ಕಾವ್ಯ ಸಂಗಾತಿ
ಅರುಣಾ ನರೇಂದ್ರ
“ನವ ಜಾತ ಶಿಶು”

ನಿತ್ಯ ಪ್ರೇಮಿಗಳ
ನವಜಾತ ಶಿಶುವಿಗೆ
ಮುಟ್ಟಿ ಮೈದಡವಿ
ಮುತ್ತಿಟ್ಟು ಖುಷಿಪಡಬೇಕಿತ್ತು
ಹೀಗೇ ದೂರದಿಂದಲೇ ನೋಡಿ
ಮೂಗು ಮೂತಿ ತಿರುವಿ
ಹೆಣ್ಣೋ ಗಂಡೋ ಎಂದು
ಪರಕಿಸುವುದೇ ??
ಹುಟ್ಟಿದ ಶಿಶು ಅವನ ಜಾತಿಯದೋ
ಇವಳ ಜಾತಿಯದೋ
ತಲೆಕೆಡಿಸಿಕೊಳ್ಳುವುದೇ ಆಯಿತು
ಇದಕ್ಕೆ ನಾಮ ಹಚ್ಚಲಾಗಿದೆ
ಇದು ಹಿಂದೂನೇ !
ಅಯ್ಯೋ ಸ್ವಲ್ಪ ನೋಡಿ
ಉಡಿದಾರವಿಲ್ಲದ ಕೂಸು
ಮುಸ್ಲಿಂ! ಸಂಶಯವೇ ಇಲ್ಲ…|
ಗುಜು ಗುಜು ಕುಚು ಕುಚು ಮಾತು
ದಗ್ಗನೆ ಬೆಂಕಿ ಹತ್ತಿಕೊಂಡಂತೆ
ಮಚ್ಚು ಬಡಿಗೆಗಳು ಹಾರಾಡಿದವು
ಕುಡುಗೋಲು ಮಸೆಯಲ್ಪಟ್ಟವು !
ಅಕ್ಷರದಲ್ಲಿ ಅವಿತ ಶಿಶು
ಎಲ್ಲರ ಮನ ಮುಟ್ಟಲು
ಹಂಬಲಿಸುತ್ತಲೇ ಇದೆ
ನಗುತ್ತದೆ ಎತ್ತಿಕೊಂಡವರ
ಎದೆಗೆ ಒತ್ತಿಕೊಂಡು |
ಒಮ್ಮೊಮ್ಮೆ ರಂಪ ತಗೆಯುತ್ತದೆ
ಭೂಮಿ ಬಾನು ಒಂದಾಗುವಂತೆ !
ದಕ್ಕದ ಬಾನ ನಕ್ಷತ್ರಗಳ
ಹಿಡಿತಂದು ಉಡಿ ತುಂಬಿಕೊಳ್ಳತ್ತದೆ|
ದೂರ ಸರಿದವರ ಕಂಡು
ಗಹಗಹಿಸುತ್ತದೆ
ನವಜಾತ ಶಿಶುವೀಗ
ವಾಮನನಂತೆ ಎಲ್ಲವನ್ನೂ
ಆವರಿಸಿಕೊಳ್ಳುತ್ತಿದೆ
ಅನ್ಯಾಯ ಅಸಮತೆಗಳ
ಪಾತಾಳಕ್ಕೆ ತುಳಿಯಲು !
ಕಂಕಣ ಕಟ್ಟಿಕೊಂಡು
ಮುನ್ನುಗ್ಗುತ್ತಿದೆ |

ಅರುಣಾ ನರೇಂದ್ರ



