ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀನು ಮರೆತು ಬಿಡು
ನಾನು ನೆನಪಿಟ್ಟು ಕೊಳ್ಳುತ್ತೇನೆ
ಮೊದಲಿನಂತೆಯೇ… ಈಗಲೂ
ನಕ್ಕಂತೆ
ನಟಿಸಿಬಿಡು
ಬಂಡೆಗಲ್ಲುಗಳ ಮೇಲೆ ಎರಡೂ ಹಸ್ತ ಊರಿ ಕೂತು
ಎಷ್ಟೋ ಹೊತ್ತು
ಆಕಾಶ ನೋಡಿದ್ದು  ತರಚಿ ಆದ ಗಾಯಕ್ಕೆ ಉಗುಳು ಹಚ್ಚಿ
ಉಫ್ ಎಂದುಕೊಂಡಂತೆ!

ನರಗಳು ಅದೆಷ್ಟೋ
ಅದರಲ್ಲಿ ನೆನಪಿನ ನರ(?) ಸೊರಗಿರಬಹುದು
ನಮ್ಮೂರಲ್ಲಿ ಸಮುದ್ರವಿಲ್ಲ
ಕಲ್ಲಿನ ಕಲ್ಯಾಣಿ ನಡುವೆ ನೀರು
ಬಂಗಾರ ಬಣ್ಣದ ಮೀನರಾಶಿ
ಒಂದೊಂದು ಮೆಟ್ಟಿಲು ಈಗಲೂ ಅಂಗಾತವಾಗಿದೆ
ನಿನ್ನ ಹತ್ತಿಯಂಥಾ ಪಾದಕೆ!

ಹಸ್ತವೂರಿದ ಕಿರುಬೆರಳ
ತಾಕಲು
ಮೂರನೇ ಮಹಾಯುದ್ಧವೇ ಮನದ ಮೂಲೆಯಲ್ಲಿ
ಮೌನ ವಸಂತ ಮಂಟಪ ಕೂಡ
ಹಾಡಿದ ಹಾಡುಗಳ ಅಕ್ಷರಗಳು ಅಕ್ಷರಶಃ
ನೆನಪಿವೆ ; ನೀ ಮರೆತುಬಿಡು…

ಪುಸ್ತಕದ ಪ್ರತಿ ಕೊನೆಯ
ಪುಟದಿ ನಿನ್ನದೇ ಹೆಸರು ತಿರುಮುರುವಾಗಿ
ಬರೆದದ್ದು ನಿನಗಷ್ಟೇ ಗೊತ್ತು ;
ಕನ್ನಡ ಪದ್ಯಗಳ ಜೊತೆ ಜೊತೆಗೆ
ಅದೂ ಕೂಡ ಕಂಠಪಾಠವಾಗಿದ್ದು  ಆ ಮಿಸ್ ನ ಬೆತ್ತದ ಗುರುತು
ಬೆರಳ ಮೇಲೆ ಮೂಡಿದಾಗಲೆ!

ಮರೆವು ನಿನಗೆ ವರವಿರಬಹುದು
ಶಾಪಗ್ರಸ್ಥ ಗಂಧರ್ವ
ನಾನು
ಮರೆತ ದುಷ್ಯಂತನಿಗೂ ಒಂದು ಕಾಲ ಬಂತು;
ಪುಣ್ಯವತಿ ಶಕುಂತಲೆಯ ಭಾಗ್ಯ ನನಗೆ
ನೀರ ಮೇಲಣ ಗುಳ್ಳೆ!

ನಟಿಸದಿದ್ದರೆ ನಾವು
ಒಂದು ಕ್ಷಣವೂ ಬದುಕಲಾರೆವು
ಎಷ್ಟೊಂದು ಬಣ್ಣ, ಎಷ್ಟೊಂದು ಮುಖವಾಡ
ತರೇವಾರಿ ರಂಗಸಜ್ಜಿಕೆ
ಒಲವು ಹೀಗೆ ಊಸರವಳ್ಳಿಗೆ ತೊಡೆ ತಟ್ಟಿದ್ದು
ನಾವಿಬ್ಬರೂ ಕೂತೆದ್ದ ಹುಲ್ಲು ಹಾಸು
ಆತ್ಮಹತ್ಯೆ ಮಾಡಿಕೊಂಡಂತಾಗಿದೆ!

ಒಂದೊಂದು ಮಣಿ ಹನಿಯೂ ನಾಲಗೆ ಮೇಲೆ ಹಾಕಿ
ಕೊಂಡು ಚಪ್ಪರಿಸಿ ನುಂಗಿದ್ದು
ಎದೆತುಂಬಾ ಇದೀಗ ಸಮುದ್ರವಾಗಿದೆ
ಜೊತೆಯಲ್ಲಿ ನೆನೆದರೂ
ಒಣಗಿದ್ದು ಬದುಕು
ಒಲವು ಹಸಿಯಾಗಿದೆ ಎಂದು ಯಾವ ಪ್ರಾಂಸರಿ ನೋಟಿನ ಮೇಲೆ ಬರೆದು ನೀಡಲಿ?

ಒಲವು ಒಲವಷ್ಟೆ
ಅದರಾಚೆ ಎಂತದ್ದು ಇಲ್ಲ
ಸಿಕ್ಕರೂ ಸಿಗದಿದ್ದರೂ
ನೀ ನಿನ್ನ ದೋಣಿಯಲ್ಲಿ
ನಾ ನನ್ನ ತೆಪ್ಪದಲ್ಲಿ ದಡವರಸಿ ಸಾಗುವುದಷ್ಟೇ ನಾಳೆ ನೋಟ!

ನೀ ಮರೆತುಬಿಡು
ನಾ ಮರೆತಂತೆ ಇದ್ದು ಬಿಡುವೆ….ಅಷ್ಟೇ!


About The Author

6 thoughts on “ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ”ಒಲವ ಮರೆವು””

  1. ಕವಿತೆ ಚೆನ್ನಾಗಿದೆ.ಅಭಿನಂದನೆಗಳು. ಒಂದೆರಡು ಮಾತು. ನಮ್ಮ ಬಹಳಷ್ಟು ಯುವ ಕವಿಗಳ ಕಾವ್ಯ, ಭಾವ ತೀವ್ರತೆಯ ದಡತನಕ ಬಂದು ನಿಂತು ಬಿಡುತ್ತಿದೆ.ವಾಸ್ತವದ ಎಚ್ಚರಿಕೆಯಲ್ಲೇ ಅರಳಬೇಕಾದ ಪರಂಪರೆಯ ಅರಿವು ರೂಪಕ ಧಾರಣದಿಂದ ದೂರ ಸರಿಯುತ್ತಿರಬಹುದೆಂಬ ಅನುಮಾನ ನನಗೆ. ನೀವು ಈಚಿನ ಗಮನಾರ್ಹ ಕವಿ. ಕೆಲವು ದಿನ ಕವಿತೆಗೆ ವಿರಾಮ ಕೊಟ್ಟು ಕೆಲವೊಂದಿಷ್ಟು ಮಿತಿಗಳ ದಾಟಿ ಮತ್ತೆ ಪೆನ್ನು ಹಿಡಿದರೆ ನೀವು ಖಂಡಿತ ಶ್ರೇಷ್ಠರ ಸಾಲಿಗೆ ಸೇರುತ್ತೀರಿ.

  2. ಭಾವ ಲಹರಿ ಸರಳವಾಗಿದ್ದು ಚೆನ್ನಾಗಿದೆ. ನಟನೆ ಬೇಡ ಮರೆವು ಬೇಡ… ಬೇಕೆಂದರೂ ಬರಲಾರದವು.. ಸಿಕ್ಕರು ಸಿಗದಿದ್ದರೂ ಸಿಗುತ್ತೆ ಎಂದು ಈಜುವುದು .. ಮುಳುಗಡೆ ನೂ ಇರಬಲ್ಲದು….ಹೀಗೆ ದಾಟುವ ಒಡೆದು ಹಾಕುವ ಶೋಧ ಧ್ವನಿಪೂರ್ಣ ಕೌಶಲ್ಯ ನಿಮ್ಮದಾಗಲಿ. ವಂದನೆಗಳೊಂದಿಗೆ…

Leave a Reply

You cannot copy content of this page

Scroll to Top