ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಮ್ಮ ಕವಿ

ನಮ್ಮ ಕವಿ

ವಿಜಯಕಾಂತ ಪಾಟೀಲ ವಿಜಯಕಾಂತ ಪಾಟೀಲರ ಸಾಹಿತ್ಯ ಕೃಷಿಯೂ..! ಅವರು ಪಡೆದ ಹಲವಾರು ಗೌರವಗಳೂ.!! ವಿಜಯಕಾಂತ ಪಾಟೀಲರು ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದವರು… ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕ್ಯಾಸನೂರು, ಶಕುನವಳ್ಳಿ (ಸೊರಬ)ದಲ್ಲಿ ಓದಿದರು… ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿಯನ್ನು ಧಾರವಾಡದಲ್ಲಿ ಮುಗಿಸಿದರು. ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ ಮಾಡಿದರು… ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿಯಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದವರು. ವಿಜಯಕಾಂತ ಪಾಟೀಲರ ಪ್ರಕಟಿತ ಕೃತಿಗಳೆಂದರೆ ೧) ಮಾಸದ ಕಲೆಗಳು (1994), ೨) ಸಲಸಲದ ಪಾಡು (2003), ೩) ನೂರು ಬಣ್ಣದ ಕಣ್ಣು (2012), ೪) ಹೌದು ನಾನು ಕೌದಿ (2013), ೫) ಇಂತಿ ನದಿ (20050) ಕವನ ಸಂಕಲನ… ಅವರ ಪ್ರಬಂಧಗಳು ವಜನುಕಟ್ಟು (2005). ಮಕ್ಕಳ ಸಾಹಿತ್ಯವು ಅಮ್ಮ ಅಂದ್ರೆ ಅಷ್ಟಿಷ್ಟಲ್ಲ-ಕವಿತೆಗಳು (2014). ಹಕ್ಕಿಗಳ ಸ್ವಾತಂತ್ರ್ಯೋತ್ಸವ (2016). ಅವರ ಇತರೆ ಕೃತಿಗಳೆಂದರೆ ಕನಸಿನ ಹೊಸ ಅಧ್ಯಾಯ (ಸಂಪಾದಿತ ಕತೆಗಳು-2005 ), ಒಂದು ಹಿಡಿ ಮುತ್ತು (ಸಂದರ್ಶನ ಲೇಖನಗಳು- 2008), ಸದಾ ಹರಿವು ಕನ್ನಡ (ಭಾವಗೀತೆಗಳ ಧ್ವನಿಮುದ್ರಿಕೆ-2015). ಅವರಿಗೆ ಹಲವಾರು ಪ್ರಶಸ್ತಿ ಬಹುಮಾನ ಹಾಗೂ ಗೌರವ ಪಡೆದರು ವಿಜಯಕಾಂತ ಪಾಟೀಲರು. ಅವುಗಳು ಹೀಗಿವೆ– ಬೇಂದ್ರೆ-ಅಡಿಗೆ ಕಾವ್ಯ ಪ್ರಶಸ್ತಿ, ಕಯ್ಯಾರ ಕಿಞ್ಞಣ್ಣ ರೈ ಕಾವ್ಯ ಪ್ರಶಸ್ತಿ, ಸಂಕ್ರಮಣ, ಸಂಚಯ, ಪ್ರಜಾವಾಣಿ, ಜಿಲ್ಲಾ ಕಸಾಪ ಮೊದಲಾದವುಗಳು ಏರ್ಪಡಿಸಿದ ಕಾವ್ಯ ಸ್ಪರ್ಧೆಯ ಬಹುಮಾನಗಳೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ… ಹಾನಗಲ್ ತಾಲ್ಲೂಕು ಮೊದಲ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷತೆ(2011)ಯನ್ನೂ ವಹಿಸಿದ್ದರು… ಈಗವರ ಕೃತಿಗಳ ಬಗೆಗೆ ನೋಡೋಣ– ಈ ವರೆಗಿನ ವಿಜಯಕಾಂತ ಪಾಟೀಲರ ಕೃತಿಗಳ ಕಿರು ಪರಿಚಯ… ೧.ಮಾಸದ ಕಲೆಗಳ ಈ ಮೊದಲ ಸಂಕಲನದ ಮೂಲಕ ಭವಿತವ್ಯದಲ್ಲಿ ಕಾವ್ಯ ಹೊರಳಿಕೊಳ್ಳಬಹುದಾದ ಮಾನವೀಯ,ಸಾಮಾಜಿಕ ನಡೆಯನ್ನು ಕವಿ ಸ್ಪಷ್ಟಪಡಿಸಿಕೊಂಡಿದ್ದಾರೆ. ಬಂಡಾಯ ಮನೋಧರ್ಮಕ್ಕನುಗುಣವಾಗಿ ಅರಳಿಕೊಂಡ ಇಲ್ಲಿನ ಹಿರಿಗವನಗಳು ಮತ್ತು ಕಿರುಗವಿತೆಗಳು ಬದುಕು ಬವಣೆಗಳ ಒಡನೆಯೇ ಪ್ರೀತಿಯೆಡೆಗೂ ತನ್ನ ಚಿತ್ತವನ್ನು ಹರಿಸಿವೆ. ಇಲ್ಲಿ ಕಾವ್ಯಬಂಧದ ಕಡೆಗೂ ಕವಿ ಗಮನ ಹರಿಸಿರುವುದು ಸ್ತುತ್ಯಾರ್ಹ ಸಂಗತಿ ೨. ಸಲಸಲದ ಪಾಡು ಈ ಕೃತಿಯು ಪ್ರಕೃತಿಯ ಪಲ್ಲವಿಸುವಿಕೆ, ಬರದ ಬಸವಳಿಕೆ, ಹಿರಿಯ ತಲೆಮಾರಿನ ಹಳಹಳಿಕೆ, ಹೊಸ ಹರೆಯದ ಹುರುಪು ಹೊಳೆದ ಕೆರಳಿಕೆಗಳ ಸಾಹಿತ್ಯರೂಪ; ಸಾಲು ಸಾಲುಗಳ ನಡುವೆ ಮಿಂಚಿದ ಭಾವ ಗೊಂಚಲು; ಪ್ರಕೃತಿಯಂತೆ ಕವಿಯ ಚಿತ್ತ ಹರಿದಿರುವುದು ಈ ಕಾವ್ಯಗುಚ್ಛದ ಹೆಗ್ಗಳಿಕೆ. ನೆನಪು ಮತ್ತು ಗಾಯದ ಚೆಂದವೂ ಇಲ್ಲಿ ಅನುರಣನಗೊಂಡಿದೆ ೩. ನೂರು ಬಣ್ಣದ ಕಣ್ಣು:ಈ ಸಂಕಲನವು ಮಳೆ ಬಿದ್ದ ನೆಲದಿಂದ ಎದ್ದ ಹುಡಿಯ ಘಮಲು; ಸ್ವಲ್ಪ ಸ್ವಲ್ಪವೇ ಮೂಗಿಗಡರುವ ಅಲ್ಲೆಲ್ಲೋ ಅರಳಿದ ಹೂವಿನ ಪರಿಮಳ; ಅಷ್ಟೂ ನೋವಸಂಕಟವನ್ನು ಒಟ್ಟು ಮಾಡಿ ಹೊರಹಾಕಿ ನಿಡುಸುಯ್ಯುವ ಉಸಿರ್ಗರೆತ; ಎಲ್ಲ ಹೇಳಿಯೂ ಹೇಳದಂತಿರುವ ಒಂದು ಮೌನದ ಜೊತೆಗಿನ ಸಂವಾದವಾಗಿ ಕಾಣುತ್ತದೆ. ನಿಜದ ಬದುಕಿನಿಂದ ವಿಮುಖವಾಗದ ಕವಿತೆಗಳ ಅಪರೂಪದ ಸಂಗ್ರಹ ಈ ನೂರು ಬಣ್ಣದ ಕಣ್ಣು…. ೪. ಹೌದು ನಾನು ಕೌದಿ: ಇಲ್ಲಿ ಕವಿಯು ‘ಸ್ವಕಾವ್ಯ ಹಾದಿ’ಯ ತಿರುವಿನಲ್ಲಿದ್ದಾರೆ. ಪದಗುಣಿತಾರ್ಥ,ಹೊಸ ಅರ್ಥಗಳ ನೆಗೆತ ಹಾಗೂ ಸಂಯೋಜನೆಯ ಒಳದನಿಗಳು ಇಲ್ಲಿ ಓದಿನ ಪುಳಕಕ್ಕೆ ಒಳಮಾಡುತ್ತವೆ. ತಮ್ಮ ಸಹಜಭಾಷಾಸಾಮರ್ಥ್ಯದ ಮೂಲಕ,ಸಮಕಾಲೀನ ಕಾವ್ಯದಬೀಸನ್ನು ಆವಿಷ್ಕರಿಸಿಕೊಂಡು ಬರೆಯುತ್ತಿರುವ ಕವಿಯ ಕಾವ್ಯ ಓದಿನ ಖುಷಿಯ ಜೊತೆಗೆ ಕಾವ್ಯ ನಿಜಾನುಭವದ ಸಂವೇದನೆಗಳನ್ನು ಚಾರ್ಜ್ ಮಾಡುವ ಶಕ್ತಿಯವು. ಸಾಮಾಜಿಕ ಮತ್ತು ಸೌಂದರ್ಯ ಪ್ರಜ್ಞೆಗಳೆರಡನ್ನೂ ಏಕೀಭವಿಸಿ ನೋಡುವ ಪದ್ಯಗಳು ಇಲ್ಲಿವೆ… ೫. ಇಂತಿ ನದಿ ಇಲ್ಲಿ ಕವಿಯದು ಲೋಕವನ್ನು ಒಳಬಿಟ್ಟುಕೊಳ್ಳುವಲ್ಲಿ, ಅದಕ್ಕೆ ಸ್ಪಂದಿಸುವ ಕ್ರಮದಲ್ಲಿ ಮುಕ್ತ ಹಾಗೂ ಘರ್ಷಣಾತ್ಮಕ ಹಾದಿ. ಹಾಗೆಯೇ ಮಾನವೀಯ ಅಂತಃಕರಣದಿಂದ ಸುತ್ತಣ ಸಂಗತಿಗಳನ್ನು ಪರಿಭಾವಿಸುವ ಮತ್ತು ಪಡಿಮಿಡಿವ ಪ್ರಗತಿಪರ ಮನಸ್ಸು ಈ ಕವಿಯದು.ನವ ಬಂಡಾಯದ ಅಸ್ಪಷ್ಟ ಚಹರೆಗಳು ಇಲ್ಲಿನ ಕವಿತೆಗಳಲ್ಲಿ ಗೋಚರಿಸುತ್ತವೆ… ೬. ಬೆವರ ಬಣ್ಣ: ಜೀವಪರ ಧೋರಣೆಯ ಪ್ರತೀಕವಾಗಿ ಬೆವರಿನ ಬಣ್ಣದ ಹುಡುಕಾಟ ಇಲ್ಲಿ ನಡೆದಿದೆ. ಚುರುಕು ಭಾಷೆ, ನಡೆಯ ಜೊತೆ ಹದವರಿತ ಅಭಿವ್ಯಕ್ತಿಯ ಮೂಲಕ ಕಾವ್ಯದೊಟ್ಟಿಗೆ ಕವಿ ಈ ಸಂಕಲನದಲ್ಲೂ ಸಾಗಿದ್ದಾರೆ.ನೆಲಮೂಲ ಸಂಬಂಧವನ್ನು ಗಾಢವಾಗಿ ಉಳಿಸಿಕೊಂಡ ಕವಿಯ ಕಾವ್ಯದ ಧೋರಣೆ ಜೀವಪರ,ನಿಸರ್ಗಪರವಾಗಿ ಇದ್ದಷ್ಟೇ ಆಳದಲ್ಲಿ ಅದು ಜನಪರ ನಿಲುವಿನಲ್ಲಿ ಅರಳಿದೆ… ಹೀಗೆ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ವಿಜಯಕಾಂತ ಪಾಟೀಲರು… ** –ಕೆ.ಶಿವು.ಲಕ್ಕಣ್ಣವರ

ನಮ್ಮ ಕವಿ Read Post »

ಕಾವ್ಯಯಾನ

ಕಾವ್ಯಯಾನ

ಶವದಮಾತು ಪ್ಯಾರಿಸುತ ಶವದ ಮನೆಮುಂದೆ ನಿರರ್ಥಕಭಾವದ ಬೆಂಕಿಮಡಿಕೆಯೊಂದು ಹೊಗೆಯ ಉಗುಳುತಾ ಕುಳಿತಿದೆ…! ಕಾಯುತ್ತಿದ್ದದ್ದು ಯಾರಿಗೆಂದು ಬಲ್ಲಿರಾ…? ಚಟ್ಟವೊಂದು ಕಾಯುತ್ತಿದ್ದದ್ದು ನನಗೆ ಮಾತ್ರ ಅಲ್ಲವೇ..? ಅಂತ್ಯಯಾತ್ರೆಗೆ ಬಿಳ್ಕೊಡಲು ನಮ್ಮವರು ಬರುವುದು ಯಾರಾದರೂ ಕಂಡಿರಾ..? ಬರುವವರೆಲ್ಲರೂ ಮನೆವರೆಗೆ ಮಾತ್ರ ಬಂದವರೆಲ್ಲ ಮಸಣದ ಮಧ್ಯನಿಂತು ಮರಳಿ ಹೋಗುವವರು ಎತ್ತೋವರೆಗೂ ಅವರು ಬರ್ತಾರೆ ಇವರು ಬರ್ತಾರೆ, ಎತ್ತಿದ ಮೇಲೆ ಅವರು ಬಂದಿದ್ದಾರೆಯೇ…?ಇವರು ಬಂದಿದ್ದಾರೆಯೇ…? ಸ್ಮಶಾನದ ಹಾದಿ ಮಧ್ಯ ಅವರು ಬರುವವರಿದ್ದರು ಇವರು ಬರುವವರಿದ್ದರು ಚಿತೆಮೇಲೆ ಇಟ್ಟಾಗ ಅವರು ಬರಬೇಕಿತ್ತು ಇವರು ಬರಬೇಕಿತ್ತು ಸುಡಲು ಆರಂಭಿಸುತ್ತಿದಂತೆ ಅವರು ಬರಲೇ ಇಲ್ಲ ಇವರು ಬರಲೇ ಇಲ್ಲ… ಅವರೆಲ್ಲ ಯಾರು ಕಷ್ಟದಲ್ಲಿ ನೆಂಟರಾದವರಾ..? ಬಂಧುಬಳಗ ಎನಿಸಿದವರಾ..? ಅಣ್ಣತಮ್ಮಂದಿರಂತೆ ಇದ್ದವರಾ…? ಜೀವ ಕೊಟ್ಟು ಜೀವ ಉಳಿಸಲು ಹೆಣಗಿದವರಾ…? ಅಲ್ಲವೇ ಅಲ್ಲ ..! ನಮ್ಮವರು ಯಾರು ಕಾಣಲೇ ಇಲ್ಲ ಕಂಡವರೆಲ್ಲರು ನಮ್ಮಂತೆ ಇದ್ದವರು… *******

ಕಾವ್ಯಯಾನ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ನಾನೇಕೆ ಓದುತ್ತೇನೆ ಈ ಚರ್ಚೆಯ ಹಿನ್ನೆಲೆ ಮತ್ತು ವಿವರಗಳು “ಲಂಕೇಶರನ್ನು ನಾನೇಕೆ ಓದುತ್ತೇನೆ?” ಸ್ಪರ್ಧೆಯ ಫಲಿತಾಂಶ : ಸಹೃದಯರೇ, ‘ಮೈಸೂರು ಗೆಳೆಯರು’ ‘ಲಂಕೇಶ್ ನೆನಪು’ ಕಾರ್ಯಕ್ರಮದ ಭಾಗವಾಗಿ‘ನಾನೇಕೆ ಲಂಕೇಶರನ್ನು ಓದುತ್ತೇನೆ?’ ಬರಹ ಸ್ಪರ್ಧೆಯನ್ನು ಏರ್ಪಡಿಸಿದ್ದೆವು. ಈ ಸ್ಪರ್ಧೆಗೆ ಒಟ್ಟು ಆರು ಜನ ತಮ್ಮ ಬರಹಗಳನ್ನು ಕಳುಹಿಸಿದ್ದರು. ಈ ಬರಹಗಳನ್ನು ಓದಿ,ಅವುಗಳಲ್ಲಿ ಒಂದನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಎಂದು (ಬರಹಗಾರರ ಹೆಸರನ್ನು ತೀರ್ಪುಗಾರರಿಗೆ ನೀಡದೆ, ನಾವು ಸ್ಪರ್ಧಿ-1, ಸ್ಪರ್ಧಿ -2 ಎಂದಷ್ಟೆ, ಬರಹದಲ್ಲಿ ಹಾಕಿ ಕಳುಹಿಸಿದ್ದೆವು) ನಾಡಿನ ಹಿರಿಯ ಕವಿಗಳಲ್ಲಿ ಒಬ್ಬರಾದ ಶ್ರೀಮತಿ ಎಂ. ಆರ್.ಕಮಲ ಮೇಡಂ ಅವರನ್ನು ನಾವು ಕೇಳಿಕೊಂಡಾಗ, ಅವರು ಖುಷಿಯಿಂದ ಈ ಕೆಲಸ ಮಾಡಿ ಕೊಡುವುದಾಗಿ, ಒಪ್ಪಿಕೊಂಡು ನಾವು ಕೇಳಿಕೊಂಡಿದ್ದ ಅವಧಿಯ ಒಳಗೆ, ಬರಹಗಳನ್ನು ಓದಿ, ಆ ಆರು ಬರಹಗಳಲ್ಲಿ ಎರಡನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ತೀರ್ಪುಗಾರರಿಗೆ ನಾವು ಬಹುಮಾನಕ್ಕೆ ಒಂದು ಬರಹವನ್ನು ಆಯ್ಕೆ ಮಾತ್ರ ಮಾಡಿ ಎಂದಿದ್ದೆವು. ಆದರೆ ಮೇಡಂ ಅವರು ಈ ಬರಹಗಳನ್ನು ಓದಿ ಮತ್ತೊಂದು ಬರಹದ ಮೌಲ್ಯದ ಬಗೆಗೂ ಒಳ್ಳೆಯ ಮಾತುಗಳನ್ನು ಹೇಳಿ, ಸಾಧ್ಯವಾದರೆ ಅದಕ್ಕೂ ಬಹುಮಾನ ನೀಡಿ ಎಂದಿದ್ದಾರೆ. ತೀರ್ಪುಗಾರರ ಮಾತಿಗೆ ಆಯೋಜಕರಾದ‘ ಮೈಸೂರು ಗೆಳೆಯರು’ ಸಹಮತ ಸೂಚಿಸಿ, ತೀರ್ಪುಗಾರರ ಅಪೇಕ್ಷೆಯಂತೆ ಮತ್ತೊಂದು ಬಹುಮಾನವನ್ನು ನೀಡೋಣ ಎಂದು ತೀರ್ಮಾನಿಸಿ.ಮತ್ತೊಂದು ತೀರ್ಪುಗಾರರ ಮೆಚ್ಚುಗೆಯ ಬಹುಮಾನವನ್ನು ನೀಡುತ್ತಿದ್ದೇವೆ. ಈ ಸ್ವರ್ಧೆಗೆ ತಮ್ಮ ಬರಹಗಳನ್ನು ಕಳುಹಿದ್ದವರು ಒಟ್ಟು ಆರು ಜನ. ಸ್ಪರ್ಧಿ -5 ಸುಪ್ರಿಯಾ, ಬೆಂಗಳೂರು ಸ್ಪರ್ಧಿ -4 ನವೀನ್ ಮಂಡಗದ್ದೆ. ಸ್ಪರ್ಧಿ -3 ಶ್ರೀಮತಿ ರಾಜೇಶ್ವರಿ ಭೋಗಯ್ಯ ಸ್ಪರ್ಧಿ -6 ನಾಗಸ್ವಾಮಿ ಮುತ್ತಿಗೆ, ಮೈಸೂರು. ಸ್ಪರ್ಧಿ -2 ಬಸವರಾಜು ಕಹಳೆ ಸ್ಪರ್ಧಿ -1 ಧನಂಜಯ್ ಎನ್ ಈ ಲೇಖನಗಳನ್ನು ಓದಿ, ಶ್ರೀ ಮತಿ ಎಂ.ಆರ್ ಕಮಲ ಮೇಡಂತಮ್ಮ ತೀರ್ಪನ್ನು ಹೀಗೆ ನೀಡಿ, ಎರಡು ಮಾತುಗಳನ್ನು ಬರೆದು ಕಳುಹಿಸಿದ್ದಾರೆ.ಇದು ಅವರ ತೀರ್ಪು ಮತ್ತು ಮಾತುಗಳು. Spardhi-1 (first prize)Spardhi-3 (2nd prize) ಒಂದೇ ಬಹುಮಾನ ಎಂದು ತಿಳಿದಿದೆ…ಆದರೂ ಕಳಿಸಿದ್ದೇನೆ… ಆಯ್ಕೆ ನಿಮಗೆ ಬಿಟ್ಟಿದ್ದು… ಒಬ್ಬ ಓದುಗ ಅನೇಕ ಲೇಖಕರನ್ನು ಓದುತ್ತ, ವಿಕಾಸಗೊಳ್ಳುತ್ತ ಪಕ್ವತೆಯನ್ನು ಪಡೆಯುವುದು ಓದಿನ ಬಹಳ ಮುಖ್ಯ ಕ್ರಮವಾದ್ದರಿಂದ ಮೊದಲು ಎಂದು ಆರಿಸಿದ್ದೇನೆ. ಎರಡನೇ ಬಹುಮಾನಕ್ಕೆ ಆಯ್ಕೆಯಾದವರು ಲಂಕೇಶ್ ಅವರನ್ನು ಗಂಭೀರವಾಗಿ ಓದಿದ್ದಾರೆ ಅನ್ನಿಸಿತು..———- ಈ ಸ್ವರ್ಧೆಯಲ್ಲಿ ಬಹುಮಾನ ಪಡೆದಧನಂಜಯ್ ಎನ್ ಮತ್ತು ಶ್ರೀ ಮತಿ ರಾಜೇಶ್ವರಿ ಭೋಗಯ್ಯ ಮೇಡಂ ಅವರಿಗೆ ಮೈಸೂರು ಗೆಳೆಯರ ಅಭಿನಂದನೆಗಳು ಮತ್ತು ನಾಳೆ ಮೈಸೂರಿನ ಕಲಾಮಂದಿರ ಆವರಣದಲ್ಲಿ ನಡೆಯಲಿರುವ ” ಲಂಕೇಶ್ ನೆನಪು” ಕಾರ್ಯಕ್ರಮದಲ್ಲಿ ವಿಜೇತರಿಗೆ ಪುಸ್ತಕ ಬಹುಮಾನವನ್ನು ನೀಡಲಾಗುವುದು.ವಿಜೇತರನ್ನು ಕಾರ್ಯಕ್ರಮಕ್ಕೆ ಮೈಸೂರು ಗೆಳೆಯರು ಪ್ರೀತಿಯಿಂದ ಮತ್ತೊಮ್ಮೆ ಈ ಮೂಲಕ ಆಹ್ವಾನ ನೀಡುತ್ತಿದ್ದೇವೆ. * ಮೊದಲ ಬಹುಮಾನ : 1500 ರೂ ಮೌಲ್ಯದ ಪುಸ್ತಕಗಳು.* ತೀರ್ಪುಗಾರರ ಎರಡನೇ ಬಹುಮಾನ : 500 ರೂ ಮೌಲ್ಯದ ಪುಸ್ತಕಗಳು. * ಈ ಸ್ವರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ “ಮೈಸೂರು ಗೆಳೆಯರು” ಕಡೆಯಿಂದ ಅನಂತ ಧನ್ಯವಾದಗಳು. * ಬರಹಗಳನ್ನು ಓದಿ, ಒಂದನ್ನು( ಎರಡನ್ನು) ಆಯ್ಕೆ ಮಾಡಿ ಕೊಟ್ಟ ಎಂ ಆರ್. ಕಮಲ ಮೇಡಂ ಅವರಿಗೆ ” ಮೈಸೂರು ಗೆಳೆಯರು” ಕಡೆಯಿಂದ ಪ್ರೀತಿಯ ಅನಂತ ಧನ್ಯವಾದಗಳು. ——ಮೈಸೂರು ಗೆಳೆಯರು ಈ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾದವರ ಬರಹಗಳನ್ನು ಸಂಗಾತಿ ನಾಳೆಯಿಂದ ಸರಣಿ ರೂಪದಲ್ಲಿ ಪ್ರಕಟಿಸಲಿದೆ.ನಮ್ಮ ಓದುಗರು ಈ ಬರಹಗಳನ್ನುಓದುವುದು ಮಾತ್ರವಲ್ಲದೆ ಇತರೆಯವರಿಗು ಹಂಚಿ, ಲಂಕೇಶರ ವಿಚಾರದಾರೆಗಳನ್ನುಪಸರಿಸಬೇಕೆಂದು ಕೋರುತ್ತೇನೆ-ಸಂಪಾದಕ

ಲಂಕೇಶರನ್ನು ಏಕೆ ಓದಬೇಕು? Read Post »

ಕಾವ್ಯಯಾನ

ಕಾವ್ಯಯಾನ

ಧಿಕ್ಕಾರವಿರಲಿ                            ಗೌರಿ.ಚಂದ್ರಕೇಸರಿ ನೇಣಿನ ಕುಣಿಕೆಯ ನೆನೆದು ಝಲ್ಲನೆ ಬೆವರುವ ನೀವು ಎರಡು ಕ್ಷಣದ ನೋವಿಗೆ ಕೊರಳೊಡ್ಡಲಾರದ ರಣ ಹೇಡಿಗಳು ಅರಳಿ ನಿಂತು ನಸು ನಗುವ ಹೂವನ್ನು ಹೊಸಕಿ ಹಾಕುವಾಗಿನ ಭಂಡತನ ಯಾರದೋ ಮನೆಯ ನಂದಾ ದೀಪವ ನಂದಿಸಿ ಗಹ ಗಹಿಸಿ ನಕ್ಕು ನಲಿದ ನಿಮ್ಮ ಗುಂಡಿಗೆಯ ಕುದಿ ರಕ್ತ ಗಲ್ಲು ನೆನೆದು ಗಡ್ಡೆ ಕಟ್ಟಿತೆ? ಹೆಣ್ಣಿನಲ್ಲಿ ತಾಯ ತಂಗಿಯರ ಕಾಣದ ನೀವು ಹುಣ್ಣೊಳಗಿನ ಹುಳುಗಳು ಯಾರದೋ ತೋಟದ ಸುಮಗಳನು ಹೊಸಕಿ ಹಾಕಿ ಅಟ್ಟಹಾಸದ ಮೀಸೆಯ ಹುರಿಗೊಳಿಸುವ ನೀವೆಂದರೆ ಕೊರಳಿಗೆ ಬೀಳುವ ಹಗ್ಗಕ್ಕೂ ಹೇಸಿಗೆ ನಿಮ್ಮ ಸಾವಿನ ದಿನವನ್ನು ನೆನೆ ನೆನೆದು ಸುರಿಸುವ ನಿಮ್ಮವರ ಕಣ್ಣೀರಿಗೆ, ನೇಣು ಬೇಡವೆಂಬ ಅವರ ಕೂಗಿಗೆ ಹೆಣ್ಣು ಹೆತ್ತವರದೊಂದು ಧಿಕ್ಕಾರವಿರಲಿ *******

ಕಾವ್ಯಯಾನ Read Post »

You cannot copy content of this page

Scroll to Top