ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಾಂಧಿ ಬೀಜ

ಎ ಎಸ್. ಮಕಾನದಾರ

ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆ
ನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ

ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳ ನೆತ್ತಿಗೆ ನೆರಳು ಹೊಟ್ಟಿಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ

ಗಲ್ಲಿ ಗಲ್ಲಿಗಳಲ್ಲಿ ಮಚ್ಚು-ಲಾಂಗು
ಗಸ್ತು ತಿರುಗುವುದನ್ನು ಕಂಡು ಬೊಚ್ಚು ಬಾಯಿಯ ಮುದುಕ ಬೆಚ್ಚಿ ಬಿದ್ದಿದ್ದಾನೆ

ಅರಮನೆ ಗುರುಮನೆ ಸೆರೆಮನೆಗಳಲೂ
ಕಿಡಿನುಡಿ ಕೆನ್ನಾಲಿಗೆ ಚಾಚಿ ಝೇಂಕಾರವಾಡುತ್ತಿ
ರುವುದನು ಕಂಡು ದಿಗ್ಭ್ರಾಂತರಾಗಿದ್ದಾನೆ

ಅಗಸಿ ಬಾಗಿಲಲ್ಲಿ ಜಾತಿಯತೆಯ ಹೆಬ್ಬಾವು ಬಾಯಿ ತೆರೆದಿರುವುದನ್ನು ಕಂಡು ಪೆಚ್ಚುಮೋರೆ ಮಾಡಿ ಸೌಹಾರ್ದತೆಯ ಓಣಿಗೆ ಹೆಜ್ಜೆ ಇಡಲು ನಡುಗುತ್ತಿದ್ದಾನೆ

ಮೂರಕ್ಕೆ ಮೂರು ಬಿಟ್ಟು ಆರನೇರಿ ಗುಬ್ಬಿಯ ಉದರದಲ್ಲಿ ಬಂದೂಕಿನ ಬೀಜ ಬಿತ್ತಿದ
ಹೊಲದೊಡೆಯನ ಕಂಡು ಕಸಿವಿಸಿಗೊಂಡಿದ್ದಾನೆ

ಖಾದಿ ಕೇಂದ್ರ ಘೋಷಿಸಿದ ರಿಬೇಟಿನಲ್ಲಿ ಮಾರ್ಕೆಟ್ ಮಾಲ್ ಗಳಲ್ಲಿ ಗಾಂಧಿಗಿರಿ ಕೊಳ್ಳಲು ಮುಗೆಬಿದ್ದ ಗ್ರಾಹಕರಿಗೆ ಕಂಡು ತಬ್ಬಿಬ್ಬು ಗೊಂಡಿದ್ದಾನೆ

ನಗ್ನ ಫಕೀರನ ಬೆತ್ತಕೆ ಪಶ್ಚಿಮದ ಬೆಟ್ಟವೂ
ಅದುರಿರಲು ನೂಲಿಲ್ಲದ ಚರಕ ತಿರುಗಿಸಲು
ಪೈಪೋಟಿಗಿಳಿದ ಸೆಲ್ಫಿಗಳ ಕಂಡು ಕನಿಕರ ಪಡುತ್ತಿದ್ದಾನೆ

ರಕ್ತಸಿಕ್ತ ಕರಗಳಲಿ ಹಿಡಿದ ಪೊರಕೆಯಿಂದ ಸ್ವಚ್ಛ ಭಾರತ ಘೋಷಣೆ ಕೋಗಿದರೆ
ಮನೆ ಮನದ ಅಂಗಳದಲ್ಲೂ ನೆತ್ತರದ ರಂಗೋಲಿ ಕಂಡು ಚಿಂತಾಕ್ರಾಂತನಾಗಿದ್ದಾನೆ

ಮೂರು ಕೋತಿಗಳ ಜಾಗೆಯಲ್ಲಿ ಮತ್ತೊಂದು ಕೋತಿ ಸೇರಿದೆ ಉರಿಯುವ ಮನೆಗಳ ಗಳ ಹಿರಿಯುವವರನು ಕಂಡು ಕಣ್ ಕಣ್ ಪಿಳಿಕಿಸುತ್ತಿದ್ದಾನೆ

ಗುಂಡಿಗೆ
ಗುಂಡಿಗೆಯೊಡ್ಡುತ್ತಲೇ ತಿಂಗಳ ತಿಳಿವು ಮನೆ ಅಂಗಳಕೆ ಬರಲೆಂದು
ಗಾಂಧಿ ಸರ್ಕಲ್ ನಲ್ಲಿ ನಿಂತ ಭೈರಾಗಿಗೆ ಕಂಡು ಮುದುಕ ಮೌನವಾಗಿದ್ದಾನೆ

ಕವಿ ಸತ್ತು ಕವಿತೆ ಉಳಿಯಬೇಕು ಇದು ಲೋಕದ ನಿಯಮ
ಗಾಂಧಿ ಸತ್ತು ಗಾಂಧಿ ತತ್ವ ಗಳು ಉಳಿಯದಿರುವದಕೆ
ಶಾಂತಿಯ ಪಾರಿವಾಳ ಗೊಣಗುತ್ತಿವೆ

ಬಡಕಲು ಶರೀರದಲ್ಲೂ ಸಾವಿರ ವಿದ್ಯುತ್ ಬಲ್ಬುಗಳ ಬೆಳಕಿನ ಶಕ್ತಿ
ಅಂಬರದೆತ್ತರದ ನಿಲುವಿನ ಉಕ್ಕಿನೆದೆಯ ವೀರನಿಗೆ ಭಾರತ ಮಾತೆ ಅಶ್ರುತರ್ಪಣ ಗೈದು ಮತ್ತೊಂದು ಕರ್ಬಲಾ ಕ್ಕಾಗಿ ಕಾಯುತಿಹಳು

ಆತ್ಮ ಸಾಕ್ಷಿಯ ಸಾಕ್ಷಾತ್ಕಾರ
ಪ್ರೇಮದ ಹಾದಿಯ ಪಥಿಕನ
ಬರುವಿಕೆಗಾಗಿ ಸತ್ಯ ಮಾರ್ಗದ ದಂಡಕ ಹಿಡಿದು
ಗಾಂಧಿ ಬೀಜ ಬಿತ್ತುತ್ತಿದ್ದೇನೆ

ರಾಮ ರಹೀಮ್ ಹೇ ರಾಮ್
ಬಂದು ಒಕ್ಕಲು ಮಾಡಿ ನನ್ನ ಜೊತೆಗೂಡಿ
ಅವರು ಇವರು ಎಲ್ಲರೂ ಬರಲಿ ರಾಶಿ ಕಣದಲ್ಲಿ ಫಸಲು ತುಂಬಲು


About The Author

1 thought on “ಗಾಂಧಿ ಬೀಜ- ಎ ಎಸ್. ಮಕಾನದಾರ”

Leave a Reply

You cannot copy content of this page

Scroll to Top