ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
“ನಿನ್ನೊಲುಮೆಯ ದೀಪಾವಳಿ”

ನೀ ನನ್ನ ಜೀವನದಲ್ಲಿ ಬಂದದ್ದೇ ಆಕಸ್ಮಿಕ
ಈಗ ನಿತ್ಯವು ದೀಪಾವಳಿ!
ನಿನ್ನ ಪ್ರೀತಿಯಲ್ಲಿ ನಾ ತೇಲಿದ್ದು ಅನಿರೀಕ್ಷಿತ
ನಿನ್ನದು ಕುಂದದ ಪ್ರಭಾವಳಿ!
ಯಾವುದೇ ಮಾತುಕತೆಗಳಿಲ್ಲದೆ
ಷರತ್ತುಗಳ ಅಂಕೆಶಂಕೆಯಿಲ್ಲದೆ
ಒಪ್ಪಂದಗಳ ಸಿಹಿಕಹಿ ಸಹಿಯಿಲ್ಲದೆ
ನೀನಂದು ನೋಡಿದ್ದಷ್ಟೆ ನಾ ಕಣ್ಣರಳಿಸಿ ನಕ್ಕದ್ದಷ್ಟೆ
ನೋಡಿಲ್ಲಿ ಪ್ರೀತಿಯೆ ಬೆಳಕಾಯಿತು ನಮ್ಮ ದಾರಿಗೆ!
ನೀ ಮತ್ತೊಂದು ಪ್ರಶ್ನಿಸದೆಯೆ ಜೊತೆಗೆ ಬಂದದ್ದಷ್ಟೆ
ಸಾಗಿದೆ ನಮ್ಮ ಬದುಕು ಕತ್ತಲಿನಿಂದ ಬೆಳಕಿನೆಡೆಗೆ!
ನಮ್ಮ ಪ್ರೀತಿ ದೀಪಾವಳಿ
ಮತಾಪುಗಳ ಅರಚಾಟವಲ್ಲ ದೀಪಗಳ ಶೃಂಗಾರ!
ಬಾಂಬುಗಳ ಠೇಂಕಾರವಲ್ಲ ಹೂಮಳೆಯ ಚಿತ್ತಾರ!
ಬೀದಿಯಲ್ಲಿ ಕೂಗಾಟವಲ್ಲ ಮನಕಿಂಪು ಮಂದಾರ!
ಸದ್ದಿಲ್ಲದೆ ಸುದ್ದಿಯಾದ ಗಂಧ ಸುಗಂಧ ಹೂಹಾರ!
ನಮ್ಮ ಒಲವ ದೀಪಾವಳಿ
ಅರಿವಾದ ಬೆಳಕಿನ ಪ್ರೀತಿ!
ಬದಲಿಸಿತು ಜೀವನ ಗತಿ!
ನಾನೆಂದೆಂದು ನಿನ್ನಲ್ಲಿ ನಿನ್ನಿಷಾರೆಯ ಹಣತೆಯಲ್ಲಿ ಬೆಳಗುವೆ!
ನಿನ್ನೊಲುಮೆಯ ದೀಪಾವಳಿಯಲ್ಲಿ ಖುಷಿಯಾಗಿ ಬದುಕುವೆ!
ನಂದದ ಪ್ರೀತಿ ಬೆಳಕು ಕತ್ತಲಿಂದ ಬೆಳಕಿನೆಡೆ ಬಾಳು ಸ್ವರ್ಗವೆ!
ಕುಂದದ ಅರಿವಿನೊಳಪು ಒಲವ ಲೋಕವೆಲ್ಲ ಚಿರನೂತನವೆ!

ಟಿ.ಪಿ.ಉಮೇಶ್



