ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಶ್ರೀದೇವಿ ಕೆರೆಮನೆ

ಅದೆಷ್ಟೊ ಶತಮಾನಗಳಿಂದ ಕಾದಿರುವೆ ಹೇಳದೇ ಹೋಗದಿರು
ನೀ ಬರುವ ಹಾದಿಗೆ ಕಣ್ಣು ಕೀಲಿಸಿರುವೆ ಹೇಳದೇ ಹೋಗದಿರು

ಬರಿದೆ ಮತ್ತೇರದಿರು ಸುರೆಗೆಲ್ಲಿದೆ ನಿನ್ನ ಮರೆಸುವ ತಾಕತ್ತು
ದೇಹದ ಬಟ್ಟಲಿಗೆ ಮದಿರೆ ತುಂಬಿಸಿರುವೆ ಹೇಳದೇ ಹೋಗದಿರು

ಹಗಲಿರುಳೂ ಮತ್ತೇನೂ ಇಲ್ಲ ನಿನ್ನದೇ ಧ್ಯಾನ‌ದ ಹೊರತಾಗಿ
ತಲಬಾಗಿಲ ಮೆಟ್ಟಿಲಲಿ ಕಾದು ಕುಳಿತಿರುವೆ ಹೇಳದೇ ಹೋಗದಿರು

ಜೋಡಿಮಂಚದ ಬದಿಯಲ್ಲಿ ಹಚ್ಚಿಟ್ಟ ದೀಪದ ಎಣ್ಣೆ ತೀರಿದೆ
ದೇವರ ಗೂಡಿಂದ ಹಣತೆಯೊಂದ ತರುವೆ ಹೇಳದೇ ಹೋಗದಿರು

ವಿರಹ ತುಂಬಿದ ರಾತ್ರಿ ನಿದ್ದೆಯಿರದೆ ಬಲು ದೀರ್ಘವಾಗುವುದಂತೆ
ಜೋಗುಳ ಹಾಡಿ ಮಡಿಲೊಳಗೆ ಮಲಗಿಸುವೆ ಹೇಳದೆ ಹೋಗದಿರು

ಕಾಸಿದ ತುಪ್ಪವಿದೆ ಜೊತೆಗೆ ನಾನೆ ಮಾಡಿದ ಘಮಗುಡುವ ಹೋಳಿಗೆ
ಮಧುರಾತ್ರಿಗೂ ಮುನ್ನ ಮೃಷ್ಟಾನ್ನ ಸಿದ್ಧಪಡಿಸುವೆ ಹೇಳದೇ ಹೋಗದಿರು

ಕಣ್ಣು, ಕಿವಿ ಮೂಗು ನಾಲಿಗೆಗಳೆಲ್ಲವೂ ತಮ್ಮ ಕೆಲಸ ಮರೆತಿವೆ
ಮುತ್ತಿನಲ್ಲೆ ಅಮರಾವತಿಯ ಧರೆಗಿಳಿಸುವೆ ಹೇಳದೇ ಹೋಗದಿರು

ಸಿರಿ, ನಿನ್ನ ಪಾಲಿನ ಕಟ್ಟಿಗೆಯನ್ನೆಸೆದು ಬಿಡು ಅಗ್ನಿಕುಂಡದಲಿ
ಚಿತೆಗೇರುವ ಮುನ್ನ ಕಣ್ತುಂಬಿಕೊಳ್ಳುವೆ ಹೇಳದೇ ಹೋಗದಿರು

************

About The Author

22 thoughts on “ಹೇಳದೇ ಹೋಗದಿರು”

  1. ಬಹಳ ಅರ್ಥಗರ್ಭಿತ ಗಜಲ್‌ಮೇಡಂ… ಬಹಳ‌ ಹಿಡಿಸಿತು

  2. ಸುಜಾತ ಲಕ್ಷ್ಮೀಪುರ

    ಅದ್ಬುತವಾದ ಗಜಲ್..ಪ್ರೇಮ ವಿರಹ ತೊಟ್ಟಿಕ್ಕುತ್ತಿದೆ..

  3. ಜಯಶ್ರೀ. ಅಬ್ಬಿಗೇರಿ

    ಪ್ರತಿ ಸಾಲು
    ಚಿಮ್ಮುತಿದೆ ಒಲವೊಲವು

    ಗಝಲ್ ಹಿಡಿಸಿತು‌

  4. Finish Thambad

    ಅದ್ಭುತವಾದ ಗಝಲ್ ತುಂಬಿದ ಕೊಡದಂತೆ ಪರಿಪೂರ್ಣ ಈ ನಿಮ್ಮ ಗಝಲ್

  5. ಹಜರೇಸಾಬ ಬಿ.ನದಾಫ

    ಬಹು ದಿನಗಳ ನಂತರ ಒಂದು ಉತ್ಕೃಷ್ಟ ಕನ್ನಡ ಗಜಲ್ ಓದಿದಂತಾಯಿತು..ತುಂಬ ಚೆನ್ನಾಗಿದೆ..ಸೂಪರ್!!

  6. ರಮೇಶ ಗಬ್ಬೂರ್

    ಮುತ್ತಿನಲ್ಲಿ ಅಮರಾವತಿ…. ವಾವ್ ಸೂಪರ್… ಏನೋ ವಿಶೇಷ.. . ಆದರೆ ಜೋಡಿ ಮಂಚ ಯಾಕೆ ಗೊತ್ತಾಗಲಿಲ್ಲ.. ಒಂದೆ ಸಾಕಿತ್ತಲ್ವಾ ಸಿರಿಯಮ್ಮ

  7. malati mudakavi

    ಸುಂದರವಾದ ಗಜಲ್… ಹೇಳಿ ಹೋಗಬಾರದೇ ನಲ್ಲ… ನೀ ಬರುವ ದಾರಿಯಲಿ ಹಣತೆ ಹಚ್ಚಿರಿಸಿ ಯುಗಾಂತದ ವರೆಗೂ ಕಾಯಬಹುದಾದ ಸಹನೆಯ ಈ ಗೆಳತಿಗೇಕೆ ಇಂಥ ಶಿಕ್ಷೆ?

  8. Anusuya Yathish

    ಬಹಳ ಸೊಗಸಾದ ಭಾವ ತುಂಬಿದ ಸುಂದರ ಗಜಲ್ ಮೇಡಮ್

Leave a Reply

You cannot copy content of this page

Scroll to Top