ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಾರ್ಡ್ ಬಾಯ್ ಬಂದು ವಿಷಯ ತಿಳಿಸಿದ ಕೂಡಲೇ ಇನ್ನೊಂದು ಕೊಠಡಿಯಲ್ಲಿ ಕಾರ್ಯನಿರತರಾಗಿದ್ದ ವೈದ್ಯರು ಆತುರಾತುರಾಗಿ ಓಡೋಡಿ ವೇಲಾಯುಧನ್ ರವರು ದಾಖಲಾಗಿದ್ದ ಕೊಠಡಿಗೆ ಬಂದರು. ಹಣೆ ಮುಟ್ಟಿನೋಡಿ, ನಾಡಿಮಿಡಿತ ಹಾಗೂ ಉಸಿರಾಟವನ್ನು ಪರಿಶೀಲಿಸಿ ವೇಲಾಯುಧನ್ ರವರು ಮರಣ ಹೊಂದಿರುವುದನ್ನು ಖಾತ್ರಿಪಡಿಸಿಕೊಂಡರು. ಸುಮತಿಯನ್ನುದೇಶಿಸಿ…”ನಿಮ್ಮ ಪತಿಯು ವಿಧಿವಶರಾದರು… ದಯವಿಟ್ಟು ಕ್ಷಮಿಸಿ”…. ಎಂದರು. ವೈದ್ಯರ ಮಾತುಗಳನ್ನು ಕೇಳಿದ ಸುಮತಿಗೆ ತನ್ನ ಮೇಲೆ ಸಿಡಿಲರಗಿದಂತಹ ಅನುಭವವಾಯಿತು. ಕಣ್ಣು ಕತ್ತಲಿಟ್ಟಿತು. ವೈದ್ಯರು ಹೇಳಿದ ಮಾತನ್ನು ನಂಬಲು ಸಾಧ್ಯವಾಗದೆ ಎತ್ತರದ ಧ್ವನಿಯಲ್ಲಿ….” ಖಂಡಿತಾ ನನ್ನ ಪತಿಗೆ ಏನು ಆಗಿರಲಿಕ್ಕಿಲ್ಲ ದಯವಿಟ್ಟು ಮತ್ತೊಮ್ಮೆ ಪರೀಕ್ಷಿಸಿ ನೋಡಿ”… ಎಂದು ಅಂಗಲಾಚಿದಳು. ಅವಳ ಕೋರಿಕೆಯ ಮೇರೆಗೆ ವೈದ್ಯರು ವೇಲಾಯುಧನ್ ರವರನ್ನು ಚಿಕಿತ್ಸೆಗಾಗಿ ಕೊಠಡಿಯಲ್ಲಿ ದಾಖಲಿಸಿದ್ದ ವೈದ್ಯರು ಬರೆದ ನಿರ್ದೇಶನದ ಚೀಟಿಯನ್ನು ತೆಗೆದು ನೋಡಿದರು. ಎಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಿದ ಅವರು ದಾಖಲಿಸಿದ ವೈದ್ಯರನ್ನೇ ಕರೆತರುವಂತೆ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಾದಿಗೆ ಹೇಳಿ ಕೆಲವು ನಿರ್ದೇಶನಗಳನ್ನು ನೀಡಿದರು. ಅದರಂತೆ ದಾದಿಯು ಮೇಲಾಧಿಕಾರಿಗಳ ಕೊಠಡಿಯತ್ತ ಧಾವಿಸಿದರು. ಸ್ವಲ್ಪ ಹೊತ್ತಿಗಾಗಲೇ ವೇಲಾಯುಧನ್ ರನ್ನು ಚಿಕಿತ್ಸೆಗೊಳಪಡಿಸಿದ ವೈದ್ಯರು ಬಂದರು. ಏನಾಯಿತು ಎಂದು ದಾದಿಯನ್ನು ಕೇಳಿದರು. ದಾದಿಯ ತನಗೇನು ತಿಳಿಯದು ಎಂಬಂತೆ ತಲೆಯಾಡಿಸಿ….” ಸುಮತಿ ಬಂದು ಹೇಳಿದಾಗ ನಾನು ಬಂದು ಪರೀಕ್ಷಿಸಿದೆ. ನಿರ್ದೇಶನದ ಚೀಟಿಯಲ್ಲಿ ನೀವು ಬರೆದಿದ್ದ ಚುಚ್ಚುಮದ್ದು ಹಾಗೂ ಮಾತ್ರೆಗಳನ್ನು ನೀಡಿ ಸ್ವಲ್ಪ ಸಮಯವಾಯಿತಷ್ಟೇ”…. ಎಂದಳು. 

ಸುಮತಿಯನ್ನು ಕರೆದು ಏನಾಯಿತು ಎಂದು ವಿವರವಾಗಿ ತಿಳಿಸುವಂತೆ ಹೇಳಿದರು. ತನ್ನ ಪತಿಯು ಜೀವಂತವಾಗಿಲ್ಲ ಎಂದು ವೈದ್ಯರು ಹೇಳಿದ್ದನ್ನು ಅರಗಿಸಿಕೊಳ್ಳಲಾರದೆ ಗರಬಡಿದಂತೆ ನಿಂತಿದ್ದ ಸುಮತಿಯು ವೈದ್ಯರು ಕೇಳಿದಾಗ ಅಳುತ್ತಲೇ ನಡೆದುದನ್ನೆಲ್ಲ ವಿವರಿಸಿದಳು. ಏನು ಮಾಡಬೇಕೆಂದು ವೈದ್ಯರಿಗೆ ತೋಚಲಿಲ್ಲ ಹಗಲಿನಲ್ಲಿ ಕಾರ್ಯನಿರತಳಾಗಿದ್ದ ದಾದಿಯು ಮನೆಗೆ ಹೊರಟು ಹೋಗಿದ್ದಳು. ನಿರ್ದೇಶನಾ ಚೀಟಿಯಲ್ಲಿ ತಾನು ಔಷಧಿ ಮತ್ತು ಚುಚ್ಚುಮದ್ದನ್ನು ಕೊಟ್ಟ ಬಗ್ಗೆ ದಾಖಲಿಸಿರಲಿಲ್ಲ. ಸುಮತಿ ಹೇಳಿದ್ಧನ್ನು ನಂಬಲು ಅರ್ಹ ದಾಖಲಾತಿಗಳು ಅಲ್ಲಿ ಇರಲಿಲ್ಲ. ಹಾಗಾಗಿ ತಾವು ಏನನ್ನು ಮಾಡಲಾಗದು ಎಂದು ವೈದ್ಯರು ಕೈ ಚೆಲ್ಲಿದರು. ಏನು ಮಾಡುವುದು ಎಂದು ಸುಮತಿಗೆ ತೋಚಲಿಲ್ಲ. ತನ್ನ ಕಣ್ಣ ಮುಂದೆ ಬರೀ ಕತ್ತಲೆಯೇ ತುಂಬಿಕೊಂಡಿರುವಂತೆ ಭಾಸವಾಯಿತು. ಹಾಸನದಲ್ಲಿ ಇದ್ದ ತಮ್ಮ ಒಬ್ಬನನ್ನು ಬಿಟ್ಟರೆ ಅವಳ ಸಹಾಯಕ್ಕೆ ಬೇರೆ ಬಂಧುಗಳು ಯಾರು ಇರಲಿಲ್ಲ. ಮನೆಯಲ್ಲಿ ಮಕ್ಕಳು ಮೂವರನ್ನು ಬಿಟ್ಟು ಬಂದಿದ್ದಳು. ಆಸ್ಪತ್ರೆಯ ಕೊಠಡಿಯಲ್ಲಿ ಇರುವ ಎಲ್ಲರೂ ಸುಮತಿಯ ಬಗ್ಗೆ ಮರುಗುವವರೇ ಆಗಿದ್ದರು. ಛೆ!! ಹೀಗೆ ಆಗಬಾರದಿತ್ತು. ಈಕೆ ನೋಡಿದರೆ ಗರ್ಭಿಣಿ. ಈ ಸ್ಥಿತಿಯಲ್ಲಿ ಪತಿ ತೀರಿಹೋಗಿದ್ದಾರೆ. ಒಂಟಿ ಹೆಣ್ಣು ಏನು ತಾನೇ ಮಾಡುತ್ತಾಳೆ ಎನ್ನುತ್ತಾ ಕನಿಕರದಿಂದ ತಮಗೆ ಅನಿಸಿದ್ದನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದರು. ರಾತ್ರಿಯಾದ್ದರಿಂದ ನಿಧನರಾದ ವೇಲಾಯುಧನ್ ರವರ ಶವವನ್ನು ತೆಗೆದುಕೊಂಡು ಹೋಗುವಂತೆಯೂ ಇರಲಿಲ್ಲ. ಶವ ಶರೀರವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯಲ್ಲಿ ಸುಮತಿ ಒಬ್ಬಳೇ, ಅವಳಿಗೆ ತಮ್ಮವರು ಎನ್ನುವ ಒಬ್ಬರಾದರೂ ಸಾಂತ್ವನ ಹೇಳುವವರು ಇರಲಿಲ್ಲ. 

ಸುಮತಿಯು ತನ್ನ ಈ ದಾರುಣ ಸ್ಥಿತಿಯನ್ನು ನೆನೆದು ಪತಿಯ ಅಗಲಿಕೆಯನ್ನು ತಾಳಲಾರದೆ ಆಸ್ಪತ್ರೆಯ ಆವರಣದಲ್ಲೇ ಕುಳಿತು ಬಿಕ್ಕಿ ಬಿಕ್ಕಿ ಅತ್ತಳು. ಅವಳ ಈ ಮೌನರೋದನವನ್ನು ಆಸ್ಪತ್ರೆಯ ಸಿಬ್ಬಂದಿಗಳು, ಇತರ ರೋಗಿಗಳು, ಅವರನ್ನು ನೋಡಿಕೊಳ್ಳಲು ಬಂದಿದ್ದ ಬಂಧುಗಳು ನೋಡಿ ಅಯ್ಯೋ ಎಂದು ಮರುಗಿದರು. ಒಂಟಿಯಾಗಿ ರೋದಿಸುತ್ತಾ  ಬೆಳಗಾಗುವ ನೀರೀಕ್ಷೆಯಲ್ಲಿ ನಿದ್ದೆ ಇಲ್ಲದೆ ಕಾಲ ಕಳೆದಳು. ಬೆಳಗಾದ ಕೂಡಲೇ ತಮ್ಮನಿಗೆ ಸುದ್ದಿ ಮುಟ್ಟಿಸಿದಳು. ವಿಷಯವನ್ನು ತಿಳಿದ ಸುಮತಿಯ ತಮ್ಮ ಹಾಗೂ ಪತ್ನಿ ಓಡೋಡಿ ಬಂದರು. ಅಕ್ಕನ ಸ್ಥಿತಿಯನ್ನು ಕಂಡು ತಮ್ಮ ಬಹಳವಾಗಿ ನೊಂದುಕೊಂಡ. ಅಕ್ಕ ಹೇಳಿದ ವಿಷಯಗಳನ್ನು ಕೇಳಿಸಿಕೊಂಡ ಅವನು ಕೂಡ ಏನೂ ಮಾಡುವಂತೆಯೂ ಇರಲಿಲ್ಲ.  ಏಕೆಂದರೆ ಅಲ್ಲಿ ದಾಖಲಾತಿಗಳು ಇರಲಿಲ್ಲ.  ಪತ್ನಿಯನ್ನು ಅಕ್ಕನ ಬಳಿ ಇರಲು ಹೇಳಿ ಅಕ್ಕನ ಮಕ್ಕಳನ್ನು ಕರೆದುಕೊಂಡು ಬರಲು ಹೋದನು. ಅಲ್ಲಿಗೆ ಬಂದಾಗ ಮಕ್ಕಳ ಸ್ಥಿತಿ ಇನ್ನೂ ಶೋಚನೀಯವಾಗಿ ಕಂಡಿತು. ಸುಮತಿಯ ಹಿರಿಯ ಮಗಳು ತನಗೆ ಸಾಧ್ಯವಾದಷ್ಟು ತಂಗಿಯರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಳು. ಮಾವನನ್ನು ಕಂಡ ಕೂಡಲೇ ಮಕ್ಕಳು ಅಪ್ಪ ಅಮ್ಮ ಎಲ್ಲಿ ಎಂದು ಕೇಳಿದಾಗ, ಏನೂ ಹೇಳಲು ಸಾಧ್ಯವಾಗದೆ….”ಮಕ್ಕಳೇ ನನ್ನ ಜೊತೆ ಬನ್ನಿ ನಾನು ನಿಮ್ಮನ್ನು ಹಾಸನಕ್ಕೆ ಕರೆದುಕೊಂಡು ಹೋಗುತ್ತೇನೆ… ಎಂದು ಮಾತ್ರ ಹೇಳಿ ಬೇಗ ಬೇಗನೇ ತಯಾರಾಗುವಂತೆ ತಿಳಿಸಿದನು. ಮಕ್ಕಳು ಅಮ್ಮ ಅಪ್ಪನನ್ನು ನೋಡಲು ಲಗುಬಗೆಯಿಂದ ತಯಾರಾಗಿ ಮಾವನ ಜೊತೆಗೆ ಹೊರಟರು. ಮಕ್ಕಳು ಮಾವನೊಂದಿಗೆ ಆಸ್ಪತ್ರೆಯನ್ನು ತಲುಪಿದಾಗ ಅಮ್ಮ ಅತ್ತೆಯ ಹೆಗಲ ಮೇಲೆ ತಲೆಯಿಟ್ಟು ಅಳುತ್ತಿರುವುದು ಕಂಡಿತು. ಮಕ್ಕಳು ಮೂವರು ಅಮ್ಮನ ಬಳಿಗೆ ಓಡಿ ಬಂದು ಅಪ್ಪಿಕೊಂಡರು. 

ಮಕ್ಕಳು ಬಂದಿದ್ದನ್ನು ದೂರದಿಂದಲೇ ಗಮನಿಸಿದ ಸುಮತಿ ಮಕ್ಕಳಿಗೆ ತನ್ನ ಕಣ್ಣೀರು ಕಾಣದಿರಲಿ ಎಂದು ತನ್ನ ಸೀರೆಯ ಸರಗಿನಿಂದ ಮುಖವನ್ನು ಒರೆಸಿಕೊಂಡಳು. ಆದರೂ ಅಮ್ಮನ ಕಣ್ಣುಗಳು ಊದಿಕೊಂಡಿದ್ದನ್ನು ಕಂಡು ಅಮ್ಮನಿಗೆ ಏನೋ ತೊಂದರೆಯಾಗಿದೆ ಎಂದು ಹಿರಿಯ ಮಗಳಿಗೆ ತಿಳಿಯಿತು….”ಅಮ್ಮಾ ಏನಾಯ್ತು”…. ಎಂದು ಮಗಳು ಕೇಳಿದಾಗ….”ಅಪ್ಪ ಇನ್ನಿಲ್ಲ ಮಗಳೇ…. ಅಪ್ಪ ಶ್ರೀ ಕೃಷ್ಣನ ಪಾದವನ್ನು  ಸೇರಿಕೊಂಡರು”…. ಎಂದು ಸುಮತಿ ಉತ್ತರಿಸಿದಳು. ಅಮ್ಮ ಹೇಳಿದ ಮಾತುಗಳು ಹಿರಿಯ ಮಗಳಿಗೆ ಸ್ವಲ್ಪ ಅರ್ಥವಾದಂತೆ ಅನಿಸಿತು. ಆದರೂ ಇದ್ದಕ್ಕಿದ್ದ ಹಾಗೆ  ಏನಾಯ್ತು ಎನ್ನುವ ಜಿಜ್ಞಾಸೆ ಅವಳ ಮನದಲ್ಲಿ ಮೂಡಿತು. ಅವಳ ತಂಗಿಯರು ಏನೂ ತಿಳಿಯದೆ ಪಿಳಿಪಿಳಿ ಎಂದು ಕಂಡು ಬಿಡುತ್ತಾ ಅಮ್ಮ, ಅಕ್ಕ, ಮಾವ ಹಾಗೂ ಅತ್ತೆಯನ್ನು ನೋಡುತ್ತಿದ್ದರು. ಆ ದೃಶ್ಯವು ಅಲ್ಲಿ ನೆರದಿದ್ದವರ ಕಣ್ಣುಗಳನ್ನು ಹನಿಗೂಡುವಂತೆ ಮಾಡಿತು. ಸ್ವಲ್ಪ ಹೊತ್ತಿಗೆಲ್ಲ ವೇಲಾಯುಧನ್ ರ ಪಾರ್ಥಿವ ಶರೀರವನ್ನು ಆಸ್ಪತ್ರೆಯ ಸಿಬ್ಬಂದಿಯು ವಾಹನದಲ್ಲಿ ತಂದರು. ಅಕ್ಕ ಹಾಗೂ ಮಕ್ಕಳನ್ನು ಕರೆದುಕೊಂಡು ಸುಮತಿಯ ತಮ್ಮ ತನ್ನ ಕಾರಿನಲ್ಲಿ ಆ ವಾಹನವನ್ನು ಹಿಂಬಾಲಿಸಿದ. ಮಕ್ಕಳು ಇನ್ನೂ ಚಿಕ್ಕವರಾದ ಕಾರಣ ಸುಮತಿಯ ತಮ್ಮ ತನ್ನ ಪತ್ನಿಯನ್ನು ಮನೆಗೆ ಹಿಂತಿರುಗಿ ಹೋಗಲು ತಿಳಿಸಿದ. ಶವ ಸಂಸ್ಕಾರದ ವಿಧಿವಿಧಾನಗಳನ್ನು ಮುಗಿಸಿ ಮನೆಗೆ ಬರುವುದಾಗಿ ಪತ್ನಿಗೆ ಹೇಳಿದ. ಸರಿ ಎನ್ನುವಂತೆ ಸಮ್ಮತಿ ಸೂಚಿಸಿ ಅವರು ಮನೆಕಡೆಗೆ ಹೆಜ್ಜೆ ಹಾಕಿದರು. ದಾರಿಯ ನಡುವೆ ಅಕ್ಕನ ಮಕ್ಕಳಿಗೆ ತಿಂಡಿ ಹಾಗೂ ಎಳನೀರನ್ನು ಕೊಡಿಸಿ ಅಕ್ಕನಿಗೂ ಏನಾದರೂ ತಿನ್ನುವಂತೆ ಒತ್ತಾಯಿಸಿ ತಿನ್ನಿಸಿದ. ಗರ್ಭಿಣಿಯಾದ ಅಕ್ಕ ಹಾಗೂ ಉದರದಲ್ಲಿ ಇರುವ ಮಗು ಹಸಿದಿರುವುದು ಆರೋಗ್ಯಕ್ಕೆ ಹಿತಕರವಲ್ಲ ಎನ್ನುವುದನ್ನು ಅರಿತ ತಮ್ಮ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದನು. 


̲̲̲̲̲̲̲̲̲̲̲̲̲̲̲

About The Author

Leave a Reply

You cannot copy content of this page

Scroll to Top