ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
ಎಲ್ಲಿದೆ ಸಾಮರಸ್ಯ?


ಈ ದೇಹವಿದು…
ನನ್ನದಲ್ಲ…ಈ ಜೀವವಿದು-
ನನ್ನದಲ್ಲ…ನಾನೂ ಕೂಡ ನಾನಲ್ಲ,!
ಉಸಿರಾಡುತ್ತ ನಾನಿರಲು
ನಾನು ನನ್ನದೆನ್ನುವ ಎಲ್ಲವೂ
ಸ್ವಾರ್ಥವಷ್ಟೇ, ಈ ಬದುಕಿನೊಳು,!
ಮಣ್ಣೊಳಗೆ ಮಣ್ಣಾಗಿ
ಹೋಗುವ ಜಡ ಶರೀರವಿದು,
ಮತ್ತೇ ನಾನೆಲ್ಲಿ? ಮನುಜ ನೀನೆಲ್ಲಿ?,!
ದುರಾಸೆಗಳ ತುಂಬಿಸಿ
ಬದುಕಿನಾಸೆಗೆ ಗುದ್ದಾಡುವ
ನಾಲ್ಕು ದಿನಗಳ ಬದುಕು ಇದಷ್ಟೇ,!
ಅರಿತು ಕೊಳ್ಳಲಾಗದ
ದಡ್ಡ ನಾನು, ಬುದ್ದಿವಂತ ನೀನು
ನಶ್ವರ ಜಗದೊಳು ಅಧಿಕಾರದಾಸೆಗೆ,!
ಸರ್ವಾಧಿಕಾರಿಯಾಗಿ
ಹಣದ ಅಮಲೇರಿಸಿ ಬೀಗಲು
ಕಾಲ್ತುಳಿತಕ್ಕೆ ಬಲಿಪಶುಗಳು ನಾವೆಲ್ಲ,!
ಅಸತ್ಯವೇ ಮೆರೆದಾಡಲು
ಸತ್ಯಕ್ಕೆ ಎಲ್ಲೆಡೆ ಈಗ ಸೋಲು
ಮೂಲೆ ಗುಂಪಾಗಿ ಬಿಟ್ಟೆವು ನಾವು,!
ಮಿಥ್ಯದ ಕೋಟೆಯೊಳು
ಜಯವೆಲ್ಲಿದೆ… ಸತ್ಯವಂತಿಕೆಗೆ?
ಹೊಕ್ಕಿ ಜಯಿಸುವ ಶಕ್ತಿಯು ಕುಂದಿದೆ,!
ಮಿತಿ ಮೀರಿದ ಹಗೆತನ
ಮತೀಯ ದ್ವೇಷ ಹೊಗೆಯಾಡಲು,
ಅರಾಜಕೀಯ ಗೆದ್ದು ಗದ್ದುಗೆ ಏರಲು,!
ಅಸ್ಪಷ್ಟತೆಯ…
ಎಲ್ಲೆಡೆ ವಿಧಿಯಾಡಿಸುತ್ತಿರಲು,
ಇಬ್ಬನಿ ಮುಚ್ಚಿದ ಸಾಮರಸ್ಯದೊಳು,!
ಮಳೆಯಾಗದ ಸಮರಸವು
ಮೋಡದೊಡನೆ ಸೇರಿ ಕೊಂಡಿರಲು,
ಗಾಳಿಗೆ ದೂರಕ್ಕೆ ಎಳೆದೊಯ್ಯತ್ತಿರಲು,!
ದ್ವೇಷವಾಸಿಗಳ ಮುಂದೆ
ಕರುಣೆ ಗೌರವ ಕಳಚಿ ಬೀಳಲು
ದೇಶದೊಳಗೆ ಮತ್ತೇ ಬಿರುಗಾಳಿ ಎದ್ದಿತ್ತೆ,!?
ತಂಗಾಳಿಯ ಸದಾ ಬೀಸಲಿ,
ಬಿರುಗಾಳಿ ಮತ್ತೇ ನರ್ತಿಸದಿರಲಿ,
ಮಳೆಯಾಗಿ ಸಾಮರಸ್ಯ ಮರುಕಳಿಸಲಿ.!
————-
ಹಮೀದ್ ಹಸನ್ ಮಾಡೂರು



