ಧಾರಾವಾಹಿ 85
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಪ್ರಯೋಗಶಾಲಯಲ್ಲಿ ಸುಮತಿ

ಬೆಳಗ್ಗೆ ಬೇಗನೇ ಆಸ್ಪತ್ರೆಗೆ ಹೋಗಬೇಕು ಎಂದು ಅಮ್ಮ ಸುಮತಿಗೆ ರಾತ್ರಿಯೇ ಹೇಳಿದ್ದರು. ಹಾಗಾಗಿ ಸುಮತಿ ಬೆಳಗ್ಗೆ ಬೇಗನೇ ಎದ್ದು ಗೀಸರ್ ನಲ್ಲಿ ಇದ್ದ ಬಿಸಿನೀರಿನಿಂದ ಸ್ನಾನ ಮಾಡಿದಳು. ತಾನು ಜೊತೆಯಲ್ಲಿ ತಂದಿದ್ದ ಸಾಧಾರಣವಾದ ನೂಲಿನ ಸೀರೆಯನ್ನು ಉಟ್ಟು ತಯಾರಾಗಿ ಕುಳಿತಿದ್ದಳು. ಆಗ ಅಮ್ಮ ಸುಮತಿ ಇದ್ದ ರೂಮಿಗೆ ಬಂದರು. ಅವರ ಕೈಯಲ್ಲಿ ಹತ್ತಿಯ ಸೀರೆಯೊಂದು ಇತ್ತು. ಸುಮತಿಯನ್ನು ಕರೆದು….”ಈ ಸೀರೆಯನ್ನು ಉಟ್ಟುಕೊಂಡು ಆಸ್ಪತ್ರೆಗೆ ಹೋಗಿ ಸುಮತಿ”…ಎಂದು ಹೇಳುತ್ತಾ ಸೀರೆಯನ್ನು ಸುಮತಿಗೆ ಕೊಟ್ಟರು. ಸುಮತಿ ವಿನಮ್ರತೆಯಿಂದ ಅಮ್ಮನ ಕೈಯಿಂದ ಸೀರೆಯನ್ನು ತೆಗೆದುಕೊಂಡಳು. ಬಹಳ ಮೃದುವಾದ ಸೀರೆಯಾಗಿತ್ತು. ಕಣ್ಣಿನ ಮಂದ ದೃಷ್ಟಿಯಲ್ಲೂ ಬಿಳಿಯ ಬಣ್ಣದ ಸೀರೆಯಲ್ಲಿ ನೀಲಿ ಹಾಗೂ ಕೆಂಪು ಬಣ್ಣದ ಸಣ್ಣ ಚೌಕಾಕಾರದ ಗೆರೆಗಳ ಅಂಚು ಇರುವುದನ್ನು ಗಮನಿಸಿದಳು. ಸೀರೆಯ ನಡುವೆ ಅಲ್ಲಲ್ಲಿ ಅದೇ ರೀತಿಯ ಚೌಕಾಕಾರದ ಗೆರೆಗಳ ಇದ್ದವು. ಅದರ ಜೊತೆಗೆ ಅದಕ್ಕೆ ಒಪ್ಪುವ ರವಿಕೆಯೂ ಇತ್ತು. ಅವಳ ಕಣ್ಣುಗಳು ಹನಿಗೂಡಿದವು. ಇದನ್ನು ಕಂಡ ಅಮ್ಮ ಅವಳ ತೋಳ ಮೇಲೆ ಮೃದುವಾಗಿ ತಟ್ಟಿ…”ಬೇಗನೇ ಉಟ್ಟು ತಯಾರಾಗಿ ತಿಂಡಿಗೆ ಬನ್ನಿ….ಈಗ ಡಾಕ್ಟರ್ ತಯಾರಾಗಿ ಬರುತ್ತಾರೆ….ಡ್ರೈವರ್ ಆಗಲೇ ಕಾರನ್ನು ಗೇಟಿನ ಬಳಿ ನಿಲ್ಲಿಸಿ ಕಾಯುತ್ತಿದ್ದಾನೆ”….ಎಂದರು. ಅಮ್ಮ ಕೋಣೆಯಿಂದ ಹೊರಗೆ ಹೋದ ನಂತರ ಸೀರೆಯನ್ನು ಬಿಡಿಸಿ ನೋಡಿದಳು. ಅವರು ಉಟ್ಟಿದ್ದ ಸೀರೆಯಾಗಿದ್ದರೂ ಹೊಸದರ ಹಾಗೆಯೇ ಇತ್ತು. ಇಂತಹಾ ಒಳ್ಳೆಯ ಬಟ್ಟೆಯನ್ನು ತಾನು ತೊಟ್ಟು ಬಹಳ ಕಾಲಗಳೇ ಕಳೆದವು ಎನ್ನುವುದು ನೆನಪಿಗೆ ಬಂತು. ಹಾಗೆಯೇ ತನ್ನ ಅಮ್ಮ ಕಲ್ಯಾಣಿ ನೆನಪಿಗೆ ಬಂದರು. ಅಮ್ಮ ಉಡುತ್ತಿದ್ದ ಸೆಟ್ಟು ಸೀರೆ ನೆನಪಾಯಿತು. ಹಸಿರು ಮತ್ತು ಕೆಂಪು ಬಣ್ಣದ ಜೊತೆಗೆ ಚಿನ್ನದ ಜರಿಯ ಅಂಚು ಇದ್ದ ಸೀರೆಯನ್ನು ಹೆಚ್ಚಾಗಿ ಅಮ್ಮ ಉಡುತ್ತಿದ್ದರು. ತಾಯಿ ಕಲ್ಯಾಣಿಯನ್ನು ನೆನಪಿಸಿಕೊಳ್ಳುತ್ತಾ ಬೇಗ ತಯಾರಾಗಿ ಮಗಳನ್ನು ಜೊತೆಗೆ ಕರೆದುಕೊಂಡು ತಿಂಡಿ ತಿನ್ನಲು ಬಂದು ಕುಳಿತಳು.
ರುಚಿಕರವಾದ ಮೃದುವಾದ ದೋಸೆ, ತೆಂಗಿನಕಾಯಿ ಚಟ್ನಿ, ಬೇಳೆಕಾಳು ಹಾಗೂ ಕೊಬ್ಬರಿಯನ್ನು ಹಾಕಿ ಮಾಡಿದ್ದ ಚಟ್ನಿ ಪುಡಿ, ಬೆಣ್ಣೆ ಹಾಗೂ ತುಪ್ಪ ಇವೆಲ್ಲವನ್ನೂ ಅಮ್ಮ ತಟ್ಟೆಯಲ್ಲಿ ಬಡಿಸಿ ಸುಮತಿ ಮತ್ತು ಮಗಳಿಗೆ ಕೊಟ್ಟರು. ಅಮ್ಮ ಮಾಡುತ್ತಿದ್ದ ಅಡುಗೆಯೂ ಬಹಳ ರುಚಿಕರವಾಗಿದೆ ಎಂದು ಸುಮತಿಗೆ ಅನಿಸಿತು. ಅದನ್ನು ಬಾಯ್ಬಿಟ್ಟು ಹೇಳಿದಳು. ಸುಮತಿಯ ಮಾತನ್ನು ಕೇಳಿದ ಅಮ್ಮ ಮುಗುಳ್ನಕ್ಕರು. ಡ್ರೈವರ್ ಬಂದು….” ಟೀಚರಮ್ಮ ಡಾಕ್ಟರ್ ಆಗಲೇ ತಿಂಡಿ ಮುಗಿಸಿ ಕಾರಿನಲ್ಲಿ ಕುಳಿತಿದ್ದಾರೆ… ಬನ್ನಿ”… ಎಂದು ಸುಮತಿಯನ್ನು ಕರೆದರು. ಮಗಳನ್ನು ಅಮ್ಮನ ಜೊತೆ ಬಂಗಲೆಯಲ್ಲಿಯೇ ಇರುವಂತೆ ಸೂಚಿಸಿ ಸುಮತಿ ಅಮ್ಮನಿಗೆ ವಂದಿಸಿ ಹೋಗಿ ಬರುತ್ತೇನೆ ಎಂದು ಹೇಳಿ ಡ್ರೈವರ್ ಹಿಂದೆಯೇ ಹೋದಳು. ಡ್ರೈವರ್ ಕಾರಿನ ಬಾಗಿಲನ್ನು ತೆರೆದು ಕುಳಿತುಕೊಳ್ಳುವಂತೆ ಸೂಚಿಸಿದರು. ಸುಮತಿ ಕಾರಿನಲ್ಲಿ ಕುಳಿತುಕೊಳ್ಳುವ ಮೊದಲು ಡಾಕ್ಟರ್ ರವರಿಗೆ ವಂದಿಸಿ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಳು. ಅಷ್ಟು ಹೊತ್ತಿಗಾಗಲೇ ಅಮ್ಮ, ಕೆಲಸದ ಹುಡುಗಿ ಮತ್ತು ತನ್ನ ಮಗಳು ಮನೆಯ ಬಾಗಿಲ ಬಳಿ ಬಂದು ನಿಂತಿರುವುದು ಕಾಣಿಸಿತು. ಮಂದ ದೃಷ್ಟಿಯಲ್ಲೂ ಎಲ್ಲರನ್ನು ನೋಡುತ್ತಾ…” ಹೋಗಿ ಬರುವೆ”…. ಎಂದಳು. ಆಗಲಿ ಎಂಬಂತೆ ಅಮ್ಮ ತಲೆಯಾಡಿಸಿದರು. ಕಾರು ಮುಂದೆ ಚಲಿಸಿತು. ರಸ್ತೆಯ ಎರಡೂ ಬದಿಯಲ್ಲಿ ಗಗನ ಚುಂಬಿ ಕಟ್ಟಡಗಳನ್ನು ನೋಡುತ್ತಿದ್ದಳು ಸುಮತಿ. ಜೀವನದಲ್ಲಿ ಮೊದಲ ಬಾರಿಗೆ ಇಂತಹಾ ಮಹಾನಗರಕ್ಕೆ ಬಂದಿದ್ದಳು. ಅಪ್ಪ ಅಮ್ಮನ ಜೊತೆ ಕೇರಳದಲ್ಲಿ ಇದ್ದಾಗ ಅಲ್ಲಿನ ಸುತ್ತಮುತ್ತಲ ಪಟ್ಟಣಕ್ಕೆ ಅಪರೂಪಕ್ಕೆ ಹೋಗುತ್ತಿದ್ದಳು. ಆದರೆ ಇಷ್ಟು ದೊಡ್ಡ ನಗರವನ್ನು ಅವಳು ನೋಡಿರಲಿಲ್ಲ. ದಾರಿಯುದ್ದಕ್ಕೂ ಕಾಣುವ ದೊಡ್ಡ ದೊಡ್ಡ ಕಾಂಕ್ರೀಟು ಕಟ್ಟಡಗಳನ್ನು ಅವುಗಳ ವೈಭವವನ್ನು ಅಚ್ಚರಿಯಿಂದ ಕಣ್ಣರಳಿಸಿ ನೋಡುತ್ತಿದ್ದಳು.
ಸುಮಾರು ಅರ್ಧ ಗಂಟೆಯ ಪ್ರಯಾಣದ ನಂತರ ಒಂದು ದೊಡ್ಡ ಆಸ್ಪತ್ರೆಯ ಮುಂದೆ ಕಾರು ನಿಂತಿತು. ಡ್ರೈವರ್ ಮೊದಲು ಇಳಿದು ಸಣ್ಣ ಸಾಹುಕಾರರು ಇಳಿಯಲು ಕಾರಿನ ಬಾಗಿಲನ್ನು ತೆರೆದರು. ನಂತರ ಸುಮತಿ ಕುಳಿತಿದ್ದ ಹಿಂದಿನ ಸೀಟಿನ ಬಳಿ ಬಂದು ಬಾಗಿಲು ತೆರೆದರು. ಸುಮತಿ ನಿಧಾನವಾಗಿ ಕಾರಿನಿಂದ ಇಳಿದಳು. ಡ್ರೈವರ್ ಕಾರಿನ ಬಾಗಿಲುಗಳನ್ನು ಕೀಲಿಯಿಂದ ಭದ್ರಪಡಿಸಿದರು. ಮೂವರೂ ಆಸ್ಪತ್ರೆಯ ಒಳಗೆ ನಡೆದರು. ಡಾಕ್ಟರ್ ರನ್ನು ಕಂಡ ಅಲ್ಲಿನ ಸಿಬ್ಬಂದಿ ವಂದಿಸುತ್ತಾ…”ಸರ್ ನಮ್ಮಿಂದ ಏನು ಸಹಾಯ ಆಗಬೇಕಿತ್ತು?….ಎಂದು ಕೇಳಿದರು. ಆಗ ಸಣ್ಣ ಸಾಹುಕಾರರು…”ಈಕೆಯ ಕಣ್ಣಿನಲ್ಲಿ ಪೊರೆ ಬೆಳೆದಿದೆ… ಚಿಕಿತ್ಸೆಗಾಗಿ ಇಲ್ಲಿನ ತಜ್ಞವೈದ್ಯರನ್ನು ಭೇಟಿ ಮಾಡಬೇಕಿತ್ತು”… ಎಂದರು. ಆಗ ಆಸ್ಪತ್ರೆಯ ಸಿಬ್ಬಂದಿ…ವಿನಮ್ರತೆಯಿಂದ….” ಸರ್ ನೀವು ಹೋಗಿ ಕಾರಿನಲ್ಲಿ ಕುಳಿತುಕೊಳ್ಳಿ….ನಾವು ಈಕೆಯನ್ನು ಕಣ್ಣಿನ ತಜ್ಞರ ಬಳಿಗೆ ಕರೆದುಕೊಂಡು ಹೋಗುತ್ತೇವೆ….ಜೊತೆಗೆ ಡ್ರೈವರಣ್ಣ ಬರಲಿ”….ಎಂದರು. ಡಾಕ್ಟರ್ ಮುಗುಳ್ನಗುತ್ತಾ…”ಹಾಗೆಯೇ ಆಗಲಿ”…. ಎಂದು ಹೇಳಿ ಡ್ರೈವರನ್ನು ಕರೆದು…ನನ್ನನ್ನು ನಮ್ಮ ಆಫೀಸ್ ಬಳಿ ಬಿಟ್ಟು ನೀನು ಪುನಃ ಇಲ್ಲಿಗೆ ಹಿಂತಿರುಗಿ ಬಂದು ಟೀಚರ್ ಜೊತೆ ಇದ್ದು ಅವರಿಗೆ ಏನೇನು ಅಗತ್ಯವಿದೆಯೋ ನೋಡಿಕೋ”….ಎಂದರು. ಡ್ರೈವರ್ ಆಸ್ಪತ್ರೆಯ ಸಿಬ್ಬಂದಿಯ ಬಳಿಗೆ ಬಂದು ಸಣ್ಣ ಸಾಹುಕಾರರು ಹೇಳಿದ ಸಂಗತಿಯನ್ನು ತಿಳಿಸಿದರು….” ಹಾಗೆಯೇ ಆಗಲಿ…ನಾವು ವೈದ್ಯರ ಬಳಿಗೆ ಈಕೆಯನ್ನು ಕರೆದುಕೊಂಡು ಹೋಗುತ್ತೇವೆ….ನೀವು ಹೋಗಿ ಬನ್ನಿ…ಎಂದು ಹೇಳಿ….ಅಮ್ಮಾ ನೀವು ನಮ್ಮ ಜೊತೆಗೆ ಬನ್ನಿ”…. ಎಂದು ಸುಮತಿಗೆ ಹೇಳಿ ಸಿಬ್ಬಂದಿ ಮುಂದೆ ನಡೆದರು. ಸುಮತಿ ಅವರನ್ನು ಹಿಂಬಾಲಿಸಿದಳು.
ವೈದ್ಯರ ಕೊಠಡಿಯ ಮುಂದೆ ರೋಗಿಗಳ ಬಹಳ ದೊಡ್ಡ ಸಾಲು ಇತ್ತು. ಆಸ್ಪತ್ರೆಯ ಸಿಬ್ಬಂದಿ ಸುಮತಿಗೆ ಅಲ್ಲಿಯೇ ನಿಲ್ಲಲು ಹೇಳಿ ವೈದ್ಯರ ಕೊಠಡಿಯ ಒಳಗೆ ಹೋದರು. ಸ್ವಲ್ಪ ಸಮಯದ ಬಳಿಕ ಹೊರಗೆ ಬಂದ ಸಿಬ್ಬಂದಿ ತಮ್ಮ ಜೊತೆಗೆ ಒಳಗೆ ಬರುವಂತೆ ಸೂಚಿಸಿದರು. ಅವರ ಹಿಂದೆ ಸುಮತಿ ವೈದ್ಯರ ಕೊಠಡಿಯ ಒಳಗೆ ನಡೆದಳು. ವೈದ್ಯರ ಬಳಿ ಸುಮತಿಯನ್ನು ಬಿಟ್ಟು ಸಿಬ್ಬಂದಿ ಹೊರಗೆ ಹೋದರು. ನೇತ್ರತಜ್ಞರು ಸುಮತಿಯನ್ನು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಸುಮತಿ ಸಕಲೇಶಪುರದ ಕಣ್ಣಿನ ವೈದ್ಯರು ಹಾಗೂ ಫಿಸಿಷಿಯನ್ ರವರು ಬರೆದುಕೊಟ್ಟ ಚೀಟಿಗಳನ್ನು ನೇತ್ರತಜ್ಞರಿಗೆ ತೋರಿಸಿದಳು. ತಜ್ಞರು ಎಲ್ಲಾ ಚೀಟಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಕಣ್ಣಿನ ತಪಾಸಣೆ ಪ್ರಾರಂಭಿಸಿದರು. ಹಲವಾರು ರೀತಿಯ ತಪಾಸಣೆಯ ನಂತರ ಪ್ರಯೋಗಾಲಯಕ್ಕೆ ಹೋಗಿ ರಕ್ತ ಹಾಗೂ ಮೂತ್ರ ಪರಿಶೋಧನೆ ಮಾಡಿಸಿಕೊಂಡು ಬರುವಂತೆ ಸುಮತಿಗೆ ಸೂಚಿಸಿದರು. ತಜ್ಞರ ಕೊಠಡಿಯಿಂದ ಸುಮತಿ ಹೊರಗೆ ಬಂದಳು. ಸಣ್ಣ ಸಾಹುಕಾರರನ್ನು ಅವರ ಕಛೇರಿಯ ಬಳಿ ಬಿಟ್ಟು ಬಂದು ಡ್ರೈವರ್ ಕೊಠಡಿಯ ಆಚೆ ನಿಂತು ಟೀಚರಮ್ಮನನ್ನು ಕಾಯುತ್ತಿದ್ದರು. ಟೀಚರಮ್ಮನನ್ನು ಕಂಡ ಕೂಡಲೇ ಡ್ರೈವರ್ ಓಡೋಡಿ ಬಳಿ ಬಂದು…. “ಟೀಚರೇ ಡಾಕ್ಟರ್ ಎಂದ್ ಪರಂಞು( ಟೀಚರೇ ಡಾಕ್ಟರ್ ಏನು ಹೇಳಿದರು)”…ಎಂದು ಮಲಯಾಳಂ ನಲ್ಲಿ ಕೇಳಿದರು. ತಜ್ಞರು ಪ್ರಯೋಗಾಲಕ್ಕೆ ಹೋಗಿ ರಕ್ತ ಹಾಗೂ ಮೂತ್ರವನ್ನು ಪರಿಶೀಲಿಸಿ ಅದರ ರಿಪೋರ್ಟ್ ಪಡೆದುಕೊಂಡು ಮತ್ತೆ ತಜ್ಞರ ಬಳಿಗೆ ಹೋಗಲು ತಿಳಿಸಿದ್ದಾರೆ ಎಂದಳು. ಡ್ರೈವರ್ ಸುಮತಿಯನ್ನು ಪ್ರಯೋಗಾಲಯದ ಕಡೆಗೆ ಕರೆದುಕೊಂಡು ಹೋದರು.




