ಕಾವ್ಯ ಸಂಗಾತಿ
ವಿಜಯ ಅಮೃತರಾಜ್
“ಭಾವಗಳ ಯಾನ”

ಒಂದು ಮಧುರ ರಾತ್ರಿ, ಇಷ್ಟೊಂದಿನ ದಿನ ನಮ್ಮೊಂದಿಗೆ ಖುಷಿ ನೀಡಿದ ಬೆಳದಿಂಗಳಲಿ, ನಾವಿಬ್ಬರೂ ಸೇರಿ ಭಾವದ ಮುಷಾಯಿರಾ ಕಟ್ಟೋಣ. ಹೃದಯದಂಗಳದಲಿ ಪ್ರೀತಿಯ ಪದಗಳ ಹೂಮಾಲೆ ಪೋಣಿಸೋಣ.
ಮೌನದ ಆಳದಿ, ಕಣ್ಣಂಚಿನಲಿ ಪ್ರೇಮದ ಶಾಹಿರಿ ಹರಿವಲ್ಲಿ, ನನ್ನ ಹೃದಯದ ಮಾತು ನೀನಾಗು, ನಿನ್ನ ಕಾವ್ಯದ ಪ್ರತಿಧ್ವನಿ ನಾನಾಗುವೆ. ನುಡಿಮುತ್ತುಗಳ ಹಂಚಿ, ಭಾವಗಳ ವಿನಿಮಯವನ್ನೇ ಮಂತ್ರವಾಗಿಸೋಣ.
ಹೌದು ಗೆಳತಿ, ನನ್ನ ಕವಿತೆಯ ಪ್ರತಿ ಸಾಲು ನೀನು, ನಿನ್ನ ಪ್ರೇಮದ ಅಕ್ಷರ ನಾನು. ಪದಗಳ ಗೋಜಿಲ್ಲದೆ, ಭಾವಗಳ ಸಮ್ಮಿಲನದಿಂದಲೇ ಹುಟ್ಟುವ ಮಹಾಕಾವ್ಯ ನಮ್ಮಿಬ್ಬರ ಪ್ರೀತಿ, ಅಕ್ಷರ ಶಬ್ದಗಳನ್ನೂ ಮೀರಿದ ಅನಂತ.
ನಮ್ಮ ಬದುಕಿನ ಸಹಸ್ರ ಕಥೆಗಳ ರಹಸ್ಯವ ಬಿಚ್ಚಿಡು ನೀನು, ನಾನು ಕರುಣೆಯ ಕೇಳುಗನಾಗಿ, ನಿನ್ನ ಶಾಹಿರಿಗೂ ಚಪ್ಪಾಳೆಯ ಬದಲು, ಆತ್ಮದ ಅನುರಣನ ತುಂಬಲು ಕಾಯುತಿರುವೆ. ನಿನ್ನ ನುಡಿಗಳ ಅಮೃತಧಾರೆ ಸವಿಯಲು ಸಿದ್ಧನಾಗಿ ಕುಳಿತಿರುವೆ.
ಪರಸ್ಪರರು ಕೇಳಿ, ಹೃದಯದ ದನಿಗೂಡಿಸಿ ‘ವ್ಹಾ… ವ್ಹಾ…’ ಎನ್ನುತ್ತಾ, ಪ್ರತಿ ಪದದ ಆಳದಲ್ಲಿ ನಮ್ಮ ಪ್ರೀತಿಯ ಮುತ್ತುಗಳನ್ನು ಹುಡುಕೋಣ. ಭಾವಗಳ ಸಾಗರದಲ್ಲಿ ಸಂಚಾರಿಯಾಗಿ, ಪ್ರೇಮದ ಗೂಢಾರ್ಥವ ಅರಿಯೋಣ ಅರಿಯುತ್ತಲೇ ಸಾಗೋಣ.
ನಮ್ಮ ಉಸಿರಿನಲಿ ಶಾಹಿರಿಯ ಸುಗಂಧ, ನಮ್ಮ ಮಾತಿನಲಿ ಕಾವ್ಯದ ಮಕರಂದ. ಈ ಜೀವಕೆ ನೀನು ಅಮೃತ, ನಮ್ಮ ಪ್ರೇಮಕಾವ್ಯಕ್ಕೆ ನೀನೇ ವಿಜಯ, ರಾಜ ದ್ರವ್ಯ.
ಸಣ್ಣ ಮುನಿಸುಗಳೆಂಬ ಮೋಡಗಳು ಕವಿದರೂ ಏನಂತೆ? ಅವು ವಿರಸದ ಕಂದಕಕ್ಕೆ ಕಟ್ಟಿದ ಪ್ರೀತಿಯ ಬಲವಾದ ಸೇತುವೆಗಳು. ನಮ್ಮ ಬಂಧ ಮತ್ತಷ್ಟು ಗಟ್ಟಿಯಾಗಿ, ಇವು ಪ್ರೇಮದ ಚಿಕ್ಕ ಪುಟ್ಟ ಪರೀಕ್ಷೆಗಳಂತೆ.
ಈ ಬಂಧದ ಆಳ ನಮಗೆ ಅರಿವಿದೆ, ನಮ್ಮಿಬ್ಬರ ಮುಷಾಯಿರಾ ಸದಾ ಜೀವಂತ ಝರಿಯಾಗಿ ಎದೆಯಿಂದ ಎದೆಗೆ ಹರಿಯಲಿ. ನಿನಗೆ ನಾನು, ನನಗೆ ನೀನು ಸಾಕು,
ಈ ಪ್ರೇಮಲೋಕದಲ್ಲಿ ಬೇರೆ ಯಾರ ಅರಸುವಿಕೆಯೂ ಏತಕೆ ಬೇಕು? ನಾವು ಮಾತ್ರ, ನಮ್ಮ ಪ್ರೀತಿಯ ಕಾವ್ಯ ಮಾತ್ರ.
ವಿಜಯ ಅಮೃತರಾಜ್.

.



