ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಟಿ. ಎಸ್. ಶ್ರವಣ ಕುಮಾರಿ ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಕಾಗಕ್ಕ ಇನ್ನೂ ಬೆಳಗಾಗ ಗೂಡಿನ ಬಾಗಿಲು ತೆರೆಯುತ್ತಿರುವಾಗಲೇ ತನ್ನ ಗೂಡಿನ ಮುಂದೆ ಆಗಲೇ ರಂಗೋಲಿ ಇಡುತ್ತಿದ್ದ ಗುಬ್ಬಕ್ಕ ಇವಳನ್ನೇ ಕಾಯುತ್ತಿದ್ದವವಂತೆ ಶಬ್ದ ಮಾಡಿ ಗಮನ ಸೆಳೆದಳು. ಬಲಗೈಲಿದ್ದ ಪೊರಕೆಯನ್ನು ಎಡಗೈಗೆ ಬದಲಾಯಿಸಿಕೊಂಡ ಕಾಗಕ್ಕ ಏನು ಎನ್ನುವಂತೆ ಸನ್ನೆ ಮಾಡಿದಳು. “ತುಂಬಾ ವಿಷಯ ಇದೆ ಮಾತಾಡಕ್ಕೆ; ಗಂಡ ಮಕ್ಕಳು ಹೊರಟ ಮೇಲೆ ಬರ್ತೀನಿ” ಎನ್ನುವಂತೆ ಸಂಜ್ಞೆ ಮಾಡಿ ಕಾಗಕ್ಕನೊಂದಿಗೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಂಡು ರಂಗೋಲಿ ಡಬ್ಬಿಯನ್ನೆತ್ತಿಕೊಂಡು ಗೂಡೊಳಗೆ ಹೋದಳು. ಕಾಗಕ್ಕನಿಗೋ ಆಗಿನಿಂದಲೇ ಕದನ ಕುತೂಹಲ ಶುರುವಾಯಿತು. ಬೆಳ್ಳಂಬೆಳಗ್ಗೆಯೇ ತನಗಾಗಿ ಕಾದು ನಿಂತು ಕತೆಯ ಪ್ರೋಮೋದ ಮೊದಲ ಕಾರ್ಡ್ ತೋರಿಸಿ ಹೋಗಿದ್ದಾಳೆಂದರೆ ವಿಷ್ಯ ಸಖತ್ತಾಗೇ ಇದ್ದಿರಬೇಕು. ಯಾವುದಕ್ಕೂ ಇಬ್ಬರ ಗೂಡಿಂದಲೂ ಎಲ್ಲರೂ ಹೊರಡುವುದಕ್ಕೆ ಕಾಯಬೇಕಲ್ಲ ಎಂದುಕೊಂಡು ಆತುರಾತುರವಾಗೆ ಬೆಳಗಿನ ಸ್ನಾನ, ತಿಂಡಿ, ಅಡುಗೆ ಎಲ್ಲವನ್ನೂ ಮುಗಿಸಿ ಗಡಿಯಾರದ ಮುಳ್ಳು ಮುಂದೆ ಸಾಗುವುದನ್ನೇ ನಿರೀಕ್ಷಿಸುತ್ತಾ ನಿಂತವಳಿಗೆ ಇಂದೇಕೋ ಅದು ಬಲು ನಿಧಾನವಾಗೇ ಚಲಿಸುತ್ತಿದೆ ಅನ್ನಿಸಹತ್ತಿತು. ಅಂತೂ ಕಡೆಗೆ ಗಂಡ, ಮಕ್ಕಳೆಲ್ಲರೂ ತಿಂಡಿ ತಿಂದು, ಊಟದ ಡಬ್ಬಿ ಹಿಡಿದು ಹೊರಟ ತಕ್ಷಣ ಹೊರಗೆ ಬಂದು ಗುಬ್ಬಕ್ಕನ ಗೂಡಿನ ಕಡೆ ನೋಡಿದರೆ ಅಲ್ಲಿ ಇನ್ನೂ ಯಜಮಾನರ ಸವಾರಿ ಹೊರಟಂತಿರಲಿಲ್ಲ. ಅವರ ವಾಹನ ಮುಂದೇ ನಿಂತಿತ್ತು. ಯಾರೋ ಬಂದಿರಬಹುದೇನೋ… ಅವರ ಗಾಡಿಯೂ ಅಲ್ಲೇ ನಿಂತಿದೆ. ಎಷ್ಟು ಹೊತ್ತಿಗೆ ಹೊರಡುತ್ತಾರೋ… ಇವಳ ಕಾತರ ಹೆಚ್ಚಾಗತೊಡಗಿ, ಅದನ್ನು ತೋರಿಸುವಂತಿಲ್ಲದೆ ಆ ಬಿಸಿಲಲ್ಲೂ ಮುಂದಿನ ಕೈತೋಟದ ಗಿಡಗಳ ಒಣಗಿದೆಲೆಯನ್ನು ಕೀಳುತ್ತಾ, ಬಿದ್ದಿರುವ ಒಣ ಹೂವುಗಳನ್ನೂ, ಕಸಕಡ್ಡಿಗಳನ್ನೂ, ತರಗೆಲೆಗಳನ್ನೂ ಹೆಕ್ಕಿ ತೆಗೆಯುತ್ತಾ ಕಾಲ ಕಳೆಯ ತೊಡಗಿದಳು. ಅಂತೂ ಇಂತೂ ಕಡೆಗೆ ಎರಡು ಗಾಡಿಗಳೂ ಗುಬ್ಬಕ್ಕನ ಗೂಡಿನ ಮುಂದಿನಿಂದ ಹೊರಟ ಶಬ್ಧ ಕೇಳಿ ಪರಮಾನಂದವಾಯಿತು. ಹೊರಗೆ ತಲೆ ಹಾಕಿದ ಗುಬ್ಬಕ್ಕ ʻಐದು ನಿಮಿಷ ತಡಿ ಬಂದೆʼ ಎನ್ನುವಂತೆ ಇಷಾರೆ ಮಾಡಿ ಮತ್ತೆ ಒಳಹೊಕ್ಕಳು. ಬಾಗಿಲನ್ನು ತೆರೆದಿಟ್ಟೇ ಒಳಬಂದ ಕಾಗಕ್ಕನಿಗೋ ಒಂದೊಂದು ನಿಮಿಷವೂ ಗಂಟೆಯಂತೆ ತೋರುತ್ತಿದ್ದರೆ, ತನ್ನ ತಲೆಯಲ್ಲಿ ಹುಳ ಬಿಟ್ಟು ಗುಬ್ಬಕ್ಕ ಆರಾಮಾಗಿ ಇದ್ದಾಳೆ ಅನ್ನಿಸಿ ಅವಳ ಮೇಲೆ ತುಸು ಕೋಪವೇ ಬಂದರೂ, ಮಾತಿನ ಮಧ್ಯ ತಿನ್ನಲು ಒಂದಷ್ಟು ಹಚ್ಚಿದ ಕಳ್ಳೆಪುರಿಯನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಬಂದು ಟೇಬಲ್ಲಿನ ಮೇಲೆ ಇರಿಸಿದಳು. ಕಾಫಿ ಡಿಕಾಕ್ಷನ್ ಇದೆ ತಾನೇ ಎಂದು ಫಿಲ್ಟರ್‌ನ ಕೆಳಗಿನ ಬಟ್ಟಲನ್ನು ಮತ್ತೊಮ್ಮೆ ನೋಡಿ ಸಮಾಧಾನಗೊಂಡಳು. ಇವಳ ಐದು ನಿಮಿಷ ಇನ್ನೂ ಆಗಲಿಲ್ಲವೇ ಎಂದು ಸಿಡಿಮಿಡಿಗೊಳ್ಳುತ್ತಿರುವಾಗಲೇ ಅಂತೂ ಗುಬ್ಬಕ್ಕ “ಉಸ್ಸಪ್ಪ. ಸಾಕಾಯ್ತು…” ಎನ್ನುತ್ತಾ ಒಳಬಂದು ಸೋಫಾದ ಮೇಲೆ ಕಾಲು ಚಾಚಿ ಕುಳಿತುಕೊಂಡು ಕಣ್ಣು ಮುಚ್ಚಿಕೊಂಡು ಹಿಂದಕ್ಕೆ ಒರಗಿಕೊಂಡಳು. ಕಾಗಕ್ಕನಿಗೋ ಅವಳ ತಲೆಯ ಮೇಲೆ ಮೇಜಿನ ಮೇಲಿದ್ದ ವೇಸನ್ನೆತ್ತಿ ಕುಟ್ಟಿಬಿಡುವಷ್ಟು ಕೋಪ ಬಂದರೂ ತಡೆದುಕೊಂಡು “ಏನೋ ದೊಡ್ಡದಾಗಿ ಕತೆ ಹೇಳೋ ಸಸ್ಪೆನ್ಸ್ ತೋರ್ಸಿ ಈಗ ಇಲ್ಲಿ ಆರಾಮಾಗಿ ಊಟ ಮಾಡಿದ್ಮೇಲೆ ಮಲಗೋ ತರ ತಣ್ಣಗೆ ಕಣ್ಣು ಮುಚ್ಚಿಕೊಂಡು ಆರಾಮ್ ತೊಗೋತಾ ಇದೀಯಲ್ಲ. ಎದ್ದೇಳು” ಎಂದು ಮಾತಲ್ಲೇ ತಿವಿದಳು. “ಏ… ಸ್ವಲ್ಪ ಇರು ಬೆಳಗಿಂದ ದಡಬಡಾಂತ ಕೆಲ್ಸ ಮಾಡಿ ಸುಸ್ತಾಗಿದೆ”. “ನಾನೇನು ಸುಮ್ನೆ ಕೂತಿದ್ನಾ. ನಿನ್ನಷ್ಟೇ ಕಷ್ಟ ಪಟ್ಟು ಮಾಡಿದೀನಿ. ಎದ್ದೇಳು ಮೇಲೆ. ಅದೇನು ಕತೆಯೋ ಬೇಗ ಹೇಳು. ಬೆಳಗಿಂದ ನಾಲಕ್ಕು ಕಿವಿಯಾಗಿ ಕೇಳಕ್ಕೆ ಕೂತಿದೀನಿ. ಸ್ವಲ್ಪ ಹೊತ್ತಾದ ಮೇಲೆ ಬೇಕಾದ್ರೆ ಸ್ವಲ್ಪ ಕಾಫಿ ಮಾಡ್ಕೊಂಡು ಬಂದು ಕೊಡ್ತೀನಿ” ಎನ್ನುತ್ತಾ ಅವಳು ಒರಗಲಿಕ್ಕೆ ಬಿಡದೇ ಮಾತಿಗೆಬ್ಬಿಸಿದಳು. “ಆದೇನಾಯ್ತಪ್ಪಾ ಅಂದ್ರೇ ….” ಎನ್ನುತ್ತಾ ಹೆಚ್ಚು ಕಡಿಮೆ ಮಲಗಿದಂತೇ ಕುಳಿತಿದ್ದವಳು ಯಾರೋ ಎಳೆಯುತ್ತಿದ್ದಾರೇನೋ ಎನ್ನುವಂತೆ ಎದ್ದು ಕುಳಿತಳು. “ನಿನ್ನೆ ನಮ್ಮಮ್ಮನ ಮನೇತ್ರ ಹೋಗಿದ್ನಾ…” “ಅಲ್ಲೇನಾಯ್ತು?” “ಸ್ವಲ್ಪ ತಡಕೋ. ಅದ್ನೇ ಅಲ್ವಾ ಹೇಳ್ತಿರೋದು. ಅಲ್ಲಿಂದ ಎರಡೇ ಮರದಾಚೆ ಅಲ್ವಾ ನಿಮ್ಮಣ್ಣನ ಬೀಗರಿರೋದು.. ಅವ್ರಲ್ಲೂ ನಮ್ಮಮ್ಮನ ಮನೇಲೂ ಗೀಜಕ್ಕನೇ ಕೆಲಸ ಮಾಡೋದು. ಅವ್ಳೇಳಿದ್ ವಿಷ್ಯ… ಮೊನ್ನೇ ಅಲ್ಲಿ ಗಂಡ ಹೆಂಡ್ತಿ ಮಧ್ಯ ಜೋರು ಜೋರು ಮಾತುಕತೆ ನಡೀತಾ ಇತ್ತಂತೆ. ಮಗಳು ಗಿಣಿಮರಿ ಹತ್ರ ಫೋನಲ್ಲಿ ಮಾತಾಡ್ತಿದ್ರಂತೆ. “ನಿನ್ ಗಂಡ ಎನಂತ ತಿಳ್ಕೊಂಡಿದಾನೆ, ನೀನೇನು ಗತಿಗೆಟ್ಟೋರ ಕಡೆಯಿಂದ ಹೋಗಿಲ್ಲ. ನಿನ್ ಸಂಬಳದಿಂದಾನೇ ಅಲ್ವಾ ಅವರಪ್ಪ ತನ್ ಮರಿಗಳ್ನ ಓದುಸ್ತಿರೋದು. ನಿನ್ನ ಹೊಡೆಯೋ ಅಷ್ಟು ಮುಂದುವರೆದ್ನ? ಮುಂದಿನ್ವಾರ ನಾವಿಬ್ರೂ ಬರ್ತೀವಿ. ಅಲ್ಲೀವರ್ಗೆ ತಡಕೋ. ಬಂದು ವಿಚಾರಿಸಿಕೋತೀವಿ.” ಅಂತ. ಮೈನಕ್ಕ ಮಾತಾಡ್ತಿರೋವಾಗ್ಲೇ ಅವಳ್ಗಂಡ ಪಾರ್ವಾಳಪ್ಪ ಫೋನ್ ಕಿತ್ಕೊಂಡು “ಗೊರವಂಕಂಗೆ ತಲೆಗೆ ಏರಿರೋ ಪಿತ್ತ ಇಳಿಸ್ತೀನಿ. ಕೆಲ್ಸ ಇಲ್ದೇ ಬಿದ್ದಿದ್ದಾಗ ಯಾರ್ಯಾರ ಕೈಯಿ ಕಾಲು ಕಟ್ಟಿ ಅವನಿಗೆ ಕೆಲ್ಸ ಕೊಡಿಸಿದ್ದು. ಜೊತೆಗೆ ಬಾಳ್ವೆ ಮಾಡು ಅಂತ ಮುದ್ದಿಂದ ಸಾಕಿದ ಮಗ್ಳುನ್ನೂ ಕೊಟ್ರೆ ಬಾಳ್ವೆ ಮಾಡಕ್ಕೆ ಯೋಗ್ಯತೆ ಇರಬೇಕಲ್ವಾ. ನೀನು ಬೇಜಾರು ಮಾಡ್ಕೋಬೇಡ ಪುಟ್ಟ. ನಾನೆಲ್ಲ ನೋಡ್ಕೋತೀನಿ” ಅಂತ ಮಗ್ಳಿಗೆ ಸಮಾಧಾನ ಹೇಳ್ತಿದ್ರಂತೆ. “ಇನ್ನೂ ಏನೇನು ಮಾತಾಡ್ತಿದ್ರೋ… ಗೀಜಕ್ಕ ಎಷ್ಟು ಹೊತ್ತೂಂತ ಕಸ ಬಳಿಯೋ ನಾಟಕ ಆಡ್ತಾಳೆ. ಅವ್ಳಿಗೆ ತಿಳಿದಷ್ಟನ್ನ ನಮ್ಮಮ್ಮನ ಹತ್ರ ಹೇಳಿದ್ಳಂತೆ. ನಮ್ಮಮ್ಮ ನನ್ನತ್ರ ಹಂಗಂದ್ರು. ನಿಂಗೇನಾದ್ರೂ ನಿಮ್ಮಣ್ಣನಿಂದಾನೋ ಅತ್ಗೇಂದಾನೋ ಏನಾದ್ರೂ ಸಮಾಚಾರ ಬಂದಿರ್ಬೋದೇನೋ ಅಂದುಕೊಂಡೆ.” ಎನ್ನುತ್ತಾ ಕಾಗಕ್ಕನ ಮುಖ ನೋಡಿದಳು. “ಹಂಗಾ.. ನಿಜವಾ ನೀ ಹೇಳ್ತೀರೋದು…” ಕಾಗಕ್ಕನ ಮುಖ ಅಚ್ಚರಿಯಿಂದ ಅರಳಿತು. “ಯಾವ್ಮುಖ ಇಟ್ಕೊಂಡು ಹೇಳ್ತಾರೆ ಹೇಳು? ಎನ್ ಸುಖದ್ ಸಮಾಚಾರಾನಾ ಬಿಂಕವಾಗಿ ಹೇಳಕ್ಕೆ. ನನ್ ಮಗ್ಳುನ್ನ ಸೊಸೆ ಮಾಡ್ಕೊಳ್ಳೋ ಅಣ್ಣಾ, ತೌರುಮನೇಗೆ ನಮ್ಮನೇ ಬಳ್ಳಿ ಸುತ್ಕೊಳತ್ತೆ ಅಂದ್ರೇ, “ನಿಂಗೊತ್ತಿಲ್ಲಾ ಕಾಗೀ, ಬಳಗದಲ್ಲಿ ಮದ್ವೆ ಮಾಡ್ಕೊಂಡ್ರೆ ಉಟ್ಟೋ ಪಿಳ್ಳೆಗಳು ರೋಗವಾಗಿ ಉಟ್ಟುಟ್ವೆ. ನಿನ್ನ ಮಗ್ಳೂ ನನ್ನ ಮಗಳಾಂಗೇ ಅಲ್ವಾ. ಸಂಬಂಧ ಬೆಳಸೋದು ಬೇಡ. ಇರೋ ಸಂಬಂಧ ಚೆನ್ನಾಗಿಟ್ಕೋಣೋಣ’ ಅಂದ. ಅತ್ಗೇ… “ಕಾಗೀ ನಿನ್ನ ಮಗ್ಳು ಕಪ್ಪಿದ್ರೂ ಕಡಿದ ಶಿಲೆ ಹಾಗಿದಾಳೆ. ಯಾರಾದ್ರೂ ಹುಡುಕ್ಕೊಂಡು ಬಂದು ಮಾಡ್ಕೋತಾರೆ. ಯೋಚ್ನೇನೇ ಮಾಡ್ಬೇಡ’ ಅಂತ ವೈಯ್ಯಾರವಾಗಿ ನನ್ನ ಮಗ್ಳ ಬಣ್ಣಾನ ಎತ್ತಿ ಅಡೋದ! ಆಗ್ಬೇಕು ಆವಂಗೆ ಹಿಂಗೆ” ಕೂತಲ್ಲೇ ನೆಟಿಕೆ ಮುರಿದವಳು “ಸ್ವಲ್ಪ ತಡೀ ಕಾಫಿ ತರ್ತೀನಿ ಅಲ್ಲೀವರ್ಗೂ ಕಳ್ಳೇಪುರಿ ತಿಂತಿರು ಎಂದು ಬಟ್ಟಲನ್ನ ಮುಂದು ಸರಿಸಿದಳು. ಅದರಲ್ಲಿಂದ ಒಂದೊಂದೇ ಕಡಲೇಕಾಯಿ ಬೀಜವನ್ನು ಹೆಕ್ಕುತ್ತಾ ಗುಬ್ಬಕ್ಕ ಬಾಯಾಡಿಸ ತೊಡಗಿರುವಾಗಲೇ “ಮುಂದೇನಾಯ್ತಂತೆ?” ಎನ್ನುತ್ತಾ ಕಾಗಕ್ಕ ಕಾಫಿಯ ಬಟ್ಟಲನ್ನು ತೆಗೆದುಕೊಂಡು ಬಂದಳು. ಕಾಫಿ ಹೊಟ್ಟೆಗೆ ಬಿದ್ದ ಮೇಲೆ ಇನ್ನೂ ಏನಾದ್ರೂ ಒಳಗೆ ಇರೋ ವಿಷ್ಯಾ ಹೊರಕ್ಕೆ ಕಾರುತ್ತೇನೋ ಅಂತ ಗುಬ್ಬಕ್ಕನ ಮುಖವನ್ನೇ ನೋಡತೊಡಗಿದಳು. ನಿಧಾನವಾಗಿ ಗುಟುಕರಿಸುತ್ತಾ ಏನೋ ಗಹನವಾದ ಆಲೋಚನೆಯಲ್ಲಿರುವಂತೆ ಮುಖ ಮಾಡಿಕೊಂಡ ಗುಬ್ಬಕ್ಕ “ಒಂದ್ಕೆಲ್ಸ ಮಾಡೋಣ” ಎನ್ನುತ್ತಾ ಬಟ್ಟಲನ್ನು ಕೆಳಗಿಟ್ಟಳು. `ಏನು?’ ಎನ್ನುವಂತೆ ನೋಡಿದ ಕಾಗಕ್ಕನ ಮುಖವನ್ನೇ ನೋಡುತ್ತಾ ನಾಳೇನೋ ನಾಡಿದ್ದೋ ಹಂಸನ ಹತ್ರ ಹೋಗೋಣ. ಅವ್ಳ ಮಗ್ಳೂ, ಈ ಅರಗಿಣೀನೂ ಗೆಳ್ತೀರು. ಅಂದ್ಮೇಲೆ ಏನೋ ಒಂದಷ್ಟು ವಿಷ್ಯ ಗೊತ್ತೇ ಇರತ್ತಲ್ವ. ಏನಾದ್ರೂ ಅವರಮ್ಮನ ಹತ್ರ ಹೇಳಿರ್ಬೋದು. ಹೋದ್ರೆ ಗೊತ್ತಾಗುತ್ತೆ. ಫೋನ್ ಮಾಡಿ ಕೇಳಕ್ಕಾಗಲ್ಲ”. “ನಾವು ಹೋಗಿ ಕೇಳಿಬಿಟ್ರೆ ಅವ್ಳು ಹೇಳಿಬಿಡ್ತಾಳೋ” ಕಾಗಕ್ಕ, ಹಂಸ ಹೇಳ್ಳಿಕ್ಕಿಲ್ಲ ಎನ್ನುವ ಭಾವ ವ್ಯಕ್ತಪಡಿಸಿದಳು. “ಕೇಳೋ ತರ ಕೇಳಿದ್ರೆ ಹೇಳ್ತಾಳೆ. ಅವ್ಳಿಗೆ ಗೊತ್ತಿರೋ ವಿಷ್ಯ ಕಕ್ಸೋ ಭಾರ ನಂದು. ಯಾವಾಗ ಹೋಗೋಣ ಹೇಳು” ಎಂದ ಗುಬ್ಬಕ್ಕನಿಗೆ “ಇವತ್ತಿನ್ನೂ ಮಂಗಳ್ವಾರ. ನಾಳೆ ಬುಧವಾರ. ಎರ್ಡು ದಿನ್ವೂ ಇವ್ರು ಬೇಗ ಬರ್ತಾರೆ. ಎಲ್ಲೂ ಹೋಗೋ ಹಂಗಿಲ್ಲ. ಈ ವಿಷ್ಯಕ್ಕೆ ಅಂತೇನಾದ್ರೂ ತಿಳಿದ್ರೆ ಅಷ್ಟೇ ಬಡದು ಬಲಿ ಹಾಕ್ಬಿಡ್ತಾರೆ. ಶುಕ್ರವಾರದ ಪೂಜೇಗೆ ಕರೆಯೋ ನೆಪ ಮಾಡ್ಕೊಂಡು ಗುರುವಾರ ಹೋಗೋಣ” ಎಂದಳು. “ಆದೇನ್ ನಿನ್ನ ಗಂಡನ ಕೆಲಸ್ವೋ. ವಾರಕ್ಕೆ ಮೂರ್ ದಿನ ನಾಲಕ್ಕುಗಂಟೇಗೇ ಬಂದು ಕೂತ್ಕೋತಾರೆ. ದೂರ್ವಾಸನ್ ಸಾವಾಸ ನಿಂಗೆ. ನನ್ನ ಗಂಡ ನೋಡು ರಾತ್ರಿ 9 ಗಂಟೇಗ್ ಮುಂಚೆ ಬರಲ್ಲ. ಇನ್ನೇನ್ಮಾಡೋದು? ಗುರ್ವಾರವೇ ಹೋಗೋಣ. ಈಗ ಅಲ್ಲೀವರ್ಗೂ ತಡ್ಕೊಂಡು ಕೂತಿರ್ಬೇಕಲ್ಲಾ ನಾವು… ಹೊಸತರಲ್ಲಿರೋ ಮಜಾ ಅಮೇಲಿರಲ್ಲ. ಏನ್ ಮಾಡೋದು.. ಸರಿ .. ಅಷ್ಟರಲ್ಲಿ ಇನ್ನೇನಾದ್ರೂ ವಿಷ್ಯ ಗೊತ್ತಾದ್ರೆ ನೀನೂ ಹೇಳು; ನಾನೂ ಹೇಳ್ತೀನಿ” ಎನ್ನುತ್ತಾ ಅಂದಿನ ಮೀಟಿಂಗ್ ಭರ್ಕಾಸ್ತ್ ಮಾಡಿ ಗುಬ್ಬಕ್ಕ ಹೊರಟಳು. ಕಾಗಕ್ಕನಿಗೋ ಒಂದ್ಕಡೆ ಖುಷಿ, ಇನ್ನೊಂದ್ಕಡೆ ಕುತೂಹಲ ಎನಾಗಿರ್ಬೋದು? ಯಾಕೆ ಗಂಡ ಹೆಂಡ್ತಿ ಮಧ್ಯ ಈ ಮಟ್ಟಕ್ಕೆ ಜಗಳ ಆಯ್ತು… ಈ ಗುಬ್ಬಕ್ಕನ್ ಮಾತನ್ನ ಪೂರಾ ನಂಬಕ್ಕಾಗಲ್ಲ; ಇನ್ಯಾರನ್ನ ಕೇಳಿದ್ರೆ ಸರಿಯಾಗಿ ಏನು ನಡೀತು ಅಂತ ತಿಳಿಯತ್ತೆ … ಏನೂ ತೋಚದೆ ತಲೆಯನ್ನ ಪರಪರ ಕೆರೆದುಕೊಂಡ್ರೂ ಯಾರೂ ತಲೆಗೆ ಬರ್ಲಿಲ್ಲ. ಮಧ್ಯಾನ್ಹದ ಊಟಾನೂ ಸರಿಯಾಗಿ ಸೇರ್ಲಿಲ್ಲ. ಒಂದ್ ಗಳಿಗೆ ಕಣ್ಣುಮುಚ್ಚಿಕೊಳ್ಳೋಣ ಅಂತ ಉರುಳಿಕೊಂಡ್ರೂ ಸಮಾಧಾನವಿಲ್ಲ. ಹಿಂಗೇ ಯೋಚ್ನೇ ಮಾಡ್ತಾ ಒಂದ್ ಕಣ್ ಹತ್ತಿತ್ತೋ ಏನೋ ಅಷ್ಟರಲ್ಲೇ ಬಾಗಿಲು ಡಬಡಬ ಬಡ್ಕೊಂತು. `ಯಾರ್ಬಂದ್ರೋ ಪಾಪಿಗ್ಳು ನಿದ್ದೇಗೆ ಎರವಾಗಿ’ ಎಂದು ಬೈದುಕೊಳ್ಳುತ್ತಾ ಕಷ್ಟ ಪಟ್ಟು ಎದ್ದು ಹೋಗಿ ಬಾಗಿಲು ತೆರೆದಳು.`ವಿಷ್ಯಾ ಗೊತ್ತಾಯ್ತಾ…’ ಆತಂಕದಿಂದ ಒಳ ಬಂದಳು ಕುಕ್ಕುಟಕ್ಕ… ಅತ್ತಿಗೆಯ ಅತ್ತಿಗೆ. “ಏನತ್ಗೆ.. ಬಾ.. ಕೂತ್ಕೋ ಎನ್ನುತ್ತಾ ಸೋಫಾ ತೋರಿದಳು. “ಇಲ್ಬೇಡಾ.. ನಮ್ಮನೇಗ್ ಬಾ” ಎಂದಳು. “ಆಯ್ ಇವತ್ತು ಇವ್ರು ಇನ್ನೊಂದು ಗಂಟೇಗೆಲ್ಲಾ ಬಂದು ಎಲ್ಲೋ ಓಗ್ಬೇಕಂತೆ. ಇನ್ನೂ ತಿಂಡಿ ಮಾಡ್ಬೇಕು.. ಮಕ್ಳೂ ಐದು ಗಂಟೆಗೆಲ್ಲಾ ಬಂದ್ಬಿಡ್ತಾವೆ. ಬರಕ್ಕಾಗಲ್ಲ. ಇಲ್ಲೇ ಹೇಳು ಮತ್ತೆ.’ “ಇಲ್ಲ; ನಾನು ಬರುವಾಗ ಗುಬ್ಬಕ್ಕ ನೋಡಿದ್ಳು. ಅವ್ಳಿಗೆ ತಿಳಿಯೋದು ಬೇಡ. ನೀನೊಬ್ಳೇ ಮಂಗಳ ಗೌರಿ ಪೂಜೆ ಅರಿಶಿನ ಕುಂಕುಮಕ್ಕೆ ಕರೆದೆ ಅನ್ನೋ ನೆಪ ಮಾಡಿಕೊಂಡು ಬಾ. ನಾನು ಇನ್ನೊಂದು ನಿಂಷ ಇಲ್ಲಿದ್ರೆ ಅವ್ಳು ಬಂದ್ಬಿಡ್ತಾಳೆ. ಏಳು ಗಂಟೇಗೆ ಕಾಯ್ತಿರ್ತೀನಿ” ಎನ್ನುತ್ತಾ ಹೊರಟೇಬಿಟ್ಟಳು. `ಅಯ್ಯೋ ದೇವ್ರೆ. ಏನು ಇವ್ಳ ಕತೆ. ಈ ಥರ ಸಸ್ಪೆನ್ಸ್ ಹುಟ್ಟು ಹಾಕಿ ಹೋಗೋದ…’ ಎಂದು ಕೊಳ್ಳುತ್ತಿರುವಾಗಲೇ ಗುಬ್ಬಕ್ಕ ನುಸುಳಿದಳು “ಏನಂತೆ ಕುಕ್ಕುಟಕ್ಕನ ಕತೆ…” ರಾಗವಾಗಿ ಕೇಳಿದಳು. ಏನೋ ಖಂಡಿತವಾಗಿ ಇದೆ ಎನ್ನುವಂತೆ. “ಮಂಗಳ ಗೌರಿ ಪೂಜೆಯಂತೆ. ಸಂಜೇಗೆ ಅರಿಶ್ನ ಕುಂಕ್ಮಕ್ಕೆ ಬಂದೋಗು ಅಂತ ಕರಿಯಕ್ಕೆ ಬಂದಿದ್ಲು.” “ಅಂಗಾ.. ಗೊತ್ತಾಯ್ತು ಬಿಡು.. ನಂಗ್ ಹೇಳ್ದೇ ಹೋದೀಯ” ಕಣ್ಣು ಮಿಟುಕಿಸಿದಳು. “ಏ… ವಿಷ್ಯ ಇದ್ರೆ ನಿಂಗೆ ಹೇಳ್ದೇ ಇರ್ತೀನಾ. ನಿಜವಾಗೂ ಕರೆಯಕ್ಕೇ ಬಂದಿದ್ಳು” ಕಾಗಕ್ಕ ವಿಷಯದ ತಿಂಡಿಯ ಮೇಲೆ ಮುಸುಕು ಹಾಕಲು ನೋಡಿದಳು. “ಸರಿ ಸರಿ ಹೋಗು… ಆಮೇಲೆ ಸಿಗ್ತೀನಿ” ಎನ್ನುತ್ತಾ ಅವಳು ಹೊರಟರೂ ತನ್ನ ಮಾತನ್ನ ಅವಳು ನಂಬಿಲ್ಲ ಎನ್ನುವುದು ಕಾಗಕ್ಕನಿಗೆ ಗೊತ್ತಾಗಿ ಹೋಯಿತು. ಸಂಜೆ ಗಂಡ ಮಕ್ಕಳು ಬಂದ ಮೇಲೆ, ರಾತ್ರಿ ಆಡುಗೇನೂ ಮಾಡಿಟ್ಟು ʻಕುಕ್ಕುಟಕ್ಕನ ಮನೆಗೆ ಅರಿಶ್ನ ಕುಂಕ್ಮಕ್ಕೆ ಹೋಗ್ಬರ್ತೀನಿʼ ಅಂತ ಹೇಳಿ ಹೊರಟಳು. ಬಾಗಿಲಲ್ಲೇ ಕಾಯ್ತಾ ನಿಂತಿದ್ದ ಕುಕ್ಕುಟಿ “ಬಂದ್ಯಾ ಬಾ ಬಾ” ಎನ್ನುತ್ತಾ ಒಳಗೆ ಎಳೆದುಕೊಂಡಂತೇ ಕರೆದುಕೊಂಡು ಹೋದಳು. ಸೋಫಾದ ಮೇಲೆ ಇನ್ನೂ ಊರುತ್ತಿದ್ದ ಹಾಗೇ “ಗೊತ್ತಾ ವಿಷ್ಯ…” ಆತಂಕದಿಂದ ಕೇಳಿದ್ಳು. ಏನೂ ಗೊತ್ತಿಲ್ಲದ ಸೋಗು ಹಾಕಿಕೊಳ್ಳುತ್ತ “ಏನತ್ತಿಗೆ… ಏನಾಯ್ತು?” ಆತುರದಿಂದ ಕೇಳಿದಳು. “ಏನ್ ಗೊತ್ತಾ ಕಾಗಿ, ನಿಮ್ಮಣ್ಣನ ಮಗನ