ರಾಜ್ಯೋತ್ಸವ ವಿಶೇಷ
ಕಳೆದ ಹತ್ತು ವರ್ಷಗಳಲ್ಲಿ
ಕನ್ನಡ ಸಾಹಿತ್ಯದಲ್ಲಿ
ಹೆಣ್ಣು ಮಕ್ಕಳ ಕೊಡುಗೆ ಗಣನೀಯವಾಗಿ
ಹೆಚ್ಚಲು ಕಾರಣಗಳು…..
ಜಿ ಹರೀಶ್ ಬೇದ್ರೆ


ಹಿಂದೆಂದಿಗಿಂತಲೂ ಇಂದು ಹೆಣ್ಣು ಹೆಚ್ಚು ವಿದ್ಯಾವಂತಳಾಗಿದ್ದಾಳೆ. ಅವಳು ಅಡಿಗೆಮನೆಯಿಂದ ಅಷ್ಟೇ ಅಲ್ಲ ತನ್ನ ಮನೆಯ ಅಂಗಳದಿಂದಲೂ ಹೊರಗಡೆ ಹೆಜ್ಜೆ ಇಟ್ಟು ಗಂಡಿನ ಸರಿಸಮಳಾಗಿ ಎಲ್ಲಾ ಕ್ಷೇತ್ರಗಳಲ್ಲೂ ದುಡಿಯುತ್ತಾ ಸ್ವಾವಲಂಬಿಯಾಗಿರುವುದಲ್ಲದೆ ಮನೆಯ ಆರ್ಥಿಕ ಪರಿಸ್ಥಿತಿ ಏಳಿಗೆಗೂ ಕಾರಣಳಾಗಿದ್ದಾಳೆ.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತೊಂದಿದೆ. ಇದು ಖಂಡಿತವಾಗಿಯೂ ಸತ್ಯವಾದ ಮಾತು. ಅಡಿಗೆ ಮಾಡುವದು, ಮನೆ ಕೆಲಸ ನಿಭಾಯಿಸುವುದು ಎಲ್ಲಾ ಅವಳಿಗೆ ಜನ್ಮದತ್ತವಾಗಿ ಬಂದ ಬಳುವಳಿ. ಇದರ ಜೊತೆಗೆ ಉನ್ನತ ಮಟ್ಟದ ಶಿಕ್ಷಣವು ದೊರೆತು ಪರಿಪೂರ್ಣತೆಯನ್ನು ಪಡೆದಿದ್ದಾಳೆ.
ಮೇಲೆ ಹೇಳಿದ ವಿಚಾರ ಒಂದು ಕಡೆಯಾದರೆ, ಈಗ ಹಿಂದಿನಂತೆ ಮನೆ ತುಂಬಾ ಜನರಿಲ್ಲ. ಬಹುತೇಕ ಎಲ್ಲೆಡೆ ನ್ಯಾನೋ ಕುಟುಂಬಗಳನ್ನೇ ನೋಡಬಹುದು. ಹಾಗಾಗಿ ಮಹಿಳೆ ಹೊರಗಡೆ ದುಡಿಯಲು ಹೋದರೂ ಕಚೇರಿಯ ಸಮಯ ಆದೊಡನೆ ಮನೆಗೆ ಬಂದು ಅಲ್ಲಿನ ಆಗುಹೋಗುಗಳ ಬಗ್ಗೆ ಗಮನ ವಹಿಸುತ್ತಾಳೆ. ಅಲ್ಲದೆ ಮನೆಯಲ್ಲಿ ಹಿರಿಯರಿದ್ದಾರೆ ಅವರ ಬೇಕು ಬೇಡಗಳನ್ನು ನೋಡಿಕೊಳ್ಳಬೇಕು, ಮನೆ ತುಂಬಾ ಇರುವ ಮಕ್ಕಳಿಗೆ ಕೂರಿಸಿ ಪಾಠ ಓದಿಸಬೇಕು ಎನ್ನುವುದು ಕಡಿಮೆ ಆಗುತ್ತಾ ಬಂದಿದೆ. ಇದಕ್ಕೆ ತಕ್ಕಂತೆ ಅಡುಗೆ, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಇತ್ಯಾದಿ ಎಲ್ಲವೂ ಕಡಿಮೆಯಾಗುತ್ತ ಬಂದಿದ್ದು, ಮನೆಯಲ್ಲಿ ಇರುವ ಕಂಪ್ಯೂಟರಿನಲ್ಲೇ ಬೇಕೆನಿಸಿದ್ದು ಓದಲು, ಬರೆಯಲು ಅಥವಾ ಕೈಯಲ್ಲಿ ಇರುವ ಮೊಬೈಲಿನಲ್ಲಿ ಇದನ್ನು ಮಾಡಲು ಅವಕಾಶವಿದೆ.
ಹಾಗಾಗಿ ಮಹಿಳೆಯರು ಈಗಲೂ ಹಿಂದಿನಂತೆ ವ್ಯರ್ಥ ಕಾಲಹರಣ ಮಾಡುವ ಪುರುಷರಂತಾಗದೆ, ಅದೇ ಸಮಯವನ್ನು ತಮ್ಮ ಇಷ್ಟದ ಹವ್ಯಾಸಗಳಿಗಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇವರಿಗೆ ಬದಲಾದ ಜೀವನ ಶೈಲಿ, ದೊರೆಯುತ್ತಿರುವ ಆಧುನಿಕ ತಂತ್ರಜ್ಞಾನದ ಸಹಾಯದಿಂದಾಗಿ ತಾವು ಅಂದುಕೊಂಡಿದ್ದನ್ನು ಮಾಡಲು ಸಾಧ್ಯವಾಗುತ್ತಿದೆ.
ಅಲ್ಲದೆ ಮೊದಲಿನಿಂದಲೂ ಮಹಿಳೆ ಪುಸ್ತಕ ಪ್ರೇಮಿಯಾಗಿದ್ದು ಮತ್ತು ಹಿಂದಿನಂತೆ ಪರಿಚಯದ ಅವರಿವರಲ್ಲಿ ಕೇಳಿ ಅಥವಾ ಸಾರ್ವಜನಿಕ ಗ್ರಂಥಾಲಯಗಳಿಗೆ ಹೋಗಿ ತಮ್ಮಿಷ್ಟದ ಪುಸ್ತಕಗಳನ್ನು ಹುಡುಕಿ ತಂದು ಓದಿ ಹಿಂದಿರುಗಿಸುವ ಕಷ್ಟ ಈಗಿಲ್ಲ. ಹಾಗೆಯೇ ನಾವೇನಾದರೂ ಬರೆದು ಪತ್ರಿಕೆಗಳಿಗೆ ಕಳಿಸಿದರೆ, ಅದು ಪ್ರಕಟವಾಗುವುದಕ್ಕಿಂತ ಕಸದ ಬುಟ್ಟಿ ಸೇರುತ್ತಿದ್ದದ್ದೆ. ಹೆಚ್ಚು. ಇದು ಬಹಳಷ್ಟು ಬರಹಗಾರರಿಗೆ ನಿರಾಸೆ ಉಂಟು ಮಾಡುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ, ನಾವು ಯಾರ ಹಂಗಿಗೂ ಕಾಯುವ ಅವಶ್ಯಕತೆ ಇಲ್ಲ. ಏಕೆಂದರೆ, ನಾವು ಬರೆದಿದ್ದನ್ನು ಆ ಕ್ಷಣಕ್ಕೆ ನಮ್ಮ ಮುಖ ಹೊತ್ತಿಗೆಯ ಗೋಡೆಗಳ ಮೇಲೆ, ವಾಟ್ಸಪ್ ಸ್ಟೇಟಸ್ ಗಳಲ್ಲಿ, ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಸಾಹಿತ್ಯ ಬಳಗಗಳಲ್ಲಿ ಪ್ರಕಟಿಸಬಹುದು. ಮತ್ತು ಆ ಬರಹದ ಓರೆಕೋರೆಗಳನ್ನು ತಿಳಿಯಲು ಇನ್ಯಾವುದೋ ದಿನಕ್ಕೆ ಕಾಯುವ ಅವಶ್ಯಕತೆ ಇಲ್ಲ. ಓದಿದವರ ಅನಿಸಿಕೆ ಲೈಕ್, ಕಾಮೆಂಟುಗಳ ಆಗಾಗಲೇ ನೋಡಬಹುದು.
ಹೀಗಾಗಿ, ನಾವು ಯಾವುದೇ ರೀತಿಯ ನಿರಾಸೆಗೆ ಒಳಪಡದೆ ಅನಿಸಿದ್ದನ್ನು ಬರೆಯುತ್ತಾ ಹೋಗುವುದು, ಹಾಡುತ್ತಾ ಹಾಡುತ್ತಾ ರಾಗ ಎನ್ನುವಂತೆ ಬರೆಯುತ್ತಾ ಬರೆಯುತ್ತಾ ಪ್ರಬುದ್ಧತೆ ಬರುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚೆಚ್ಚು ಪ್ರಯತ್ನಶೀಲರಾಗಿದ್ದು ಕಳೆದ ಹತ್ತು ವರ್ಷಗಳಲ್ಲಿ ಇವರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣಲು ಕಾರಣವಾಗಿದೆ ಎಂದರೆ ಖಂಡಿತಾ ತಪ್ಪಾಗಲಾರದು.
ಲು ಕಾರಣವಾ
ಜಿ ಹರೀಶ್ ಬೇದ್ರೆ



