ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಹನಿಮೂನ್ ಗಿರೀಶ ಜಕಾಪುರೆ, ಮೈಂದರ್ಗಿ ಹನಿಮೂನ್ ಈ ಬಿಕನಾಶಿ ಚಂದ್ರನಿಗೆ ಬುದ್ಧಿಯಿಲ್ಲ ಸುರಿಯುತ್ತಾನೆ ವಿರಹದ ಅಗ್ನಿಗೆ ತುಪ್ಪ..! ಲಾಲ್‌ಬಾಗ್‌ಗೆ ಹೊರಟಿದ್ದವು  ಎರಡು ಹಕ್ಕಿಗಳು ಹನಿಮೂನ್‌ಗೆಂದು  ಸಮುದ್ರತೀರದ ಕಾಂಕ್ರೀಟ್ ಕಾಡಿನಿಂದ, ಒಂದೇಸಮನೆ ಧಾವಿಸುತ್ತಿತ್ತು ಎದೆಯಲ್ಲಿ ನಿಗಿನಿಗಿ ಕೆಂಡವಿರಿಸಿಕೊಂಡು ಉಸಿರಿನಿಂದ ಬಿಸಿಹೊಗೆ ಚಿಮ್ಮುವ ಉಗಿಬಂಡಿ.., ನಾನೋ ಅಲೆಮಾರಿ, ಹತ್ತಿದೆ ರೈಲು ಅವಳು ನನ್ನ ತೊರೆದುಹೋದ ನಿಲ್ದಾಣದಲಿ ಕಾಲಿಡಲೂ ಅವಕಾಶವಿರದಷ್ಟು ರಶ್ಶು ಆದರೂ ನನಗೆ ರೈಲಿನ ಮೇಲೆ ಏನೋ ಕ್ರಶ್ಶು ಅವರು ಇಬ್ಬರು, ಎರಡು ಬರ್ಥಗಳು ನಾನು ಎಂದಿನಂತೆಯೇ ವೇಟಿಂಗ್ ಲಿಸ್ಟು..! ಗಮನಿಸಿದೆ.. ಅವಳ ಅಂಗೈ ಮದರಂಗಿ ಚೂರೂ ಮಾಸಿಲ್ಲ ಅವನ ಕಣ್ಣಲಿ ಮಿಲನದ ಉಮೇದು.. ಆದರೂ ಯಾವುದೋ ಸಣ್ಣ ವಿಷಯ, ಪುಟ್ಟ ತಕರಾರು ಹುಸಿ ಹುಸಿ ಮುನಿಸು, ಏನೋ ಸ-ವಿರಸ..! ಈ ಕೊರೆಯುವ ಚಳಿಯ ಎದುರಿಗೆ  ಎಷ್ಟು ಹೊತ್ತು ನಿಲ್ಲುತ್ತದೆ ವಿರಹ?..? ಚುಕ್ಕೆಗಳು ಢಾಳಾಗುವ ಹೊತ್ತಿಗೆ ಆತ : ‘ಸರ್, ನೀವು ಮೇಲಿನ ಬರ್ಥಲಿ ಮಲಗಿ ನಾವಿಬ್ಬರೂ ಒಂದರಲ್ಲಿ ಅಡಜೆಸ್ಟ್ ಆಗ್ತೀವಿ’ ಎಂದ ನನಗೂ ಅದೇ ಬೇಕಿತ್ತು ಕಾಲು ಚಾಚಿದರೆ ಸಾಕಿತ್ತು ಇಡೀರಾತ್ರಿ ಆ ಹಕ್ಕಿಗಳು ತಬ್ಬಿ ಮಲಗಿದ್ದವು ಕೆಳಗಿನ ಬರ್ಥನಿಂದ ಹೊಮ್ಮುತ್ತಿತ್ತು  ಹಿತವಾದ ಶಾಖ..! ಅಗ್ಗಿಷ್ಟಿಕೆಯ ಝಳ..! ಹೌದು, ನನ್ನ ಕನಸಲ್ಲೂ ಬಂದಿದ್ದಳು ಅವಳು ನಾನು ಮುನಿದು, ಮರೆತು ಬಂದಿದ್ದ ಕಶ್ಮೀರಿ ಶಾಲು ಕೊಟ್ಟು ಹೋದಳು ಇಡೀ ರಾತ್ರಿಗಾಗಿ ಮುತ್ತು ಬಿಟ್ಟುಹೋದಳು ಬೆಳಗೆದ್ದು ಕಣ್ಣುಜ್ಜುತ್ತ ನಾನು ಆ ಹಕ್ಕಿಗಳಿಗೆ ಹೇಳುವುದಕ್ಕೂ ಮುನ್ನವೇ ಅವೇ ಒಕ್ಕೊರಲಿನಿಂದ ಮಧುವಾಗಿ ಉಲಿದವು ‘ಥ್ಯಾಂಕ್ಸ್’ ಈಗ ಗೊಂದಲದಲ್ಲಿದ್ದೇನೆ ನಾನು ಹೇಳಬೇಕು ಎಂದಿದ್ದ ಥ್ಯಾಂಕ್ಸ್ ಈಗ ಯಾರಿಗೆ ಹೇಳಲಿ? ಮುಗಿಲಲಿ ನೋಡಿದರೆ ಚಂದ್ರನೂ ಇಲ್ಲ..! ಥೂ.. ಈ ಬಿಕನಾಶಿ ಚಂದ್ರನಿಗೆ ಬುದ್ಧಿಯೇ ಇಲ್ಲ ಸುರಿಯುತ್ತಾನೆ ವಿರಹದ ಅಗ್ನಿಗೆ ಜೇನು-ತುಪ್ಪ..!..! **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನ ಮತ್ತು ಕವಿ ಕೊಟ್ರೇಶ್ ಅರಸಿಕೆರೆ ಅದು ಹಾರಾಡುವ ರೀತಿಗೆ, ರೆಕ್ಕೆಗಳಿವೆ ಎಂಬ ಖುಷಿಗೆ , ಮನ ಸೋತಿದ್ದೆ ಆ ಚಿಟ್ಟೆಗೆ! ಇತ್ತೀಚೆಗೆ….. ಯಾಕೋ ಕಿರಿಕಿರಿ ಎನಿಸಿತು ಭಾರೀ ಶಬ್ದ ಎಂದೆನಿಸಿತು; ಮೌನ ನಾಶಮಾಡುತ್ತಿದೆ ಅನಿಸಿತು ಈಗ ಸರಿಯಾಗಿ ನೋಡಲೆತ್ನಿಸಿದೆ ಚಮಕ್ ಬೆಳಕಿಗೆ ಅದು ಆಕರ್ಷಿತ ಆಗುತ್ತಿತ್ತು! ನೋಡಿದೆ…ಪರಿಶೀಲಿಸಿದೆ…ಅಯ್ಯೋ ಅದು ಏರೋಪ್ಲೇನ್ ಚಿಟ್ಟೆ!! ಮೌನ ಅರಿಯದ ಕವಿಯೊಬ್ಬ ಕವಿಯೇ? ವರ್ತಮಾನಕ್ಕೆ ಸ್ಪಂದಿಸುವ ನೆಪ ಎಷ್ಟೆಲ್ಲಾ ಕೂಳತನ! ಹಡೆದವ್ವನ ಝಾಡಿಸಿ ಒದೆಯುವ ದುಷ್ಟತನ!! ಆಗ…. ಕವಿಯೊಬ್ಬ ಹಾಡಿದನೆಂದರೆ ದೇಶವೇ ರೋಮಾಂಚನ; ರೋಮ ರೋಮಗಳಲ್ಲಿ ದೇಶ ಪ್ರೇಮ! ದಾಂಪತ್ಯ, ಸಹಜೀವನ ಪವಿತ್ರ ಪ್ರೇಮ! ಈಗ…. ವಂಚನೆ,ಕೂಳತ್ವ…. ರೋಮ ರೋಮಗಳಲ್ಲಿ ಅಪವಿತ್ರ ಪ್ರೇಮ,ಅನೈತಿಕತೆ ಮೌನವೆಲ್ಲಾ ಮಲಗಿ ಬಿಟ್ಟಿದೆ; ತಣ್ಣನೆಯ ಶವದ ಹಾಗೆ! ಕವಿ ಅರಚುತ್ತಿದ್ದಾನೆ…. ರಾಕ್,ಪಾಪ್… ನಾಚಿಕೆ ಬಿಟ್ಟಂತೆ ದೇಹವನ್ನೆಲ್ಲಾ ಹರಾಜಿಗಿಟ್ಟಿದ್ದಾನೆ ತನ್ನ ತಾ ಮಾರಿ ಕೊಳ್ಳುತ್ತಾ……! ಸದ್ದಿಗೆ ಇಲ್ಲಿ ಯಾರೂ ಬೆಲೆ ಕೊಡರು ಎಂಬುದ ಮರೆತು! ಇಥದನೆಲ್ಲಾ ಧಿಕ್ಕರಿಸಿಯೂ ಅಲ್ಲಲ್ಲಿ…. ಮೌನ,ಕಾಯಕ ಅರಿತ ಚಿಟ್ಟೆಗಳು ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುತ್ತಾ,ಕೊಡುತ್ತಾ ತೆಗೆದು ಕೊಳ್ಳುತ್ತಾ ಪವಿತ್ರ ಪ್ರೇಮ ಬಂಧನ ನಿರ್ಮಿಸುತ್ತಿವೆ ಸದ್ದಿಲ್ಲದೆ! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೆರಳನ್ನೊಮ್ಮೆ ಬಿಚ್ಚಿಬಿಡು ವಿಜಯಶ್ರೀ ಹಾಲಾಡಿ ಆ ಬೆಚ್ಚನೆ ರಾತ್ರಿಗಳಲ್ಲಿಈ ತಣ್ಣನೆ ಹಗಲುಗಳಲ್ಲಿನಿನ್ನ ಪಾದಕ್ಕೆ ತಲೆಯೂರಿಮಲಗಿದ ಬೆಕ್ಕನ್ನೊಮ್ಮೆನೋಡು …. ಕರುಣೆಯ ಕತ್ತಲುಹಣ್ಣುತುಂಬಿದ ಮರಹಗುರ ತುಂಬೆ ಹೂ..ಹೆರಳನ್ನೊಮ್ಮೆ ಬಿಚ್ಚಿಬಿಡು ಸುತ್ತುವ ಭೂಮಿಯನ್ನುನಿಲ್ಲಿಸು ಅಥವಾಮತ್ತಷ್ಟು ವೇಗವಾಗಿಸುತ್ತಿಸುಹೊಸ ಹೆಜ್ಜೆಕಚ್ಚಿಕೊಳ್ಳಬೇಕಿದೆ ನಿಹಾರಿಕೆ ಉಲ್ಕೆಗಳುಸಾಗರ ಸುನಾಮಿಗಳುಅಪ್ಪಳಿಸಲಿಇಲ್ಲವೇಬ್ರಹ್ಮಾಂಡದಾಚೆಕರೆದೊಯ್ಯಲಿ …. ಮಧುಶಾಲೆಗೂ ನನಗೂಸಂಬಂಧವಿಲ್ಲನೋವನ್ನೇ ಬಟ್ಟಲಿಗಿಳಿಸಿಗಟಗಟನ ಕುಡಿಯುತ್ತಿದ್ದೇನೆ ………! *******************

ಕಾವ್ಯಯಾನ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ಕವಿ-ಕವಿತೆ ಕುರಿತು ವಿಜಯಶ್ರೀ ಹಾಲಾಡಿ ಗೆಳೆಯರೆ, ಕವಿತೆಗಳಿಗಿದು ಕಾಲವಲ್ಲವೆಂದು ಹೇಳುತ್ತಲೇ ತಮ್ಮ ಕವಿಪಟ್ಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿರುವ ಪ್ರಭಾವಿಗಳ ಕಾಲದಲ್ಲಿಯೂ ನಮ್ಮ ಹೊಸ ಕವಿಗಳು ಇನ್ನಿರದ ಉತ್ಸಾಹದಿಂದ ಕವಿತೆಗಳನ್ನುಬರೆಯುತ್ತಲೇ ಇದ್ದಾರೆ. ಬಹುಶ: ಮೂರು ವರ್ಷಗಳ ಹಿಂದೆ ನೆಚ್ಚಿನ ಕವಿಯಿತ್ರಿ ವಿಜಯಶ್ರೀ ಹಾಲಾಡಿಯವರು ಬರೆದ ಈ ಪುಟ್ಟ ಟಿಪ್ಪಣಿ ಇವತ್ತಿಗೂ ಪ್ರಸ್ತುತವಾಗಿದೆ ಹೊಸ ಕವಿಗಳು ಯಾವ ಗೊಂದಲವೂ ಇರದೆ ಬರೆಯಲು ಈ ಮಾತುಗಳು ಸ್ಪೂರ್ತಿಯಾಗಬಹುದೆಂದು ನಾನು ನಂಬಿದ್ದೇನೆ.ಅದಕ್ಕಾಗಿ ಹಾಲಾಡಿಯವರ ಈ ಬರಹ ನಿಮ್ಮ ಓದಿಗಾಗಿ. ಕು.ಸ.ಮದುಸೂದನ ಬರೆಹಗಾರರಲ್ಲಿ ೩ ವರ್ಗ. ೧.ಪ್ರತಿಭಾವಂತರು-ಹಲವು ವರ್ಷಗಳಿಂದ ತಪಸ್ಸಿನಂತೆ ಸಾಮಾಜಿಕ ಕಾಳಜಿಯಿಂದ ಬರೆಯುತ್ತ ತಮ್ಮದೇ ಛಾಪು ಒತ್ತಿ ಗುರುತಿಸಿಕೊಂಡವರು (ಇವರ ಕುರಿತು ಒಂದು ಸಣ್ಣ ಶಬ್ದ ಮಾತಾಡಲೂ ನಾನು ಅನರ್ಹಳು. ನಿಮಗೆ ನನ್ನ ಗೌರವ) ೨.ಪ್ರಭಾವಿಗಳು ೩.ಸಾಮಾನ್ಯರು. ಪ್ರಭಾವಿಗಳನ್ನು ‘ಕವಿ ‘ಗಳೆಂದು ಎಲ್ಲರೂ ಕರೆಯುತ್ತಾರೆ, ಸಾಮಾನ್ಯ ರು ಪಾಪ ಏನು ಬರೆದರೂ, ಎಷ್ಟು ಬರೆದರೂ ಅಷ್ಟೇ. ಅವರ ಅಸ್ತಿತ್ವವೇ ಸಾಹಿತ್ಯಲೋಕಕ್ಕೆ ಹೊರೆ, ಇರಲಿ. ‘ಕವಿತೆ ‘ಗಳ ವಿಷಯಕ್ಕೆ ಬರುವ. “ಪದ್ಯ ಬೇಡ ಗದ್ಯ ಇದ್ರೆ ಕೊಡಿ ಚೆನ್ನಾಗಿದ್ರೆ ಪ್ರಕಟಿಸುವ “ಎಂಬ ಮಾತು ಹಲವರನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಬಾಲ್ಯದಿಂದ ಈವರೆಗೆ ಪದ್ಯಗಳನ್ನೇ ಬರೆದವರು ಹಲವರು. ಅವನ್ನೇ ಮಗುವಿನಂತೆ ಕಾಪಾಡಿಕೊಂಡು ಬಂದವರು. ಈಗ ಏಕಾಏಕಿ ಅವುಗಳಿಗೆ ಬೆಲೆಯೇ ಇಲ್ಲವಾಗಿದೆ! ! ಜಾಳು ಜಾಳು ಪದ್ಯ ಬರೆದೂ ತಮಗಿರುವ ಪ್ರಭಾವದ ಪ್ರಭಾವಳಿಯಿಂದ ಮೆರೆಯುತ್ತಿರುವ ಕೆಲವರ ಪೆನ್ನು ಸದ್ಯ ಮೊಂಡಾಗಿದ್ದರೂ ಇವತ್ತಿಗೂ ಅವರು “ಕವಿಗಳು! “. ಆದರೆ ಬರೆದೂ ಬರೆದೂ ಇನ್ನೂ ಬರೆಯುತ್ತಲೇ ಇರುವ ಹಲವರು ತಲೆಕೂದಲು ಹಣ್ಣಾದರೂ ಅವರನ್ನು ತಿರುಗಿ ನೋಡುವವರೂ ಇಲ್ಲ! ಸೌಜನ್ಯ, ಸಂಕೋಚ, ನಾಚಿಕೆ …ಮುಂತಾದುವನ್ನೆಲ್ಲ ಬದಿಗಿಟ್ಟು ಇನ್ನಾದರೂ ಇದನ್ನೆಲ್ಲ ಒಂಚೂರು ಪ್ರಶ್ನಿಸುವ ಸ್ನೇಹಿತರೆ …ನಮನಮಗೆ ನಾವು ನಾವೇ ;ಇಲ್ಲಿ ಯಾರಿಗೆ ಯಾರೂ ಇಲ್ಲ. ಚಂದದ ಸಮಾನತೆಯ ಮಾತುಗಳೆಲ್ಲ ವೇದಿಕೆಗೆ ಮಾತ್ರ ಸೀಮಿತ. ಕವಿತೆಗೆ “ಬೆಲೆಯಿಲ್ಲದ ” ಈ ಕಾಲದಲ್ಲಿ ನಿಮ್ಮ ಅನುಭವ, ಅಭಿಪ್ರಾಯ,ನೋವುಗಳನ್ನು ಇಲ್ಲಿ ದಯಮಾಡಿ ದಾಖಲಿಸಿ. ‘ಹಾಡೆ ಹಾದಿಯ ತೋರಿತು ..’ ಎಂಬ ಸಾರ್ವಕಾಲಿಕ ಸತ್ಯದ ಕವಿನುಡಿಯಂತೆ ದಾರಿ ತಾನಾಗೇ ತೋಚುತ್ತದೆ.ಇಲ್ಲವಾದರೆ ಮನಸ್ಸಿನ ಬೇಗುದಿಯಾದರೂ ಕಳೆಯುತ್ತದೆ .**********ವಿಜಯಶ್ರೀ ಹಾಲಾಡಿ

ನಿಮ್ಮೊಂದಿಗೆ Read Post »

You cannot copy content of this page

Scroll to Top