ವಿದ್ಯಾರ್ಥಿ ಸಂಗಾತಿ
ಭಾಗ್ಯ ಸಕನಾದಗಿ
“ಭೂ ತಾಯಿಗೆ
ಸೀಮಂತದ ಕಾರ್ಯಕ್ರಮ
ಶೀಗೆ ಹುಣ್ಣಿಮೆ”


ಜಗಕ್ಕೆಲ್ಲ ಅನ್ನ ನೀಡುವ ಅನ್ನದಾತನ
ಅತ್ಯಂತ ಸಡಗರ ಹಬ್ಬವೇ ಈ ಶೀಗೆ ಹುಣ್ಣಿಮೆ.
ಉತ್ತರ ಕರ್ನಾಟಕದ ಅತ್ಯಂತ ವಿಶೇಷ ಹಬ್ಬವಿದು.
ಪ್ರಕೃತಿಯು ಚೇತನವಾದದ್ದು, ಸಮೃದ್ಧವಾದದ್ದು, ಫಲವನ್ನು ನೀಡುವಂತದ್ದು ಆದರಿಂದ ನಾವು ಪ್ರಕೃತಿಯನ್ನು ಹೆಣ್ಣಿಗೆ ಹೊಲಿಸುತ್ತೇವೆ. ಹೆಣ್ಣು ಗರ್ಭ ಧರಿಸಿ ಹೆತ್ತು,ಹೊತ್ತು ಮಗುವಿನ ಪಾಲನೆ ಪೋಷಣೆ ಮಾಡುವ ಹಾಗೆ ಭೂಮಾತೆ ತನ್ನಲ್ಲಿ ಬೆಳೆ ಬೆಳೆದು ರೈತನಿಗೆ ನೀಡಿ ಜನತೆಯ ಹೊಟ್ಟೆ ತುಂಬಿಸುತ್ತಾಳೆ. ಹೀಗೆ ಹೆಣ್ಣು ಮತ್ತು ಭೂಮಿ ಎರಡರಲ್ಲಿಯೂ ಹೇರುವ ಸಮೃದ್ಧತೆ ,ಪಾಲನೆ ಮಾಡುವ ಮಮಕಾರದ ಗುಣಗಳನ್ನು ಕಂಡು ಒಕ್ಕಲು ಮಕ್ಕಳು ಹೆಣ್ಣಿನಂತೆ ಭೂಮಿಗೂ ಆಚರಣೆ ಮಾಡಲು ಹಂಬಲಿಸುತ್ತಾರೆ.
ಶೀಗೆ ಹುಣ್ಣಿಮೆ ಹೊತ್ತಿಗೆ ಭೂಮಿ ಮುಂಗಾರಿನ ಫಸಲನ್ನು ಹೊತ್ತಿಕೊಂಡು ನಿಂತಿರುತ್ತದೆ. ಗರ್ಭಿಣಿ ಹೆಣ್ಣು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಮುಂದೆ ಮಗುವನ್ನು ಹೇರುವ ನಿರೀಕ್ಷೆಯಲ್ಲಿರುವಂತೆ ಇಲ್ಲಿ ಭೂತಾಯಿಯು ಬೆಳೆಗಳನ್ನು ಹೊತ್ತು ಮಣ್ಣಿನ ಮಕ್ಕಳಿಗೆ ಫಸಲು ಕೊಡಲು ಕಾಯುತ್ತಿರುತ್ತಾಳೆ.

ಹೀಗಾಗಿ ಗರ್ಭಿಣಿ ಹೆಣ್ಣಿಗೆ ಸೀಮಂತ ಕಾರ್ಯಕ್ರಮ ಮಾಡಿದಂತೆ ಫಸಲನ್ನು ಹೊತ್ತು ನಿಂತಿರುವ ಭೂತಾಯಿಗೂ ಸೀಮಂತ ಮಾಡಿ ಸಂಭ್ರಮಿಸುತ್ತಾರೆ. ಗರ್ಭಿಣಿ ಹೆಣ್ಣಿಗೆ ಹೇಗೆ ಬಯಕೆಗಳು ಕಾಡುತ್ತವೆಯೋ ಹಾಗೆ ಭೂತಾಯಿಗೂ ಬಯಕೆಗಳಿರುತ್ತವೆ ಎಂಬುದು ಅವರ ನಂಬುಗೆ. ಅವರು ಬಸಿರು ಹೆಣ್ಣು ಮಗಳು ಮತ್ತು ಕಾಳು ಕಟ್ಟಲು ಸಿದ್ಧವಾಗಿ ನಿಂತ ಭೂಮಿಯನ್ನು ಒಂದೇ ದೃಷ್ಟಿಯಲ್ಲಿ ಕಾಣುತ್ತಾರೆ.
ವಿವಿಧ ಬಗೆಯ ಅಡುಗೆಗಳನ್ನು ಮಾಡಿ ಮನೆ ಮಂದಿಯಲ್ಲ ಸೇರಿ ಎತ್ತಿನಗಾಡಿ ಕಟ್ಟಿಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋಗಿ ಬನ್ನಿ ಗಿಡಕ್ಕೆ ಸೀರೆ ಕುಪ್ಪಸ ತೊಡಿಸಿ ಐದು ಕಲ್ಲುಗಳನ್ನು ಇಟ್ಟು (ಪಂಚಪಾಂಡವರು ಎನ್ನುತ್ತಾರೆ) ವಿಭೂತಿ ಕುಂಕುಮ ಹೂ ಹಾರಗಳಿಂದ ಶೃಂಗರಿಸಿ ಎಡೆ ಹಿಡಿದು ಭಕ್ತಿಯಿಂದ ಪೂಜೆ ಮಾಡುತ್ತಾರೆ. ನಂತರ ಎಡೆಯನ್ನು ತೆಗೆದುಕೊಂಡು ಹೊಲದ ತುಂಬಾ “ಚರಗ” ಚೆಲ್ಲುತ್ತಾರೆ. ತದನಂತರ ಮನೆ ಮಂದಿಯಲ್ಲ ಸೇರಿ ಒಂದಡೆ ಕುಳಿತು ತಾವು ಉಂಡು ನಕ್ಕು ನಲಿಯುತ್ತಾರೆ.
ಚರಗ ಚೆಲ್ಲುವುದೆಂದರೆ ಕೇವಲ ಆಚರಣೆಯಲ್ಲ. ಅದಕ್ಕಾಗಿ ಹಿಂದಿನಿಂದಲೇ ಮನೆಯಲ್ಲಿ ಸಿದ್ಧತೆ ಮಾಡಿಕೊಂಡಿರುತ್ತಾರೆ. ಎಳ್ಳು ಹಚ್ಚಿ ಮಾಡಿದ ಸಜ್ಜಿ ರೊಟ್ಟಿ, ಕರ್ಚಿಕಾಯಿ, ಶೇಂಗಾ ಹೊಳಿಗೆ, ಗುರೆಳ್ಳು ಹಿಂಡಿ, ಅಗಸಿಹಿಂಡಿ, ಶೇಂಗಾ ಚಟ್ನಿ ಇವುಗಳೆಲ್ಲವನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡಿರುತ್ತಾರೆ. ಹಬ್ಬದ ದಿನ ಹೋಳಿಗೆ, ಹುಗ್ಗಿ, ಕಡಬು ಕರಿಬುತ್ತಿ ,ಎಣಗಾಯಿ ಪಲ್ಲೆ, ಪುಂಡಿಪಲ್ಯ ,ಚವಳಿಕಾಯಿ ಪಲ್ಯ ,ಕಾಳು ಪಲ್ಯ, ಎಲ್ಲಾ ಕಾಯಿಪಲ್ಲೆಗಳು ನೈವೇದ್ಯಕ್ಕೆ ಇರಲೇಬೇಕು. ಇದೆಲ್ಲ ಮಾಡುವುದರಿಂದ ಭೂತಾಯಿ ಬಸಿರು ಬಯಕೆ ಈಡೇರುತ್ತದೆ ಎಂಬುದು ನಂಬುಗೆ.

ಪ್ರತಿದಿನ ಹಳೆ ಬಟ್ಟೆ ಮೇಲೆ ಹೊಲಕ್ಕೆ ಹೋಗುತ್ತಿದ್ದ ಜನ ಇಂದು ಹೊಸ ಸೀರೆ, ಕುಪ್ಪಸ, ಹೊಸಧೋತರ, ರುಮಾಲು ತೊಟ್ಟು ಮೈತುಂಬ ಆಭರಣಗಳನ್ನು ಹಾಕಿಕೊಂಡು ಮಕ್ಕಳು ಮರಿ ಬಂದು ಬಾಂಧವರು ಬಂಡಿಯಲ್ಲಿ ಚರಗ ಚಲ್ಲಲು ಹೊರಟ ಸಂದರ್ಭವನ್ನು ನೋಡುವುದೇ ಒಂದು ಸೊಗಸು. ಎತ್ತುಗಳ ಜೂಲು, ಗೆಜ್ಜೆಸರ ಗಾಡಿಯಲ್ಲಿ ಕುಳಿತವರ ಹಾಡು ಅಬ್ಬಬ್ಬಾ ಅದೆಲ್ಲ ವರ್ಣಿಸಲು ಸಾಧ್ಯವಾಗದು.
ತಮಗೆ ಅನ್ನ ನೀಡುವ ಭೂತಾಯಿಗೆ ಕೃತಜ್ಞತೆ ಸಲ್ಲಿಸಲು ಮಣ್ಣಿನ ಮಕ್ಕಳು ಹಾಕಿಕೊಂಡ ಈ ಆಚರಣೆ ಎಷ್ಟೊಂದು ನಂಬಿಕೆ ಶ್ರದ್ಧೆಯಿಂದ ಮಾಡುತ್ತಾರೆ ಎಂಬುವುದು ಗ್ರಾಮೀಣ ಪ್ರದೇಶದಲ್ಲಿರುವವರಿಗೆ ಅದರ ಸೊಗಸು ಸಂಪೂರ್ಣ ತಿಳಿದಿರುತ್ತದೆ.

ಚರಗ ಚೆಲ್ಲಿದ ನಂತರ ಗಾಡಿಯಲ್ಲಿ ತಂದ ಜಮಖಾನ್ ಹಾಸಿಕೊಂಡು ಎಲ್ಲರೂ ಒಂದೆಡೆ ಕುಳಿತು ಹರಟೆ ಮಾತನಾಡುತ್ತ ಸಿಹಿಯಾದ ಭೋಜನವನ್ನು ಮಾಡುತ್ತಾರೆ. ಬಂಧು ಬಾಂಧವರಿಗೆಲ್ಲ ‘ನಾಚ್ ಬ್ಯಾಡ್ರಿ’ ಆರಾಮಾಗಿ ಊಟ ಮಾಡಿ ಎಂದು ಹೇಳುತ್ತಾರೆ. ಎಲ್ಲರೂ ಸಿಹಿಯಾದ ಭೋಜನವನ್ನು ಮಾಡಿದ ನಂತರ ಮನೆಯಿಂದಲೇ ತಂದ ಎಲೆ ಅಡಿಕೆಯನ್ನು ಹಾಕಿಕೊಂಡು ಹೊಲ ಎಲ್ಲಾ ತಿರುಗಾಡುತ್ತಾ ಭೂತಾಯಿ ಹೊತ್ತ ಫಸಲಿನ ಬಗ್ಗೆ ವರ್ಣಿಸುತ್ತಾರೆ. ಹೀಗೆ ಮಾತನಾಡುತ್ತಾ ಮುಂದಿನ ಬೆಳೆಯ ಬಗ್ಗೆ ಯೋಚಿಸುತ್ತಾರೆ. ನಂತರ ಇಳಿಯ ಹೊತ್ತಿಗೆ ಮನೆಯ ಕಡೆಗೆ ಪ್ರಯಾಣ ಮಾಡುವುದು ಸಂಪ್ರದಾಯವಾಗಿದೆ.
ಭಾಗ್ಯ ಸಕನಾದಗಿ
ಬಿ.ಎ. ವಿದ್ಯಾರ್ಥಿನಿ
:




Nice
ಶೀಗೆ ಹುಣ್ಣಿಮೆಯ ಹಬ್ಬವನ್ನು ಕಣ್ಣಿಗೆ ಕಟ್ಟುವಂತೆ ಲೇಖನದಲ್ಲಿ ಕಟ್ಟಿಕೊಟ್ಟಿದ್ದೀಯ ಸುಂದರವಾದ ಲೇಖನ ಭಾಗ್ಯ,ಹೀಗೆ ಆಗಾಗ ಬರೆಯುತ್ತಿರು