ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ ಅವರಿಂದ

ಗುರುವಂದನೆ

ಕಾರಿರುಳ ಮುಸುಕಿರುವ
ಕಾವಳವ ಕರಗಿಸಲು
ನೇಸರನ ಹೊಂಗದಿರ ಒಂದು ಸಾಕು
ಮನವನಾವರಿಸಿರುವ
ವಿಷಯಂಗಳು ಕಳೆಯಲು
ನಿನ್ನ ದರುಶನ ಸಾಕು ಸಿದ್ಧಗುರುವೆ..!

ಶಿವನ ಡಂಗುರ ದನಿಯು
ಪ್ರವಚನದಿ ಹರಿಯುತಿದೆ
ಶಿವಶಕ್ತಿ ಕಾರುಣ್ಯ ತನು ತುಂಬಿದೆ
ಆ ದೇವ ಈ ದೇವ
ನನಗೇತರಾ ಗೊಡವೆ
ನೀನೆನ್ನ ದೇವನು ಸಿದ್ಧಗುರುವೆ..!

ಧರೆಗಿಳಿದ ಪುಣ್ಯಾತ್ಮ
ನಡೆದಾಡೋ ಭಗವಂತ
ನಿನ್ನಡಿಯ ಧೂಳು ಪಾವನ ಭಸ್ಮವು
ನಗುಮೊಗದೆ ನೀಡಿರುವೆ
ಕರುಣಧಾರೆಯ ನೀನು
ಜನ್ಮ ಸಾರ್ಥಕವಾಯ್ತು ಸಿದ್ಧಗುರುವೆ..!

ಜಾತಿ ಮತಗಳ ಮೀರಿ
ಲಿಂಗಭೇದವ ಕಳೆದು
ಸಮತೆ ಭಾವವ ತುಂಬಿ ಎಲ್ಲರಲ್ಲೂ
ನೀತಿ ಮಮತೆಯ ಹೂವ
ನೀಡುತಲಿ ಜಗಕೆಲ್ಲ
ನಿರಾಭಾರಿಯು ನೀನು ಸಿದ್ಧಗುರುವೆ..!

ನಾನು ಎಂಬುದ ಅಳಿದು
ನೀನು ಎಂಬುದ ಉಳಿದು
ಮನ ಹಸನವಾಯಿತ್ತು ಬೆಸನ ನೀಗಿ
ಗಂಧ ಪುಷ್ಪವನಗಲಿ
ಇರಲಹುದೇ ಅರೆಗಳಿಗೆ
ಮಾನಸದಿ ತುಂಬಿರುವೆ ಸಿದ್ಧಗುರುವೆ..


ಹಮೀದಾ ಬೇಗಂ ದೇಸಾಯಿ

About The Author

1 thought on “ಗುರುವಂದನೆ-ಹಮೀದಾ ಬೇಗಂ ದೇಸಾಯಿ”

Leave a Reply

You cannot copy content of this page

Scroll to Top