ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅರ್ಚನಾ ಯಳಬೇರು-ಬಹು ಕಾಫಿಯ ಗಜಲ್

ಸಮರದಲಿ ಅಮರಳಾಗಬೇಕೆಂದಿರುವೆ ಭರಾಂಕದಲ್ಲಲ್ಲ ಬಾಳಿನಲ್ಲಿ
ಮರಣದಲಿ ಶರಣಾಗಬೇಕೆಂದಿರುವೆ ಭರವಸೆಯಲ್ಲಲ್ಲ ಬದುಕಿನಲ್ಲಿ

ಯಾರಿಲ್ಲ ಇಲ್ಲಿ ಮಡಿದ ಭಾವನೆಗಳ ಶವದೆದುರು ಕಣ್ ಪನಿಗಳ ಸುರಿಸಲು
ಚೆಲುವಿನಲಿ ಚಿನ್ಮಯನಾಗಬೇಕೆಂದಿರುವೆ ಮೋಹದಲ್ಲಲ್ಲ ಮೌನದಲ್ಲಿ

ಕೇಳುವವರಿಲ್ಲ ಅಂತರಂಗದ ಅಳಲು ಮನದ ಮರ್ಜಿಗೆ ಬೆಲೆಯಿಹುದೇ
ನಿಶಾಂತದಲಿ ನಳನಳಿಸಬೇಕೆಂದಿರುವೆ ಚೆಂಬೆಳಕಿನಲ್ಲಲ್ಲ ಚಿಂತನೆಯಲ್ಲಿ

ಕುಂದಿದ ಕಸುವಲ್ಲಿದೆ ಉರವಣಿಸುವ ಅಪೇಕ್ಷೆಗಳ ಅನೂಹ್ಯವಾದ ಗಡಣ
ಜೇಷ್ಠದಲಿ ಶ್ರೇಷ್ಠಳಾಗಬೇಕೆಂದಿರುವೆ ಸನ್ಮಾನದಲ್ಲಲ್ಲ ಸಾಧನೆಯಲ್ಲಿ

ತುಮುಲಗಳ ಸೌಖ್ಯದಲಿ ತತ್ತರಿಸದಿರಲಿ ತಡಕಾಡುವ ತನುವು ಅರ್ಚನಾ
ರೌರವದಲಿ ನಿರವಿಸಬೇಕೆಂದಿರುವೆ ಮಾಧುರ್ಯದಲ್ಲಲ್ಲ ಮಮತೆಯಲ್ಲಿ


About The Author

Leave a Reply

You cannot copy content of this page

Scroll to Top