ದೀಪಾವಳಿ ವಿಶೇಷ
ಮಧುಮಾಲತಿರುದ್ರೇಶ್
ಪುಟ್ಟ ಹಣತೆ

ಉರಿಯುತಿದೆ ಹಣತೆ ತಾನೊಂದು
ಸದ್ದಿಲ್ಲದೆ ಸಾರುತಿದೆ ಗುಟ್ಟೊಂದು
ಸಾವಿರ ಸೌದೆಗಳಿದ್ದರೂ ಒಲೆಯೊಳಗೆ
ಸಮವೆಲ್ಲಿಹುದು ಪುಟ್ಟ ಹಣತೆಗೆ
ಗುಣವಿಲ್ಲದಿರೆ ಸಾವಿರ ಹೊನ್ನುಗಳಿದ್ದರೇನು
ಬೆಳಕನೀಯದ ಸಹಸ್ರ ಕಟ್ಟಿಗೆಯುರಿದರೇನು
ತನ್ನಿಂದಲೇ ಬೆಳಕೆಂದು ದೀಪ ಬೀಗದು
ಇದನರಿಯದಿರೇ ಮನಸು ಮಾಗದು
ಉರಿವ ದೀಪ್ತಿ ಬೀರುತಿದೆ ಸಮಾನತೆಯ
ಮೆರೆಯ ಬೇಕಿದೆ ಅದರಂತೆ ಮಾನವತೆಯ
ನಗುತಿದೆ ಅಲ್ಲೊಂದು ಪುಟ್ಟ ಹಣತೆ
ಹರಿದಿದೆ ಅದರೊಳಗೆ ಪ್ರೀತಿಯೊರತೆ
ಎದೆಯೊಳಗೊಂದು ಹಣತೆ ಹಚ್ಚೋಣ ಬನ್ನಿ
ದೀಪದಂತೆ ಮನಸ ಬೆಳಗೋಣವೆನ್ನಿ
ದೀಪಕೆಲ್ಲಿದೆ ದ್ವೇಷ ಬೇಧ ಭಾವ
ಬೆಸೆಯ ಬೇಕಿದೆ ಹೃದಯಹೃದಯವ
——————————————————-
ಮಧುಮಾಲತಿರುದ್ರೇಶ್




