ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್

ಸುತ್ತ ಕತ್ತಲಾಗಿದೆ ಚಂದ್ರ,ತಾರೆಗಳೇ ಬೆಳಕ ಬೀರಬೇಕಿದೆ
ಗಮ್ಯದ ಗುರುತಿಲ್ಲ ಮೈಲಿಗಲ್ಲೇ ದಾರಿಯ ತೋರಬೇಕಿದೆ
ಈ ಬಾಳ ದಾರಿ ನಡೆದಷ್ಟು ಗೋರಿಗೆ ಸಮೀಪವಾಗುತ್ತಿದೆ
ಕಾಲ ಕರೆದಾಗ ಮರು ಮಾತಿರದೇ ಮಸಣ ಸೇರಬೇಕಿದೆ
ಒಂದೇ ತೆರನಿಲ್ಲವೀಗ ಹಿಂದು,ಇಂದು,ಮುಂದುಗಳೆಲ್ಲವು
ಬದಲಾವಣೆ ಜಗದ ನಿಯಮವೆಂಬ ಸತ್ಯವ ಸಾರಬೇಕಿದೆ
ಹಣಕ್ಕಿಂತ ಗುಣದ ದಾರಿದ್ರ್ಯವೀಗ ಬಹುತೇಕ ಹೆಚ್ಚಾಗಿದೆ
ಸುಳ್ಳಿನ ಸೋಗಿನೊಳಗೆ ಹಾಳು ಮೂತಿಯ ತೂರಬೇಕಿದೆ
ಹಗಲುಗನಸು ಕಂಡಿರುವ ಕುಂಬಾರನಿಗೀಗ ದಿಗಿಲಾಗಿದೆ
ಮೂರು ಬಿಟ್ಟವರಿಗೆ ಮನುಷ್ಯತ್ವದ ಸರಕು ಮಾರಬೇಕಿದೆ
ಎಮ್ಮಾರ್ಕೆ




