ಗಜಲ್ ಸಂಗಾತಿ
ಪಾರ್ವತಿ ಎಸ್ ಬೂದೂರು
ಗಜಲ್


ನಿನ್ನ ಕಂಗಳು ಸದಾ ನನ್ನಲ್ಲೆ ಕಳೆದರೆ ಎಷ್ಟು ಚೆಂದಾಗಿತ್ತು
ಕನಸಿನ ಕಡಲಿಗೆ ದೋಣಿಯಾಗಿ ಇಳಿದರೆ ಎಷ್ಟು ಚೆಂದಾಗಿತ್ತು
ನಾನೆಂದೂ ಖರೀದಿಸಲಾಗದ ಹೂವುಗಳ ನೀನು ನೀಡುತ್ತಿದ್ದೆ
ಕರದಲಿರುವ ಸುವಾಸನೆ ನಿತ್ಯ ಉಳಿದರೆ ಎಷ್ಟು ಚೆಂದಾಗಿತ್ತು
ಒಲಿದವಳ ಅಗಲಲು ಸಾಸಿರ ಹುಸಿ ಬಲೆಗಳ ಹೆಣೆಯದಿರು
ಸತ್ಯದ ನುಡಿಯೊಂದು ನೇರ ತಿಳಿದರೆ ಎಷ್ಟು ಚೆಂದಾಗಿತ್ತು
ಪ್ರತಿ ದಾರಿಯಲು ನೂರಾರು ಜನರ ಹೊಸ ಮುಖಗಳಿವೆ
ಸಂದಣಿಯಲೂ ನನ್ನ ನೆನಪು ಅಳಿಯದಿರೆ ಎಷ್ಟು ಚೆಂದಾಗಿತ್ತು
ಕಲ್ಪನಾ ಸಾಗರದ ವಾಗ್ಧಾನವೆಲ್ಲವು ನಶ್ವರವಾಗಿವೆ ಶಿವೆ
ಅನಂತ ಅಕ್ಷಯವಾಗಿ ನೀ ಮರಳಿದರೆ ಎಷ್ಟು ಚೆಂದಾಗಿತ್ತು
ಪಾರ್ವತಿ ಎಸ್ ಬೂದೂರು



