ದೀಪಾವಳಿ ವಿಶೇಷ
ಎಮ್ಮಾರ್ಕೆ
ದೀಪವಾಗ ಬಯಸುವೆ

ತಾ ಸುಡದೇ ಬೆಳಕನಿತ್ತ
ದೀಪವೊಂದನು ಕಾಣೆ
ಸುಡುತಲಿ ಬೆಳಗುವಂತ
ದೀಪವಾಗಬಯಸುವೆ
ತಿಕ್ಕಿ ಹೊಸೆಯದೇ ಆದ
ಬತ್ತಿಯೊಂದನು ಕಾಣೆ
ಅದಕೆ ತಿಕ್ಕಿ ಹೊಸೆದಂತ
ಬತ್ತಿಯಾಗಬಯಸುವೆ
ಹಿಂಡದೇ ಹೊರಡುವ
ತೈಲವೊಂದನು ಕಾಣೆ
ಅದಕೆ ಹಿಂಡಿ ತೆಗೆದಂತ
ತೈಲವಾಗಬಯಸುವೆ
ಬತ್ತಿ ತೈಲಗಳ ಬೆಸೆಯದ
ಮಣ್ಣ ಪ್ರಣತಿಯ ಕಾಣೆ
ಬೆಸೆದು ಬೆರೆತು ಬಾಳೋ
ಪ್ರಣತಿಯಾಗಬಯಸುವೆ
ತಿಮಿರವನು ತಳ್ಳಲಾಗದ
ಪ್ರಭೆಯೊಂದನು ಕಾಣೆ
ತಿಮಿರಕೆ ತರ್ಪಣವ ಬಿಟ್ಟ
ಪ್ರಭೆಯಾಗಬಯಸುವೆ
ಎಮ್ಮಾರ್ಕೆ




