ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಹುಟ್ಟು ಇದು ಹುಟ್ಟಲ್ಲ”

ಹುಟ್ಟು ಇದು ಹುಟ್ಟಲ್ಲ
ನಿತ್ಯ ಸಾವಿನ ಪಯಣ
ಕಷ್ಟ ಸುಖ ನೋವು ನಗೆ
ಭಾವಗಳ ಸಮ್ಮಿಳನ
ಸ್ನೇಹ ಸಮತೆ ಶಾಂತಿ ಪ್ರೀತಿ
ಮೌಲ್ಯಗಳ ಜನನ
ತಾನು ಬದುಕಿ ಜಗವ ಗೆಲಿಸುವ
ಮನುಜ ಪಥದ ಸಾಧನ
ಜಾತಿ ಮತ ಗಡಿ ಸೀಮೆ
ಏಕೆ ನಿತ್ಯ ಕದನ
ಹಸಿವು ಬಡತನ ಜನರ ಕೂಗು
ಕೂಳಿಗಾಗಿ ಆಕ್ರಂದನ
ಒಂದೇ ನೆಲದಲಿ ತಾರತಮ್ಯ
ಬಡವ ಬಲ್ಲಿದ ವರ್ಣ
ಕಪ್ಪು ಮಣ್ಣಲಿ ಮೊಳಗಲಿ
ನವ ಕ್ರಾಂತಿಯ ಗಾನ
ಓಡುತ್ತಿದೆ ಈ ವಿಶ್ವ
ಮರೆತು ಮಾನವ ಮಾನ
ಹಸಿರಾಗಲಿ ನಾಡು ರಾಷ್ಟ್ರ
ಬೆಸುಗೆಯಾಗಲಿ ಭಾವನ
ಹಕ್ಕಿ ಪಕ್ಷಿ ಪಶು ಪ್ರಾಣಿ
ಸಂತಸದ ಕಾನನ
ಶುದ್ಧ ಗಾಳಿ ನೀರು ಶಬ್ದ
ಸಮರಸವು ಜೀವನ
ಹುಟ್ಟು ಇದು ಅಲ್ಲ ಶಾಶ್ವತ
ಸಾವು ಅಲ್ಲ ಜೀವ ಕೊನೆ
ಬಾಳಿ ಬದುಕಿ ಮುಕ್ತಿ ಹೊಂದುವ
ಬುದ್ಧ ಬಸವರ ಯಾನ
ಹುಟ್ಟಿದಾಗ ಅವರು ನಕ್ಕರು
ಸತ್ತಾಗ ಬಿಕ್ಕಿ ಅತ್ತರು
ಹುಟ್ಟು ಅರಿಯದ ಸಾವು ತಿಳಿಯದ
ಶಿವಯೋಗದ ತನು ಮನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ





ಅತ್ಯುತ್ತಮ ಕವನ ಸರ್
ಹುಟ್ಟು ಸಾವುಗಳು ಈ ದೇಹಕ್ಕೆ ಮಾತ್ರ, ಆತ್ಮಕ್ಕೆ ಅಲ್ಲ ಎನ್ನುವುದು ಆಧ್ಯಾತ್ಮ ಜೀವಿಗಳ ಭಾಷೆ. ಹುಟ್ಟು ಆಕಸ್ಮಿಕ ಸಾವು ಖಚಿತ ಎನ್ನುವುದು ಲೌಕಿಕರ ಪರಿಭಾಷೆ. ಇವುಗಳ ಮಧ್ಯೆ ತಾನೂ ಬದುಕಿ ಇನ್ನೊಬ್ಬರನ್ನೂ ಬದುಕಿಸುವ ಈ ಜೀವಯಾನ, ಹುಟ್ಟಿದಾಗ ನಕ್ಕವರು ಸತ್ತಾಗ ಸಾರ್ಥಕ ಜೀವದ ಅಗಲಿಕೆ ತಾಳದೆ ಅಳುವಂಥ ಭಾವ ಸೃಷ್ಟಿಯಾಗಬೇಕು ಎನ್ನುವ ಕವನವು, ಹೃದಯವನ್ನು ಸ್ಪರ್ಷಿಸುತ್ತ ಸಾರ್ಥಕ್ಯವನ್ನು ಪಡೆಯುತ್ತದೆ.
ಹುಟ್ಟು,ಸಾವು ಶಾಶ್ವತ ಅಲ್ಲ ಇರುವ ತನಕ ಸುಖ,ಶಾಂತಿಯಿಂದ ಸಹಬಾಳ್ವೆಯಿಂದ ನೆಮ್ಮದಿಯಿಂದ ಜೀವನ ನಡೆಸಿ ಸಾರ್ಥಕ ಬದುಕು ಪಡೆಯುವದು. ಅದ್ಭುತ ಕವನ ಸರ್.
ಅತ್ಯುತ್ತಮ ಕವನ