ಸಂಗಾತಿ ವಾರ್ಷಿಕ ವಿಶೇಷಾಂಕ
ಸುಮನಾ ರಮಾನಂದ,ಕೊಯ್ಮತ್ತೂರು
ಜೀವನವೊಂದು ಪುಸ್ತಕದಂತೆ


ನಮಗೆಲ್ಲ ಗೊತ್ತಿರುವಂತೆ ಪುಸ್ತಕದ ಅರಿವು ನಮ್ಮ ಜ್ಞಾನವನು ಹೆಚ್ಚು ಮಾಡುತ್ತಾ ಜೀವನಾನುಭವವನು ವರ್ಧಿಸುತ್ತಾ ಹೋಗುತ್ತದೆ.ಅನೇಕರಿಗೆ ತಮ್ಮ ಜೀವನದಲಿ ಒಂದು ಒಳ್ಳೆಯ ಪುಸ್ತಕ ತರುವಂತಹ ಬದಲಾವಣೆಯನು ಮತ್ಯಾವುದೂ ತರಲಾರದು.ಕೆಲವರಿಗೆ ನಿತ್ಯದ ತಮ್ಮ ದಿನಚರಿಯಲ್ಲಿ ಪುಸ್ತಕ ಓದುವ ಹವ್ಯಾಸವಿರುತ್ತದೆ,ನಂತರ ಅದರ ಬಗ್ಗೆ ತಮ್ಮ ಗೆಳೆಯರ ಬಳಗದೊಂದಿಗೆ ವಿಚಾರ ವಿನಿಮಯ ಮಾಡುವ ಅಭ್ಯಾಸವೂ ಇರುತ್ತದೆ.ಇನ್ನು ಹಲವರಿಗೆ ತಮ್ಮ ಬದುಕಲಿ ತಾವು ಓದಿದ್ದನು ಮನನ ಮಾಡಿಕೊಂಡು ಅದರಲಿರುವ ಧನಾತ್ಮಕ ವಿಚಾರವನು ಅಳವಡಿಸಿಕೊಳ್ಳುವ ಅಭ್ಯಾಸವೂ ಸೇರಿರುವುದು.ಒಟ್ಟಾರೆಯಾಗಿ ಪ್ರತಿಯೊಬ್ಬರ ಜೀವನದಲಿ ಪುಸ್ತಕವು ಅಗಾಧ ಪರಿಣಾಯ ಬೀರುವುದಂತೂ ಸತ್ಯವಾಗಿದೆ.
ಇನ್ನು ಮನುಜನ ಜೀವನವನು ಪುಸ್ತಕಕೆ ಹೋಲಿಸಿ ಹೇಳುವುದಾದರೆ,ಪುಸ್ತಕದಲಿ ಒಂದು ಮುಖ್ಯಾಂಶವಿದ್ದಂತೆ ಜೀವನದ ಮುಖ್ಯ ಗುರಿ ಸಂತಸ ಅಥವಾ ಆನಂದವಾಗಿರುತ್ತದೆ.ಪುಸ್ತಕದಲಿ ಆಗಾಗ ಹೊಸ ತಿರುವುಗಳು,ಕುತೂಹಲವು ಇರುವಂತೆ ತಮಗದೆಷ್ಟೆ ಕಷ್ಟವಿದ್ದರೂ ಸಹ ಜೀವಿಸಬೇಕೆನ್ನುವ ಹುರುಪು ಜೀವನದಲಿರದಿದ್ದರೆ ಬದುಕು ಬೋರ್ ಅನಿಸಲು ಶುರುವಾಗುತ್ತದೆ.ಹಾಗಾಗಿಯೇ ಪುಸ್ತಕದಲಿ ಹೊಸ ಹೊಸ ಥ್ರಿಲ್,ತಿರುವುಗಳಿದ್ದರೂ ಸಹ ನಿಲ್ಲದೆ ಓದಿಸಿಕೊಂಡು ಹೋದಂತೆ ಜೀವನದಲೂ ಅಂತಹ ತಿರುವುಗಳಿದ್ದರೂ ಹೆದರಿ ನಿಲ್ಲದೇ ಧೈರ್ಯದಿಂದ ಎದುರಿಸಿ ಗೆಲ್ಲಬೇಕು.
ಜೀವನ ಅನ್ನುವ ಪುಸ್ತಕದಲಿರುವ ಎಷ್ಟೊ ತಪ್ಪುಗಳನು ತಿದ್ದಿ, ಸರಿಪಡಿಸುತ್ತ ಅದರ ಪ್ರೂಫ್ ರೀಡಿಂಗ್ ಅನ್ನು ನಾವೇ ಮಾಡಬೇಕಿದೆ.ಜೀವನದಲಿ ಕಲಿತ ಪಾಠಗಳ ಸಹಾಯದಿಂದ ಅದನು ಸುಂದರಗೊಳಿಸುವ ಜವಾಬ್ದಾರಿಯೂ ನಮ್ಮದೇ ಆಗಿರುತ್ತದೆ.ಪುಸ್ತಕದ ಬುನಾದಿಯೇ ಅದರಲಿರುವ ಬರವಣಿಗೆಯ ಸಾರವಿರುವಂತೆ, ಜೀವನದ ಬುನಾದಿಯು ನಾವದರಲಿ ಬರೆಯುವ ಅಂದರೆ ಅಳವಡಿಸಿಕೊಳ್ಳುವ ಕ್ರಮಬಧ್ದವಾದ ಶಿಕ್ಷಣ,ಶಿಸ್ತಾದ ನಡತೆ,ಕಟ್ಟುನಿಟ್ಟಾದ ಸಮಯಪಾಲನೆ
ಆಗಿರುತ್ತದೆ.
ಒಮ್ಮೊಮ್ಮೆ ಒಂದು ಪುಸ್ತಕವು ಎಷ್ಟೇ ಚೆನ್ನಾಗಿದ್ದರೂ ಸರಿಯಾದ ಯಶಸ್ಸು ಸಿಗದೇ ಮಾರಾಟವಾಗುವುದಿಲ್ಲ.ಆಗ ಹೊಸ ಬದಲಾವಣೆ ಕಥೆಯಲಿ ತಂದು ಮರು ಬಿಡುಗಡೆ ಮಾಡುವಂತೆ,
ಜೀವನವನೂ ಸಹ ಹೊಸ ದೃಷ್ಟಿಕೋನದಿಂದ, ಕೊಂಚ
ಬದಲಾವಣೆ ಮಾಡಿ ನೋಡಿದರೆ ಸಂತಸದ ಜೀವನ ನಮ್ಮದಾಗುವುದರಲಿ ಸಂಶಯವಿಲ್ಲ. ಇನ್ನು ನನಗಂತೂ ಪುಸ್ತಕಗಳೆಂದರೆ ಪಂಚಪ್ರಾಣ ಹಾಗೆಯೇ ಜೀವನ ಕೂಡ ಅಂದರೆ ನಗಬೇಡಿ ಮತ್ತೆ…ಇಲ್ಲಿಗೆ ಈ ಅಂಕಣದ ಪುರಾಣ ನಿಲ್ಲಿಸುವೆ.
ಸುಮನಾ ರಮಾನಂದ,ಕೊಯ್ಮತ್ತೂರು



