ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಶಾ ಜಗದೀಶ್

ಒಂದು ತಣ್ಣನೆಯ ರಾತ್ರಿಮಳೆಗೆ
ಅದೆಷ್ಟೋ ವರ್ಷಗಳ ತಪಸ್ಸಿನಂತೆ
ಕಾದು ಕುಳಿತಿದ್ದೆ
ರಾತ್ರಿಗಳಾಗಲೀ ಮಳೆಯಾಗಲೀ
ಒಟ್ಟಾಗಿ ಬಂದೇ ಇಲ್ಲ ಅಂತಲ್ಲ
ಅವು ಒಟ್ಟಾಗಿ ಬಂದ ಒಂದು ದಿನವೂ
ನಾನು ಪ್ರಜ್ಞೆಯಿಂದಿರಲಿಲ್ಲ

ಸರಿ ರಾತ್ರಿ ಹೀಗೆ ಜಗತ್ತೇ ನಿದ್ರೆಯ ತೆಕ್ಕೆಯಲ್ಲಿ
ರತಿ ಶಿಖರ ಮುಟ್ಟುತ್ತಿರುವಾಗ
ನಾನು ಮಾತ್ರ ಅದನ್ನು ಧಿಕ್ಕರಿಸಿ
ಮುಂಬಾಗಿಲ ತೆರೆದು ಮಂಜಿನಷ್ಟು ತಣ್ಣಗಿದ್ದ
ಕಲ್ಲ ಮೆಟ್ಟಿಲ ಮೇಲೆ ಕೂರುವಾಗ
ಪರಮ ಚರಮ ಸುಖವನ್ನೂ
ಮೀರಿದೊಂದು ಅನುಭೂತಿ
ಮತ್ತು ಈ ಮಳೆಯ ಮೇಲೆ
ಸಣ್ಣದೊಂದು ಹುಸಿ ಮುನಿಸು

ತನ್ನ ರಾತ್ರಿ ಸಖನನ್ನು ಕೂಡುವ
ಅಮೃತಘಳಿಗೆಯ ಬಗ್ಗೆ
ಚಕಾರೆತ್ತದೆ ಸೂಚನೆ ಕೊಡದೆ
ಸುರಿದು ಸೇರಿ ಸರಿದು ಹೋಗಿಯಾಗಿ
ಮರು ಮುಂಜಾನೆ ಮನೆ ಮುಂದೆ
ನೆನ್ನೆಯ ರಂಗೋಲಿ ಅಳಿಸಿದ್ದು
ಸಮತಟ್ಟು ಅಂಗಳವೆಲ್ಲ ಕಿತ್ತು ಹೋಗಿ
ಸಣ್ಣ ಸಣ್ಣ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿದ್ದು
ಎಲ್ಲೆಲ್ಲಿಯದೋ ಕಸಕಡ್ಡಿ ಜೊಂಡು ಜೊಂಪೆ
ಮತ್ತು ಮಿಲನದ ಹಸಿ ಮಣ್ಣ ಪರಿಮಳ
ಭೂಮಿಯಷ್ಟನ್ನೂ ಹಸಿಯಾಗಿಸಿ ಬಿಸಿಯಾಗಿಸಿ
ಹೋದ ಬೆಚ್ಚನೆಯ ಮಿಲನ

ಇದಕ್ಕೆ ಸಾಕ್ಷಿಯಾಗಲಿಕ್ಕೆಂದೇ
ನನಗೆ ಬೆಳಕು ಹರಿಯುತ್ತಿತ್ತು
ಆದರೆ ನನಗಿದ್ದದ್ದು ಮಹೋತ್ಸವ ನೋಡುವ
ಮತ್ತು ಒಂದು ಚಂದನೆ ಮಳೆಹಾಡು ಕಟ್ಟಿ
ರಾತ್ರಿಮಳೆಯ ಸುತ್ತಾ ಹಾಡುತ್ತಾ ನೆನೆಯುತ್ತಾ
ಕಣ್ಣಾಗುತ್ತಾ ದನಿಯಾಗುತ್ತಾ ಮೈಯ್ಯಾಗುತ್ತಾ
ಮುದಗೊಳ್ಳುತ್ತಾ ದಣಿಯುತ್ತಾ ….
ಸೋಲಬೇಕೆನ್ನುವ ಬಯಕೆ

ಇಂದು ಸುರಿದ ಮಳೆಯ ಮುಂದೆ
ಎಲ್ಲ ಬರಿದಾಗಿಸಿಕೊಂಡು ಕೂತ ನಂತರ
ಆದ ಒಂದು ತಣ್ಣನೆಯ ಸಮಾಧಾನವೆಂದರೆ
ಎಂದೋ ಬರೆದಿಟ್ಟ ಮಳೆ ಹಾಡಿಗೆ
ಗೊದಮೊಟ್ಟೆಯಂಥಾ ಜೀವ ಬಂದಿದೆ

**********

About The Author

Leave a Reply

You cannot copy content of this page

Scroll to Top