ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಉಮೇಶ ಮುನವಳ್ಳಿ

ಹಣಿದ ಮೇಲೂ ಹಣಿಯಬೇಕು ಜಿಟಿ ಜಿಟಿ ಮಳೆ, ಹನಿಹನಿಯಾಗಿ,
ದಣಿದ ಮೇಲೂ ದಣಿಯಬೇಕು ಇಳೆಯ ಕಳೆ, ಹನಿಹನಿಯಾಗಿ,

ಸೋಲೊಪ್ಪದ ಸಾಹಸಿ ನೀನಾಗಬೇಕು,
ಸವೆದ ಮೇಲೂ ಸವೆಯಬೇಕು ಕತ್ತಿಯ ಮೊನೆ, ಹನಿಹನಿಯಾಗಿ.

ದೂರ ದಾರಿ ಕ್ರಮಿಸಬೇಕು ಶ್ರಮವರಿಯದೆ,
ಹರಿದಮೇಲೂ ಹರಿಯಬೇಕು ಸಂತೃಪ್ತಿಯ ಹೊಳೆ, ಹನಿಹನಿಯಾಗಿ.

ದಣಿವರಿಯದ ಕಾರ್ಯ ನಿನ್ನ ಕಸರತ್ತು,
ಕಳೆದ ಮೇಲೂ ಕಳೆಯಬೇಕು ಒಳಮನೆ, ಹನಿಹನಿಯಾಗಿ.

ತಾಕತ್ತು ಇಮ್ಮಡಿಯಾಗಿಸಿ ಗುದ್ದಾಡು ಕಣದಲ್ಲಿ,
ತೆರೆದ ಮೇಲೂ ತೆರೆಯಬೇಕು ನೊರೆಯಾಗಿ ಪಸೆ, ಹನಿಹನಿಯಾಗಿ.

ಗಟ್ಟಿ ಜೀವ ‘ಉಮಿ’ಯದು, ಸತ್ತು ಸತ್ತು ಹುಟ್ಟುವುದು,
ಬೇಸತ್ತ ಮೇಲೂ ಮತ್ತೆ ಸಾಯುವ ಹಸೆ, ಹನಿಹನಿಯಾಗಿ

***********************

About The Author

6 thoughts on “ಗಝಲ್”

  1. ಇದರಲ್ಲಿ ಕಾಫಿಯಾ ಸರಿಯಿಲ್ಲ ಗಮನಿಸಿ. ಹಾಗಾಗಿ ಇದು ತಾಂತ್ರಿಕವಾಗಿ ಗಜಲ್ ಆಗಿಲ್ಲ. ಕಾಫಿಯಾವೇ ಗಜಲ್ನ ಜೀವಾಳ. ಚಂದದ ಭಾವ..

    ಹಣಿದ ಮೇಲೂ ಹಣಿಯಬೇಕು..ಅರ್ಥ ಕೊಡುವುದಿಲ್ಲ. ಹಣಿ ಎಂದರೆ ನಾಶಪಡಿಸು, ಧ್ವಂಸಮಾಡು ಇತ್ಯಾದಿ. ಹನಿದ ಮೇಲೂ ಹನಿಯಬೇಕು ಸರಿ..

    1. ಕಾಫಿಯ ಎಲ್ಲಿ ತಪ್ಪಿದೆ ಸ್ವಲ್ಪ ಹೇಳಬಹುದಾ…

      ಹಣಿ ಅಂದರೆ, ತಟ್ಟು ಅನ್ನುವ ಅರ್ಥವನ್ನೂ ಕೊಡುತ್ತದೆ.

  2. ಗಜಲ್ ನ ಮತ್ಲಾ ದಲ್ಲಿ ಮಳೆ ಕಳೆ ಎಂದು ತೆಗೆದುಕೊಂಡಿದ್ದೀರ. ಇಲ್ಲಿ ಳೆ ರವಿಯಾಗಿದೆ. ನಂತರದ ಶೇರ್ ಗಳಲ್ಲಿ ಮೊನೆ, ಹಸೆ, ಪಸೆ ಇತ್ಯಾದಿ ಕಾಫಿಯಾಗಳನ್ನು ತರಲಾಗಿದೆ. ಅಂದರೆ ರವಿ ಬದಲಾಯಿತು. ಒಂದೊಮ್ಮೆ ಸ್ವರ ಕಾಫಿಯಾವನ್ನೇ ತರುವುದಾದರೆ ಎಲ್ಲ ಶೇರುಗಳಲ್ಲಿ ಎ ಕಾರಾಂತವಾಗಿ ಬೇರೆ ಬೇರೆ ಅಕ್ಷರಗಳನ್ನು ತರಬೇಕು. ಉದಾಹರಣೆಗೆ ಮಳೆ, ಮೊನೆ, ಪಸೆ, ಕಡೆ, ನಗೆ ಹೀಗೆ. ಆಗ ಅದು ಸ್ವರ ಕಾಫಿಯಾ ಆಗುತ್ತದೆ. ಇಲ್ಲದಿದ್ದಲ್ಲಿ ಗಜಲ್ ನ ಎಲ್ಲ ಶೇರುಗಳಲ್ಲೂ ಳೆ ರವಿ ಗೆ ಬದ್ಧರಾಗಬೇಕು..ಅನ್ಯಥಾ ಭಾವಿಸದಿರಿ..

    1. ಇಲ್ಲಿ; ಸ್ವರ ಕಾಫಿಯಾಕ್ಕೆ ಬದ್ಧನಾಗಿ ನಾನು ಬರೆದಿದ್ದೇನೆ ಎನ್ನುವುದು ಮೇಲ್ನೋಟಕ್ಕೆನೆ ಕಂಡುಬರುತ್ತದೆ. ಎಲ್ಲ ಸಮಯದಲ್ಲೂ ಮತ್ಲಾನೇ ಶೇರನ್ನು ನಿರ್ದೇಶಿಸಬೇಕೆಂದಿಲ್ಲ, ಶೇರ್ ಕೂಡ ಮತ್ಲಾವನ್ನು ನಿರ್ದೇಶಿಸಬಹುದು, ಇದು ಸಾಮಾನ್ಯ ತಿಳುವಳಿಕೆ.
      ಸಾರ್ವಜನಿಕವಾಗಿ ಹೀಗೆ ತಾವು ಹೇಳಿದಲ್ಲಿ, ಮುಂದಿನ ದಿನಗಳಲ್ಲಿ ನನ್ನ ಗಝಲ್ಗಳು ಪ್ರಕಟಗೊಳ್ಳುವ ಅಪಾಯದಲ್ಲಿರುತ್ತವೆ. ಸ್ಪರ್ಧೆ ಯಾವಾಗಲೂ ಆರೋಗ್ಯಕರವಾಗಿರಬೇಕು ಎನ್ನುವುದು ನನ್ನ ಭಾವನೆ.
      ಧನ್ಯವಾದಗಳು.

  3. ಇಲ್ಲಿನ ಚರ್ಚೆ ಕುತೂಹಲ ಹುಟ್ಟಿಸಿತು.
    ಕಾಫಿಯಾ ವಿಚಾರದಲ್ಲಿ ಇಲ್ಲಿ ಬಂದ ಮೊದಲ ಪ್ರತಿಕ್ರಿಯೆಗಳು ಸರಿಯಾಗಿವೆ. ಅದಕ್ಕೆ ಲೇಖಕರು ಕೂಡ ಅನಾನಿಮಸ್ ಆಗಿ ಉತ್ತರ ಕೊಟ್ಟಿದ್ದಾರೆ ,ಇರಲಿ.

    ಅವರು ಹೇಳುವ “ಶೇರ್ ಕೂಡ ಮತ್ಲಾವನ್ನು ನಿರ್ದೇಶಿಸಬಹುದು”. ಇದಕ್ಕೆ ಅವರು ಹಿರಿಯ ಗಜಲ್ ಕಾರರ ಉದಾಹರಣೆಗಳನ್ನು ನೀಡಿದರೆ ಅಥವಾ ನಿಯಮಗಳನ್ನು ತೋರಿಸಿದರೆ ಆಗ ಒಪ್ಪಬಹುದು. ಇಲ್ಲವಾದರೆ ಅವರೇ ಬರೆದಂತೆ ‘ಗಜಲ್ ಅಪಾಯದಲ್ಲಿದೆ’ಎನ್ನಬೇಕಾಗುತ್ತದೆ.
    ಇದು ಸಾಮಾನ್ಯ ತಿಳುವಳಿಕೆ ಎಂದಿದ್ದಾರೆ. ಈ ಅ-ಸಾಮಾನ್ಯ ಮಾತಿಗೆ ಅವರು ದೃಷ್ಟಾಂತಗಳನ್ನು ನೀಡಿ ತಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳ ಬೇಕಾಗಿ ಕೋರುತ್ತೇನೆ.
    ಇಲ್ಲಿ ಸ್ಪರ್ಧೆಯ ಮಾತು ಎಲ್ಲಿಂದ ಬಂತು ಎಂದು ತಿಳಿಯಲಿಲ್ಲ.
    ನಿಮ್ಮ ಬರಹದ ಮಟ್ಟವನ್ನು ಉತ್ತಮಗೊಳಿಸಿಕೊಳ್ಳಿ ಎಂದರೆ ಸ್ಪರ್ಧೆ ಮಾಡಿದಂತೇನು?ಇದರ ಬದಲು ತಮಗಿರುವ ಮಾಹಿತಿಯನ್ನು ಹಂಚಿಕೊಂಡರೆ, ನಾವು, ನಮ್ಮಂತಹ ಪಾಮರರು ತಿಳಿದುಕೊಳ್ಳುತ್ತೇವೆ. ನಮ್ಮ ತಪ್ಪನ್ನು ತಿದ್ದಿಕೊಂಡು ಧನ್ಯರಾಗುತ್ತೇವೆ.

    ಧನ್ಯವಾದ.

    1. ಇಲ್ಲಿ ನನ್ನ ಗಝಲ್ ನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಶೇರನಲ್ಲಿ ಬದಲಾದ ಕಾಫಿಯಾದ ಆಧಾರದ ಮೇಲೆ ಮತ್ಲಾದ ಕಾಫಿಯವನ್ನು ಅರ್ಥೈಸಿಕೊಳ್ಳಬಹದು. ಆ ಅರ್ಥದಲ್ಲಿ ಶೇರ ಮತ್ಲಾದ ಕಾಫಿಯವನ್ನು ನಿರ್ದೇಶಿಸುತ್ತದೆ ಎಂದು ಹೇಳಿದ್ದು. ಮೊದಲನೇ ಶೇರ್ ನಿಂದಲೇ ಕಾಫಿಯ ಬದಲಾಗುತ್ತಾ ಹೋಗುತ್ತದೆ. ಕೇವಲ ಮತ್ಲಾದಲ್ಲಿ ಹೇಳಿದೆ ಎನ್ನುವ ಮಾತ್ರಕ್ಕೆ ಅದಕ್ಕೇ ಜೋತುಬೀಳಬೇಕೆಂದಿಲ್ಲ. ಅರ್ಥೈಸುವಲ್ಲಿ ಅದರ ಉತ್ತರ ಅಡಗಿದೆ.
      ನಾನು ಬರೆದದ್ದು ಎಂದು ಅಲ್ಲಿ ಹೇಳಿಕೊಂಡಿದ್ದೇನೆ ಅಂದ ಮೇಲೆ ಅನಾನಿಮಸ್ ಎನ್ನುವ ಪ್ರಶ್ನೆ ಎಲ್ಲಿ ಬಂತು? ವಿಮರ್ಶಿಸುವಾಗ ಅನಾನಿಮಸ್ ಆಗಿರಬಾರದು ಎನ್ನುವ ಸೌಜನ್ಯವನ್ನು ವಿಮರ್ಶಿಸುವವರು ಅರ್ಥಮಾಡಿಕೊಳ್ಳಬೇಕು.

Leave a Reply

You cannot copy content of this page

Scroll to Top