ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿ

ರಕ್ತದಾನ

ಜಾತಿ ಮತ ಬೇಧಗಳು ರುಧಿರಕ್ಕೆ ಇಹುದೇನು
ದಾತನಾಗಲು ಬಹುದು ದಾನವನು ಮಾಡಿ
ನೀತಿಯನು ಮನದಲ್ಲಿ ಇರಿಸುತಲಿ ಆತುರಗೆ
ಪ್ರೀತಿಯಲಿ ನೀಡು ನೀ ಧೀರತಮ್ಮ

ಕೆಂಪು ಬಣ್ಣದ ರಕ್ತ ದೇಹಕ್ಕೆ ಜೀವ ನಿಜ
ಕಂಪು ನೀಡಲು ರಕ್ತ ಪರಿಚಲನೆ ಸಹಿತ
ಪೆಂಪು ಬಾಳಿನ‌ರಥದಿ ಒದಗುವೆಡೆ ಬಳಲಿಹಗೆ
ಸೊಂಪು ರಕ್ತದ ದಾನ ಧೀರತಮ್ಮ

ಕಟ್ಟಿ ಇಟ್ಟರೆ ಸೊತ್ತು ಫಲವೇನು ಅದರಿಂದ
ಕೊಟ್ಟು ಬಿಡು ನೊಂದವಗೆ ಸ್ವಲ್ಪ ಪಾಲು
ನೆಟ್ಟು ಸೋದರ ಭಾವ ಮಾಡು ರಕ್ತದ ದಾನ
ಕೆಟ್ಟು ಹೋಗದು ಬಾಳು ಧೀರತಮ್ಮ

ಮಾಡಿದರೆ ವೆಚ್ಚವನು ಇನ್ನಷ್ಟು ಹೆಚ್ಚುವುದು
ಕೂಡಿಟ್ಟ ಧನಕಿಂತ ಭಿನ್ನವಾಗಿ
ದೂಡು ಹೊರಗಡೆ ಜ್ಞಾನ ರಕ್ತಗಳ ಜನಪದಕೆ
ನೀಡುವುದು ನಿನಗದನೆ ಧೀರ ತಮ್ಮ


ಡಾ ಸುರೇಶ ನೆಗಳಗುಳಿ


About The Author

Leave a Reply

You cannot copy content of this page

Scroll to Top