ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥೆ

ಧನ್ಯ ಮಿಲನ

ಸರೋಜಾ ಶ್ರೀಕಾಂತ್ ಅಮಾತಿ

Radha Krishna 1 by artist Darshan Sharma | ArtZolo.com

ರಾಧೆ,ರಾಧೆ….ಅದೇ ಧ್ವನಿ!…..ಹೌದು ಇದು ಅದೇ ಧ್ವನಿ,ಕೃಷ್ಣ ….ಕೃಷ್ಣ ! ಎಲ್ಲವಿತಿರುವೆ!? ಎದುರಿಗೊಮ್ಮೆ ಬರಬಾರದೆ? ಅದೆಷ್ಟೋ ವರುಷಗಳ ನಂತರ ಮತ್ತೆ ಕೃಷ್ಣ ಬಂದಿದ್ದ.ಅದೇ ತೇಜಸ್ಸು,ನಗುದುಂಬಿದ ಮುಖ ಕೃಷ್ಣನ ದರ್ಶನವಾಗುತ್ತಲೇ ನದಿ ದಂಡೆಯ ಆ ಉರಿಬಿಸಿಲೂ ಹಿತವೆನಿಸಿಸುತ್ತಿತ್ತು ರಾಧೆಗೆ.ಅಬ್ಬಾ! ,ಅಂತೂ ಬಂದೆಯಲ್ಲ ಸ್ವಾಮಿ ಇಷ್ಟು ವರ್ಷಗಳು ಬೇಕಾದವೆ ಈ ರಾಧೆಯನ್ನು ಕಾಣಲು? ಅಂದಾಗ ನೀನೆಂದೂ ನನ್ನ ಜೊತೆಯೇ ಇರುವೆ ರಾಧೆ ಏಕೆ ನಿನಗೆ ಹಾಗೇಣಿಸುವುದಿಲ್ಲವೇ?ಭೇಟಿ ವಿಳಂಬವಾಯಿತೆಂದು ನನ್ನನ್ನೇ ಮರೆತು ಬಿಟ್ಟೆಯಾ ಹೇಗೆ? ಇಲ್ಲ ಕೃಷ್ಣ ಇಲ್ಲ ನೀ ನನ್ನೊಳಗೇ ಇರುವೆ ನಿನ್ನನ್ನು ಹೃದಯದಲ್ಲಿ ಕೂಡಿ ಹಾಕುವ ಮೊದಲೇ ನೀ ಮಾತಿನಲ್ಲಿ ಸೋಲಿಸಿ ಬಿಡುವೆ ನಿನ್ನಿಂದ ಸೋಲಲೂ ಅದೃಷ್ಟವೇ ಬೇಕು ಅಲ್ಲವೇ ಕೃಷ್ಣ? ಇಷ್ಟು ಕಾಯಿಸುವುದು ನಿನಗೆ ಸರಿಯೇ ಕೃಷ್ಣ…. ನದಿ ದಂಡೆಯ ಮರಳಿನ ಪ್ರತಿ ಕಣ ಕಣಕ್ಕೂ ಗೊತ್ತು ನಾ ನಿನ್ನನೆಷ್ಟು ಹಂಬಲಿಸಿದೆ ಎಂದು ಹಸಿರು ಹಾಸಿದ ಗರಿಕೆ ಪಕ್ಕದಲ್ಲಿಯೇ ನಗುತ್ತ ಅರಳಿರುವ ಸುಂದರ ಹೂಗಳು,ಸೂಸುವ ಈ ತಂಗಾಳಿಗೆ,ಗಿಡ ,ಮರ ,ಬಳ್ಳಿ ಅಷ್ಟೇ ಏಕೆ ನದಿಯೊಳಗೀಜಾಡುವ ಬಣ್ಣಬಣ್ಣದ ಮೀನಿನ ಕಣ್ಣಿಗೂ ನನ್ನ ಪ್ರೀತಿ ಕಂಡಿರಬಹುದು ಕೃಷ್ಣ .ಅವನ್ನೊಮ್ಮೆ ನೋಡಿ ಬಿಡು ಸಾಕು ನನ್ನ ಮನಸ್ಸಿನ ತುಮುಲ,ವಿರಹ ಎಲ್ಲವೂ ನಿನಗೆ ಗೊತ್ತಾಗುವುದು ಕೃಷ್ಣ. ಇಷ್ಟೊಂದು ಚಂದದ ಮಧುರ ವಾಣಿ ಎಲ್ಲಿಂದ ಕಲಿತೆ ರಾಧೆ!? ಹೃದಯವಾಸಿಯಾದ ಶ್ರೀಕೃಷ್ಣನ ಸಹವಾಸದಿಂದಲೇ ಇದೆಲ್ಲವೂ ಸಂಭವಿಸಿರಬೇಕಷ್ಟೇ ನನ್ನದೆನಿಲ್ಲ ಕೃಷ್ಣ.ಹೇಗಿರುವೆ ರಾಧೆ ತುಸು ಕೆಲಸ,ಕಾರ್ಯದಲ್ಲಿ ಮಗ್ನಳಾದಂತೆ ಕಾಣುತ್ತದೆ. ಅದೆಂತದೂ ಮಹಾ ಕಾರ್ಯವಿಲ್ಲ ಬಿಡು ಕೃಷ್ಣ ನೆನೆದವರ ಮನದಲ್ಲಿ ಎಂಬಂತೆ ನೀ ಬಂದಿರುವೆ ಅಷ್ಟೇ ಸಾಕೆನಗೆ. ಕುಶಲೋಪಚಾರದ ಬಳಿಕ ಸರಿ ರಾಧೆ ನಾನಿನ್ನು ಬರಲೇ!?…. ಸಂಜೆ ಮತ್ತೆ ಇದೇ ನದಿ ದಂಡೆಯಲ್ಲಿ ಸಿಗುವೆ ಎಂದು ಹೊರಟೇ ಬಿಟ್ಟ ಕೃಷ್ಣ. ಹೀಗೆ ಬಂದು ಹಾಗೆ ಹೋಗುವುದೇ ಕೃಷ್ಣ ನಾನೊಪ್ಪುವುದಿಲ್ಲ ಒಂದರೆಗಳಿಗೆಯಾದರೂ ನೀ ಇರಲೇಬೇಕು ಎಂದು ಮುನಿಸಿಕೊಂಡ ರಾಧೆ ಹಿಂತಿರುಗಿ ನೋಡುವಷ್ಟರಲ್ಲಿ ಕೃಷ್ಣನೇ ಕಾಣುತ್ತಿಲ್ಲ.ಅತ್ತ,ಇತ್ತ ಸುತ್ತಲೂ ಹುಡುಕಿದ ರಾಧೆಗೆ ಏನಿದು ಇದೆಲ್ಲ ಬರೀ ನನ್ನ ಭ್ರಮೆಯೊ ಹೇಗೆ ಏನೊಂದು ತೋಚುತ್ತಿಲ್ಲವೆಂದು ಮತ್ತೆ ಸುತ್ತೆಲ್ಲವೂ ಕಣ್ಣಾಡಿಸುತ್ತ ಕೃಷ್ಣ ಕಾಣದಂತಾದಾಗ ಬೇಸರದಿಂದ ಮನೆಕಡೆ ಹೆಜ್ಜೆ ಹಾಕಿದಳು ರಾಧೆ.

ಇದೇನಿದು ಆಶ್ಚರ್ಯ!…. ಹಿಂತಿರುಗಿ ನೋಡಿದಾಗ ಕಣ್ಮರೆಯಾಗಿದ್ದ ಕೃಷ್ಣ ಮನೆಯಂಗಳಕ್ಕೆಲ್ಲ ನೆರಳಾಗಿರೋ ಆ ಬೇವಿನ ಮರಕ್ಕೆ ಕಟ್ಟಿದ ಉಯ್ಯಾಲೆಯಲ್ಲಿ ಕೊಳಲನಿಡಿದು ಕುಳಿತಿರುವ.ಕಣ್ಣುಗಳನ್ನುಜ್ಜುತ್ತ ಮತ್ತೆ,ಮತ್ತೇ ಆ ಕಡೆಗೆ ದೃಷ್ಟಿ ನೆಟ್ಟಾಗ ರಾಧೆಯ ಎದೆಬಡಿತ ಜೋರಾಯಿತು!.ಕೃಷ್ಣನ ಮರು ಆಗಮನ ಒಂದು ಕಡೆ ಸಂತಸದ ಸುಗ್ಗಿ,ಮತ್ತೊಂದೆಡೆ ಮೊದಲ ಘಟನೆಯಂತೆ ಇದೂ ಕೂಡ ನನ್ನ ಭ್ರಮೆಯೇ ಎಂಬ ಭಯದ ನಿಗಿ ಕೆಂಡ.ಸಂಜೆ ಬರುವೆನೆಂದ ಕೃಷ್ಣ   ಈಗಲೇ ಮರಳಿದ್ದು ಯಾಕೆ “ಏನಾದರೂ ಮರೆತಿರಬಹುದೇ!?….ಅಥವಾ ಬೇಕಂತಲೇ ನನ್ನ ಆಟ ಆಡಿಸುವ ಸಂಚೆ? ….ಅದಕ್ಕೆ ಅಲ್ಲವೆ ಅವನನ್ನು ಕಳ್ಳ ಅನ್ನುವುದು ಹೀಗೆ ಅದೆಷ್ಟೋ ಪ್ರಶ್ನೆಗಳ ಸರಮಾಲೆಯೇ ರಾಧೆಯ ಮನವನ್ನು ನಲುಗಿಸಿಬಿಟ್ಟವು.ತುಸು ಸಮಾಧಾನಿಸಿಕೊಂಡ ರಾಧೆ ಅಂತರ್ಯಾಮಿ ಶ್ಯಾಮನೆ ಆಪತ್ಬಾ0ಧವ ಅವನೇ ನನ್ನ ಜೊತೆಗಿರುವಾಗ ನನಗಿನ್ನೇತರ ಭಯ!?…. ಅಂದುಕೊಳ್ಳುತ್ತಲೇ ಕೃಷ್ಣನ ಬಳಿ ಹೋಗುತ್ತಾಳೆ. ಕೃಷ್ಣ  ತನ್ನ ಸನಿಹ ಬರುತ್ತಿರುವ ರಾಧೆಯನ್ನು ಕಂಡು ಮುಗುಳ್ನಗುತ್ತಾನೆ. ಉಯ್ಯಾಲೆಯಲ್ಲಿ ತನ್ನ ಪಕ್ಕದಲ್ಲೇ ಕುಳಿತುಕೊಳ್ಳುವಂತೆ ಸನ್ನೆ ಮಾಡುತ್ತ ಕೃಷ್ಣ ತಾನೇ ಮಾತಿಗಿಳಿಯುತ್ತಾನೆ.” ಎಷ್ಟೋ ವರುಷಗಳ ನಂತರದ ನಮ್ಮಿಬ್ಬರ ಈ ಸುಮಧುರ ಭೇಟಿಯನ್ನು ಅಷ್ಟು ಸುಲಭದಲ್ಲಿ ಮುಗಿಸುವೆನೇ ರಾಧೆ!?….ಅಂದಾಗ ಮೌನವಾಗಿಯೇ ಇದ್ದ ರಾಧೆ ಕೃಷ್ಣನ ಮುಖ ನೋಡುವುದರಲ್ಲೇ ತಲ್ಲೀನಳಾಗಿದ್ದಾಳೆ.”ಏ… ರಾಧೆ ಅಂತ ಜೋರಾಗಿ ಕೂಗುತ್ತ ಅವನು ಕೈ ಸ್ಪರ್ಶಿಸಿದಾಗ ಪುಳಕಿತಳಾದ ರಾಧೆ ವಾಸ್ತವಕ್ಕೆ ಮರಳುತ್ತಾಳೆ.ಬೀಸೋ ತಂಗಾಳಿಗೆ ಬೇವಿನ ಮರದ ಪುಟ್ಟ,ಪುಟ್ಟ ತಿಳಿ ಹಳದಿ ಬಣ್ಣದ ಪುಷ್ಪಗಳು ಆಗೊಮ್ಮೆ,ಈಗೊಮ್ಮೆ ಸುರಿಯೋ ತುಂತುರು ಮಳೆ ಹನಿಯ ರೀತಿ ಕೃಷ್ಣನ ಕೆನ್ನೆಯನ್ನು ಮೃದುವಾಗಿ ತಟ್ಟುತ್ತಿವೆ.ಆಗಲೇ ಮತ್ತೊಂದು ವಸಂತ ಋತು ಬಂದಾಯಿತೇ!? ಅಷ್ಟು ಬೇಗನೆ ಬೇವಿನ ಮರ ಚಿಗುರಿ,ಹಸಿರಾಗಿ ಮತ್ತೇ ಹೂ ಕೂಡ ಬಿಟ್ಟಿತೇ!?…. ಇದಕ್ಕೆಲ್ಲ ಕಾರಣ ನನ್ನ ಕೃಷ್ಣನ ಆಗಮನವೇ ಅಥವಾ ನಾನೇ ಈ ಮೊದಲು ಅದನ್ನೆಲ್ಲ ಗಮನಿಸಿರಲಿಲ್ಲವೇ!?…… ಅದೇಷ್ಟೋತ್ತು ಮೌನವಹಿಸುವೆ ರಾಧೆ ಹಾಗೆಯೇ ಸಲುಗೆಯಿಂದ ಮತ್ತೊಮ್ಮೆ ಕೃಷ್ಣನೆಂದು ಕರೆಯಬಾರದೆ? ಎಂಬ ಕೃಷ್ಣನ ಅಂತರಾಳದ ಮಾತುಗಳನ್ನು ರಾಧೆಯ ಅಂತರಂಗ ಆಲಿಸುತ್ತಲೇ ಕೃಷ್ಣ…. ಅಂತ ಕೂಗಿದಳು ರಾಧೆ. ಈಗ ಬಾಹ್ಯ ಪ್ರಪಂಚದ ಮತ್ತಾವ ಚಿಂತೆಗಳು ಅವಳಲ್ಲಿರಲಿಲ್ಲ ಹೃನ್ಮನದೊಳಗೆಲ್ಲ ಕೃಷ್ಣನೊಬ್ಬನೇ…. ಹೌದು ಕೃಷ್ಣ, ಮತ್ತಾವ ಸಂಬಂಧದಲ್ಲೂ ಇರದ,ಅಕ್ಷರಕ್ಕೂ ನಿಲುಕದ ,ಪದಗಳಿಗೂ ಸಿಗದ ಅನನ್ಯ ಅನುಬಂಧ ನಮ್ಮದು ಎಂದು ಕೃಷ್ಣನ ಭುಜಕ್ಕೊರಗುತ್ತಾಳೆ  ರಾಧೆ….!.

ಹೌದು ರಾಧೆ ನಿನ್ನ ಮಾತು ಅಕ್ಷರಶಃ ನಿಜ!…. ಸ್ನೇಹ,ಪ್ರೇಮ,ಪ್ರೀತಿ ಅವೆಲ್ಲವುಗಳನ್ನು ಮೀರಿದ ನಮ್ಮಿ ಅನುಬಂಧಕ್ಕೆ ಅದಾವುದೇ ಹೆಸರಿಲ್ಲ.ಉಸಿರಿಗೂ ಮತ್ತೊಂದು ಹೆಸರು ಬೇಕೇ ರಾಧೆ!? ಅಂದಿಗೂ,ಇಂದಿಗೂ ಮುಂದೆಯೂ ನಮ್ಮಿ ಮೈತ್ರಿಯು ಚಿರಂಜೀವಿ. ದೂರದಲ್ಲಿದ್ದಷ್ಟಕ್ಕಿಂತ ದ್ವಿಗುಣದ ಸನಿಹ ಅಂದರೂ ತಪ್ಪಿಲ್ಲ ರಾಧೆ.ಮೆಲ್ಲನೆ ಕಣ್ತೆರೆದ ರಾಧೆಗೆ ಇದಾವುದನ್ನು ಅರಗಿಸಿಕೊಳ್ಳುವ ಶಕ್ತಿಯೂ ಇಲ್ಲ, ಯುಕ್ತಿಯೂ ಬರುತ್ತಿಲ್ಲ. ಮತ್ತೇನೋ ನೆನಪಾದವಳಂತೆ ಒಂದೇ ಒಂದು ಕ್ಷಣ ಕೃಷ್ಣ, ಹೀಗೋಗಿ ಹಾಗೆಯೇ ಬರುವೆ ಎಂದು ಒಂದೇ ಉಸಿರಿನಲ್ಲಿ ಓಡುತ್ತಾ ದೇವರ ಮನೆಯಲ್ಲಿ ಜೋಪಾನವಾಗಿಟ್ಟ ಕೃಷ್ಣನ ಆ ಬಂಗಾರದ ಕೊಳಲನ್ನು ರೇಷ್ಮೆಯ ವಸ್ರ್ತದ ಸಮೇತ ತಂದು ಅವನೆದುರಿಗೆ ಹಿಡಿದು ಕೊಳಲು ನುಡಿಸಲೇಬೇಕೆಂದು ಹಠ ಹಿಡಿಯುತ್ತಾಳೆ.ರಾಧೆಯ ಮುಗ್ಧ ಹೃದಯಕ್ಕೆ ಸೋತ ಕೃಷ್ಣ ಆ ಕೊಳಲನ್ನೆತ್ತಿಕೊಂಡು ರಾಧೆಯನ್ನು ನೆನೆಯುತ್ತ ನಾದ ಹೊಮ್ಮಿಸುವಾಗ  ಗೋವುಗಳೆಲ್ಲ ಎಷ್ಟೋ ವರುಷದ ನಂತರ ತೇಲಿ ಬಂದ  ಸುಂದರ ಕೊಳಲ ನಾದಕ್ಕೆ ತಲೆದೂಗುತ್ತ ಕೊರಳಲ್ಲಿನ ಗಂಟೆಯ ಸಪ್ಪಳ ಮಾಡುತ್ತಿವೆ.ನವಿಲೊಂದು ನಾಟ್ಯವಾಡುತ್ತ ಅವರತ್ತ ಬರುತ್ತದೆ.ಇಷ್ಟು ವರ್ಷದ ತಪಸ್ಸು ಈಗ ಫಲ ಕೊಟ್ಟಿರುವಂತೆ ರಾಧೆಯ ಸಂತಸಕ್ಕೆ ಪಾರವೇ ಇಲ್ಲ.ತನಗರಿವಿಲ್ಲದಂತೆಯೇ ರಾಧೆ ನೃತ್ಯ ಮಾಡುತ್ತ ಕೃಷ್ಣನಿಗೆ ವಂದಿಸುತ್ತಾಳೆ…. ಅಭಿನಂದಿಸುತ್ತಾಳೆ.ಬಿಸಿಲ ತಾಪಕ್ಕೆ  ಸುರಿದ ಕೃಷ್ಣನ ಮುಖದ ಮೇಲಿನ ಬೆವರು ಹನಿಯನ್ನು ತನ್ನ ಚಿತ್ತಾರದ ಸೀರೆ ಸೆರಗಿನಿಂದ ಮೃದುವಾಗಿ ಒರೆಸುತ್ತ ಆಯಾಸವಾಯಿತೆ ಕೃಷ್ಣ?… ನೀ ಬಂದ ಖುಶಿಯಲ್ಲಿ  ನನ್ನನ್ನೇ ನಾ ಮರೆತೆ ನಿನಗೆ ಹಸಿವಾಗಿರಬಹುದು ತಾಳು ಎಂದು ಅಡುಗೆ ಕೋಣೆಯತ್ತ ನಡೆಯುತ್ತಾಳೆ.

ಅದೆಂಥ ಅನನ್ಯ ಭಕ್ತಿ ನನ್ನಲ್ಲಿವಳಿಗೆ….

ಶ್ಯಾಮನೆಂದು ಧ್ಯಾನಿಸೋ ಮೊದಲೇ ಸ್ಮರಿಸಲಿ ರಾಧೆಯನ್ನೇ ಅನ್ನೋ ವರವನ್ನು ಪ್ರಧಾನಿಸುವಾಗಲೇ ಬೆಳ್ಳಿ ಬಟ್ಟಲಲ್ಲಿ ಬೆಣ್ಣೆ ಹಿಡಿದುಕೊಂಡು ಬಂದ ರಾಧೆ ತಗೋ ಕೃಷ್ಣ ನಿನಗಿಷ್ಟವಾದದ್ದನ್ನೇ ತಂದಿರುವೆ ಎನ್ನುತ್ತಾ ತಾನೇ ಕೈತುತ್ತು ಕೊಡುವಳು.ಬೇರಾವ ಮೋಹಪಾಶವಿರದ ಶುದ್ಧ ಪ್ರೀತಿ ನಿನ್ನದು ರಾಧೆ ಅದೇನು ವರ ಬೇಕು ಕೇಳು ಅಂದಾಗ ಏನು ವರ ಕೇಳಲಿ ಕೃಷ್ಣ!?…. ನನ್ನೆಲ್ಲ ಆಗು ಹೋಗು,ಮೂಲಗಳಿಗೆ ಸೃಷ್ಟಿ, ಕಾರಣಕರ್ತ ನೀನೇ ಇರುವಾಗ ನನ್ನ ಬೇಕು ಬೇಡಗಳೆಲ್ಲ ನಿನಗೇ ಗೊತ್ತು ಹೀಗಿದ್ದೂ ನನ್ನನ್ನು ಪರೀಕ್ಷಿಸುವ ಹುನ್ನಾರವೇ!?….. ಅಥವಾ ಇಷ್ಟು ವರುಷದಲ್ಲಿ ರಾಧೆ ಬದಲಾಗಿರುವಳೆಂಬ ಭಾವನೆಯೇ!?…. ಇಲ್ಲ ಕೃಷ್ಣ ಇಲ್ಲ ನೀನೆಲ್ಲವನ್ನೂ ಅರಿತಿರುವೆ, ಅರಿಯದವನಂತೇಕೆ ನಟಿಸುವೆ!?

ಕಣ್ಣೊಳಗಿನ ದೃಷ್ಟಿಗೇಕೆ ವರ್ಣನೆ…. *

ಸೃಷ್ಟಿಸಿದ ಬೊಂಬೆಗಳಲ್ಲೆಲ್ಲ ನಿನ್ನದೇ ಜೀವಂತಿಕೆ ನನ್ನೊಳಗಿನ ನಿನಗಾವ ಆರಾಧನೆ ಪೂಜಿಸುವ ಪದಗಳೆಲ್ಲ ನೀನಿತ್ತ ಕಾಣಿಕೆ!

ಸದಾ ನಿನ್ನ ಹೃದಯದಲ್ಲಿ ವಾಸಮಾಡಿಕೊ ಎನ್ನ.ಅದರ ಹೊರತು ಮತ್ತಾವ ವರವು ಬೇಕಿಲ್ಲ ಅದರ ಅಗತ್ಯವೂ ನನಗಿಲ್ಲ ಕೃಷ್ಣ ಅಂದಾಗ .ತಥಾಸ್ತು ಅಂತಾನೆ ಕೃಷ್ಣ.ಅಷ್ಟೊತ್ತಿಗಾಗಲೇ ಸೂರ್ಯನು ಪಡುವಣ ದಿಕ್ಕಿನೆಡೆಗೆ ಧಾವಿಸುತ್ತಿದ್ದ.ಅದು ಅವನಿಗೂ ವಿರಮಿಸುವ ಹೊತ್ತಲ್ಲವೇ!?…. ಹಕ್ಕಿಗಳೆಲ್ಲ ಬಾನಂಗಳದಿ ನೇಸರನ ವಿದಾಯ ಸಲ್ಲದು ಎಂಬಂತೆ ಏನೋ ಕಿಚಿ ಪಿಚಿ ಅನ್ನುತ್ತಿದ್ದವು. ಹೇ….! ಒಲವೇ ನಾನಿನ್ನು ಹೋಗಿ ಬರಲೇ!? ಅನ್ನೋ ಕೃಷ್ಣನೆದೆಯ ಸದ್ದು ರಾಧೆಯ ಹೃದಯಕ್ಕೂ ಕೇಳಿಸುತ್ತಿತ್ತು.ಮನವದೆಷ್ಟು ಬೇಡವೆಂದು ಕೂಗಿದರೂ ಕರ್ತವ್ಯದ ಕರೆ ದೇವರಿಗೂ ಉಂಟು ರಾಧೆ.ಅದಕ್ಕಾಗಿ ಮರಳಲೇಬೇಕು .”ಇಂದು ನಾ ನಿನ್ನೊಂದಿಗೆ ಕಳೆದ ಈ ಪ್ರತಿ ಕ್ಷಣಗಳೇ ನನಗೆ ಸ್ಫೂರ್ತಿ ಕೃಷ್ಣ” ನಿನ್ನ ಇಂದಿನ ಈ  ಭೇಟಿಯದು ನಾ ನಿರೀಕ್ಷಿಸದ,ಅವರ್ಣನೀಯ ಸಂಭ್ರಮದ ಸಂಗತಿ. ಈ ಮಧುರ ನೆನಪುಗಳೊಂದಿಗೆಯೇ ನಾನು ಜೀವಿಸುತ್ತೇನೆ ಅದು ಈ ಜನ್ಮದಲ್ಲಷ್ಟೇ ಅಲ್ಲ ನಾ ಜನಿಸೋ ಪ್ರತಿಜನ್ಮದಲ್ಲೂ ನಮ್ಮ ಈ ಪವಿತ್ರ ಅನುಬಂಧ ಹೀಗೆ ಇರುವುದು.ಹೋಗಿ ಬಾ ಕೃಷ್ಣ….. ಹೋಗಿ ಬಾ….ಎನ್ನುತ್ತಲೇ ಕೃಷ್ಣ ಅವಳಾತ್ಮದೊಳಗೆ ವಿಲೀನವಾದ…!

*********************************************

About The Author

Leave a Reply

You cannot copy content of this page

Scroll to Top