ಗಜಲ್ ಸಂಗಾತಿ
ಎಮ್ಮಾರ್ಕೆ
ಗಜಲ್

ಎಲ್ಲರೂ ಪ್ರೀತಿಗಾಗಿ ಜಪಿಸಿದ್ದಕ್ಕಿಂತ ಪರಿತಪಿಸಿದ್ದೇ ಹೆಚ್ಚು
ಇಷ್ಟವಾದವರನ್ನಿಲ್ಲಿ ವರಿಸಿದ್ದಕ್ಕಿಂತ ಕನವರಿಸಿದ್ದೇ ಹೆಚ್ಚು
ಹಣೆಬರಹವೆಂಬ ಹೆಸರು ಹಣೆಗೆ ಅಂಟಿಸಲಾಗಿದೆಯಷ್ಟೇ
ಕವಿದ ಮಸುಕದು ತೋರಿದ್ದಕ್ಕಿಂತ ಕುರುಡಾಗಿಸಿದ್ದೇ ಹೆಚ್ಚು
ಲೈಲಾ ಮಜ್ನು,ಸಲೀಂ ಅನಾರ್ಕಲಿ ಅಮರ ಪ್ರೇಮಿಗಳಿಲ್ಲಿ
ಉಳಿದ ಹೆಸರವು ಸೇರಿಸಿದ್ದಕ್ಕಿಂತ ಅಳಿಸಿಹಾಕಿದ್ದೇ ಹೆಚ್ಚು
ದೇವತೆಗಳಾದ ರಾಧಾ ಮಾಧವರೂ ಒಂದಾಗಿಲ್ಲವಂತೆ
ಸಾಮಾನ್ಯರ ಪ್ರೀತಿ ಸ್ವೀಕಾರಕ್ಕಿಂತ ನಿರಾಕರಿಸಿದ್ದೇ ಹೆಚ್ಚು
ಕುಂಬಾರನೆದೆ ಕುಲುಮೆಗೆ ಪ್ರೇಮಾಮೃತವ ಸುರಿವೆಯ
ಆತ ಅದನು ಸವಿದುದ್ದಕ್ಕಿಂತ ಬೊಗಸೆಯೊಡ್ಡಿದ್ದೇ ಹೆಚ್ಚು
ಎಮ್ಮಾರ್ಕೆ




