ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮೊಗ್ಗುಗಳು ತುಟಿ ಬಿಚ್ಚೆ ಕೆ.ಸುಜಾತ ಗುಪ್ತ ನಾ ಪ್ರಕೃತಿ ಪ್ರೇಮಿಯಾಗಿ ಸೂಕ್ಷ್ಮವಾಗಿ ಗಮನಿಸೆ ಪ್ರಕೃತಿಯ ಸೊಬಗು ನೂರ್ಮಡಿ ಹೆಚ್ಚಿತ್ತು… ಭಾವುಕತೆಯಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ನನ್ನ ನಾ ಮರೆತು ಲಲ್ಲಗೆರೆಯಲು ಹರುಷದಿ ಸ್ಪಂದಿಸಿ ನಸು ನಕ್ಕಿತ್ತು ಪ್ರಕೃತಿ.. ಬಿರಿದು ಪರಿಮಳವ ಸೂಸಲು ರವಿ ಕಿರಣದ ಸ್ಪರ್ಶದ ನಿರೀಕ್ಷೆಯಲ್ಲಿರಲು ಮೊಗ್ಗುಗಳು, ಮಂಜಿನ ಮುಂಜಾನೆಯಲಿ ಭೂದರನ ಮರೆಯಲಿ ರಾಜೀವ ಸಖ ಇಣುಕೆ, ಸಜ್ಜಾಗಿ ನಿಂತು ವಯ್ಯಾರದೆ ಅವನೆಡೆಗೆ ಓರೆನೋಟ ಬೀರಿದ ಮೊಗ್ಗುಗಳು ನಸು ನಾಚಿ ತುಟಿ ಬಿಚ್ಚಿ ಲಯಬದ್ದವಾಗಿ …ಹಾಯ್ …ಎಂದಾಗ, ಹರುಷದೆ ರವಿ ಅಪ್ಪಿ ಮುತ್ತಿಡಲು ರವಿ ಕರಗಳ ಆಲಿಂಗನದಿ ಬಿರಿಯುತ್ತಿದ್ದ ಮೊಗ್ಗುಗಳು ಪ್ರೇಮ ಕಾವ್ಯಕೆ ಮುನ್ನುಡಿಯ ಬರೆಯುವಂತೆ ಭಾಸವಾಯ್ತು.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಾಡು ನೀ ಪ್ರಯತ್ನ ಪ್ಯಾರಿಸುತ ಯತ್ನ,ಯತ್ನ ಮಾಡು,ಮಾಡು ನಿನ್ನ ಪ್ರಯತ್ನ ಆಗಲೇ ನನಸಾಗಿಸುವುದು ಆ ನಿನ್ನ ಸಪ್ನ ರಾತ್ರಿ ಕಂಡ ಕನಸುಗಳೆಲ್ಲ ಕನಸುಗಳೇ ಅಲ್ಲ ಮಲಗಲಾವುದು ಬಿಡೋದಿಲ್ಲವಲ್ಲ ಅದುವೇ ನಿನ್ನ ಸಪ್ನ, ಮಾಡು ನೀ ಪ್ರಯತ್ನ ಒಳ್ಳೆ ಬದುಕು ಕಾಣಲು ವಿದ್ಯೆಯೊಂದು ಸಾಲದು ಒಂದೇ ಗುರಿಯ ನಿಗದಿಸಿ ಯತ್ನ ಮಾಡು ಸಿಗುವುದು ಕಾಲ ತುಂಬಾ ಓಡುವದು ನೀನು ಯಾಕೆ ನಿಲ್ಲುವದು ಗುರಿಯ ಕಡೆ ಓಡುತಿರೇ ಸಾಧನಾಶಿಖರವೇ ನಿನ್ನದು ಬಡವ ಬಲ್ಲವ ಎಲ್ಲ ಒಂದೇ ಗುರಿಯನ್ನು ಸಾಧಿಸಲು ಕುಂಟು ನೆಪವು ಹೇಳಿದರೆ ಆಗದು ಉಚ್ಛವಾಗಿ ಬದುಕಲು ಪಡೆದು ಬಂದ ಜನುಮ ಗುರುತಾಗಿಯೇ ಉಳಿಸಲು ಹಗಲಿರುಳು ಯತ್ನಿಸು ಜಯದ ಡಮರುಗ ಬಡಿಯಲು ಗೆದ್ದು ಬಂದ ಸಾಧಕರೆಲ್ಲ ಅದೃಷ್ಟ ಮಾಡಿ ಗೆದ್ದವರಲ್ಲ ಇಟ್ಟ ಗುರಿಯನು ಆಗದೆಂದು ಬಿಟ್ಟವರಲ್ಲ ಸುಲಭವಾಗಿ ಗೆದ್ದರೆ ಸಾಧನೆಯಾಗೋದಿಲ್ಲ ಗೌರವಯುತ ಸನ್ಮಾನ ಬಿಟ್ಟಿಯಾಗಿ ಸಿಗೋದಿಲ್ಲ *******************************

ಕಾವ್ಯಯಾನ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ಸುಪ್ರಿಯಾ ನಟರಾಜ್ ನಾನೇಕೆ ಲಂಕೇಶರನ್ನು ಓದುತ್ತೇನೆ ಪಿಯುಸಿ ಯಿಂದಲೂ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ, ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿ ಇತ್ತು. ಆದರೆ, ಪುಸ್ತಕಗಳನ್ನು ಸಂಗ್ರಹಿಸುವುದು ನನ್ನ ಹವ್ಯಾಸವಾಗಿತ್ತೇ ಹೊರತು, ಓದುವುದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ನನಗೆ ಪುಸ್ತಕಗಳ ಮೇಲೆ ಪ್ರೀತಿ ಇತ್ತು. ಆದರೆ ಅವುಗಳನ್ನು ಓದುವ ಚಟವಿರಲಿಲ್ಲ.  ಆದರೂ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವುದು ನನ್ನ ಆಸ್ಥೆಯಾಗಿದ್ದರಿಂದ ಕನ್ನಡ ರತ್ನ ಪರೀಕ್ಷೆ ಯಲ್ಲಿ ಉತ್ತೀರ್ಣಳಾಗಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವಾಗ, ನನ್ನ ಸಂಗ್ರಹದಲ್ಲಿ ಹಲವಾರು ವರ್ಷಗಳಿಂದ ಬೆಚ್ಚಗೆ ಕುಳಿತಿದ್ದ ಮಲೆಗಳ ಮದುಮಗಳನ್ನು, ಮೂಕಜ್ಜಿಯನ್ನು ಭೇಟಿಯಾದ ಮೇಲೆ ನನ್ನಲ್ಲಿದ್ದ ‘ಓದುಗ’ ಪ್ರಜ್ಞೆ ಜಾಗೃತವಾಯಿತು. ಈ ಪ್ರಜ್ಞೆ, ನನ್ನಿಂದ ಕುವೆಂಪು, ಶಿವರಾಮ ಕಾರಂತ, ಕೆ.ಪಿ ಪೂರ್ಣಚಂದ್ರ ತೇಜಸ್ವಿ, ಯು.ಆರ್ ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ಪಿ.ಲಂಕೇಶ್ ಅವರ ಪರಿಚಯ ಮಾಡಿಸಿ, ಸಾಹಿತ್ಯದ ರೂಪುರೇಷೆಗಳನ್ನು ಮನಸ್ಸಿನಲ್ಲಿ ಮೂಡಿಸಿತು. ನನಗೆ ಪಿ.ಲಂಕೇಶ್ ಅವರ ಪರಿಚಯ ವಾಗಿದ್ದು ಅವರ ಅವ್ವ ಎಂಬ ಕಾವ್ಯದಿಂದ. ಈ ಕವನದಲ್ಲಿ ಲಂಕೇಶರು, ಕೃಷಿ ಸಂಸ್ಕೃತಿಯ ತಾಯಿ ಮತ್ತು ಮಗುವಿನ ಸಂಬಂಧವನ್ನು ರೂಪಕವಾಗಿ ವರ್ಣಿಸಿದ್ದಾರೆ. ಲಂಕೇಶರ ಅವ್ವ ನಮ್ಮ ನಾಡಿನ  ಸಾವಿರಾರು ಹೆಣ್ಣುಮಕ್ಕಳಂತೆ ಮಣ್ಣಿನ ಮಗಳು. ಅವಳ ಉರುಟು ಬದುಕಿನಂತೆ, ಇಲ್ಲಿ ಬಳಸಿದ ಭಾಷೆಯೂ ಉರುಟು. ಲಂಕೇಶರು ತಮ್ಮ ತಾಯಿಗೆ ಕೊಡುವ ಹೋಲಿಕೆಗಳಂತೂ ಓದುಗನನ್ನು ದಿಗ್ಭ್ರಾಂತಿಸುತ್ತದೆ. ಅವಳ ಕಪ್ಪು ನೆಲಸತ್ವ, ಬನದ ಕರಡಿ, ನೊಂದ ನಾಯಿ, ಪೇಚಾಡುವ ಕೋತಿಯ ಗುಣಗಳು, ಹೆಣ್ಣುಮಗಳೊಬ್ಬಳ ಒಂಟಿ ಹೋರಾಟದ ಬದುಕಿನ ಅನಿವಾರ್ಯ ಲಕ್ಷಣಗಳು. ನನಗೆ ಈ ಕವಿತೆ, ‘ಹೊತ್ತುಹೊತ್ತಿಗೆ ತುತ್ತನಿಟ್ಟು ಸಲುಹಿದಾಕೆ, ನಿನಗೆ ಬೇರೆ ಹೆಸರು ಬೇಕೇ, ಸ್ತ್ರೀ ಎಂದರೆ ಅಷ್ಟೇ ಸಾಕೇ’  ಎಂಬ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಸಾಲುಗಳನ್ನು ನೆನಪಿಸಿತು. ಲಂಕೇಶರು, ತಮ್ಮ ತಾಯಿಯನ್ನು ಕೃತಕವಾಗಿ ಹೊಗಳದೇ ಅಭಿನಂದಿಸಿದ್ದಾರೆ. ನೀರಿನಲ್ಲಿ ಹಿಟ್ಟನ್ನು ಕಲಿಸಿ, ಹದಮಾಡಿ, ತಟ್ಟುತ್ತಾ ಹೋದಂತೆ ಸಿದ್ಧವಾಗುವ ರೊಟ್ಟಿ ತಯಾರಿಸುವುದು ಎಲ್ಲರಿಗೂ ಸಿದ್ಧಿಸುವಂತದಲ್ಲ. ಆದರೆ ಲಂಕೇಶರು ತಟ್ಟಿರುವ ರೊಟ್ಟಿ,ವಿಭಿನ್ನ.  ಈ ಮಹತ್ವದ ಕತೆ, ಮನುಷ್ಯನ ಸೂಕ್ಷ್ಮ ಸಂವೇದನೆಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ರೊಟ್ಟಿಯಲ್ಲಿ ರೈತನ ದುಡಿಮೆ,ಪರಿಶ್ರಮ, ಅಮ್ಮನ ಪ್ರೀತಿ ಇದೆ. ಹಸಿದವರ ಒಡಲನ್ನು ತಣಿಸುವ ಗುಣ ಇದೆ. ಆದರೆ, ಲಂಕೇಶರ ರೊಟ್ಟಿಯಲ್ಲಿ, ಹರಕು ಬಟ್ಟೆಯ ಹಸಿದ ವ್ಯಕ್ತಿ, ವಿಚಿತ್ರ ವ್ಯಕ್ತಿತ್ವದ ಹೆಣ್ಣು, ಪೊಲೀಸ್ ಅವ್ಯವಸ್ಥೆ, ಹಸಿವು, ಭಯ, ಕೋಪ, ಅಸಹಾಯಕತೆಯ ಅಂಶಗಳು ಕಾಣಸಿಗುತ್ತದೆ. ಇನ್ನು ಲಂಕೇಶರನ್ನು ಭೇಟಿಮಾಡಲು ನನಗೆ ಸಿಕ್ಕ ಮತ್ತೊಂದು ಕೊಂಡಿ, ‘ಸಂಕ್ರಾಂತಿ’ ನಾಟಕ. ‘ಕ್ರಾಂತಿ’ ಎಂದರೆ ಸುಗ್ಗಿಯ ಸಂಭ್ರಮ. ಸೂರ್ಯ ತನ್ನ ಪಥವನ್ನು ಬದಲಾಯಿಸುವ ದಿನ. ಅಂತಹ ದಿನದಂದು, ಒಂದು ಸಾಮಾಜಿಕ ವಿನ್ಯಾಸದಲ್ಲಿ, ಅದೂ ದಲಿತರ ಕೇರಿಯಲ್ಲಿ, ಕಾಣುವ ವಿಚಿತ್ರ ತಿರುವು ಈ ನಾಟಕದಲ್ಲಿ ಚಿತ್ರಣಗೊಂಡಿದೆ. ಬೇರೆ ಎಲ್ಲಾ ಲೇಖಕರು ತಮ್ಮನಾಟಕಗಳಲ್ಲಿ ಕ್ರಾಂತಿಯ ಸಾಧ್ಯತೆ ಹೇಳಿದ್ದರೆ, ಲಂಕೇಶರು ಇಲ್ಲಿ ‘some ಕ್ರಾಂತಿ’ಯನ್ನುಂಟು ಮಾಡಿದ್ದಾರೆ. ಹನ್ನೆರಡನೇ ಶತಮಾನದ ಬಸವಣ್ಣನ ನೇತೃತ್ವದ ವಚನಕಾರರ ಚಳವಳಿ ಸಮಾಜದಲ್ಲಿ ನಿಜವಾಗಲೂ ಬದಲಾವಣೆ ತಂದಿತ್ತೇ? ತಂದಿದೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿ, ಸಮಾಜದ ಬದಲಾವಣೆ ಸಂಕೀರ್ಣ ಎಂಬ ಕಹಿ ಸತ್ಯವನ್ನು ಕಕ್ಕುತ್ತದೆ. ಈ ನಾಟಕವನ್ನು ಹರಳಯ್ಯ ಮಧುವರಸರ ಪ್ರಕರಣದಿಂದ  ಸ್ಪೂರ್ತಿ ಹೊಂದಿರುವುದಾಗಿ ಸ್ವತಃ  ಲಂಕೇಶರೇ ಹೇಳಿದ್ದಾರೆ. ‘ಜಾತಿ ಎಂಬ ಸೂತಕ’ ಎಂಬಂತ ಈ ನಾಟಕಕ್ಕೆ ಸಂವಾದಿಯಾಗಿ ‘ಮುಟ್ಟಿಸಿಕೊಂಡವನು’ ಎಂಬ ಇವರದೇ ಮತ್ತೊಂದು ಕತೆಯನ್ನು ಗಮನಿಸಬಹುದು. ಬಸಲಿಂಗನ ಇಲ್ಲಿನ ಜಾತಿ ಧರ್ಮಗಳ ಇಕ್ಕಟ್ಟಿನ ಸ್ಥಿತಿ, ಅಂಧ ಅನಿಸಿಕೆಗಳು, ಈಗಿನ ತಲೆಮಾರಿಗೂ ದಾಟಿಸಿದೆ, ದಾಟಿಸುತ್ತಿದೆ. ಜಾತಿ ಪದ್ಧತಿಯಿಂದ ಕಲುಷಿತಗೊಂಡ ಸಮಾಜ ಸುಧಾರಿಸುವುದು,ಮನುಷ್ಯ ಬಸಲಿಂಗನಂತೆ ಮುಗ್ಧತೆಯಿಂದ ಬದಲಾಗಿ ಜಾತಿ ಎಂಬುದನ್ನು ಧಿಕ್ಕರಿಸಿದಾಗ…ಈ ಕತೆಯನ್ನು ಓದುತ್ತಿರುವಾಗ ನನಗೆ ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಬರುವ ಪಾತ್ರಧಾರಿಯೊಂದು, ತನ್ನ ಮಡಿ ಬಿಟ್ಟು, ಗುಟ್ಟಾಗಿ ಮತ್ತೊಬ್ಬರ ಮನೆಯಲ್ಲಿ ಉಪ್ಪಿಟ್ಟು, ಅವಲಕ್ಕಿ ತಿಂದ ಪ್ರಸಂಗ ನೆನಪಾಯಿತು. ನನ್ನ ಪ್ರಕಾರ ಲಂಕೇಶರು, ವ್ಯಕ್ತಿಯೊಬ್ಬ ಹೇಗೆ ಬದುಕಬಲ್ಲ ಆದರೆ ಹೇಗೆ ಬದುಕುತ್ತಿದ್ದಾನೆ  ಎಂಬುದನ್ನು ತಮ್ಮ ಕಾದಂಬರಿಗಳಲ್ಲಿ,ಕತೆಗಳಲ್ಲಿ, ನಾಟಕಗಳಲ್ಲಿ ಹೇಳುತ್ತಾರೆ.ಇವರ ಕಾದಂಬರಿಗಳು ನನ್ನನ್ನು ಸಕ್ರಿಯವಾಗಿ ಓದಿಸಿಕೊಂಡು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಸಾಮಾನ್ಯವಾಗಿ ನಾ ಕಂಡ ಲಂಕೇಶರು, ದಲಿತ ಲೇಖಕರು ಗ್ರಹಿಸಿರುವುದಕ್ಕಿಂತಲೂ ಹೆಚ್ಚು ಸೂಕ್ಷ್ಮವಾಗಿ ದಲಿತ ಪ್ರಜ್ಞೆಯನ್ನು ಗಮನಿಸುತ್ತಾರೆ. ಆದ್ದರಿಂದ ನನಗೆ ಲಂಕೇಶರನ್ನು ಓದಬೇಕು, ಮತ್ತಷ್ಟು ಓದಬೇಕು ಎಂದೆನಿಸುತ್ತದೆ *********

ಲಂಕೇಶರನ್ನು ಏಕೆ ಓದಬೇಕು? Read Post »

You cannot copy content of this page

Scroll to Top