ಕಾವ್ಯಯಾನ
ಅರಿವು ಬಿ.ಎಸ್.ಶ್ರೀನಿವಾಸ್ ಹೊತ್ತಾಯಿತು ಗೊತ್ತಾಯಿತು ಪಯಣ ಮುಗಿಯಲಿದೆಯೆಂದು ರವಿಯು ಮುಳುಗಿ ತಾರೆ ಮಿನುಗಿ ಶಶಿ ಆಗಸ ಬೆಳಗುವನೆಂದು ಹೊತ್ತಾಯಿತು ಗೊತ್ತಾಯಿತು ಗಳಿಸಿದ್ದು ಉಳಿಸಿದ್ದು ಚಿಟಿಕೆಯಷ್ಟೇ ಎಂದು ಅರಿಯುವುದು ಅಳಿಸುವುದು ಬೆಟ್ಟದಷ್ಟಿದೆಯೆಂದು ಹೊತ್ತಾಯಿತು ಗೊತ್ತಾಯಿತು ಬಾಳಲೆಕ್ಕಾಚಾರದಲಿ ಒಂದನೊಂದು ಕೂಡಿದರೆ ಎರಡೇ ಆಗಬೇಕಿಲ್ಲವೆಂದು ಶೂನ್ಯವೂ ಮೂಡಬಹುದೆಂದು ಹೊತ್ತಾಯಿತು ಗೊತ್ತಾಯಿತು ಭರದಿ ಹರಿದ ನದಿಯು ಧುಮುಕಿ ಕಡಲ ಸೇರಲಿದೆಯೆಂದು ತನ್ನತನವ ಕಳೆದುಕೊಂಡು ಅಲೆಅಲೆಯಲಿ ಸುಳಿಯುವುದೆಂದು ಹೊತ್ತಾಯಿತು ಗೊತ್ತಾಯಿತು ನನ್ನದೆಂಬುದೆಲ್ಲ ನನ್ನದೇ ಆಗಿರಬೇಕಿಲ್ಲವೆಂದು ಋಣಸಂದಾಯವಾಗದೆ ಬಿಡುಗಡೆಯು ಸಾಧ್ಯವೇ ಇಲ್ಲವೆಂದು ಕಿರುಪರಿಚಯ: ಹವ್ಯಾಸಿ ಬರಹಗಾರರು, ಎರಡು ಕವನಸಂಕಲನಗಳುಪ್ರಕಟವಾಗಿವೆ. ವೃತ್ತಿ-ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರು









