ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ !

ಬಿದಲೋಟಿ ರಂಗನಾಥ್

ನಮ್ಮ ನಾಡಿಮಿಡಿತದಲ್ಲಿರುವ
ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ
ಅವರೇ ಜನ್ಮವಿತ್ತ ಸಂವಿಧಾನದ ಕೂಸು ಅವರದಲ್ಲವೆಂದವರ ವಿರುದ್ಧ.

ಅಲ್ಪತಿಳಿದವರ ಕುತಂತ್ರ
ಬೆಳೆಯುವ ಮಕ್ಕಳ ಮನಸುಗಳ ನೆಲದ ಮೇಲೆ ವಿಷ ಬೀಜ
ಕುದಿಯುವ ರಕ್ತದಲಿ ಅಂಬೇಡ್ಕರ್ ಕಣ್ಣೀರು.!
ಸುಡುತ್ತದೆ ಕೋಮುವಾದಿಗಳ ಲೇಖನಿಯನ್ನು
ಹೊಲಸು ಮನಸನ್ನು

ನೀವೆ ತೋಡುವ ಖೆಡ್ಡಕ್ಕೆ ನೀವೆ ಮುಗ್ಗರಿಸುವಿರಿ
ಭೀಮನು ನಡೆದ ನೆಲ ಬೆವರುತ್ತಿದೆ
ಅಪಮಾನ ಅವಮಾನದ ಕರುಳು ಸುಡುತ್ತ
ಮನದಲಿ ಕುಂತ ಶಾಂತಿಯ ಪಾರಿವಾಳಕ್ಕೆ
ರಕ್ತಪಾತದ ಕನಸು ಬೀಳುತ್ತಿದೆ

ಇತಿಹಾಸ ತಿರುಚುವ ನಿಮ್ಮಗಳ ಕೈಯಲ್ಲಿ
ಎಲ್ಲೋ ಮುಳ್ಳುಗಳು ನೆಲೆಯೂರಿರಬೇಕು
ನಾಲಿಗೆಯು ಹುಣ್ಣಾಗಿರಬೇಕು
ಮನಸು ಕೊಳಕಾಗಿ ಗಬ್ಬೆದ್ದು ನಾರುತ್ತಿರಬೇಕು .!

ಅವನುಂಡ ನೋವು ನಮ್ಮದು
ಕರುಳು ಕಲೆತ ಮನಸುಗಳಿಗೆ
ಬೆಂಕಿ ಯಾಕೆ ಸೂಡುತ್ತೀರಿ
ನರವಿಲ್ಲದ ನಾಲಿಗೆ ಮೇಲಿರುವ ಸುಳ್ಳಿನ ಬೀಜ ಮೊದಲು ಸುಡಿ
ಹಾಲುಗೆನ್ನೆಯ ಮಕ್ಕಳ ಬೆಳಕಿನ ಮನಸಿಗೆ
ಕತ್ತಲನ್ನೇಕೆ ಮೆತ್ತುತ್ತೀರಿ ?

ಅಂಬೇಡ್ಕರ್ ಸರ್ವಕಾಲಿಕ ನಾಯಕ
ಅವನೇ ಬರೆದ ಸಂವಿಧಾನವಿಲ್ಲದೇ ಹೋಗಿದ್ದರೆ
ನಿಮ್ಮ ಗರಿ ಗರಿ ಬಟ್ಟೆಗಳು ಮಣ್ಣು ಮೆತ್ತಿ
ಗೆದ್ದಲಹುಳು ಮುಕುರುತ್ತಿದ್ದವು.

ಭೀಮನು ತುಳಿದ ಮಣ್ಣಹೆಜ್ಜೆ ನೆರಳಿಗೂ
ಯೋಗ್ಯತೆಯಿಲ್ಲದ ಕುಬ್ಜ ಮನಸುಗಳೇ
ಯಾರೋ ಹಾಕಿದ ಹಾರ
ಹಾವಾಗುವ ಮುನ್ನ ಹಿಂಪಡಿಯಿರಿ
ನೀವು ಬಿತ್ತಿದ ಸುಳ್ಳಿನ ಕೈಪಿಡಿ
ಇಲ್ಲವೋ ಈ ನೆಲದ ಮನಸುಗಳ ನಿಟ್ಟುಸಿರು
ವಿಧಾನ ಸೌಧದ ಕಲ್ಲುಗಳ ಮೇಲೆ ಕೂತು
ಕುರ್ಚಿ ಕಾಲುಗಳೇ ಮುಗುಚಿ
ಊನಾಗಿ ಹುಣ್ಣಾಗಬಹುದು.!

About The Author

Leave a Reply

You cannot copy content of this page

Scroll to Top