ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅನ್ನಪೂರ್ಣ .ಡೇರೇದ ಓ ಜ್ಞಾನಜ್ಯೋತಿಯೇ ಸಹನೆ ಸಿಂಧೂವೇ ಸಂವಿಧಾನ ಶಿಲ್ಪಿಯೇ ನಾನೆಂದು ನಿಮ್ಮ ಮರೆಯನು ಜಾತಿಬೇಲಿಯ ಮೇಲೆ ಅರಳಿದ ಕಮಲ ನೀವು ನಿಮ್ಮ ನೋವು ಎಂತದೆಂದು ಬಲ್ಲೆವು ನಾವು ದಿಟ್ಟತನದಿ ಜಾತಿ ಮೆಟ್ಟಿ ಭಾರತಾಂಬೆಯ ಕುಲಪುತ್ರ ಎಂಬುದ ಅರುಹಿದ ಮಹಾಪಂಡಿತರಾದ ನಿಮಗೆ ಶರಣು ಭಾರತಾಂಬೆಯ ಮುಕುಟ ಮಣಿಯೇ ನಿಮ್ಮ ಪಾದದಾಣೆ ನೀವು ಕಂಡ ಕನಸು ನನಸಾಗದೆ ಇರದು *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

“ಭೀಮ” ರಾಮಾಂಜಿನಯ್ಯ ವಿ. ನನ್ನೆದೆಯ ಸಾಕ್ಷರ ಪ್ರೀತಿ ದಯೆಯ ಮರ ಹಕ್ಕಿ ಪಿಕ್ಕಿಗಳ ಆಸರೆಯ ಬಾಳ್ ಪಸರಿಸಿದೆ ಬಾನಗಲ ಕೇಳು. ಖಂಡ ಅಖಂಡ ಎದೆಗೂಡುಗಳ ನುಲಿಯುತ ಹರಿಯುತಿದೆ ನೆಲದಗಲ ಅರಿಯುತಿದೆ ಮನದಗಲ ಹೆಣ್ಮನಸ್ಸಿನ ಆ ಜೀವಜಲ “ಭೀಮ-ನನ್ನೆದೆಯ ಸಾಕ್ಷರ ಪ್ರೀತಿ ದಯೆಯ ಮರ”. ನಿನ್ನಡಿಯ ಕುಡಿಗಳು ನಿನ್ನರಿದ ಪಡೆಗಳು, ಸಾಲು ಸಾಲು ಈ ಜಗದ ಎಲ್ಲೆ ಎಲ್ಲೂ. ಗಡಿದಾಟಿದೆ ಮನವೊಕ್ಕಿದೆ ನೀ ಸುರಿಸಿದ ಪ್ರೀತಿ ಗುಂಡು! “ಭೀಮ-ನನ್ನೆದೆಯ ಸಾಕ್ಷರ ಪ್ರೀತಿಯ ಮರ”. ಬಿಳಿಯಕ್ಕಿ ಹಾರುತಿದೆ ಹಸಿರ ಹೆಳ್ಗೆಯ ಹೊತ್ತು ಶಾಂತಿ ಮಂತ್ರವ ಬಿತ್ತಿ. ಕೇಳರಿಯೆ ಈ ಲೋಕದಲ್ಲಿ ಭೀಮನಾದದ ಬಳ್ಳಿ ಪಸರಿಸಲಿ ಎಲ್ಲೆಲ್ಲೂ.. “ಭೀಮ-ನನ್ನೆದೆಯ ಸಾಕ್ಷರ ಪ್ರೀತಿ ದಯೆಯ ಮರ”. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ನೀ ಅಮರ ಎಚ್. ಶೌಕತ್ ಆಲಿ ಭಾರತದ ಸಂವಿಧಾನ ಶಿಲ್ಪಿ ಡಾ||ಭೀಮರಾವ್ ಅಂಬೇಡ್ಕರ್ ಮಹಾಮಾನವವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಅಪರಿಮಿತ ಜ್ಞಾನ ಭಾರತ ದೇಶದ ಮಹಾನ್ ಮೇಧಾವಿ ಭಾರತೀಯ ಬೌದ್ಧ ಮಹಾಸಭಾದ ಸಂಸ್ಥಾಪಕ ಅಂಬೇಡ್ಕರ್ ಸಮಾನತೆಗಾಗಿ ಶಿಕ್ಷಣಕ್ಕಾಗಿ ಸಂಘಟನೆಗಾಗಿ ನಿಂತ ಶಕ್ತಿ ಶೋಷಣೆಗೆ ಒಳಗಾಗಿ ವರ್ಗಗಳ ದೀನ-ದಲಿತರ ದೇವಮಾನವ ದೌರ್ಜನ್ಯ ದಬ್ಬಾಳಿಕೆ ಅವಮಾನಗಳ ವಿರುದ್ಧ ಸಿಡಿದೆದ್ದ ಭೂಪ ನವ ಸಮಾಜದೊಂದಿಗೆ ನವಭಾರತ ನಿರ್ಮಾತೃ ವಾದ ಅಂಬೇಡ್ಕರ್ ತಿರಸ್ಕರಿಸಲ್ಪಟ್ಟ ಬಹಿಷ್ಕರಿಸಲ್ಪಟ್ಟ ಜನರ ನೋವಿಗೆ ಸ್ಪಂದಿಸಿ ಸಮಾಜದಲ್ಲಿ ಕಳಂಕಿತರ ಕಳಿಸಿ ಮಾನವೀಯತೆ ನೀಡಿದ ಮೌಢ್ಯ ಅಜ್ಞಾನ ಅಂಧಾನುಕರಣೆಯ ಬಾಳಿಗೆ ಅರಿವಿನ ಬೆಳಕಾಗಿ ನಿಂತ ರಾಷ್ಟ್ರೀಯ ನಾಯಕನಾಗಿ ವಿಶ್ವದ ಜನತೆಗೆ ದಾರಿದೀಪವಾದ ಅಲ್ಪಸಂಖ್ಯಾತರ ಅಸ್ಪೃಶ್ಯರ ಜಾತಿಗಳ ಸಮನ್ವಯಗೊಳಿಸಿದ ಹಕ್ಕು ಮತ್ತು ಸ್ವಾತಂತ್ರ್ಯದ ಬದುಕಿಗಾಗಿ ನಿರಂತರ ಹೋರಾಡಿದ ದೇಶ ಮತ್ತು ಸ್ವಾತಂತ್ರ್ಯದ ನಿಮ್ನ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸಿದ ಜಾತಿ ಧರ್ಮ ನೀತಿ ಕರ್ತವ್ಯಗಳಲ್ಲಿ ಸೌಹಾರ್ದ ಬಾವ ಸಮರ್ಪಿಸಿದ ಚಿಂತನೆ ಆಲೋಚನೆಯ ಮನಸ್ಸಿಗೆ ಭಾವನೆಗಳನ್ನೆಲ್ಲಾ ರಾಷ್ಟ್ರ ಪ್ರೇಮಕ್ಕಾಗಿ ಸಿದ್ಧಾಂತ ವಿಚಾರಲಹರಿ ಭಾಷಣ ಗಳೆಲ್ಲವೂ ಜನರ ಪ್ರಗತಿಗಾಗಿ ನೊಂದರು ಬೆಂದರು ಹಿಂಸೆ ಸಹಿಸಿದರು ಭಾರತೀಯರ ಭವಿಷ್ಯಕ್ಕಾಗಿ ಹೋರಾಟದ ಬದುಕು ಸಾರ್ಥಕತೆ ಕಂಡಿತು ದಲಿತರ ಏಳಿಗೆಗಾಗಿ ಸಮಗ್ರ ರಾಷ್ಟ್ರೀಯ ನಾಯಕರೆಲ್ಲರ ಜನಸಾಮಾನ್ಯರ ಹಿತ ನೀನು ಕೋಟ್ಯಂತರ ಭಾರತೀಯರ ಮನದಾಳದ ಮೌನದ ಭಾಷೆ ನೀನು ಸೋದರತೆ ಸಮಾನತೆ ಸೌಹಾರ್ದತೆಯ ವಿಶ್ವಾಸ ಗಳೆಲ್ಲವೂ ಇನ್ನೂ ನಿರಂತರ ಅಂಬೇಡ್ಕರ್ ನಿನ್ನ ಸಿದ್ಧಾಂತ ನೀ ತೋರಿದ ದಾರಿ ಎಂದು ಎಂದೆಂದಿಗೂ ಅಮರ ಮತ್ತೊಮ್ಮೆ ಹುಟ್ಟಿ ಬಾ ಈ ದೇಶದ ಅಂಬೇಡ್ಕರ್ ವಿಶ್ವಶಾಂತಿಗಾಗಿ ದೇಶ-ವಿದೇಶಗಳಲ್ಲಿ ದ್ವೇಷದ ಜ್ವಾಲೆ ಆರಿಸಿ ಪ್ರೀತಿಯ ಬೆಸುಗೆಗಾಗಿ ಮಾನವಕುಲದ ಮಹಾನ್ ಚೇತನವಾಗಿ ಸ್ನೇಹದ ಸೆಲೆಯಾಗಿ ಅವತರಿಸು ಮತ್ತೊಮ್ಮೆ ಅಂಬೇಡ್ಕರ್ ವಸುಂಧರೆಯ ಮಗುವಾಗಿ *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೂಕ ನಾಯಕ ಬಸವರಾಜ ಕಾಸೆ ಎತ್ತ ನೋಡಿದರತ್ತ ಅಸಮಾನತೆ ಅಸಹಕಾರ ಶೋಷಣೆ ಅಸ್ಪೃಶ್ಯತೆಗಳ ಮೆಟ್ಟಿದವನೊಬ್ಬನು ನೇತಾರ ಪ್ರತಿ ಹೆಜ್ಜೆಗಳ ಗುರುತು ಎಷ್ಟೋ ಹೊಣೆಗಳ ಹೆಗಲು ಎಲ್ಲವೂ ಎಲ್ಲರಿಗಾಗಿ ಆದರೂ ನಾಳೆಗಳ ಹೊನಲು ಕುಡಿಯಲು ಕೊಡದ ತೊಟ್ಟು ನೀರು ಹುಟ್ಟು ಹಾಕಿದ ಛಲವು ಜೋರು ಲಗ್ಗೆ ಹಾಕದೆ ಬಿಡಲಿಲ್ಲ ನಿಷೇಧಿತ ಕೆರೆ ಕಟ್ಟೆಗಳಿಗೆ ಹಕ್ಕುಗಳ ಜಾಗೃತಿ ಮೊಳಗಿಸಿದರು ಮುಗಿಲಿಗೆ ಗುಡಿ ಗುಂಡಾರಗಳಿಗೆ ಪ್ರವೇಶಿಸಿ ಚಳುವಳಿ ಹುರಿದುಂಬಿಸಿ ತುಂಬಿದ ಆತ್ಮವಿಶ್ವಾಸವೇ ಬಳುವಳಿ ಶ್ರೇಣಿ ಪದ್ಧತಿಗಳ ಜಾತಿ ಸ್ತ್ರೀ ಧಮನಗಳ ನೀತಿ ಹುಟ್ಟಡಗಿಸಿದ ರೀತಿ ಅದುವೇ ಜೀವನ ಪ್ರೀತಿ ಬಂದರೂ ಬಹಳ ಬಾಳು ತುಂಬಾ ಕಷ್ಟ ಎದುರಿಸುತ್ತಲೇ ನಿಂತರು ಸಹನೆಯಿಂದ ಶಿಷ್ಟ ಕಂಡ ಕನಸುಗಳ ಸಾಕಾರ ಸಂವಿಧಾನದ ಕಾಯಕ ಬಹಿಷ್ಕೃತ ಭಾರತದ ಮೂಕ ನಾಯಕ ಶಿಕ್ಷಣವೊಂದೇ ಪ್ರಖರ ಮಾಧ್ಯಮ ಎಲ್ಲಾ ಸಮಸ್ಯೆಗಳಿಗೂ ಗುದ್ದು ಬಡವರೆಲ್ಲರ ಬೆಳವಣಿಗೆಗೆ ಆದರೂ ಹೋರಾಡಿ ಮದ್ದು ಎಲ್ಲಾ ಎಲ್ಲೆಗಳ ಮೀರಿ ಶ್ರಮಿಸಿದ ಸಮಾಜ ಪ್ರವರ್ತಕ ಭೀಮರಾವ್ ಅಂಬೇಡ್ಕರರಾದರು ಆಧುನಿಕ ಭಾರತದ ನಿರ್ಮಾಪಕ ****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅವತಾರ ಪುರುಷ ಸಂಮ್ಮೋದ ವಾಡಪ್ಪಿ ಕಡುಕಷ್ಟದಲಿ ಕುದ್ದು ನೊಂದು ಬೆಂದು ಹೀಯಾಳಿಸುವವರ ಮಧ್ಯೆ ಎದ್ದು ತಾ ನಿಂದು ಮೇಲೆದ್ದು, ಕುಕ್ಕುವ ಕಂಗಳ ನೇರದಿ ನೋಡಿ ಅಧ್ಯಯನ ದಾರಿಯಲಿ ಬರೆದ ಭಾರತದ ಮುನ್ನುಡಿ ಅರಿತರು ಅನೇಕ, ಅನೇಕರು ಮರೆಮಾಚಿದರು ಬಿಡದ ಹಠಯೋಗಿ ಸದಾ ತಪದಿ ಮಿಂದು ದಾರಿಗುಂಟ‌ ಮುಳ್ಳುಗಳು ಬದಿಗೊತ್ತುತ ನಡೆ ಭೀಮನ ಸಾಹಸ, ಸಂವೇದನೆ ದೇಶ ಏಳಿಗೆಯಡೆ ಅಸ್ಪೃಶ್ಯತೆಯ ನೂಕಿ ಮಹಾಸಮರವ ಸಾರಿ ದೀನರ ಬಂಧು ಮಾತೃಭೂಮಿಯ ಮೇಲೆತ್ತುವ ಗುರಿ ಸತತ ಚಲನೆ, ಹೊಟ್ಟೆ ಬಟ್ಟೆ ಕಟ್ಟಿ ಸಿದ್ಧಿಸಿದ ತಪವು ಕೈಯಲಿ ಪುಸ್ತಕ, ಮಸ್ತಿಷ್ಕದಿ ಅಪಾರ ಜ್ವಾನ ಸದಾ ಏಳಿಗೆಯ ಜಪವು ಸಂವಿಧಾನದ ಶಿಲ್ಪಿ, ರೂಪುರೇಷೆಗಳನು ರಚಿಸಿ ಜಗದ ಮೂಲೆಗೂ ತಲುಪಿ ರಾಷ್ಟ್ರವನು‌ ಬಿಂಬಿಸಿ ಸದಾ ಸಹಾಯಕೆ ಕೈನೀಡುತ ಜನಾಂಗವ ಮೇಲೆತ್ತಿದ ಸಿದ್ಧಿ‌ ಪುರುಷ ಬುದ್ಧಂ‌ ಶರಣಂ ಎನ್ನುತ ಶಾಂತಿಯ ದೂತ ಇವನೇ ಅವತಾರ ಪುರುಷ *********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ನಿಜವಾದ ವಿಮೋಚಕ ಸುರೇಶ ಎನ್ ಶಿಕಾರಿಪುರ ಹಿಂದೂ ಧರ್ಮದ ಪ್ರಕಾರ ಹೆಣ್ಣುಮಕ್ಕಳಿಗೆ ಆಸ್ತಿಯ ಹಕ್ಕಿರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಮಾತಿನ ಮೂಲಕ ತವರಿನ ಯಾವುದೇ ಆಸ್ತಿಗೆ ಆಕೆ ಹಕ್ಕುದಾರಳಲ್ಲ ಸಂಬಂಧದವಳಲ್ಲ ಎಂಬುದನ್ನು ನೆಲೆಗೊಳಿಸಲಾಗಿತ್ತು. ಅವಳಿಗೆ ತವರಿನ ಆಸ್ತಿಯೇನಾದರೂ ಇದ್ದರೆ ಅದು ಆಕೆಯ ತಾಯಿ ಮಾತ್ರವೇ ಆಗಿರುತ್ತಿದ್ದಳು. ಅದೂ ಬದುಕಿದ್ದರೆ ಇಲ್ಲದಿದ್ದರೆ ಅದೂ ಇಲ್ಲ. ಹಿಂದೆಲ್ಲಾ ಬಾಲ್ಯ ವಿವಾಹವಾಗಿ ಚಿಕ್ಕ ವಯಸ್ಸಿನಲ್ಲೇ ಗಂಡ ತೀರಿ ಹೋದರಂತೂ ಮುಗಿಯಿತು. ಇಟ್ಟುಕೊಂಡರೆ ಗಂಡನ ಮನೆ ಇಲ್ಲದಿದ್ದರೆ ತವರು ಮನೆ. ಹೊಟ್ಟೆ ಪಾಡಿಗಾಗಿ ಆಕೆ ಅಣ್ಣ ಅತ್ತಿಗೆ ನಾದಿನಿ ಅತ್ತೆ ಮಾವ ಮಲತಾಯಿ ಎಲ್ಲರನ್ನೂ ಸಹಿಸಿಕೊಂಡು ದೀನಳಾಗಿ ಬದುಕಬೇಕಾದ ದುಸ್ಥಿತಿ ಇತ್ತು. ತುತ್ತಿನ ಚೀಲ ತುಂಬಿಕೊಳ್ಳಲು ಆಕೆ ಎಲ್ಲ ಅವಮಾನಗಳನ್ನು ಸಹಿಸಿಕೊಂಡು ಇದ್ದು ಸಾಯಬೇಕಾಗಿತ್ತು. ಮೇಲ್ವರ್ಗ ಮೇಲ್ಜಾತಿಯ ಕುಟುಂಬಗಳಲ್ಲಂತೂ ಇದು ಅವ್ಯಾಹತ. ಆಸ್ತಿ ಕೊಡುವ ಯೋಚನೆ ಆಕೆಯ ಸಹೋದರನಿಗೋ ತಂದೆಗೋ ಇದ್ದರೆ ಅದನ್ನು ಆಕ್ಷೇಪಿಸುವ ವಿರೋಧಿಸುವ ಅತ್ತಿಗೆಯೋ ನಾದಿನಿಯೋ ಮಲತಾಯಿಯೋ ಇರುತ್ತಿದ್ದಳು‌. ಅಂದರೆ ಶೋಷಿತ ಹೆಣ್ಣು ಹೆಣ್ಣಿನಿಂದಲೇ ಈ ಪರಿಯ ಹಿಂಸೆ ವಧೆ ಅನುಭವಿಸಬೇಕಾಗಿತ್ತು. ಹೆಣ್ಣು ಹೆಣ್ಣಿಗೇ ಆಸರೆ ಎಂಬುದು ಮಾತ್ರ ಇಂತಹಾ ಸಂದರ್ಭದಲ್ಲಿ ಸುಳ್ಳಾಗದೇ ಇರುವುದಿಲ್ಲ. ಇಲ್ಲಿ ಒಂದು ಜೀವಕ್ಕಿಂತ ತನ್ನ ಕುಟುಂಬದ ತನ್ನ ಮಕ್ಕಳ ಸ್ವಾರ್ಥ ಮುಖ್ಯವಾಗುತ್ತದೆ. ಹಾಗಾಗಿ ವಿಧವೆಯೋ ನಿರ್ಗತಿಕಳೋ ಆದ ಹೆಣ್ಣಿಗೆ ಹೀನಾಯವಾದ ಬಾಳು ತಪ್ಪುತ್ತಿರಲಿಲ್ಲ. ಗಂಡ ಸತ್ತ ಮೇಲೆ ಚಿತೆ ಏರುತ್ತಿದ್ದ ಬಹುತೇಕ ಹೆಣ್ಣು ಮಕ್ಕಳು ಇಂಥಹಾ ಭೀಕರ ಭವಿಷ್ಯವನ್ನು ಕಲ್ಪಿಸಿಕೊಂಡೇ ಚಿತೆ ಏರಲು ನಿರ್ಧರಿಸುತ್ತಿದ್ದದ್ದೂ ಇದೆ. ಗಂಡ ಸತ್ತ ಮೇಲೆ ನಮಗೇನೂ ಇಲ್ಲ ಎಂಬುದು ಹೆಚ್ಚಿನದಾಗಿ ಅವಳು ಆಸ್ತಿಯ ಹಕ್ಕಾಗಲೀ ಬದುಕುವ ಬಾಳುವ ಅವಕಾಶವಾಗಲೀ ಇಲ್ಲದ ದುರ್ಬರ ಸನ್ನಿವೇಷವನ್ನು ಎದುರಿಸಬೇಕಾದ ಭೀತಿಯನ್ನೇ ದ್ವನಿಸುತ್ತದೆ. ಬಾಬಾ ಸಾಹೇಬ ಅಂಬೇಡ್ಕರರು ಹಿಂದೂ ಕೋಡ್ ಬಿಲ್ಲನ್ನು ತರಲು ಹೋರಾಡಿದ್ದು ಇದೇ ಉದ್ದೇಶಕ್ಕೆ‌. ಭಾರತದ ಹಿಂದೂ ಮಹಿಳೆಯರ ವಿಮೋಚಕ ಬಾಬಾ ಸಾಹೇಬರೇ ಆಗಿದ್ದಾರೆ. ಅವರು ಹಿಂದೂ ಕೋಡ್ ಬಿಲ್ಲಿನ ಮೂಲಕ ಹಿಂದೂ ಮಹಿಳೆಯ ಆಸ್ತಿಯ ಹಕ್ಕನ್ನು ಪ್ರತಿಪಾದಿಸಿದ್ದು ನಮ್ಮ ಸಂಪ್ರದಾಯವಾದೀ ಹಿಂದೂ ಪುರುಷ ಪುಂಗವರಿಗೆ ಸರಿ ಬರಲಿಲ್ಲ. ಅವರ ಪ್ರಕಾರ ಹಿಂದೂ ಧರ್ಮವೆಂಬ ಆಲದ ಮರಕ್ಕೆ ಬಾಬಾ ಸಾಹೇಬರು ಕೊಡಲಿ ಪೆಟ್ಟು ನೀಡುತ್ತಿದ್ದಾರೆಂಬುದೇ ನುಂಗಲಾರದ ತುತ್ತಾಗಿತ್ತು. ಒಂದು ಧರ್ಮದಲ್ಲಿ ಸುಧಾರಣೆ ತಂದರೆ ಅದು ಹೇಗೆ ಧರ್ಮಕ್ಕೆ ಚ್ಯುತಿ ಬರುತ್ತದೋ ಕಾಣೆ. ಬದಲಾವಣೆ ಇಲ್ಲದ ಧರ್ಮಕ್ಕೆ ಭವಿಷ್ಯವೂ ಇಲ್ಲ ಉಳಿಗಾಲವೂ ಇಲ್ಲ. ಹೆಣ್ಣು ಧರ್ಮದ ಭಾಗವೋ ಹೊರತು ಆಕೆ ಧರ್ಮ ಭ್ರಷ್ಟಳಲ್ಲ. ಹೆಣ್ಣನ್ನು ಗೌರವಿಸದ ಬದುಕಲು ಬಿಡದ ಧರ್ಮ ಧರ್ಮವೇ ಅಲ್ಲ. ಹಿಂದೂ ಸೋಗು ಹಾಕಿಕೊಂಡಿರುವ ಸನಾತನ ವೈದಿಕರಿಗೆ ಅಂಬೇಡ್ಕರರ ಈ ಹಿಂದೂ ಕೋಡ್ ಬಿಲ್ ಪುರಿಗಣೆಯಾಗಿ ಕಾಡಿದ್ದರ ಪರಿಣಾಮವೇ ಅವರು ಆ ಬಿಲ್ ಪಾಸಾಗದಂತೆ ತಡೆಯುವ ಎಲ್ಲಾ ಹೋರಾಟವನ್ನೂ ತಂತ್ರ ಕುತಂತ್ರಗಳನ್ನೂ ಶುರುವಿಟ್ಟುಕೊಂಡರು. ಮಹಿಳಾ ಪರವಾದ ಕಾಯ್ದೆಯನ್ನು ಮಹಿಳೆಯರ ಮೂಲಕವೇ ಹಿಮ್ಮೆಟ್ಟಿಸಲು ಹರಸಾಹಸ ಪಟ್ಟು ಹೋರಾಡಿದರು. ಜಢ ಸಮಾಜದ ಸಿಕ್ಕುಗಳಲ್ಲಿ ಸಿಕ್ಕು ನಾಶವಾಗುತ್ತಿದ್ದ ಮಹಿಳೆಯರನ್ನು ರಕ್ಷಿಸಲು ಅಂಬೇಡ್ಕರ್ ಪ್ರಾಮಾಣಿಕ ಮತ್ತು ನಿರ್ಣಾಯಕ ಹೋರಾಟ ನಡೆಸಿದ್ದರು. ಆದರೆ ಅವರಿಗೆ ಸಹಕಾರ ಸಿಗಲಿಲ್ಲ ಬಿಲ್ ಇದ್ದದ್ದು ಇದ್ದಂತೆ ಜಾರಿಗೆ ಬರಲಿಲ್ಲ. ಬಾಬಾ ಸಾಹೇಬರು ರಾಜಿನಾಮೆ ಸಲ್ಲಿಸಿದರು. ನಮ್ಮ ಮಹಿಳೆಯರು ಕೆಲವರು ಮಾತ್ರ ಚರಿತ್ರೆಯ ಈ ಘಟನೆಯನ್ನು ಮರೆತು ತಮ್ಮನ್ನು ತುಳಿಯುವ ಮನು ಸಿದ್ಧಾಂತಿಗಳ ಜೊತೆ ಕೈ ಜೋಡಿಸಿ ತಮ್ಮನ್ನು ತಾವೇ ಬಲಿಹಾಕಿಕೊಳ್ಳುತ್ತಿದ್ದಾರೆ. ಬಾಬಾ ಸಾಹೇಬರ ಪ್ರಯತ್ನದ ಫಲ ಬಿಲ್ ಬಹಳಷ್ಟು ತಿದ್ದುಪಡಿಗಳ ಮೂಲಕ ಪಾಸಾಗಿ ಮಹಿಳೆಯರಿಗೆ ಆಸ್ತಿಯ ಹಕ್ಕು ಲಭಿಸಿದ್ದರೂ ಈ ಸಮಾಜ ಅದನ್ನಿನ್ನು ಮಾನಸಿಕವಾಗಿ ಒಪ್ಪಿಲ್ಲ. ಅದರ ಅಂತರಂಗದೊಳಗೆ ಆಕೆಗೆ ಯಾವ ಹಕ್ಕೂ ಇನ್ನೂ ದೊರೆತಿಲ್ಲ. ಅವಳು ಈ ವಿಚಾರದಲ್ಲಿ ಬಹುದೊಡ್ಡ ವಂಚನೆ ಅನುಭವಿಸುತ್ತಿದ್ದಾಳೆ. ಸಮಾಜ ಅವಳ ಬಾಳು ಕೆಟ್ಟಿತೆಂದರೆ ಈಗಲೂ ಅನಾಥಳಾಗಿಯೇ ಇರಿಸುವ ಮನಸ್ಥಿತಿಯಲ್ಲಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬರ ಹೋರಾಟದ ಒಳಗಿನ ಅಂತಃಕ್ಕರಣ ಎಲ್ಲರಿಗೂ ಅರ್ಥವಾಗಬೇಕು. ಮಹಿಳೆಯು ದೇವರು ಮತ್ತು ಭಕ್ತಿಯ ಹಾಗೂ ಪುರುಷಪ್ರಧಾನ ಧಾರ್ಮಿಕ ವ್ಯವಸ್ಥೆಯು ಹೇರುವ ಮೂಲಕ ನಂಬಿಸಲ್ಪಟ್ಟ ಮೌಢ್ಯಗಳಿಂದ ಹಾಗೂ ಸಂಪ್ರದಾಯ ಕಟ್ಟುಕಟ್ಟಳೆಗಳ ದಾಸ್ಯದಿಂದ ಹೊರಬಂದು ಹಕ್ಕನ್ನು ಪಡೆಯುವ, ಶೋಷಣೆಯನ್ನು ಪ್ರಶ್ನಿಸುವ ದಾಸ್ಯವನ್ನು ನಿರಾಕರಿಸುವ ಪ್ರಗತಿಶೀಲೆಯರಾಗಬೇಕು ಎಂದೇ ಅವರು ಮಹಿಳೆಯರು ದೇವಾಲಯಗಳ ಮುಂದು ಸಾಲುಹಚ್ಚಿ ನಿಲ್ಲುವುದಕ್ಕಿಂತ ಗ್ರಂಥಾಲಯಗಳ ಮುಂದು ಸಾಲುಹಚ್ಚಿ ನಿಲ್ಲಬೇಕೆಂದಿದ್ದರು. ಶೋಷಿತ ಹಿಂದೂ ಹೆಣ್ಣುಮಕ್ಕಳ ಬಿಡುಗಡೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂಬುದು ಅವರ ಧೋರಣೆಯಾಗಿತ್ತು. ಇಂದು ಎಷ್ಟು ಜನ ಇದನ್ನು ಸ್ಮರಿಸುತ್ತಾರೆ. ಎಷ್ಟು ಜನಕ್ಕೆ ಬಾಬಾಸಾಹೇಬರ ಈ ಬಡಿದಾಟದ ಒಳಗಿನ ಕಾಳಜಿ ಅರ್ಥವಾಗಿದೆ? ಇಂದೂ ಕೂಡಾ ಕತ್ತಿಯಂಚಿನ ದಾರಿಯಲ್ಲೇ ನಡೆಯುತ್ತಿರುವ ನಮ್ಮ ದೇಶದ ಮಹಿಳೆಯರೆಲ್ಲರೂ ಇದನ್ನು ಯೋಚಿಸಬೇಕು. ಹಾಗೆ ನೋಡಿದರೆ ಈ ದೇಶದ ಎಲ್ಲಾ ಬಗೆಯ ಶೋಷಣೆಗಳ ನಿಜವಾದ ವಿಮೋಚಕ ಅಂಬೇಡ್ಕರರೇ. *********

ಪ್ರಸ್ತುತ Read Post »

ಇತರೆ

ಪ್ರಸ್ತುತ

ಮಹಾನ್ ಮಾನವತಾವಾದಿ ಅಂಬೇಡ್ಕರ ರೇಷ್ಮಾ ಕಂದಕೂರ ನಮ್ಮ ದೇಶದ ಕಾನೂನು ವ್ಯವಸ್ಥೆಗೆ ಪ್ರತೀಕವಾಗಾರುವ ಲಿಖಿತ ದಾಖಲೆಯ ಹೊತ್ತಿಗೆ ಸಂವಿಧಾನ ಇದರ ರಚನೆಗೆ ಮಹತ್ವದ ಕೊಡುಗೆ ನೀಡಿದ ಮಹನೀಯ ಅಂಬೇಡ್ಕರ.ಸ್ವಾತಂತ್ರ್ಯ,ಸಮಾನತೆ,ಬಂಧುತ್ವದ ಆಧಾರವನ್ನು ಅಳವಡಿಸಿಕೊಂಡು ನಮ್ಮ ಸಂವಿಧಾನ ರಚಿತವಾಗಿದೆ. ನಮ್ಮ ಹಕ್ಕು,ಕರ್ತವ್ಯಗಳನ್ನು ತಿಳಿಸಿ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ವ್ಯವಸ್ಥೆಗಳ ಅರಿವು ನೀಡುವ ವಿಶ್ವದಲ್ಲಿಯೇ ಬ್ರಹತ್ ಸಂವಿಧಾನ ಇಂಗ್ಲೆಂಡನ ಸಂವಿಧಾನ ಮಾದರಿಯನ್ನು ಅಳವಡಿಸಿ ಕೊಳ್ಳಲಾಯಿತು. ಅಂಬೇಡ್ಕರ ಬಾಲಕನಿದ್ದಾಗಲೇ ಪ್ರತಿಭಾವಂತ, ಕಲಿಯುವ ಹಂಬಲ,ಸೂಕ್ಷ್ಮತೆಯನ್ನು ಗುರುತಿಸಿ ಶಿಕ್ಷಕರ ಪ್ರೀತಿಗೆ ಪಾತ್ರರಾದರು.ಅಮೇರಿಕಾ,ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮಾಡಿದರು.ಸಾಹು ಮಹಾರಾಜರಿಂದ ಶಿಷ್ಯವೇತನ ಪಡೆದರು . ಸಾಮಾಜಿಕ,ಆರ್ಥಿಕ ಪ್ರಗತಿಗಾಗಿ ನಿರಂತರ ಹೋರಾಟ ನಡೆಸಿದರು.ಭಾರತದ ನೀರಾವರಿ ಜನಕನೆಂದೆ ಹೇಳಬಹುದು ಪಂಡಿತ ನೆಹರುರವರ ಕಾಲದಲ್ಲಿನ ಮಂತ್ರಿಯಾಗಿದ್ದರು ಇವರನ್ನು ಮಂತ್ರಿ ಮಂಡಲದ ವಜ್ರ ಎಂದೇ ನೆಹರುರವರು ಪರಿಚಯಿಸುತ್ತಿದ್ದರು‌. ಹತ್ತನೇ ತರಗತಿಯಲ್ಲಿ ಮುಂಚೂಣಿಯಲ್ಲಿ ಪಾಸಾದಾಗ ಇವರಿಗೆ ಬಹುಮಾನವಾಗಿ ದೊರೆತ “ಬುದ್ಧನ ಚರಿತ್ರೆ” ಪುಸ್ತಕ ಮುಂದೆ ಬೌದ್ಧ ಧರ್ಮ ಸ್ವೀಕರಿಸಲು ಪ್ರೇರಣೆ ನೀಡಿತು.ಬುದ್ಧ,ಮಾರ್ಕ್ಸ ರ ಪ್ರಭಾವ ಇವರ ಅಪಾರ ಮೇಲೆ ಅಪಾರವಾಯಿತು.ಮನುಸ್ಮೃತಿಯಲ್ಲಿ ಅಸ್ಪೃಶ್ಯರನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ವಿರೋಧಿಸಿದರು‌.ಜಾತಿ ಆಧಾರಿತ ತಾರತಮ್ಯದ ವಿರುದ್ಧ ಧ್ವನಿ ಎತ್ತಿದರು. ಪ್ರಜಾ ಪ್ರಭುತ್ವದಲ್ಲಿ ಎದ್ದು ಕಾಣುವ ಸ್ಥೂಲ ಕಲ್ಪನೆಯ ವಿಭಿನ್ನ ಸಮಾಜವನ್ನು ಆದರ್ಶ ಸಮಾಜದ ಕಲ್ಪನೆ ಸುಖಿರಾಜ್ಯವನ್ನಾಗಿ ಬದಲಾಯಿಸಿ ಸ್ವಾತಂತ್ರ್ಯ,ಸಮಾನತೆ,ಭ್ರಾತೃತ್ವಗಳು ಒಟ್ಟಿಗೆ ಸಾಧಿಸುವುದನ್ನು ಕಲ್ಪಿಸಿದರು. ಇಂದಿನ ಸಮಾಜದಲ್ಲಿ ಒಂದು ಮನೋಭಾವ ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ ನೀಡುವುದು ಅವಶ್ಯಕ.ಪೆಡಸಾದ ಸಾಮಾಜಿಕ ಅಡೆತಡೆಗಳಿಂದ ಮುಕ್ತ ಸಮಾಜದ ನಿರ್ಮಾಣ ಅವಶ್ಯಕವಾಗಿದೆ. ಅಮರ ಚೇತನ ಮಹಾನ್ ಮಾನವತಾವಾದಿ ಶೋಷಿತರ ಏಳ್ಗೆಗಾಗಿ,ಸರ್ವ ಸಮಾನತೆಗಾಗಿ ಮೀಸಲಾತಿಯ ಅಧಿನಿಯಮ ಜಾರಿಗಾಗಿ ಶ್ರಮಿಸಿದರು.ಶ್ರಮಿಕರ ಕಣ್ಣೀರ ಒರೆಸುವಲ್ಲಿ.ದೇವರಿದ್ದಾನೆ ಎಂದು ತಿಳಿದ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದವರು ಭಾರತದ ಸಂವಿಧಾನದ ಶಿಲ್ಪಿ ಅಂಬೇಡ್ಕರ. *******

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ಮೂಗಪ್ಪ ಗಾಳೇರ ನಾವು ಹುಟ್ಟಿದಂತೆ ಆತನು ಹುಟ್ಟಿದ್ದ ಯಾಕೋ ಗೊತ್ತಿಲ್ಲ ನಮ್ಮಲ್ಲಿ ಇರದ ಬೆಳಕು ಆತನಲ್ಲಿತ್ತು ಬುದ್ಧನೋ, ಬಸವಣ್ಣನೋ ಯಾರ ತದ್ಭವವೋ ಗೊತ್ತಿಲ್ಲ ಅವರ ಮುಖ ಚರಿತ್ರೆ ಇತನಲ್ಲಿ ಅಡಗಿತ್ತು ಚಮ್ಮಾರನ ಕೈಯಲ್ಲಿ ಲೇಖನಿ ನರ್ತಿಸಿದಾಗ ಪ್ರಳಯವಾದಿತೆಂದು ಕಾದು ಕುಳಿತ ಕೆಲವರಿಗೆ ಭೂಮಿ ಕಂಪಿಸಿದಂತೆ ನಡುಕ ಹುಟ್ಟಿತು ಹೌದು ಆತ ಸೃಷ್ಟಿಸಿದ್ದು ಪ್ರಳಯವೆ ಯಂತಹ ಪ್ರಳಯ ಕಪ್ಪು ಮೋಡಗಳೆಲ್ಲ ಬಿಳಿಯ ಮೋಡಗಳೊಂದಿಗೆ ಮಿಲನ ನಡೆಸಿ ಭೂ ಗರ್ಭದೊಳಗೆ ಮಾನವೀಯ ಕೂಸುಗಳ ಜನನದ ಪ್ರಳಯ ಆ ಪ್ರಳಯಗಳಿಗಾ ಕಣ್ಣು ಮೂಗು ನಾಲಿಗೆ ಕಿವಿ ಚರ್ಮ ಎಲ್ಲೆಂದರಲ್ಲಿ ಉಸಿರಾಡುತ್ತಿವೆ ಹರಿದಾಡುತ್ತಿವೆ ಎಲ್ಲೆಂದರಲ್ಲಿ ಬದುಕು ಕಟ್ಟಿಕೊಳ್ಳುತ್ತಿವೆ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ಜಯಂತಿಗೆ ರಾಮಾನುಜ ನೆನಪು ಡಾ.ನಾ.ಗೀತಾಚಾರ್ಯ ದಲಿತರನ್ನು ಬಲಿತರು ಹೆಗಲಲಿ ಹೊತ್ತು ದೇವಾಲಯದರ್ಶನ ಮಾಡಿಸುವ ಹೊತ್ತು ಎಂದು ಬರುವುದೊ ಎಂದು ಕಾಯುತಿಹೆ ನಾನಂತು. ಜಾತ್ಯತೀತ ಭಾರತದ ಸಮಾನತೆಯ ಈ ಹೊತ್ತು. ಇದು ಕನಸಲ್ಲ, ಹುಚ್ಚಲ್ಲ ,ನಡೆದಿದೆ ಸತ್ಯಕಥೆ. ತಿರುಪ್ಪಾಣರೆಂಬ ದಲಿತ ಆಳ್ವಾರರ ಜೀವನಗಾಥೆ. ಮುನಿಯೆ ವಾಹನನಾಗಿ ಗರ್ಭಗುಡಿಗೇ ಹೊತ್ತೊಯ್ದ ಕಥೆ.ಸಾವಿರವರ್ಷದ ಇತಿಹಾಸ ಮರುಕಳಿಸಬಾರದೇಕೆ. ಅಂಬೇಡ್ಕರ್ ಗಾಂಧಿ ಬಸವರಿಗೂ ಮೊದಲೆ. ರಾಮಾನುಜರಿತ್ತಿದ್ದರು ದಲಿತರಿಗೆ ಹೆಗಲೆ. ದಲಿತರ ಕಾಲ್ತೊಳೆದ ಕೆರೆನೀರ ಕುಡಿದಿದ್ದರಾಗಲೆ. ‘ತಿರುಕುಲ’ರೆಂದು ಕೂರಿಸಿದ್ದರು ದೇವರ ಬಗಲೆ. ಅಂಬೇಡ್ಕರರೆ ನೀವೇನೋ ಆದಿರಿ ದಲಿತ ಸೂರ್ಯ. ಸಂವಿಧಾನದಲಿ ಕೊಟ್ಟಿರಿ ಸಮಾನತೆ, ರಕ್ಷಣೆ, ತೂರ್ಯ. ಎತ್ತಿಹಿಡಿದಿರಿ ವಸುದೈವ ಕುಟುಂಬದ ಧ್ಯೇಯ. ಆದರಿನ್ನೂ ಆಗಿಲ್ಲ ನಮಗೇ ಸೂರ್ಯೋದಯ. ರಾಮಾನುಜ ಸಹಸ್ರಮಾನದ ಈ ಹೊತ್ತಿನಲ್ಲೂ ದಲಿತರ ಮೇಲಿನ ದೌರ್ಜನ್ಯ ಅವ್ಯಾಹತವಯ್ಯೊ. ಮುಟ್ಟಿದರೆ, ನೀರೆತ್ತಿದರೆ, ಎದುರಾಡಿದರೆ ಮೈಲಿಗೆಯ ಘಾತದಲೆ ಬಿದ್ದಿಹರಲ್ಲ ಬಲಿತರೆಲ್ಲ, ಅಯ್ಯ ಎದ್ದೇಳಿ ಬಲ್ಲಿದರೆ ಬಲ್ಮೆತೋರಿ ಸಂವಿಧಾನಕೆ. ಮುನಿವಾಹನರೆನಿಸಿ ದಲಿತರಿಗೆ, ಹಾರಿಸಿ ಪತಾಕೆ. ಭಕ್ತಿಸಾಮ್ರಾಜ್ಯದಲಿಹುದು ದಲಿತ ಭಕ್ತರ ಸಾಲುಭಂಜಿಕೆ. ಲೋಕಸಾರಂಗರಾಗಿ ಲೋಕಕೆ ಸಾರಲೇಕೆ ಅಂಜಿಕೆ ***** ಟಿಪ್ಪಣಿಗಳು: 1)ತಿರುಪ್ಪಾಣಾಳ್ವಾರ್: 12ಜನ ಆಳ್ವಾರ್ ಸಂತರಲ್ಲಿ ಒಬ್ಬರಾದ ದಲಿತ ಭಕ್ತರು. (8-9ನೇ ಶತಮಾನ) 2) ಮುನಿಯ ವಾಹನರಾಗಿ: ಈ ಆಳ್ವಾರರು ಶ್ರೀರಂಗದ ದೇವಾಲಯದ ಮುಂದೆ ಕುಳಿತು ನಿತ್ಯ ವೀಣೆ ನುಡಿಸುತ್ತ ಧ್ಯಾನದಲ್ಲಿರುತ್ತಿದ್ದರು. ಒಂದು ದಿನ ದೇವಾಲಯದ ಪ್ರಧಾನ ಅರ್ಚಕರಾದ ಲೋಕಸಾರಂಗರು ಕಾವೇರಿಯಿಂದ ದೇವರಿಗೆ ಮಡಿನೀರು ಒಯ್ಯುವಾಗ ಅಡ್ಡವಿದ್ದ ಇವರನ್ನು ಕೂಗಲು,ಭಕ್ತಿಯಲಿ ಮೈಮರೆತು ಕೇಳಿಸದಿರಲು, ಸಣ್ಣ ಕಲ್ಲು ಎಸೆದಾಗ ಎಚ್ಚರವಾಗಿ ದೂರ ಸರಿಯುವರು. ಸಾರಂಗರು ದೇವರಿಗೆ ಅಭ್ಯಂಜನ ಮಾಡುವಾಗ ಹಣೆಯಲ್ಲಿ ರಕ್ತ ಕಂಡು ಗಾಬರಿಯಾಗಲು ‘ನನ್ನ ಭಕ್ತನಿಗೆ ಹೊಡೆದು ಅಪಚಾರವಾಗಿದೆ, ಕೂಡಲೆ ಅವನನ್ನು ಹೆಗಲಲಿ ಹೊತ್ತು ಇಲ್ಲಿಗೆ ಕರೆದುತಾ’ರೆಂದು ದೇವ ವಾಣಿಯಾಗಲು,ಸಾರಂಗರು ಎಲ್ಲರನ್ನೂ ಕೂಡಿಕೊಂಡು ಆಳ್ವಾರರ ಬಳಿ ಹೋಗಿ ತಪ್ಪೋಪ್ಪಿ ನಮಸ್ಕರಿಸಿ ಒಲ್ಲೆನೆಂದರೂ ಬಿಡದೆ ಹೆಗಲಲಿ ಕೂರಿಸಿಕೊಂಡು ದೇವರಮುಂದಿಳಿಸುವರು. ಇದರಿಂದ ಇವರಿಗೆ ‘ಮುನಿವಾಹನ’ ಹೆಸರೂ ಇದೆ. 3) ದಲಿತರಿಗೆ ಹೆಗಲು: 11ನೇ ಶ.ದಲ್ಲೇ ರಾಮಾನುಜಾಚಾರ್ಯರು ದಲಿತ ಶಿಷ್ಯ-ದನುರ್ದಾಸ-ನ ಹೆಗಲ ಆಸರೆಯಲ್ಲಿರುತ್ತಿದ್ದರು. 4)ದಲಿತರ ಕಾಲ್ತೊಳೆದ: ಕೆರೆಯಲ್ಲಿ ದನುರ್ದಾಸನ ಪಾದ ತೊಳೆದ ನೀರನ್ನು ತೀರ್ಥವಾಗಿ ಸ್ವೀಕರಿಸಿ ಭಕ್ತರ ಶ್ರೀಪಾದ ತೀರ್ಥದ ಮಹತ್ವ ಸಾರಿದ್ದರು. 5)ತಿರುಕುಲದವರು: ದೆಹಲಿಯಿಂದ ಚೆಲುವನಾರಾಯಣನ ವಿಗ್ರಹ ತರಲು ತಮಗೆ ಜೊತೆಯಾಗಿದ್ದ ದಲಿತರನ್ನು ತಿರುಕುಲತ್ತಾರ್ ( ಶ್ರೇಷ್ಠ ಕುಲದವರು)ಎಂದು ಕರೆದು ದೇವಾಲಯದೊಳಗೆ ಕರೆದೊಯ್ದು ಅವರಿಂದಲೇ ಉತ್ಸವವನ್ನು ಹೊರಡಿಸುವ ಸಂಪ್ರದಾಯ ಹಾಕಿದರು. ಇದು ಈಗಲೂ ಮೇಲುಕೋಟೆಯಲ್ಲಿ ನಡೆಯುತ್ತಿದೆ.

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಅಂಬೇಡ್ಕರ ೧೯೮೧ ಮೂಲ: ನಾಮದೇವ ಡಸಾಲ್ ಕನ್ನಡಕ್ಕೆ: ಕಮಲಾಕರ ಕಡವೆ ಮುಂಗಾರಿನಂತೆ ನಿನ್ನ ಬರವು ನಮ್ಮ ಕಡೆ ನಿನ್ನ ತಯಾರಿಯಲ್ಲಿ ನಾವಿರಬೇಕು ಎಲ್ಲಿಲ್ಲ ನೀನು? ಬಿಸಿಲು ಮಳೆಯಲ್ಲಿ, ಗಾಳಿ ಸುಂಟರಗಾಳಿಯಲ್ಲಿ, ಭೂತಕಾಲದಲ್ಲಿ ಹಳೆಯ ನೋವಲ್ಲಿ, ನನ್ನ ಕಣ್ಣುಗಳಲ್ಲಿ, ಈ ನೆಲದ ಕಾಮನಬಿಲ್ಲಿನಲ್ಲಿ ಸ್ವಪ್ನಗಳ ಆಸರೆಗೆ ಪೆಟ್ಟು ಕೊಡುತ್ತ ಅಸ್ತಿತ್ವದ ಈ ಕಾಂಪೋಸಿಷನ್ನನ್ನು ಉತ್ತುಂಗವಾಗಿಸುತ್ತ ನಿನ್ನ ಶೇಷ, ನಿನ್ನ ಅವಶೇಷ ನಿನ್ನ ನಿರರ್ಗಳ ಉಜ್ವಲ ಪ್ರತಿಬಿಂಬ ಅವರು ಹೊರಟಿದ್ದಾರೆ ಚೆಲ್ಲಾಪಿಲ್ಲಿಯಾಗಿಸುತ್ತ ಭಯೋತ್ಪಾದನೆ ಭಯೋತ್ಪಾದನೆ ಹೇಗೆ ನಿನ್ನ ಹೆಸರಾದೀತು? ಜ್ಞಾನದ ಎಲೆಯೊಂದಿಗೆ ಧೃಢವಾಗುತ್ತ ದಿಗಂತವೇ ಆಗುವವ ನೀನು ಕ್ಷುದ್ರ ಕಣ್ಣಿನ ಲಫಂಗರು ಯಾಕೆ ನಿನ್ನನ್ನು ಕ್ಷಿತಿಜಕ್ಕೆ ಮಾತ್ರ ಬಂಧಿಯಾಗಿಸಿಡಬೇಕು? ತಮ್ಮ ಕುಂಡಿಯ ಮೇಲಿನ ಮಚ್ಚೆ ಎಣಿಸಲು ಬಾರದ ಇವರಿಗೆ ಬರೀ ಸಾಮಾನ ಪಿಟೀಲು ತುಣ ತುಣಿಸುವುದು ಮತ್ತು ಕುಂಡೆಯ ಡೋಲು ಬಾರಿಸುವುದು ಯಾಕೆ ಬೇಕು? ಬೆರೆಯುವ ಹೆಸರಲ್ಲಿ ಇವರು ಮೈಮೇಲೆ ಹೊದ್ದುಕೊಂಡಿರುವ ಸಂಪತ್ತಿನ ಶಾಲು ಕೊನೆಗೂ ರಾಧಾಬಾಯಿ, ಭೀಮಾಬಾಯಿಯರ ಕರುಣಾಷ್ಟಕ ಕೊನೆಗೂ ಯೆಲ್ಲಮ್ಮನ ತಿರುಪೆ ಪಾತ್ರೆ, ಈ ಚಾಣಾಕ್ಷ ಉರಿಶಿಶ್ನ ಇವರುಗಳ ಪಂಚಾಯತಿ ಹಮಾಲ ಇವರುಗಳ ಗುಡಾಣತುಂಬುವ ಟ್ರಸ್ಟ್ ಇವೇ ಇವರುಗಳ ಎಂಟು ಹೊತ್ತಿನ ಸುಗ್ರಾಸ ಊಟದ ಶಿಬಿರ ನಂತರ ರಾತ್ರಿ ಸ್ವಪ್ನಕ್ಕೆ ಕಾಡಿಗೆ ಹಚ್ಚಿಕೊಂಡು ಸುಗ್ರಾಸ ಸಂಭೋಗ ಪುನಃ ಹೊಸ ದಿನಕ್ಕಾಗಿ ಶುಭ್ರ ಖಾದಿ ಹೊದ್ದು ಸುಪರ್ ಸ್ಟ್ರಕ್ಚರ್ ಹಾಗೆ ನಲ್ಲ ನಲ್ಲೆ ಸ್ವಂತದ್ದೇ ಶಿಲುಬೆ ಸ್ವಂತ ಹೆಗಲುಗಳ ಮೇಲೆ ಹೊತ್ತೊಯ್ಯಲು ಹಲ್ಕಟರಾದ ಇವರು ಇಲ್ಲಿ ಅಜ್ಞಾನ ಫಲ ಕೊಡಲಿ, ಅರಳಲಿ ದಲಿತರಿಗೆ ಮಾತ್ರ ಏನೂ ತಿಳಿಯದಿರಲಿ ಈ ಪ್ರವಾದಿಗಳ ನೆತ್ತಿಯ ಮೇಲೆ ಬೆಣ್ಣೆ ಕರಗುತ್ತಲಿರಲಿ ಇತ್ತೀಚೆ ಇವರ ಸಮಾಜವಾದಿ ಪಿಂಡಗಳನ್ನೂ ಕಾಗೆ ತಿನ್ನ ತೊಡಗಿವೆ ಈ ಕಾಗೆಗಳು ಇಡೀ ಶಹರವನ್ನೇ ಹೊಲಸು ಮಾಡಿ ಬಿಟ್ಟಿದ್ದಾವೆ ಓ ಮಬ್ಬು ಆಕಾಶವೇ ಆ ನಮ್ಮ ಹಿತೈಷಿ ಮುಂಗಾರು ನಮ್ಮನ್ನ ಒದ್ದೆಯಾಗಿಸುತ್ತ ಬರುತ್ತಿದೆಯಲ್ಲ ! ಈ ಎಂಬತ್ತೊಂದರ ವರ್ಷದ ಮಹಾದ್ವಾರವು ಅವನಿಗಾಗಿ ಪೂರ್ತಿ ತೆರೆಯಲಿ ಅವನಿಗಾಗಿ ಈ ಹೃದಯ, ಅವನಿಗಾಗಿ ಈ ರಕ್ತ ಅವನಿಗಾಗಿ ಈ ಪ್ರೇಮ ಸ್ವಪ್ನಗಳ ಪರದೆ ಹರಿದು ಸಿಂಹಗರ್ಜನೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದೇವೆ ನಾವೀಗ ಯಾರಪ್ಪನ ಭಯ ನಮಗೆ? *******

ಅನುವಾದ ಸಂಗಾತಿ Read Post »

You cannot copy content of this page

Scroll to Top