ಗಜಲ್ ಸಂಗಾತಿ
ಮಧು ವಸ್ತ್ರದ ಅವರ ಗಜಲ್


ಗಝಲ್..
(ಏಳು ಶೇರ್ ಗಳು)
ಸೂತ್ರಧಾರ ಇಲ್ಲದೆ ನಾವೇ ಮುಂದಾಗಿ ನಾಟಕ ಆಡುವ ಸಮಯ ಬಂದಿದೆ
ಪಾತ್ರದ ಹೊಣೆಯ ನಿರ್ವಹಿಸುತ ಘನಕಾರ್ಯ ಮಾಡುವ ಸಮಯ ಬಂದಿದೆ
ಸತ್ಯ ನುಡಿವವನ ಧಿಕ್ಕರಿಸಿ ಖಳನಿಗೆ ಜಯಕಾರ ಹಾಕುವುದರಲಿ ಏನು ಅರ್ಥ
ಅಸತ್ಯ ಮುಖವಾಡದ ಹಿಂದಿನ ನಿಜಸ್ಥಿತಿಯನೋಡುವ ಸಮಯ ಬಂದಿದೆ
ಅನ್ಯಾಯದ ಅಗ್ನಿ ನಾಲಿಗೆ ಚಾಚಿ ಉರಿಯುತ ಸಮಾಜವನು ಸುಡುತಲಿದೆ
ನ್ಯಾಯ ನೀತಿ ಧರ್ಮಗಳ ಸಿಹಿನೀರಿನ ಬಾವಿ ತೋಡುವ ಸಮಯ ಬಂದಿದೆ
ಸುಳ್ಳಿನ ಬೀಜ ಬಿತ್ತಿ ಪ್ಫಾಮಾಣಿಕತೆಯ ಕೊಯ್ಲ ಅಪೇಕ್ಷೆ ಮಾಡಲಾಗದು
ಪೊಳ್ಳು ಕಳೆ ಕಿತ್ತು ಹೊಲವ ಹಸನಾಗಿಸಿ ನೊಗ ಹೂಡುವ ಸಮಯ ಬಂದಿದೆ
ಸಮಸ್ಯೆಗಳ ಕಾರಾಗೃಹದಿ ಸಂಕಟದ ಹೊದಿಕೆ ಹೊದ್ದು ಮಲಗುವುದು ಬೇಡ
ಅಮವಾಸ್ಯೆಯ ಕತ್ತಲಿಂದ ಹೊಸ ಪ್ರಭೆಯೆಡೆಗೆ ಓಡುವ ಸಮಯ ಬಂದಿದೆ
ಮೌನ ಮುರಿದು ನಿಸ್ಪೃಹ ನಿಸ್ವಾರ್ಥ ನಾಯಕನ ಪ್ರಾಮಾಣಿಕ ಧ್ವನಿಯಾಗಬೇಕು
ಮನೆ ಮನದಲಿ ಮತ್ತೆ ಉತ್ಕಟ ದೇಶಭಕ್ತಿಗೀತೆ ಹಾಡುವ ಸಮಯ ಬಂದಿದೆ
ನೊಂದ ಭಗ್ನ ಉರಗಳಿಗೆ ನಿರಾಳತೆಯ ಸರಳ ಸಿಹಿ ಮದ್ದು ಬೇಕಾಗಿದೆ
ಬೆಂದ ಶೋಷಿತಗೆ ಮಧುರ ನುಡಿ ಸಾಂತ್ವನ ನೀಡುವ ಸಮಯ ಬಂದಿದೆ..
ಮಧು ವಸ್ತ್ರದ..ಮುಂಬಯಿ..



