ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಬ್ಬಿಗರ ಅಬ್ಬಿ-೧

Twigs, Hanging, Delicate, Birch

ಮಹಾದೇವ ಕಾನತ್ತಿಲ

ಹ್ಞಾ, ಹೀಗೆ ಬನ್ನಿ!, ತೋಟದ ಮಧ್ಯೆ ನಡೆಯೋಣ, ನೋಡಿದಿರಾ, ಎಷ್ಟೊಂದು ಹೂವು ಹಣ್ಣುಗಳು,ಈ ತೋಟದಲ್ಲಿ!. ಅಲ್ನೋಡಿ, ಗುಡ್ಡದಿಂದ ಹರಿದು ಬರುವ ನೀರ ಧಾರೆ! ತೋಟದ ಬದಿಯಲ್ಲಿ ಎತ್ತರದ ಕಲ್ಲು ಬಂಡೆಯ ತುದಿಯಿಂದ ಜಾರಿ ಧಾರೆ ಧಾರೆಯಾಗಿ ಬೀಳುತ್ತಿದೆಯಲ್ಲ, ಅದೇ ಅಬ್ಬಿ!

ಇದೇನು ಸಾಧಾರಣ ಅಬ್ಬಿ ಅಂದುಕೊಂಡಿರಾ!

ಇದು ಕಬ್ಬಿಗರ ಅಬ್ಬಿ..ಈ ಅಬ್ಬಿಯ ಧಾರೆಗೆ ತಲೆ ಕೊಟ್ಟು, ಎದೆ ಬಿಚ್ಚಿ ನಿಂತು ನೋಡಿ!. ನೀವೂ ಕಾವ್ಯವಾಗುತ್ತೀರಿ, ಕಾವ್ಯ ನಿಮ್ಮಿಂದ ಹರಿಯುತ್ತೆ. ‌ನೀವು ಯಾವುದು, ಕಾವ್ಯ ಯಾವುದು ಅಂತ ಬೇರ್ಪಡಿಸಲಾಗದಷ್ಟು ನೀವು ಡಿಸ್ಸಾಲ್ವ್ ಆಗುತ್ತೀರಿ.ಬೇಂದ್ರೆಅಜ್ಜ ,ಈ ಅಬ್ಬಿ ಜಲಪಾತಕ್ಕೆ ಮೈಯೊಡ್ಡಿ, “ಕುಣಿಯೋಣು ಬಾರಾ” ಅಂತ ಕುಣಿದೂ ಕುಣಿದೂ ಕವಿತೆಯಾದರು!. ಪಂಪ,ಕುಮಾರವ್ಯಾಸ, ಬಸವಣ್ಣ, ಮುದ್ದಣ, ಕುವೆಂಪು,ಅಡಿಗರೆಲ್ಲಾ,ಇದರಲ್ಲಿ ತಣ್ಣಗೆ ಮಿಂದು ಕವಿತೆಯಾದವರು.

.ಹಾಗೆ ಮೀಯುತ್ತಾ, ನೀವು ಕವಿತೆಯಾಗಿ ಹರಿಯ ಬಹುದು, ಅಥವಾ, ಮಿಂದು ಬಂದು ಈ ತೋಟದಲ್ಲಿ ನಿಮಗಿಷ್ಟದ ಹಣ್ಣಿನ ಗಿಡ, ಹೂವಿನ ಬಳ್ಳಿ ನಡಬಹುದು.. ಒಮ್ಮೆ ಅಬ್ಬಿಯಲ್ಲಿ ಮಿಂದಿರಾ!, ನೀರು ಆರುವ ತನಕ ನೀವು ನೆಟ್ಟ ಗಿಡಗಳಿಂದ ಸಾಹಿತ್ಯ, ಹೂ ಹಣ್ಣಾಗಿ ಬೆಳೆಯುತ್ತೆ.

ಹಲೋ! ಎಲ್ಲಿದ್ದೀರಿ, ಸರ್, ಸುಮ್ನೆ ಫಾನ್ಟಸೈಜ್ ಮಾಡಬೇಡಿ, ಮೊದಲು ಕಾವ್ಯ ಅಂದರೇನು?, ತಿಳಿಸಿ!! ಸ್ವಲ್ಪ ಇಂಗ್ಲಿಷ್ ಮಾತಾಡಿ ಮಾರ್ರೆ..

ಸರಿ, ವರ್ಡ್ಸ್‌ವರ್ತ್ ಹೀಗೆ ಹೇಳ್ತಾನೆ ನೋಡಿ ಕವಿತೆಯೆಂದರೆ..

“The spontaneous overflow of powerful feelings: it takes its origin from emotion recollected in tranquility

ಅಂದ್ರೆ, ಸ್ವಯಂಪ್ರೇರಿತವಾಗಿ ಉಕ್ಕಿ ಹರಿದ ಭಾವನೆಗಳನ್ನು,  ಪಾಕಬರಿಸಿ, ಧ್ಯಾನಸ್ಥ ಮೌನದಲ್ಲಿ  ನೆನೆನೆನೆದು ಭಾವಪರವಶತೆಯ ಕೇಂದ್ರದಿಂದ ಸಂಗ್ರಹಿಸಿದ ಕೆನೆ!, ಅದು ಕವಿತೆ ಅಂತ.

ಕವಿತೆ ಬಗ್ಗೆ Britannica ದಲ್ಲಿ ಹೀಗೆ ಬರೆದಿದ್ದಾರೆ

Poetry, literature that evokes a concentrated imaginative awareness of experience or a specific emotional response through language chosen and arranged for its meaning, sound, and rhythm”.

ಕವಿತೆಯ ಮೂಲದ್ರವ್ಯ,  ಘಟನಾ ವಿಶೇಷಕ್ಕೆ , ಸೃಜನಶೀಲ ಮನಸ್ಸಿನ ಸ್ಪಂದನೆ.

ನಿಜಜೀವನದಲ್ಲಿ ಸೃಜನಶೀಲ, ಸೂಕ್ಷ್ಮ ಮನಸ್ಸು ಪ್ರತಿಯೊಂದು ಘಟನೆಗೆ ಸ್ಪಂದಿಸುತ್ತೆ.

ನಿಮ್ಮ ಮನಸ್ಸಲ್ಲಿ ಭಾವನಾತ್ಮಕ, ತಾತ್ವಿಕವಾದ, ರಚನಾತ್ಮಕವಾದ ಐಡಿಯಾ ಹೊಳೆದರೆ ಅದು ಕವಿತೆಯ ಬೆನ್ನೆಲುಬು.

ಆ ಐಡಿಯಾವನ್ನು ನೀವು ನೇರವಾಗಿ ಹೇಳಿದರೆ ಅದು ಮಾತು,ಸಂಭಾಷಣೆ. ಅದನ್ನೇ ಒಂದು ಉಪಮೆಯ ಮೂಲಕವೋ, ಪ್ರತಿಮೆಯ ಮೂಲಕವೋ, ರೂಪಕದ ಮೂಲಕವೋ,ಸೂಕ್ಷ್ಮವಾಗಿ ಹೇಳುವುದು, ಕಾವ್ಯದ ಭಾಷೆ.

ಹೀಗೆ ರೂಪುಗೊಂಡ ರಸಪಾಕವನ್ನು ಅಚ್ಚೆರೆಯಲು ಬಳಸುವ ಹಂದರ ಪದಪುಂಜಗಳು.

ಪದಪುಷ್ಪದ ಹಾರವನ್ನು ಐಡಿಯಾದ ದಾರದಲ್ಲಿ ಹೆಣೆಯಬೇಕು. ಸೂಕ್ತವಾಗಿ ನವಿರಾಗಿ ಅಭಿವ್ಯಕ್ತಿಸುವ ಕುಸುರಿಯೂ ಬೇಕು.

ಪದಗಳನ್ನು ಉಪಯೋಗಿಸುವಾಗ ಪದಗಳು ರಿಪೀಟ್ ಆಗದ ಹಾಗೆ ಸಾಧ್ಯವಾದಷ್ಟು ಪ್ರಯತ್ನಿಸಬೇಕು.

ಹಾಡಿ ಹಾಡಿ ಸಂಗೀತ, ಕುಣಿದು ಕುಣಿದು ನಾಟ್ಯ ಅಂತ ನಿಮಗೆ ತಿಳಿದದ್ದೇ. ಹಾಗೆಯೇ ಬರೆದು ಬರೆದು ಹೆಣೆದು ಹೆಣೆದು ಕಾವ್ಯ.

” _ಪದಗಳು ಸಾಲಾಗಿ ಶಿಸ್ತಲ್ಲಿ ನಿಂತರೆ ಗದ್ಯ

ಗೆಜ್ಜೆ ಕಟ್ಟಿ ಹುಚ್ಚೆದ್ದು ಕುಣಿದರದು ಪದ್ಯ

ವಾಚ್ಯವಾದರೆ ಗದ್ಯ

ಸೂಚ್ಯವಾದರೆ ಪದ್ಯ

ತೆರೆದು ಹೇಳಿ ಮುಗಿಸಿದರೆ ಗದ್ಯ

ಮುಚ್ಚಿಟ್ಟು ಹೇಳಿ ಉಳಿದುದು ಪದ್ಯ

ಶಬ್ದಗಳ ನಡುವಿನ ನಿಶ್ಶಬ್ದ ಪದ್ಯ” ( ಸುಮತಿ ನಿರಂಜನ, ಯಕ್ಷಲೋಕಕ್ಕೆ ಏಣಿ ಪುಸ್ತಕದಲ್ಲಿ)

ಸುಮತೀಂದ್ರ ನಾಡಿಗ್ ಅವರು, ತಮ್ಮ ‘ ಕಾವ್ಯವೆಂದರೇನು’ ಎಂಬ ಪುಸ್ತಕದಲ್ಲಿ ಕವಿತೆಯ ಆತ್ಮಕಥೆ ಬರೆದಿದ್ದಾರೆ.

ಕವಿತೆಗೆ ಅಗತ್ಯವಾದ, ಭಾವನೆ, ಲಯ, ಧಾಟಿ,ಧೋರಣೆ, ವ್ಯುತ್ಪತ್ತಿ, ವಸ್ತು ಪ್ರತಿರೂಪ, ಪ್ರತಿಮೆ, ಕ್ರಮಬದ್ಧತೆ ಮತ್ತು ಸೌಂದರ್ಯ, ಭಾವೋತ್ಕರ್ಷ, ರಸಾವಿಷ್ಕಾರ, ಇತ್ಯಾದಿ ಕಾವ್ಯಾಂಗಗಳಿಗೆ ಸಂವಿಧಾನ ಅದು.

ಕೊನೆಗೆ ಒಂದು ಅಗತ್ಯ ಮಾತು. ರುಚಿಯಾದ ಹಲ್ವಾ ಜಗಿಯುವಾಗ, ನಾಲಿಗೆ ಹೇಗೆ ತಿರುಗುತ್ತೆ, ದವಡೆಯ ಹಲ್ಲುಗಳು ಯಾವಾಗ ದೂರ ಮತ್ತು ಯಾವಾಗ ಹತ್ತಿರ ಇತ್ಯಾದಿ ,machanism ನ್ನು ಯೋಚಿಸುತ್ತಾ ಹಲ್ವ ತಿಂದರೆ, ನಾಲಿಗೆಯನ್ನು ಹಲ್ಲು ಕಡಿಯುತ್ತೆ!. ಅದಕ್ಕೇ, ಕವಿತೆಯ ಮೂಲ ಸ್ವಭಾವ ಮತ್ತು ಸಂರಚನೆಯ ಹೋಲಿಸ್ಟಿಕ್ ಅರ್ಥ ಮನಸ್ಸಿಗಾದ ಮೇಲೆ, ಬಿಂದಾಸ್ ಆಗಿ ಕವಿತೆ ಬರೆಯಿರಿ. ಕವಿತೆಗೆ ತನ್ನನ್ನು ತಾನೇ ಬರೆಯುವಾಗ ಗೈಡ್ ಮಾಡುವ ಶಕ್ತಿಯಿದೆ. ನಿಮ್ಮ ಮನಸ್ಸಿಗೆ ಕನ್ನಡಿಯಾಗಿ ಬಿಂಬವನ್ನು ಗರ್ಭಿಸುವ ಶಕ್ತಿ ಕವಿತೆಗೆ ಸ್ವಯಂ ಇದೆ. ಬೇಕಾದದ್ದು ನಿಮ್ಮ ಅನ್-ಕಂಡಿಶನಲ್ ಸಮರ್ಪಣಾ ಭಾವ ಮಾತ್ರ.

ಹಾಗಿದ್ದರೆ, ನಾವೆಲ್ಲಾ ಈ ಕಾವ್ಯದ ಅಬ್ಬಿಯಲ್ಲಿ ಸ್ವಚ್ಛಂದವಾಗಿ ಮೀಯೋಣವೇ!!

**************

About The Author

8 thoughts on “ಕಾವ್ಯ ಕುರಿತು”

  1. ಕಬ್ಬಿಗರ ಅಬ್ಬಿಯಲ್ಲಿ ಮೀಯಲು, ಮಿಂದು ಮೈಮರೆತು ಸುಂದರವಾದ ತಳಹದಿ ನೀಡಿದ್ದಾರೆ ಲೇಖಕರಾದ ಮಹಾದೇವ ಕಾನತ್ತಿಲರವರು. ನಿರೂಪಣೆಯು ತುಂಬಾ ಸೊಗಸಾಗಿ,ಸುಲಲಿತವಾಗಿ ಮನಸ್ಸಿಗೆ ನಾಟುವಂತೆ ಹರಿದು ಬಂದಿದೆ. ಸಂಭಾಷಣೆ, ಗದ್ಯ,ಪದ್ಯಗಳ ವಿವರಣೆ ತುಂಬಾ ಚೆನ್ನಾಗಿದೆ. ಕಬ್ಬಿಗರ ಅಬ್ಬಿಯಲ್ಲಿ ಮಿಂದವರಿಗೆ ಕವಿತೆ ಬರೆಯುವ ಗೀಳು ಹತ್ತುವುದರಲ್ಲಿ ಸಂಶಯವಿಲ್ಲ.

  2. Mahadeva Kanathila

    ಧನ್ಯವಾದಗಳು ಅನಾಮಿಕಾ ಅವರೇ!.
    ನೀವು ಬರೆದ ಸಾಲುಗಳು ನಿಮ್ಮ ಸೂಕ್ಷ್ಮ ಸಂವೇದನೆಯನ್ನು, ಚಿತ್ರಿಸಿವೆ.
    ನಿಮಗೆ ಇಷ್ಟವಾದರೆ, ಅಂಕಣ,ಸಾರ್ಥಕ

  3. ಬರೆದದ್ದೇ ಕವಿತೆವೆಂದು ಅಂದುಕೊಳ್ಳುತ್ತಿದ್ದ ನನ್ನಂಥವರಿಗೆ ಅಬ್ಬಿಯ ಪರಿಚಯಿಸಿ ದಾರಿ ತೋರಿಸುತ್ತಿರುವಿರಿ..
    ಮಿಂದು ಧನ್ಯವಾಗುವುದು ಮಾತ್ರ ಬಾಕಿ. ಧನ್ಯವಾದಗಳು

    1. Mahadeva Kanathila

      ನೀವು ಬರೆದದ್ದು ಖಂಡಿತಾ ಕವಿತೆಯೇ ಆಗಿರುತ್ತೆ ಸುಜಾತಾ ಅವರೇ. ಬರೀತಾ ಬರೀತಾ ಕಾವ್ಯ ತನ್ನ ದಾರಿ ಕಂಡುಕೊಳ್ಳುತ್ತೆ

      ಯಾವ ಚಿಂತೆಯೂ ಇಲ್ಲದೆ ಬರೆಯಿರಿ. ಬರೆದ ನಂತರ ರಿಫೈನ್ ಮಾಡಲು ಪ್ರಯತ್ನ ಮಾಡಿ. ಗೋಪಾಲಕೃಷ್ಣ ಅಡಿಗರು,ಅವರ ಕವಿತೆಯನ್ನು ಬರೆದ ನಂತರ, ಇಪ್ಪತ್ತಕ್ಕೂ ಹೆಚ್ಚು ಬಾರಿ ರಿಫೈನ್ ಮಾಡ್ತಿದ್ದರಂತೆ!
      ನಮಗೆ ಓದಲು ಸಿಗುವ ಒಳ್ಳೆಯ ಕವಿಗಳ ಕವಿತೆಗಳು ಹೀಗೆ ರಿಫೈನ್ ಆಗಿರುತ್ತವೆ.
      ಅಬ್ಬಿ ನಿಮ್ಮದೇ!.
      ಧನ್ಯವಾದಗಳು

  4. ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿದಂತೆ.. ನಿಮ್ಮ ಬರಹ ಓದಿ…. ನನಗೆ ಅನಿಸಿದ್ದು.ಕಾವ್ಯ ಪ್ರೀತಿ ಇದ್ದರಷ್ಟೇ ಸಾಲದು ಅದರ ಆಳ ಹರವುಗಳ ತಿಳುವಳಿಕೆ ಹೇಗೆ ಎಂದು ತಡಕಾಡುತ್ತಿದ್ದ ನನ್ನಂತ ಕಾವ್ಯ ಪ್ರೀತಿ ಉಳ್ಳವರಿಗೆ ಕಬ್ಬಿಗರ ಅಬ್ಬಿಯಲ್ಲಿ ಮೀಯಲು ಅವಕಾಶ ಕಲ್ಪಿಸುತ್ತಿರುವಿರಿ…. ಕುತೂಹಲ ಮೂಡಿಸಿದೆ….

    1. Mahadeva Kanathila

      ಮಮತಾ ಅವರೇ, ಕವಿತೆಯ ಅನುಭೂತಿಯತ್ತ ನಾವೆಲ್ಲಾ ಹೀಗೆಯೇ ಪ್ರಯತ್ನ ಮಾಡೋಣ. ಇಂಟರ್ನಲೈಸೇಷನ್ ಕವಿತೆಯನ್ನು ತನ್ನದಾಗಿಸಿಕೊಳ್ಳುವ ಮುಗ್ಧ ಕ್ರಿಯೆ
      ತುಂಬಾ ಧನ್ಯವಾದಗಳು

    1. Mahadeva Kanathila

      ನಳಿನಾ ಅವರೇ ,ನಿಮ್ಮ ಪ್ರೇರಕ ಸಾಲುಗಳಿಗೆ
      ತುಂಬಾ ಧನ್ಯವಾದಗಳು

Leave a Reply

You cannot copy content of this page

Scroll to Top