆಯನ್ನು ನೇವರಿಸಿ, ಸುಮತಿಯನ್ನು ನೋಡಿ “ನಮಸ್ತೇ ಅಮ್ಮಾ …ಹೇಗಿರುವಿರಿ? ನಿಮ್ಮ ಆರೋಗ್ಯ ಸುಧಾರಿಸಿದೆಯೇ?…. ಎಂದು ಕೇಳುತ್ತಾ ತಮ್ಮ ಕುರ್ಚಿಯಲ್ಲಿ ಕುಳಿತುಕೊಂಡು ಒಂದು ಫೈಲ್ ಅನ್ನು ಹೊರ ತೆಗೆದರು. ಅದರಲ್ಲಿ ಇರುವ ಲಿಸ್ಟ್ ಒಂದನ್ನು ಹೊರತೆಗೆದು, ಕಿರಿಯ ಮಗಳ ಹೆಸರನ್ನು ತೋರಿಸುತ್ತಾ…” ನಿಮ್ಮ ಮಗಳು ನಮ್ಮ ನವೋದಯ ಶಾಲೆಯಿಂದ ಮಧ್ಯಪ್ರದೇಶದ ನವೋದಯ ಶಾಲೆಗೆ ಮೈಗ್ರೇಶನ್ ಗಾಗಿ ಆಯ್ಕೆಯಾಗಿದ್ದಾಳೆ….ಪ್ರತೀ ವರ್ಷವೂ ಏಳರಿಂದ ಎಂಟನೇ ತರಗತಿಗೆ ತೇರ್ಗಡೆ ಹೊಂದುವ ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳನ್ನು ಆರಿಸಿ ಇನ್ನಿತರ ರಾಜ್ಯಗಳ ನವೋದಯ ಶಾಲೆಗಳಿಗೆ ವಲಸಿಗರಾಗಿ ಕಳುಹಿಸುವ ಪರಿಪಾಠವಿದೆ….. ಹಾಗಾಗಿ ಈ ಶಾಲೆಯ ಕೆಲವು ಮಕ್ಕಳನ್ನು ಇತರೆಡೆಗೆ ಹಾಗೂ ಅಲ್ಲಿನ ಮಕ್ಕಳನ್ನು ಇಲ್ಲಿಗೆ ಕರೆಸಿಕೊಳ್ಳುವುದು ವಾಡಿಕೆ….ನಿಮ್ಮ ಮಗಳು ಹೈಸ್ಕೂಲ್ ತರಗತಿಗಳನ್ನು ಇನ್ನು ಮೇಲೆ ಮಧ್ಯಪ್ರದೇಶದ ನವೋದಯ ಶಾಲೆಯಲ್ಲಿ ಮುಂದುವರೆಸಲಿದ್ದಾಳೆ”….ಎಂದು ಹೇಳುತ್ತಾ ಅಮ್ಮ ಮಕ್ಕಳ ಬದಲಾಗುವ ಮುಖ ಭಾವವನ್ನು ಗಮನಿಸಿದರು. ಅಮ್ಮ ಮಕ್ಕಳ ಮುಖ ಒಮ್ಮೆಲೇ ಬಾಡಿತು. ಅದನ್ನು ಗಮನಿಸಿದ ಸೆಕ್ರೆಟರಿ ಮೂರು ವರ್ಷಗಳಷ್ಟೇ ನಿಮ್ಮ ಮಗಳು ಅಲ್ಲಿ ವಿದ್ಯಾಭ್ಯಾಸ ಮಾಡುವುದು…. ತದನಂತರ 11 ಮತ್ತು 12 ನೇ ತರಗತಿಯನ್ನು ಪುನಃ ಈ ಶಾಲೆಯಲ್ಲಿಯೇ ಮುಂದುವರೆಸುತ್ತಾಳೆ…ತಾಯಿ ಮತ್ತು ಅಕ್ಕ ಅವಳ ಬಗ್ಗೆ ಆತಂಕ ಪಡಬೇಕಾಗಿಲ್ಲ…. ಮಧ್ಯವಾರ್ಷಿಕ ಪರೀಕ್ಷೆಯ ನಂತರ ಮತ್ತು ವಾರ್ಷಿಕ ಪರೀಕ್ಷೆಯ ನಂತರ ಇರುವ ರಜೆಯ ಅವಧಿಯಲ್ಲಿ ಇಲ್ಲಿಗೆ ಬರುತ್ತಾಳೆ….. ಆಗ ಪ್ರತಿಬಾರಿಯಂತೆ ನೀವು ಮಗಳನ್ನು ಮನೆಗೆ ಕರೆದುಕೊಂಡು ಹೋಗಬಹುದು”….ಎಂದರು.
ಆದರೂ ಏಕೋ ಅಮ್ಮ ಮಕ್ಕಳ ಮುಖಗಳ ಭಾವಗಳು ಬದಲಾಗಲಿಲ್ಲ. ಕಿರಿಯ ಮಗಳು ಸುಮತಿಯ ಪಕ್ಕ ಬಂದು ಅಮ್ಮನ ತೋಳನ್ನು ಹಿಡಿದು ಅಂಟಿಕೊಂಡಳು.
ಮಗಳಿಗೆ ಮಧ್ಯಪ್ರದೇಶಕ್ಕೆ ಹೋಗಲು ಇಚ್ಛೆಯಿಲ್ಲ ಎನ್ನುವುದನ್ನು ಸುಮತಿ ಅರಿತುಕೊಂಡು….” ಸರ್ ನನ್ನ ಮಗಳು ಮೈಗ್ರೇಶನ್ ಗಾಗಿ ಹೋಗದೇ ಈ ಶಾಲೆಯಲ್ಲಿಯೇ ಉಳಿಯುವಂತೆ ಮಾಡಲು ಸಾಧ್ಯವಿಲ್ಲವೇ?…. ಎಂದು ಕೇಳಿದಳು. ಸುಮತಿಯ ಮಾತನ್ನು ಕೇಳಿದ ಸೆಕ್ರೆಟರಿ…. ₹ಅಮ್ಮಾ ಇಲ್ಲಿಂದ ದೂರ ಹೋಗಿ ಕಲಿಯುವುದರಿಂದ ನಿಮ್ಮ ಮಗಳು ಹೊರಗಿನ ಪ್ರಪಂಚಕ್ಕೆ ಹೊಂದಿಕೊಳ್ಳುವ ಗುಣವನ್ನು ಕಲಿಯುವಳು… ಅದೂ ಅಲ್ಲದೆ, ಆ ಶಾಲೆಯೂ ಕೂಡ ಈ ಶಾಲೆಯಂತೆ ಎಲ್ಲಾ ಸೌಕರ್ಯಗಳನ್ನೂ ಹೊಂದಿದೆ. ಅಲ್ಲಿಯೂ ಉತ್ತಮ ಶಿಕ್ಷಕರು ಇದ್ದಾರೆ…. ಸಿಬಿಎಸ್ಇ ಪಠ್ಯಕ್ರಮವಾದ್ದರಿಂದ ಎಲ್ಲೆಡೆಯೂ ಏಕರೂಪದ ಕಲಿಕೆ ಇರುತ್ತದೆ…. ಹಾಗಾಗಿ ನೀವು ಯಾವುದೇ ರೀತಿಯ ಆತಂಕ ಪಡಬೇಕಾಗಿಲ್ಲ”…. ಎಂದು ತಿಳಿಸಿದರು. ಮಗಳನ್ನು ಮನೆಗೆ ಕರೆದುಕೊಂಡು ಹೋದ ನಂತರ ಅವಳಿಗೆ ಸರಿಯಾದ ರೀತಿಯಲ್ಲಿ ತಿಳುವಳಿಕೆ ಕೊಟ್ಟರೆ ಅರ್ಥ ಆಗದೇ ಇರದು ಎನಿಸಿ… “ಸರಿ ಸರ್ ಹಾಗೆಯೇ ಆಗಲಿ”…. ಎಂದು ಹೇಳಿ ಅವರು ತೋರಿಸಿದ ಪ್ರತಿಯಲ್ಲಿ ಸಹಿಮಾಡಿ ಅವರಿಗೆ ವಿದಾಯ ಹೇಳಿ, ಅಲ್ಲಿಂದ ಮಗಳನ್ನು ಕರೆದುಕೊಂಡು ಮನೆಯ ಕಡೆಗೆ ಪ್ರಯಾಣ ಬೆಳೆಸಿದರು. ಬೇಸಿಗೆ ರಜೆ ಮುಗಿಯುವವರೆಗೂ ತಂಗಿ ಮನೆಯಲ್ಲಿ ಇರುವಳು ಎನ್ನುವುದೇ ಅಕ್ಕನಿಗೆ ಖುಷಿಯ ವಿಚಾರವಾಗಿತ್ತು. ತಂಗಿಗೂ ಹಾಗೆಯೇ ಅಕ್ಕ ಹೇಳುವ ಕಥೆ ಕೇಳುವ ತವಕ. ಎರಡನೇ ಅಕ್ಕನಿಗಿಂತಲೂ ಮೂರನೇ ಅಕ್ಕ ಅವಳಿಗೆ ಅಚ್ಚುಮೆಚ್ಚು. ಒಟ್ಟಿಗೇ ಆಟ,ಪಾಠ,ಊಟ ಎಲ್ಲವೂ. ಮನೆಯಲ್ಲಿದ್ದರೆ ಸದಾ ಮೂರನೇ ಅಕ್ಕನ ಜೊತೆ ಕಾಲ ಕಳೆಯುವಳು.
ಎರಡನೇ ಅಕ್ಕ ವ್ಯಾಸಂಗಕ್ಕಾಗಿ ಹೆಚ್ಚಾಗಿ ಮನೆಯಿಂದ ಹೊರಗೆ ಇರುತ್ತಿದ್ದುದರಿಂದ ಮೂರನೇ ಅಕ್ಕನೇ ಕಿರಿಯ ಮಗಳಿಗೆ ಜೊತೆಯಾಗಿರುತ್ತಿದ್ದಳು. ಯಾವಾಗ ಮನೆ ತಲುಪುವೇನೋ?vಅಕ್ಕನ ಜೊತೆ ಆಡುವೆನೋ? ಎನ್ನುವ ತವಕದಲ್ಲಿ ಇದ್ದಳು ತಂಗಿ. ದಾರಿಯುದ್ದಕ್ಕೂ ಶಾಲೆಯಲ್ಲಿ ಹಾಗೂ ಹಾಸ್ಟೆಲ್ ನಲ್ಲಿ ತನಗಾದ ಅನುಭವ ,ತನ್ನ ಸಹಪಾಠಿ ಮಿತ್ರರ ಬಗ್ಗೆ, ಆಟ ಪಾಠಗಳ ಬಗ್ಗೆ ಮಾತನಾಡುತ್ತಲೇ ಇದ್ದಳು. ಅಕ್ಕ ಮತ್ತು ಅಮ್ಮ ಅವಳ ಮಾತಿಗೆ ಹೂಂಗುಟ್ಟುತ್ತಿದ್ದರು. ಮಧ್ಯಪ್ರದೇಶದ ಶಾಲೆಗೆ ಹೋಗಬೇಕು ಎನ್ನುವ ವಿಚಾರ ಬಂದಾಗ ಮೌನವಾಗುತ್ತಿದ್ದಳು. ಯಾವಾಗ ಮನೆ ತಲುಪುವೆನೋ? ಅಕ್ಕನಿಗೆ ಈ ವಿಷಯವನ್ನು ಯಾವಾಗ ಹೇಳುವೆನೋ?ಎನ್ನುವ ಆತುರ ಅವಳಗಿತ್ತು. ನವೋದಯ ಶಾಲೆಯಿಂದ ಹೊರಟು ಮನೆ ತಲುಪುವಾಗ ಕತ್ತಲಾಗುತ್ತಾ ಬಂದಿತ್ತು. ಎಂದಿನಂತೆಯೇ ವಿದ್ಯುತ್ ದೀಪವಿಲ್ಲದ ದಾರಿಯ ಕತ್ತಲೆಯಲ್ಲಿ ಅಮ್ಮನ ಕೈ ಹಿಡಿದು ಮಕ್ಕಳು ನಡೆದರು. ಮನೆ ತಲುಪಿದ ಕೂಡಲೇ ಮೂರನೇ ಅಕ್ಕನನ್ನು ಕಂಡ ಕಿರಿಯ ಮಗಳು ಓಡಿಹೋಗಿ ಅಪ್ಪಿಕೊಂಡಳು. ಅಕ್ಕನಿಗೂ ತಂಗಿ ಬಂದಿದ್ದು ಬಹಳ ಸಂತಸವಾಗಿತ್ತು. ಅವರಿಬ್ಬರೂ ಜೊತೆಯಾಗಿ ಆಡುತ್ತಿದ್ದರೆ ತಿಂಡಿ, ಊಟ, ನಿದ್ರೆ ಯಾವುದೂ ಅವರಿಗೆ ಬೇಡವಾಗುತ್ತಿತ್ತು. ಕಿರಿಯ ಮಗಳು ಬಹಳ ಸಂಕೋಚ ಸ್ವಭಾವದವಳು. ಯಾರೊಂದಿಗಾದರೂ ಹೆಚ್ಚು ಬೆರೆಯುವುದೆಂದರೆ ಅವಳಿಗೆ ಸ್ವಲ್ಪ ಹಿಂಜರಿಕೆ. ಆದರೆ ಅಕ್ಕಂದಿರು ಅಮ್ಮ ಹಾಗೂ ತನ್ನ ಬಾಲ್ಯಕಾಲದ ಸ್ನೇಹಿತರೆಂದರೆ ಅಚ್ಚುಮೆಚ್ಚು. ಅವರ ಜೊತೆ ಮಾತನಾಡುವಳು ನಗುತ್ತಾ ಆಟವಾಡುತ್ತಾ ಕಾಲ ಕಳೆಯುಳು.




