ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಮಂತ್ರಣ

Low-angle View of Woman Holding Umbrella Under the Rain

ಒಣಗಿದೆದೆಯ ಬೆಂಗಾಡಿನಲಿ,
ಭ್ರಮೆಯ ದೂಳಡಗಿಸುವಂತೆ,
ಬಾ ಮಳೆಯೇ,

ದಣಿವಾರದ ಮೂಲೆಯಲಿ,
ಜೇಡಭಾವ ಜಾಡಿಸುವಂತೆ,
ಬಾ ಮಳೆಯೇ,

ಮನದ ಬಯಕೆ ಕತ್ತಲಲಿ,
ಕರುಡು ಕಳೆವ ಬೆಳಕಂತೆ,
ಬಾ ಮಳೆಯೇ,

ಗದ್ದಲಗಳ ಗದ್ದೆಯಲಿ,
ಹಸಿರೂಡಲು ನೇಗಿಲಂತೆ,
ಬಾ ಮಳೆಯೇ,

ನನ್ನ ಮನದ ಮೌನದಲಿ,
ಹನಿಯ ಶಬ್ದ ಉಳಿವಂತೆ,
ಬಾ ಮಳೆಯೇ,

ಬದುಕ ಬಟ್ಟಲ ಬವಣೆಗಳಲಿ,
ಉಕ್ಕಿ ಹರಿವ ಕರುಣೆಯಂತೆ,
ಬಾ ಮಳೆಯೇ,

ಒಂಟಿಯಾದ ಮನದಲಿ,
ತಂಪನೀವ ಎಲರಂತೆ,
ಬಾ ಮಳೆಯೇ,

ಹನಿ ಹನಿಗಳು ಕಾಡುವಂತೆ,
ಬಂದಗಳಿಗೆಗಳಿಗೆಲ್ಲ ಬೇಡಿಯಂತೆ,
ಬಾ ಮಳೆಯೇ,

ಬಾಯಾರಿದ ಪಯಣದಲಿ,
ಇನಿಯನ ಜೇನದನಿ ಹನಿಯಂತೆ,
ಬಾ ಮಳೆಯೇ,

ಬರಿದೆ ಬೊಗಸೆಯಲಿ,
ಎದೆ ತುಂಬಿದಾ ಕನಸು ಸುರಿವಂತೆ,
ಬಾ ಮಳೆಯೇ,

ಸತ್ತ ಕನಸುಗಳ ಮಧ್ಯದಲಿ,
ಸೂಚಿ ಮಲ್ಲೆ ಅರಳುವಂತೆ,
ಬಾ ಮಳೆಯೇ,

ಮನದ ಮರುಭೂಮಿಯಲಿ,
ಘನಿಕರಿಸಿದೆಲ್ಲ ಭಾವ ಕರಗುವಂತೆ,
ಬಾ ಮಳೆಯೇ,

***********

ಶಾಲಿನಿ.ಆರ್

About The Author

Leave a Reply

You cannot copy content of this page

Scroll to Top