ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಶೋಭಾ ನಾಯ್ಕ ಹಿರೇಕೈ ಅವರ ಎರಡು ಕವಿತೆಗಳು

ಶೋಭಾ ನಾಯ್ಕ ಹಿರೇಕೈ

ಕವಿತೆ – ೧

ಹೆಚ್ಚೆಂದರೇನು ಮಾಡಿಯೇನು?

ಅವರಂತೆ ತಣ್ಣೀರಲ್ಲಿ ಮಿಂದು
ನಲವತ್ತೆಂಟನೆಯ ದಿನದ
ವ್ರತ ಮುಗಿಸಿ,
ಆ ಕೋಟೆ ಕೊತ್ತಲಗಳ ದಾಟಿ
ಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿ
ನಿನ್ನ ಬಳಿ ನಡೆದೇ….
ಬಂದೆನೆಂದು ಇಟ್ಟುಕೋ
ಹೆಚ್ಚೆಂದರೆ ನಾನಲ್ಲಿ
ಏನು ಮಾಡಿಯೇನು?

‘ಬಾಲಕನಾಗಿಹೆ ಅಯ್ಯಪ್ಪ’ ಈ
ಹಾಡು ಹಾಡು ಕೇಳಿ ಕೇಳಿ
ಇತ್ತೀಚೆಗೆ ನಿನ್ನ ಹಳೆಯದೊಂದು
ಪಟ ನೋಡಿದ ಮೇಲೆ
ನನ್ನ ಮಗನಿಗೂ..ನಿನಗೂ..
ಯಾವ ಪರಕ್ಕೂ ..ಉಳಿದಿಲ್ಲ ನೋಡು

ಎಷ್ಟೋ ವರ್ಷ ನಿಂತೇ ಇರುವೆ
ಬಾ ಮಲಗಿಕೋ ಎಂದು
ಮಡಿಲ ಚೆಲ್ಲಿ
ನನ್ನ ಮುಟ್ಟಿನ ಕಥೆಯ
ನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯ
ನಿನಗೆ ಹೇಳಿಯೇನು

ಹುಲಿ ಹಾಲನುಂಡ ನಿನಗೆ
ತಾಯ ಹಾಲ ರುಚಿ ನೋಡು
ಹುಳಿಯಾಗಿದೆಯೇನೋ ..
ಎನ್ನುತ್ತಲೇ
ತೇಗಿಸಲು ಬೆನ್ನ ನೀವಿಯೇನು

ದೃಷ್ಟಿ ತೆಗೆದು ನಟಿಗೆ ಮುರಿದು
ಎದೆಗೊತ್ತಿಕೊಂಡು,
ಹಣೆಗೊಂದು ಮುತ್ತಿಕ್ಕಿ
ಥೇಟ್ ನನ್ನ ಮಗನಂತೆ ಎನ್ನುತ್ತ
ಹದಿನೆಂಟನೆಯ ಕೊನೆಯ ಮೆಟ್ಟಿಲ ಕೆಳಗಿಳಿದ ಮೇಲೂ….
ಮತ್ತೊಮ್ಮೆ ಮುಗುದೊಮ್ಮೆ ನಿನ್ನ
ತಿರುತಿರುಗಿ ನೋಡಿಯೇನು

ಈಗ ಹೇಳು
ನನ್ನ ಮುಟ್ಟು ನಿನಗೆ ಮೈಲಿಗೆಯೇನು?
……………..

ಕವಿತೆ -೨

ಗುರ್ ಮೆಹರ್ ಅಂತರಂಗ

ಅವರಿವರ ಬಂದೂಕ ತುದಿಯಲ್ಲಿ
ಹೂವಿನ ಮೊನಚಿತ್ತೇ?
ಇಲ್ಲವಲ್ಲ
ಮತ್ತೇ
ಯುದ್ಧವನ್ನು ಯುದ್ಧವಲ್ಲದೆ
ಇನ್ನೇನನ್ನಲಿ?

ಯಾವ ಕಣಿವೆ ಬದುಕಿಸುವುದು
ನಾ ಕಳಕೊಂಡ
ವಾತ್ಸಲ್ಯವನ್ನು ?
ಯಾವ ಕುರ್ಚಿಯ ಬಳಿ
ಕೇಳಲಿ ನ್ಯಾಯ?

ಬೇಕೇ?
ನಮ್ಮ ಬಿಸಿ ರಕ್ತಕೂ
ಕೊಳಚೆಯ ಗಬ್ಬು
ಕಪ್ಪು -ಕೇಸರಿಗಳ ಜಿದ್ದಾ ಜಿದ್ದು

ಬಣ್ಣದ ಮೇಲೂ ರಾಡಿಯ
ಎರಚುತಿರುವವರಾರೋ?
ಈಚೆಗಿರುವುದೇ ಅಚೆ
ಆಚೆಗಿರುವುದೇ ಈಚೆ
ಈಚೆ ಅಚೆಗಳಾಚೆ
ಅದೇ ಮಣ್ಣು ,ಅದೇ ನೀರು
ಅದೇ ಗಂಧ, ಅದೇ ಗಾಳಿ
ರಕ್ತ ಬೇರೆಯೇ ಮತ್ತೆ?

ಬೇಕೆ ಯುದ್ಧ?
ನನ್ನಂಥ ತಬ್ಬಲಿಗಳ ಕೇಳಿ

ಹೇಳು ಅಶೋಕ
‘ಕಳಿಂಗ’ ನಿನ್ನ ಕಾಡಿದಂತೆ
‘ಕಾರ್ಗಿಲ್ ‘ ನನ್ನ ಕಾಡುತ್ತಿದೆ
ಯುದ್ಧವನ್ನು ಯುದ್ಧವೆನ್ನದೆ
ಇನ್ನೇನನ್ನಲಿ?
…….
(ಗುರ್ ಮೆಹರ್: ಕಾರ್ಗಿಲ್ ಯುದ್ಧದಲ್ಲಿ ತಂದೆಯನ್ನು ಕಳೆದುಕೊಂಡು ಅನಾಥಳಾದ ಮಗಳು)

****************

About The Author

4 thoughts on “ಎರಡು ಕವಿತೆಗಳು”

    1. Ramakrishna Gundi

      ಉಭಯ ಕವಿತೆಗಳೂ ಸಶಕ್ತ ಅಭಿವ್ಯಕ್ತಿಯಾದ್ದರಿ0ದ ಹ್ರದಯಕ್ಕೆ ಮುಟ್ಟುತ್ತವೆ

  1. Nagaraj Harapanahalli

    ವರ್ತಮಾನವನ್ನು ಪ್ರಶ್ನಿಸುವ ,ಮಾನವೀಯ ಪರಂಪರೆಯ ಕವಿತೆಗಳು . ಶೋಭಾ ಈ ಕಾರಣಕ್ಕಾಗಿಯೇ ಕನ್ನಡದಲ್ಲಿ ವಿಶಿಷ್ಟ ಕವಯಿತ್ರಿಯಾಗಿ ನಿಲ್ಲುತ್ತಾಳೆ. ಆಕೆಯ ವೈಚಾರಿಕತೆಯ ಜೊತೆಗೆ ಮಾನವೀಯತೆಯ ಬೆಸೆಯುತ್ತಾಳೆ ಕವಿತೆಗಳ ಮೂಲಕ…ಅವ್ವ ಮತ್ತು ಅಬ್ಬಲಿಗೆಯ ಅತ್ಯಂತಮ ಪ್ರಮುಖ ಕವಿತೆಗಳಿವು..
    ಬರವಣಿಗೆಯನ್ನು ಕನ್ನಡ ಕಾವ್ಯ ಪರಂಪರೆಯ ಪ್ರಧಾನ ,ಸ್ಥಾಯಿ ಭಾವಗಳಾದ ಪಂಪ, ವಚನಕಾರರು ಹಾಗೂ ಕುವೆಂಪು ದಾರಿಯಲ್ಲಿ ಮುನ್ನೆಡೆಯಿರಿ…

    1. Phalgun gouda

      ಮೊದಲ ಪದ್ಯದಲ್ಲಿ ನಿನ್ನ ಹಳೆಯ ಫೋಟೋ ನೋಡಿದ ಮೇಲೆ ನನ್ನ ಮಗನಿಗೂ ನಿನಗೂ ಯಾವ ಪರಕೂ ಇಲ್ಲ’ ಅನ್ನುವಲ್ಲಿ ದೇವರನ್ನು ಮಗನಂತೆ ಗಮನಿಸುವ ಆರ್ದ್ರ ಪ್ರೀತಿಯೊಂದು ಸುಳಿದು ಹೋಗುತ್ತದೆ..
      ಎರಡನೇ ಪದ್ಯದಲ್ಲಿ ಗುರ್ ಮೆಹೆರ್ ಹೃದಯದಲ್ಲಿ ನಿಂತು ಯುದ್ಧವನ್ನು ವಿರೋಧಿಸುವ ತಳಮಳ ತಲ್ಲಣಗಳು ಅಭಿವ್ಯಕ್ತಿಗೊಂಡಿದೆ..
      ಯಾವ ಕವಿಯೂ ಯುದ್ಧವನ್ನು ಒಪ್ಪಿಕೊಳ್ಳೊಲ್ಲ..

Leave a Reply

You cannot copy content of this page

Scroll to Top