ಗಜಲ್ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್

ನನ್ನ ಶವ ಯಾತ್ರೆ ನಡೆಯುವಾಗಲೂ ನೀ ಬರಬೇಡ,
ಎಲ್ಲರೂ ಕೊನೆಯ ಬಾರಿ ನೋಡುವಾಗಲೂ ನೀ ಬರಬೇಡ
ನಾ ಪ್ರೀತಿಯಿಂದ ದಿಟ್ಟಿಸಿದಾಗೆಲ್ಲ ಮುಖ ತಿರುವಿದೆಯಲ್ಲ
ನನ್ನ ಹೆಣದೆದುರು ನೆಂಟರೆಲ್ಲ ಬಂದು ನಿಲ್ಲುವಾಗಲೂ ನೀ ಬರಬೇಡ
ತೋಡುವವರು ತಲ್ಲೀನರಾಗಿ ತೋಡುತ್ತಿರುತ್ತಾರೆ ನನ್ನ ಗುಂಡಿ
ಅದರ ಆಳವನೂ ಅವರಿವರು ಬಂದು ಅಳೆಯುವಾಗಲೂ ನೀ ಬರಬೇಡ
ನಾ ನೀಡಿದ ಗುಲಾಬಿ ಹೂವನು ನೀ ಕಣ್ಣಿಂದಲೂ ಮುಟ್ಟಲಿಲ್ಲವಲ್ಲ
ಎಲ್ಲರೂ ತಂದು ಹಾರಗಳ ಹಾಕುವಾಗಲೂ ನೀ ಬರಬೇಡ
ನಿನ್ನದೊಂದು ನೋಟಕ್ಕಾಗಿ ಪ್ರತಿ ಕ್ಷಣವೂ ಪರಿತಪಿಸುವಂತೆ ಮಾಡಿದೆಯಲ್ಲಾ
ಕಣ್ಮುಚ್ಚಿ ನಾ ಕಾಣದೂರಿಗೆ ಹೋಗುವಾಗಲೂ ನೀ ಬರಬೇಡ
ಇರುವ ತನಕ ನಿನಗೂಟ ಬಡಿಸಿ ಕರ್ತವ್ಯ ಗೈದಿರುವೆನು ನಿಜ
ಬಂದವರೆಲ್ಲ ನನಗೆ ಹಿಡಿ ಮಣ್ಣು ನೀಡುವಾಗಲೂ ನೀ ಬರಬೇಡ
ಬಯಸಿದಾಗ ಸಿಗದ ಪ್ರೀತಿ, ಮಮತೆಗೆ ಬೆಲೆಯೆಲ್ಲಿಹುದು ವಾಣಿ
ನನ್ನವರು ಗೋರಿ ಬಳಿ ನಿಟ್ಟುಸಿರುಡುವಾಗಲೂ ನೀ ಬರಬೇಡ

—————-
ವಾಣಿ ಯಡಹಳ್ಳಿಮಠ



