ಕಾವ್ಯ ಸಂಗಾತಿ
ವೀಣಾ ಹೇಮಂತಗೌಡ ಪಾಟೀಲ್
“ಮಳೆ ಬೇಕು ಇಳೆಗೆ”

ಮಳೆಯಿಂದಲೇ ಕೊಚ್ಚಿ ಹೋಗುವುದು ಕೊಳೆ
ಮಳೆಯಿಂದಲೇ ಹೊಳೆಯುವುದು ಇಳೆ
ಮಳೆಯಿಂದಲೇ ಹುಲುಸಾಗಿ ಬೆಳೆಯುವುದು ಬೆಳೆ
ಮಳೆಯಿಂದಲೇ ರೈತನ ಮೊಗದಲ್ಲಿ ಇನ್ನಿಲ್ಲದ ಕಳೆ
ಮಳೆ ಬೇಕು ಇಳೆಯ ಜನರ ಬದುಕಿಗೆ
ಮಳೆ ಬೇಕು ಪಶು ಪಕ್ಷಿ ಪ್ರಕೃತಿ ಸಂಪತ್ತಿನ ಉಳಿವಿಗೆ
ಮಳೆ ಬೇಕು ಆರಿಸಲು ಭೂಮಿಯ ಧಗೆ
ಮಳೆ ಬೇಕು ತಣಿಸಲು ಜೀವ ಸಂಕುಲದ ಬಾಯಾರಿಕೆಗೆ
ಆದರೆ ಏನು?
ಇತ್ತೀಚಿಗೆ ಸುರಿಯುತ್ತಿದೆ ಒಂದೇ ಸಮ ಮಳೆ
ತೋಯ್ದು ಕೊಳೆಯುತ್ತಿವೆ ಚಿಗುರಿ ನಿಂತ ಬೆಳೆ
ಅಂದು ಬೇಡುತ್ತಿದ್ದ ರೈತ ಸುರಿಯಲೆಂದು ಮಳೆ
ಇಂದು ಶಪಿಸುತ್ತಿರುವ ರೈತ ನಿಲ್ಲಲೆಂದು ಮಳೆ

ಎಲ್ಲಿ ನೋಡಿದಲ್ಲಿ ಮಳೆಯ ಅವಾಂತರ
ರೈತನ ಬದುಕಿಗಾಯಿತು ಗಂಡಾಂತರ
ಕೊಂಚವೂ ಇಲ್ಲ ರೈತನ ಬದುಕಿನಲ್ಲಿ ಸ್ಥಿತ್ಯಂತರ
ಸಾಯಲಾರದೆ ಬದುಕಿಹರು ಇರದೇ ಗತ್ಯಂತರ
ಹೊರಗೆ ಧೋ ಎಂದು ಭೋರ್ಗರೆವ ಮಳೆ
ಆಗಾಗ ಹೊರಪಾಗಿ ನಿಲಬಹುದು ಒಂದು ವೇಳೆ
ಮನೆಯೊಳಗಿನ ಟಿವಿಯ ಉದ್ಘೋಷಕರ ಬೊಗಳೆ
ನಿತ್ಯ ನಿರಂತರ ಕೇಳಲಾರೆ ನಾನು ಇನ್ನು ತಾಳೆ
ಬಾ ಎಂದಾಗ ಬಾರದೆ ಹೋಗುವ ಮಳೆ
ಇದೀಗ ಬೇಡವೆಂದರೂ ನಿಲ್ಲದಾ ಮಳೆ
ಮಿತಿಮೀರಿ ಸುರಿದು ತುಂಬಿಹುದು ಹಳ್ಳ ಹೊಳೆ
ಸಾಕಪ್ಪ ಸಾಕು ಎರವಾಗದಿರಲಿ ಇಳೆಗೆ ಈ ಮಳೆ
ಹಬ್ಬವೊ ಹಬ್ಬ ಹಿತಮಿತವಾಗಿ ಸುರಿದರೆ ಮಳೆ
ಅಯ್ಯೋ! ಅಯ್ಯಯ್ಯೋ ಅತಿಯಾಗಿ ಸುರಿದರೆ ಮಳೆ
ರೈತನ ಶ್ರಮವನೆಲ್ಲ ಕೊಚ್ಚಿ ಕೊಂಡೊಯ್ದ ಮಳೆ
ಇದೀಗ ಎಲ್ಲೆಡೆ ಯುದ್ಧಾನಂತರದ ಕುರುಕ್ಷೇತ್ರದ ಕಳೆ
ಮಳೆ ಬಾರದಿದ್ದರೆ ಬದುಕೆಲ್ಲ ಬವಣೆ
ಮಳೆ ಬಂದು ಕೂಡ ಬದುಕಲು ಎಲ್ಲಿದೆ ಎಣೆ
ಯಾರು ಈ ವಿಕೃತಿಗೆ ವೈಫರೀತ್ಯಕೆ ಹೊಣೆ
ಬುದ್ಧಿಜೀವಿಗಳಾದ ನಾವಲ್ಲದೇ ಇನ್ನಾರನೂ ನಾ ಕಾಣೆ
ವೀಣಾ ಹೇಮಂತಗೌಡ ಪಾಟೀಲ್




