ಕಾವ್ಯ ಸಂಗಾತಿ
ಸತ್ಯಮಂಗಲ ಮಹಾದೇವ
“ಎತ್ತರವಾಗುವುದೆಂದರೆ”


ಎತ್ತರ ಮುಗಿಲ ಕಣ್ಣು
ಹಾರಿದವನಿಗೂ ಎತ್ತರ
ಬಾನೆತ್ತರ ಬಾನೇರುವ ಬಾನಾಡಿಗೂ ಎತ್ತರ
ಸೊಲ್ಲಿನ ಪದ ಗಲ್ಲುಗಲ್ಲೆಂದ ಮನಸಿನ ಹದ
ಮಾತಿಗಿಂತಲು ಎತ್ತರ
ನಾನು ಹಳ್ಳ ನೀನು ದಡ ಅವನೆ ಎಲ್ಲಾ ಎನ್ನು
ಪ್ರಶಾಂತವಾದ ಕಣ್ಣಿಗೆ ಮುದ
ನನ್ನದೇನು ಇಲ್ಲ ನಾನು ಕಣ ಎನ್ನು
ನೀನು ಧ್ಯಾನಕಿಂತ ಎತ್ತರ
ಕೊಡುವ ಕೈ ಹಸಿದವನ ಕಾಣುವ ಕಣ್ಣು
ಸಂತೈಸುವ ನಾಲಗೆ
ಬಿದ್ದವನ ಎತ್ತುವ ಕೈಗಳು
ಕಷ್ಟಕೆ ಹೆಗಲುಕೊಡುವ ಮನಸ್ಸುಗಳು
ಪೂಜಿಸುವ ದೇವರಿಗಿಂತಲು ಎತ್ತರ
ತನ್ನ ಸುತ್ತಲ ಸಮೂಹದ ನಗುವೆ ಸಂಪತ್ತು
ಎನ್ನುವವನ ಹೃದಯ
ಕೋಟಿ ಪುಣ್ಯಕಿಂತಲು ಎತ್ತರ
ಬಡವನ ಗುಡಿಸಲಲ್ಲಿ ಮಿನುಗುವ ದೀಪ
ಕಣ್ಣಿಗೆ ಬೆಳಕು ಮತಿಗೆ ತಿಳಿವು
ಕಂಡವನು ದಾರ್ಶನಿಕ
ಬಾಳಿದವನು ಅವನಿಗಿಂತಲೂ ಎತ್ತರ
ಗ್ರಂಥ – ಕಜಾನೆಗಳು ಅಮೂಲ್ಯವೇ
ಹೌದೆನ್ನುತ್ತವೆ ನಿದರ್ಶನಗಳು
ಕಂಡವನು ಜ್ಞಾನಿ ಅನುಭವಿಸಿದವನು ವಿದ್ವಾಂಸ
ಬೆವರಲಿ ಬದುಕಿನ ಅರ್ಥ ಕಂಡವನು
ಇವರೆಲ್ಲರಿಗಿಂತ ಎತ್ತರ
ಹೆಣ್ಣು ಗಂಡು ಜೀವ ಜೀವದ ನೆರಳು ಬೆಳಕು
ಖಗ, ಮೃಗ, ಗಿಡ, ಮರ, ಜಂತು – ಸಂತುಗಳಲ್ಲಿ
ಆತ್ಮದ ನಡೆಗೆ ಡಿಂಭದ ವೇಷ
ನುಡಿಸಿದವನು ಮಾಂತ್ರಿಕ, ನಡೆಸುವವನ ಕಂಡವರಿಲ್ಲ
ಬದುಕಿನ ನಾಟಕದ ಈ ಎಲ್ಲಾ ಅವತಾರಗಳಿಗೆ
ಎಡೆಗೊಡದೆ ಕಾಯಕದಲಿ ನಿಂತವನು
ಅನಂತ ಶಕ್ತನಿಗೂ ಮಾದರಿಯಲಿ ಎತ್ತರ
ಪರಾತ್ಪರತೆಯಲಿ ಪವಡಿಸುವವನು
ಕವಿಯ ನಡೆಗೂ ನುಡಿಗೂ ಹತ್ತಿರ
ಅನುಭವಿಸಿ ನುಡಿಯುವವನು ಅನುಭಾವಿಗೂ ಎತ್ತರ
ಮರೆತರೆ ಕೆಸರು ಅರಿತರೆ ಮತ್ತೆ ಅಲ್ಲೇ ಕಮಲ
ಪಾಡಿಗೆ ತಕ್ಕ ಹಾಡು.,
ಹರಿಯುವ ನದಿಯಲಿ ನಗುವ ಮೀನಿನಂತೆ.
ಎತ್ತರವೆಂದರೆ ಸ್ವಚ್ಚನೀರಲಿ ಕಂಡ ಮುಖ
ಸತ್ಯಮಂಗಲ ಮಹಾದೇವ




ಸಾಲುಗಳು ಕಾವ್ಯ ಸಾಕ್ಷಾತ್ಕಾರ ಗುರುಗಳು
ಅನುಭವಿಸಿದವನು ಅನುಭಾವಿಗೂ ಎತ್ತರ