ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸಹಜ ಪ್ರೇಮ

ದೇವರಾಜ್ ಹುಣಸಿಕಟ್ಟಿ.

45 Romantic Couple Pencil Sketches You Must See! - Buzz Hippy

ಅವಳದು ನನ್ನದು ಅಮರ
ಪ್ರೇಮ ಅಲ್ಲವೇ ಅಲ್ಲ..
ಕಾರಣ ಅವಳಿಗಾಗಿ ನಾನು
ಗೋರಿ ಕಟ್ಟಲಿಲ್ಲ..
ವಿಷ ಉಣಿಸಲಿಲ್ಲ ಉಣ್ಣಲಿಲ್ಲ..
ಇನ್ನು ಗೋಡೆ ಕಟ್ಟುವ
ಬಾದಶಾಗಳು ಇರಲೇ ಇಲ್ಲಾ…

ತಿಂಗಳಿಗೊಮ್ಮೆ ಅವಳ
ಹೆಜ್ಜೆಗಳು ಭಾರವಾಗುತ್ತವೆ..
ಆಗೆಲ್ಲ ಮನೆಯ ತುಂಬಾ
ನನ್ನದೇ ಕಾರುಬಾರು..
ಉಪ್ಪು ಹುಳಿ ಹೆಚ್ಚು ಕಡಿಮೆ
ಆಗಿರುವ ಅನ್ನ ಸಾಂಬಾರು…
ನನ್ನಂತಲ್ಲ ಅವಳು ಉಂಡು ಬಿಡುತ್ತಾಳೆ
ತುಟಿಪಿಟಕ್ ಅನ್ನದೇ ಬಿಡದೇ ಚೂರು…

ಮುನಿಸು ಬರುತ್ತೆ ಆಗಾಗ ಸಂತೆಯಲ್ಲಿ
ಜೊತೆಯಾದ ಅಪರಿಚಿತ ಗೆಳೆಯನಂತೆ
ಕಾರಣ ತುಸು ಹೊತ್ತಾಗಿ ರಾತ್ರಿ ಬಾರಿಂದ ಮರಳಿದ್ದು..
ತುಸು ನಶೆ ಹೆಚ್ಚಾಗಿ ಪೆಚ್ಚು
ಪೆಚ್ಚಾಗಿ ಮಾತನಾಡಿದ್ದು..
ತುಸು ಸಿಗರೇಟಿನ ಹೋಗೆ
ಹೆಚ್ಚಾಗಿ ಉಸಿರಿದ್ದು….
ಇದು ಹೆಚ್ಚೊತ್ತು ಇರದು
ಮತ್ತೆ ಅಪರಿಚಿತ ಗೆಳೆಯನಂತೆಯೇ ಕಾಣೆಯಾಗಿ ಬಿಡುತ್ತೆ ಸದ್ದಿಲ್ಲದಂತೆ…

ಇರುಳು ಕಳೆದು ಹಗಲು ಹೊರಳುವ
ಮುನ್ನ ಕರಗಿ ಮಂಜಿನಹನಿಯಂತೆ..
ಮುಡಿಗೆ ಏರಿದ ಹಿಡಿ ಮಲ್ಲಿಗೆ…
ಇಲ್ಲಾ ಒಂದ್ ಸಣ್ಣ ಬಿಗಿ ಅಪ್ಪುಗೆ
ಸಾಕಿಷ್ಟೇ ಕಾರಣ ಅದಕೆ…
ಅವಳು ಹೂವಾಗುತ್ತಾಳೆ ನಾನು
ದುಂಬಿ ಹೆಚ್ಚೇನು ಹೇಳಲಿ…
ನಮ್ಮದು ಅಮರ ಪ್ರೇಮವಲ್ಲ..
ಪ್ರೀತಿಯನೇ ಉಸಿರಾಡುವಂತೆ
ಮಾಡಿದ್ದೇವೆ ಅಷ್ಟೇ…
ಇಂಚಿಂಚು ತುಂಬಿದ್ದೇವೆ ಒಳಗೂ ಹೊರಗೂ ನಿಷ್ಠೆಯಿಂದ ಇಷ್ಟಿಷ್ಟೇ…
ಹೊರಗೆ ಹೋಗಿ ಬರುವಾಗಲೆಲ್ಲ ಅವಳ ಕಂಗಳಲ್ಲಿಯ ಕಾಂತಿಯನ್ನೆ ಕನ್ನಡಿಯಾಗಿಸಿಕೊಂಡವ ನಾನು
ನನ್ನ ಮುಖಾರವಿಂದವನ್ನೇ ಮನೆಯ ಹೊಸ್ತಿಲ ಬೆಳೆದಿಂಗಳಾಗಿಸಿಕೊಂಡವಳು ಅವಳು..
ಜೀವನದ ಸಂತೆಯಲಿ..
ದಿನಗಳು ಸರಿದಿವೆ ಸದ್ದಿಲ್ಲದೆ ಮಗ್ಗುಲಲಿ…
ಮತ್ತೆ ಹೇಳುತ್ತೇನೆ ನಮ್ಮದು ಅಮರ ಪ್ರೇಮವಲ್ಲ ಬಿಡಿ…
ಒಂದಿಷ್ಟು ಪ್ರೀತಿ ಉಸಿರಿದ್ದೇವೆ ಹಗಲಿರುಳಿಡಿ…

ನೆನಪಿದೆ ನನಗೆ ಮೊನ್ನೆ-ಮೊನ್ನೆ ಎನ್ನುವಹಾಗೆ
ಆಗಸದ ಚಂದಿರನ ತಂದು ತೊಟ್ಟಿಲಲಿ ಇಟ್ಟಿದ್ದಾಳೆ…
ನಕ್ಷತ್ರತಾರೆಗಳ ತೋರಿಸಿ ಉಣಿಸಿದ್ದಾಳೆ…
ವಿಶ್ವ ವಿದ್ಯಾಲಯಗಳ ಮೀರಿದ
ತಂದೆ ಎಂಬ ಪದವಿ ತಂದು
ನಿರಾಯಾಸವಾಗಿ ಮುಡಿಗೆರಿಸಿದ್ದಾಳೆ..
ಅದಕ್ಕೆ ಅವಳು ವಿಶ್ವ ವಿದ್ಯಾಲಯ
ನಾನು ನಿಷ್ಠೆಯ ವಿದ್ಯಾರ್ಥಿ…
ಈಗಲೂ ಹೇಳುತ್ತೇನೆ ನಮ್ಮದು
ಅಮರ ಪ್ರೇಮ ಅಲ್ಲವೇ ಅಲ್ಲ….
ಸಹಜ ಪ್ರೇಮ ಅಷ್ಟೇ..
ನಾನು ಅವಳು ಬೆರೆತಿದ್ದೇವೆ
ಎಷ್ಟೆಂದು ಗೊತ್ತೇ?
ಹೆಚ್ಚೇನು ಅಲ್ಲ ಬರೀ ಒಂದಿಷ್ಟು
ಇಳಿ ಸಂಜೆಯಲಿ
ಹಗಲು- ಇರುಳು ಬೆರೆತಂತೆ.. !!!
ಕಣ್ಣು ರೆಪ್ಪೆಯನಗಲಿ ಇರದಂತೆ… !!!
ಅಷ್ಟೇ ನಮ್ಮದು ಅಮರ ಪ್ರೇಮ ಅಲ್ಲವೇ ಅಲ್ಲ…
ಪ್ರೀತಿಯನೆ ಉಸಿರಾಡಿದ್ದೇವೆ ಇಷ್ಟಿಷ್ಟೇ…

***************************

About The Author

Leave a Reply

You cannot copy content of this page

Scroll to Top