ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್

ನನ್ನೋಡಿ ನೀನು
ಆಕರ್ಷಿತನಾಗಿರುವಿಯಾದರೆ
ಅದು ಒಲವಲ್ಲ ಬಿಡು
ಚರ್ಮದ ಮೆರಗಿಗೆ ಮೋಹಿತನಾಗಿರುವಿಯಾದರೆ
ಅದು ಒಲವಲ್ಲ ಬಿಡು
ಸಮಯ ಕಳೆದಂತೆ, ಸವೆಯುವ
ತನುವಿದು ಗೆಳೆಯ
ಇದ ನೋಡಿ ನೀ ಸನಿಹ ಬಂದಿರುವಿಯಾದರೆ
ಅದು ಒಲವಲ್ಲ ಬಿಡು
ಕಣ್ಣಿಗಷ್ಟೇ ಮೂದ ನೀಡುವುದು
ಬಾಹ್ಯ ಸೌಂದರ್ಯ
ನನ್ನಾತ್ಮವು ನಿನ್ನ ಸೋಕಿಲ್ಲ
ಎಂದೆನ್ನುವಿಯಾದರೆ ಅದು ಒಲವಲ್ಲ ಬಿಡು
ಸೆಳೆತಕೆ ಪ್ರೀತಿ ಎಂಬ ಹೆಸರಿಟ್ಟು
ವಂಚಿಸಿಕೊಳ್ಳದಿರು ನಿನ್ನನು
ನಾನಿಲ್ಲದೆಯೂ ನೀ ಸಂತಸದಿಂದಿರುವಿಯಾದರೆ
ಅದು ಒಲವಲ್ಲ ಬಿಡು
ವಾಣಿಗೆ ಪ್ರೇಮವೆಂದರೆ ಜನುಮ
ಜನುಮಗಳ ಅನುಬಂಧ
ನೀನದನ್ನು ಮರಣದೊಂದಿಗೆ ಕೊನೆಯಾಗುವುದೆನ್ನುವಿಯಾದರೆ
ಅದು ಒಲವಲ್ಲ ಬಿಡು

ವಾಣಿ ಯಡಹಳ್ಳಿಮಠ



