ಕಾವ್ಯಯಾನ
ತುಂಬು ಡಾ.ಗೋವಿಂದ ಹೆಗಡೆ ನಾನೂ ರಂಗವೇರಿದ್ದೇನೆ ನಿನ್ನೊಂದಿಗೆ ನರ್ತಿಸಲಲ್ಲ.. ಮೂಲೆಯಲ್ಲಿ ನಿಂತು ಕುಣಿಯುವ ನಿನ್ನ ಬಿಂಬವ ಎದೆ ತುಂಬಿಕೊಳ್ಳಲಿಕ್ಕೆ ಗೆಜ್ಜೆಯಿಂದ ಉದುರುವ ಕಿರುಗಂಟೆಯೊಂದನ್ನೆತ್ತಿ ಚುಂಬಿಸಲಿಕ್ಕೆ ನೆನಪಿನಂಗಳದಲ್ಲಿ ತೂಗಿಬಿಡಲಿಕ್ಕೆ- ಅನಂತದವರೆಗೆ…
ಶಕ್ತಿ ಅವ್ಯಕ್ತ ಸೃಷ್ಟಿ-ಸ್ಥಿತಿ-ಲಯ ಗರ್ಭದ ಮುಕ್ತ ರಹಸ್ಯ ರಾಣಿ ನಾ! ಹರಿವ ಜ್ವಾಲಾ ಶಕ್ತಿಯೊಳು ತಂಪೆರೆವ ವಿಮುಕ್ತಿ ನಾ! ಸಖಿ,ಕಾಮಿನಿ, ಧರ್ಮಿಣಿ, ಸಂಹಾರಿಣಿ, ವೈಷ್ಣವಿ ನಾ! ಸುಳಿಗಳೊಳು ಸಿಲುಕದಂತೆ ಗರಿಚಾಚಿ ಹೊಳೆವೆ ನಾ! ಪ್ರೀತಿಯ ಕಾಮನ ಬಿಲ್ಲಲಿ ಕಣ್ಣುಗಳ್ನಲಂಕರಿಸುವೆ, ಸಿಹಿಕನಸಮಳೆಯ ಮೌನ ಮುಗುಳ್ನಗೆಯೋರಳಿಸುವೆ, ಗಂಭೀರ ಮೂಗುತಿಯನ್ನು ಏರಿಸಿ ಕಾಂತಿಯ್ನ್ಹೆಚ್ಚಿಸುವೆ, ಸುಪ್ತ ಜ್ಞಾನ, ಮುಕ್ತ ಪ್ರೇಮ, ನಿರ್ಲಿಪ್ತ ಮನದ ಕುಂಕುಮ ಧರಿಸುವೆ. ವಜ್ರಕಲ್ಲಾಗಿ, ಗುಪ್ತಗಾಮಿನಿಯಾಗುವೆ ಕೇಸರಿದಾರಿಣಿಯಾಗಿಬಿಡುವೆ, ನೋಡದಿರು ಬಿಲೋಳಗಿನ ಆಳದ ಪ್ರೀತಿಯ, ಸವಿಯಲಿಚ್ಚಿಸದ್ದಿದ್ದರೆ.. ಕೇಳದಿರು ಮೌನ ದೇಗುಲದೊಳಿರುವ ಹಾಡ, ಕನಸಕಿನ್ನರನಲ್ಲದಿದ್ದರೆ.. ಮುಟ್ಟದಿರು ಮೂಗುತಿಯ, ಮುಗ್ಧತೆಗೆ ಒಲಿವ ಹರಿಯಾಗದಿದ್ದರೆ.. ಪ್ರೀತಿ, ಪ್ರೇಮ, ಸ್ನೇಹ, ತಾಳ್ಮೆ, ತ್ಯಾಗ, ಜ್ಞಾನ, ಮೌನ.. ಎರಡಕ್ಷರದ ಆಭರಣಗಳೇ ಇಡೆಯಿಂದ ಮುಡಿಗೆ.. ನಗ್ನ ನೋಟಕೆ ಎನ್ನಯ ಶಕ್ತಿಕಾಂತಿಯ ಮೂಲವಾಗಿರಲಿ
ಗಝಲ್ ಎ.ಹೇಮಗಂಗಾ ಲೋಕದಾ ನಿಯಮಗಳ ಗಾಳಿಗೆ ತೂರಿ ಬಂದುಬಿಡು ನೀ ಮೆಲ್ಲನೆ ಹೂವೊಳು ಗಂಧ ಬೆರೆತಂತೆ ನನ್ನೊಳು ಸೇರಿಬಿಡು ನೀ ಮೆಲ್ಲನೆ ಟೀಕೆಗಳ ಕತ್ತಿ ಇರಿತಕೆ ನಲುಗಿ ಇದ್ದೂ ಇಲ್ಲದಂತಾಗಿದೆ ಜೀವ ನಲುಮೆ ತೋರಿ ಎದೆಗಪ್ಪಿ ನೋವ ಮರೆಸಿಬಿಡು ನೀ ಮೆಲ್ಲನೆ ನಿನ್ನದೇ ಕನವರಿಕೆಯಲಿ ಮುಳುಗಿ ನಿದಿರೆ ದೂರವಾಗಿದೆ ನನಗೆ ದುಃಖದಿ ಕಂಗಳು ಬಾತುಹೋಗಿರೆ ಸವರಿಬಿಡು ನೀ ಮೆಲ್ಲನೆ ಅದೆಷ್ಟು ಹೇಳಲಾಗದ ಮಾತುಗಳಿದ್ದವು ನನ್ನ ನಿನ್ನ ನಡುವೆ ! ನಗುವನ್ನೇ ಮರೆತ ಅಧರಗಳ ಒಮ್ಮೆ ಚುಂಬಿಸಿಬಿಡು ನೀ ಮೆಲ್ಲನೆ ಗುಡಿಸಲಾದರೂ ಸರಿ, ನಿನ್ನೊಡನೆ ಬಾಳುವಾಸೆ ಇದೆ ಈಗಲೂ ಕಣ್ರೆಪ್ಪೆಯೊಳು ಅವಿತಿಹ ಕನಸ ನನಸು ಮಾಡಿಬಿಡು ನೀ ಮೆಲ್ಲನೆ ನಂಜು ಮುಳ್ಳಾದ ಪ್ರೀತಿಯೇಕೋ ನನ್ನ ಬಲಿಪಡೆಯುತಿದೆ ಹೀಗೆ? ದೇಹ ನಿರ್ಜೀವಗೊಳ್ಳುವ ಮುನ್ನ ನನ್ನವನಾಗಿಬಿಡು ನೀ ಮೆಲ್ಲನೆ ದೀಕ್ಷೆ ತೊಟ್ಟಿಹೆ ನಾ ನೀನಿಲ್ಲಿಗೆ ಬರದೆ ಪ್ರಾಣ ತೊರೆಯೆನೆಂದು ‘ಹೇಮ’ಳ ಅಂತಿಮ ವಿದಾಯಕೆ ಮಡಿಲ ನೀಡಿಬಿಡು ನೀ ಮೆಲ್ಲನೆ ಇವರು ‘ಸಿರಿಗನ್ನಡ ವೇದಿಕೆ’ ಮೈಸೂರಿನ ಜಿಲ್ಲಾಧ್ಯಕ್ಷೆ……ರಾಜ್ಯ ಸಮಿತಿಯ ಉಪಾಧ್ಯಕ್ಷೆ…………..’ ಹೇಮಗಂಗಾ ಕಾವ್ಯ ಬಳಗ’ದ ಅಧ್ಯಕ್ಷೆ ಯಾಗಿ ನೂರಾರು ಕವಿಗಳನ್ನು ಬೆಳಕಿಗೆ ತಂದಿದ್ದಾರೆ . ಅನೇಕ ಸಂಘ , ಸಂಸ್ಥೆಗಳ ಪೋಷಕಿಯಾಗಿ ಸೇವೆ ಸಲ್ಲಿಸಿದ್ದಾರೆ… ಉತ್ತಮ ವಾಗ್ಮಿಯೂ, ಕವಯಿತ್ರಿಯೂ ಆಗಿರುವ ಹೇಮಗಂಗಾ ಇಲ್ಲಿಯವರೆಗೆ ಎರಡು ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ…..’ಮುಕ್ತ ವಚನಾಮೃತ’ …..ನೂರು ವಚನಗಳ ಸಂಗ್ರಹ ಮತ್ತು ‘ ಹೃದಯಗಾನ’ ….ಭಾವಗೀತೆಗಳ ಸಂಕಲನ . ಕನ್ನಡ ಗಜ಼ಲ್ ಗಳ ಸಂಕಲನವೊಂದು ಪ್ರಕಟಣೆಯ ಹಂತದಲ್ಲಿದೆ
ಮೊಗ್ಗಿನ ಜಡೆ ಜಯಾ ಮೂರ್ತಿ ದಟ್ಟ ಕೂದಲಿನ ಪುಟ್ಟ ಸಹನ ಬಯಸಿದಳು ಒಂದುದಿನ ಜಡೆ, ಮಲ್ಲಿಗೆ ಮೊಗ್ಗಿನ ‘ಅಮ್ಮ ಹಾಕು ಮೊಗ್ಗಿನ ಜಡೆ’ ಮುದ್ದುಗರೆದಳು ಅಮ್ಮನೆಡೆ ಮಗಳ ಇಚ್ಚೆ ಪೂರೈಸಲು ಸಂತೆ ಕಡೆ ಚೀಲ ಹೆಗಲಿಗೇರಿಸಿ ತಂದೆ ಹೊರಟರು ಮಲ್ಲಿಗೆ ಕಡೆ ಘಮ ಘಮ ಮೊಗ್ಗು ಮನೆಸೇರಲು ಅಮ್ಮ ಕುಚ್ಚು, ಬೈತಲೆ ಬೊಟ್ಟು, ಜಡೆಬಿಲ್ಲೆ ಹೊರತೆಗೆದಳು ಗಳಿಗೆಯಲ್ಲಿ ಉದ್ದ ಕೂದಲ ಬಾಚಿ ಜಡೆ ಹೆಣೆದಳು ನಲಿಯುತಲಿ ಮೊಗ್ಗ ಪೋಣಿಸುತ್ತಾ ಹೊಲೆದಳು ದಟ್ಟ ಜಡೆಗೆ ಮುಗುಳ್ನಗೆ ಯೊಳು ಕುಚ್ಚು ಗಲಗಲ ಎನ್ನಲು ಮುಗುಳ್ನಗಲು ಮೊಗ್ಗುಗಳು ಬೆರೆಯುತ್ತಾ ಕಿಲ ಕಿಲಾ ಸಹನಾಳ ನಗೆಯೊಳು ಉಡಿಸಿಹಳು ರೇಶಿಮೆ ಸೀರೆ ತಾಯಿ ಮಗಳಿಗೆ, ಪುಟ್ಟ ಸಹನಾ ಮೆರೆದಿರೆ ಕನ್ನಡಿಯಲ್ಲಿ ಜಡೆ ಪ್ರತಿಬಿಂಬಿಸಿರೆ ತಂದೆ ಚಿತ್ರ ತೆರೆದಿರೆ ಸಂತಸ ಮನೆಯಲ್ಲಿ ಹರಿದಿರೆ ಉಳಿದ ಮೊಗ್ಗುಗಳ ಹಾರ ಕೃಷ್ಣ ನ ವಿಗ್ರಹ ಅಲಂಕರಿಸಿರೆ ದೀಪ ಬೆಳಗಿ ಮಗಳ ಆಶೀರ್ವಾದ ತಾಯಿ ಬಯಸಿರೆ ಮಗಳ ಆನಂದ ಹೀಗೆ ಇರಲಿ ಎನ್ನುತಿರೆ ಉರುಳಿತು ಸಂವತ್ಸರುಗಳು ಇಂದು ವಧುವಾಗಿ ಸಹನಾ ನಿಂತಳು ಬಿಳಿಸೀರೆ, ಆಭರಣ ಗಳ ತೊಟ್ಟ ಮಗಳು ಮೊಗ್ಗಿನಜಡೆ ಅಲಂಕೃತ ವ ಇಮ್ಮಡಿಸಲು ಓಡಿತು ತಾಯ ಹೃದಯ ಅಂದಿನ ಸಹನಾ ಮೊಗ್ಗಿನ ಜಡೆ ಬಯಸಿದ ದಿನ ಕೃಷ್ಣ ನ ಆಶೀರ್ವಾದ ಫಲಿಸಿತ್ತು ಈ ದಿನ ಮಗಳು ಅಳಿಯರು ಮಂಟಪದಲ್ಲಿ ನಿಂತ ಸುದಿನ ಮತ್ತೇನ ಬಯಸುವರು ಜನ್ಮವಿತ್ತ ತಂದೆ ತಾಯಿಯರು ಮಗಳ ಸುಖ ಜೀವನ ಅದೇ ಜೀವನದ ಗುರಿ ಧಾರೆ ಎರೆದರು ಮಗಳ, ತುಂಬಿದ ಸಭೆ ಅಕ್ಷತೆಯ ಮಳೆ ಸುರಿಸಿಹರು ಶುಭಮಸ್ತು, ಶುಭಾಶಯಗಳ ಧ್ವನಿ ಪ್ರತಿಧ್ವನಿಸಲು ಮುಗುಳ್ನಕ್ಕರು ದಂಪತಿಗಳು ಅವರ ಆಕಾಂಕ್ಷೆ ಫಲಿಸಲು. ಕಿರು ಪರಿಚಯ: ವಾಸ ಇಟಲಿಯಲ್ಲಿ. ಕರ್ಣಾಟಕ ದಿಂದ ಬೆಂಗಳೂರು ಮೈಸೂರು. ಕವನಗಳನ್ನು ಬರೆಯುವ ಹವ್ಯಾಸ. ಹ್ರತ್ಕಮಲ 50 ಕವನಗಳ ಪುಸ್ತಕ publish ಆಗಿದೆ.
ಗಝಲ್ ರೇಖಾ ಗಜಾನನ ಮೌನವ ಮುರಿದು ಮಾತಿನ ಮನೆಯ ಕಟ್ಟೋಣ ಬಾ ಗೆಳೆಯಾ ನಿನ್ನೆ ಉತ್ತ ಬಯಲಿನಲಿ ಹೊಸ ಬೀಜ ಬಿತ್ತೋಣ ಬಾ ಗೆಳೆಯಾ ಕಾಪಿಟ್ಟ ಮನೋಬಲವು ಬರಿದೇ ಧ್ಯಾನಸ್ಥವಾದರೇನು ಚೆನ್ನ ಕೈಗೆ ಕೈಜೋಡಿಸಿ ಯಶದ ಧನುಸ್ಸನ್ನು ಎತ್ತೋಣ ಬಾ ಗೆಳೆಯ ಒಲವು ಹುಟ್ಟಿತೆಂದರೆ ಅಲ್ಲೊಂದು ಹೊಸಜಗದ ಉಗಮ ತಾನೇ ಹಸಿರ ಹಾಸಿ ಕರೆದಿದೆ ನಮ್ಮಿಬ್ಬರ ಲೋಕ ಸುತ್ತೋಣ ಬಾ ಗೆಳೆಯಾ ಸುತ್ತಮುತ್ತ ಬಂಡೆಗಲ್ಲುಗಳ ಸಾಲು ಬೆಳೆಯುತ್ತಲೇ ಇದೆ ನೋಡು ಕುಶಲದಿಂದ ಕುಂದಿಲ್ಲದ ಮೂರ್ತಿಯನು ಕೆತ್ತೋಣ ಬಾ ಗೆಳೆಯಾ ಜೋಡಿ ‘ರೇಖೆ’ಯ ಪಯಣವಿದು ಜೊತೆಜೊತೆಯಿದ್ದರೆ ಮಾತ್ರ ಗುರಿ ಅದೋ ನೆಮ್ಮದಿಯೆಂಬ ಗಮ್ಯವಿದೆಯಂತೆ ಮುಟ್ಟೋಣ ಬಾ ಗೆಳೆಯಾ ಕಿರು ಪರಿಚಯ: ರೇಖಾ ಗಜಾನನ ಭಟ್ಟ ಹುಟ್ಟೂರು: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೊನ್ನಗದ್ದೆ ವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರವೃತ್ತಿ : ಸಾಹಿತ್ಯದ ಓದು ಹಾಗೂ ಬರೆವಣಿಗೆ ಹಾಗೂ ಗಾಯನ ಪ್ರಥಮ ಕೃತಿಯಾದ ‘ಮಡಿಲ ನಕ್ಷತ್ರ’ ಗಜಲ್ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಯೋಜನೆಯಡಿಯಲ್ಲಿ ಆಯ್ಕೆ ಆಗಿ ,ಪುರಸ್ಕಾರ ಪಡೆದಿದ್ದು, ಈ ವರ್ಷ ಬಿಡುಗಡೆಗೊಂಡಿದೆ. ಗಜಲ್, ಕವನ , ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿ
ಗಝಲ್ ಸುಜಾತಾ ಲಕ್ಮನೆ ಮುಚ್ಚು ಮರೆಯಿಲ್ಲದೆ ಎದೆಕದವ ತೆರೆಯೋಣ ಅಚ್ಚು ಮೆಚ್ಚಿನಲಿ ಒಲವ ಬಂಡಿಯ ತಳ್ಳೋಣ ಅರ್ಥವಾಗದ ಮಾತು ಅದೆಷ್ಟು ಆಡಿದರೇನು ಅಕ್ಕಪಕ್ಕದಲಿ ಕೂತು ಒಳಧ್ವನಿಯ ಕೇಳೋಣ ಬಾಳ ದಾರಿಯಲೆಲ್ಲ ಹೂವಿರಲಿ, ಮುಳ್ಳೇಯಿರಲಿ ನೋವು ನಲಿವಿನ ಮಧ್ಯೆ ಮನ ಬಿಚ್ಚಿ ನಗೋಣ ತೆರೆಮರೆಯಲಿ ಕುಣಿವ ಮುಖವಾಡ ಕಂಡೆಯಾ ಒಳ ಹೊರಗುಗಳನೂ ವಂಚಿಸದೇ ಬಾಳೋಣ ನಮ್ಮ ಭರಪೂರ ಕನಸುಗಳಿಗೆ ಕಡಿವಾಣವಿರಲಿ ಸೋಲು ಗೆಲುವುಗಳಲಿ ಕೈ ಹಿಡಿದು ಸಾಗೋಣ ಎನ್ನ ಕಣ್ಣಾಳದಲಿ ನೀ ಒಮ್ಮೆ ಧುಮುಕಬಾರದೇ ಪರಿಪರಿಯ ಸುಖಕೆ ಮೈ ಮರೆತು ಸೋಲೋಣ ಸಾಗಿ ತೇಲುವ ಮುಗಿಲು ಮಡುಗಟ್ಟಿ ನಿಂತೀತೆ ಮೋಡಾಮೋಡಿಯಲಿ ದಿನ ನೂಕಿ ಬಿಡೋಣ ಎಳೆದ ರಂಗೋಲಿ ಕೆಳಗೆ ಪವಾಡವೇ ನಡೆಯಲಿ ಏರಿಳಿತದ ಬದುಕಲ್ಲಿ ಕೂಡಿ ನಾವು ಹಾಡೋಣ ಅಂತರಾಳದ ಅಳಲಿಗೆಲ್ಲ ದನಿಯಾಗೋಣ ಬಾರೆ “ಸುಜೂ” ನಾವು ಮುದ್ದಾಡಿ ಮೋಹದುಯ್ಯಾಲೆ ಜೀಕೋಣ ಕಿರುಪರಿಚಯ: ಸುಜಾತಾ ಲಕ್ಮನೆ, ಸ್ವಂತ ಊರು ಸಾಗರ. ವಾಸ ಬೆಂಗಳೂರು. ನನ್ನ ಹಲ-ಕೆಲವು ಕವನಗಳು ತುಷಾರ, ಕಸ್ತೂರಿ, ಮಯೂರ, ಕರ್ಮವೀರ , ಮಾಣಿಕ್ಯ, ಸಂಪದ ಸಾಲು, ಪಂಜು ಮುಂತಾದ ಮಾಸ/ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಶೇಷಾಂಕಗಳಲ್ಲೂ ಪ್ರಕಟವಾಗಿವೆ. ಹಲವು ಪತ್ರಿಕೆಗಳಲ್ಲಿ ಗಜಲ್ ಗಳೂ ಪ್ರಕಟವಾಗಿವೆ. ಹವ್ಯಾಸಿ ಕವಯಿತ್ರಿ. ಹಲವು ಕವನಗಳು ತೊಂಬತ್ತರ ದಶಕದಲ್ಲಿ ತುಷಾರದಲ್ಲಿ ಹಿರಿಯರ ಆಯ್ಕೆ ಕವನಗಳಾಗಿ ಸಹ ಪ್ರಕಟವಾಗಿವೆ.
ಓ, ಅವನೇ.. ಪೂರ್ಣಿಮಾ ಸುರೇಶ್ ಅವನನ್ನು ಇಷ್ಟ ಪಟ್ಟಿದ್ದು ಹೇಗೆ,ಯಾವಾಗ? ಪ್ರಶ್ನೆಯಾಗದಿರು ಒಳಗಿನವಳೇ.. ಅದೆಷ್ಟು ಬಾರಿ ಸಮಜಾಯಿಷಿ ನೀಡಿದ್ದೇನೆ ಕಿರಿಕಿರಿ ಮಾಡದಿರು ಹೀಗೆಲ್ಲ ಏನು-ಯಾಕೆಗಳನ್ನು ಎದುರಿಟ್ಟು ! ನಾನು ಬದುಕುತ್ತಿದ್ದೇನೆ ಎಂಬುದಷ್ಟೇ ಸತ್ಯ. ಆದರೆ ಅವಳಿಗದು ರುಚಿಸದು. ಮನಸ್ಸಿಗೆ ಪಾತಿ ಮಾಡಿದ್ದು, ನೆಟ್ಟ ಗಿಡ ಕುಡಿಯೊಡೆದದ್ದು.. ಮೊಗ್ಗು ಕಟ್ಟಿದ್ದು ನೆನಪಿಸುತ್ತಾಳೆ. ನನ್ನ ಅವಳ ಹಾದಿಗೆಳೆಯುತ್ತಾಳೆ ಬಲವಂತವಾಗಿ. “ಗೊತ್ತಿಲ್ಲ”- ಹಾರಿಕೆ ಉತ್ತರನೀಡಲಾರೆ. ನಾನು ನನ್ನ ದಾರಿಯಲ್ಲಿ ಅವನು ತನ್ನ ಗುರಿಯತ್ತ ನಡೆವಾಗ ಒಂದೊಂದು ತಿರುವಿನಲ್ಲೂ ಕಾಡಕುಸುಮ… -ಕೆಂಪಿನ ಕೇಪಳ, ಕಂಪಿನ ರೆಂಜೆ, ಬೇಲಿಯ ನೀಲಿಯ ಪುಟ್ಟಪುಟ್ಟ ಹೂಗಳನಿಟ್ಟವನ ತುಟಿಗಳಲಿ ದುಂಡುಮಲ್ಲಿಗೆ ! ಹೀಗೆ ಅಚಾನಕ ಎದುರಾದ ಹೂಗಳು ನನ್ನೊಳಗೆ ತಂತಾನೇ ಮಾಲೆಯಾದ ಸೋಜಿಗ ಇಂದಿಗೂ ಬಿಡಿಸಲಾಗಿಲ್ಲ! ಬೇಡ. ದೂರದಿರಿ.. ಅವನನ್ನು ಅವನಿಗೇನುಗೊತ್ತು.. ಪ್ರೀತಿ ಬೆಳೆಯುವ ಕಲೆ? ಗೊತ್ತಿದ್ದರೆ… ಬಿಡಿಸುತ್ತಿರಲಿಲ್ಲವೇ ಮಲ್ಲಿಗೆಯಚೆಂಡನ್ನೇ!? ನನ್ನುದ್ದಕ್ಕೂ ನಾ ಬಾಲ್ಯದಿಂದಲೂ ಆಸೆ ಪಟ್ಟ ಮಲ್ಲಿಗೆ. ನಿನ್ನ ಮಲ್ಲಿಗೆಯವನು ಘಮ ತರಲಿ ಎಂದು ಅವನು ನಿನ್ನ ರೆಂಜೆ, ಕೇಪಳಕೆ ದೇವಿ ಪ್ರಸನ್ನಳಾಗಲಿ ಎಂದು ನಾನು ಹಾರೈಸಿಕೊಂಡಿದ್ದೆವು ಪರಸ್ಪರ! ಅದೆಷ್ಟು ಕಾಲ ಬರಿನೆಲದಲ್ಲಿ ಯೋಗಿಯಂತೆ ಸಾಹಿತ್ಯ, ಸಮಾಜ, ಗಂಡು ಹೆಣ್ಣು ಎಂದು ಕಣ್ಣು ಕೂಡಿಸದೇ ನಿರ್ವಿಕಾರನಾಗಿ ಮಾತಿನೆಳೆಗಳನ್ನು ಆತ ಬಿಡಿಸುತ್ತಿದ್ದರೆ… ಅಲ್ಲಲ್ಲಿ ಅಲ್ಪವಿರಾಮ, ಪ್ರಶ್ನಾರ್ಥಕ, ಆಶ್ಚರ್ಯ ಚಿಹ್ನೆ ನಾನು. ಅವನ ಸಂಭ್ರಮಕ್ಕೆ ನನ್ನ ಭಾವ, ನನ್ನ ಪುಳಕಕ್ಕೆ ಅವನ ನಡೆ ತಗಲಿಕೊಂಡಿದ್ದು ಗಮನಕ್ಕೆ ಬಂದಾಗ ವಟವೃಕ್ಷ ಒಳಗೊಳಗೆ ಬೇರಿಳಿಸಿ ಅದರ ಬಿಳಲು ಹಿಡಿದು ನಾನು ಜೋಕಾಲಿ ಆಡುತ್ತಿದ್ಧೆ. ಬೆನ್ನ ಹಿಂದಿನ ಹಸ್ತ ಅವನದೇ ಇರಬೇಕು. ಜೀಕುವ, ತೂಗುವ ಸಂಭ್ರಮ.. ಅವನ ಕಣ್ಣಿನೊಳಗೆ ನನ್ನ ಆತ್ಮದ ಪ್ರತಿಫಲನ. ಓ ಇವನೇ.. ಜೋರಾಗಿ ಜೀಕಿ ಬಿಡು ಹೊರಗೆ ಆಕಾಶಕ್ಕೆ. ಸ್ವರ್ಗದ ಬಾಗಿಲಿಗೆ. ನಿನ್ನ ಸೆಳೆದು ನಾನು ಒಳಸೇರಿಬಿಡುವೆ. ಕಿರು ಪರಿಚಯ: ಪೂರ್ಣಿಮಾ ಸುರೇಶ್. ಉಡುಪಿ. ಕವಯತ್ರಿ ಹಾಗೂ ರಂಗನಟಿ. 3 ಕವನಸಂಕಲನಗಳು ಪ್ರಕಟಗೊಂಡಿವೆ. gss ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು ದೊರಕಿವೆ. ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ- ಕೊಂಕಣಿ ಪದಕೋಶ ಸಂಗ್ರಹವು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡಿವೆ . ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ,ಆಕಾಶವಾಣಿ ಕಲಾವಿದೆ. ವೃತ್ತಿ ಬಸ್ ಉದ್ಯಮ. ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿಯಾಗಿ ತರಬೇತು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.
ಸ್ವಾತಿ ಮುತ್ತು ಮಧು ವಸ್ತ್ರದ್ ಬಾಲ್ಯದಾ ದಿನಗಳಲ್ಲಿ ತಾಯ್ತಂದೆ,ಅಣ್ಣಂದಿರ ಬೆಚ್ಚಗಿನಾ ಗೂಡಿನಲ್ಲಿ ನಲಿದಿದ್ದ ಮುಗ್ಧತೆಗೆ ಸಿಕ್ಕಿದ್ದು ವಾತ್ಸಲ್ಯದಮುತ್ತು ಶಾಲೆಯಾ ದಿನಗಳಲ್ಲಿ ವಿದ್ಯೆಯಾ ಕಲಿಯುವಲ್ಲಿ ಗುರುಗಳಿಂದ ಸಿಕ್ಕಿದ್ದು ಮಾರ್ಗದರ್ಶನದ ನುಡಿ ಮುತ್ತು.. ಹರಯದಾ ಬನದಲ್ಲಿ ಮುಂಜಾನೆಯ ಮಂಜಿನಲಿ ಚಿಗುರೆಲೆಯ ಅಂಚಿನಲಿ ನನ್ನ ನೋಡಿ ನಕ್ಕಿದ್ದು ಇಬ್ಬನಿಯಮುತ್ತು ಸಪ್ತಪದಿಯ ತುಳಿದಲ್ಲಿ ನವಜೀವನದ ಹೊಸಿಲಲ್ಲಿ ಮೊದಲರಾತ್ರಿಯ ಗುಂಗಿನಲ್ಲಿ ನಲ್ಲ ನನಗಿತ್ತಿದ್ದು ಒಲವಿನ ಮುತ್ತು ನವಮಾಸ ಮುಗಿಯುತಲಿ ತಾಯ್ತನದ ಮೋಡಿಯಲಿ ನನ್ನ ಮುದ್ದಿನ ಕರುಳಕುಡಿಗೆ ಕಣ್ಮುಚ್ಚಿ ನಾನಿತ್ತಿದ್ದು ಮಮತೆಯ ಮುತ್ತು ತುಂಬುಪ್ರೀತಿಯ ಬಾಳಿನಲ್ಲಿ ದಿವ್ಯಸಾರ್ಥಕತೆಯಲ್ಲಿ ಕಷ್ಟಸುಖಗಳ ಮೂಸೆಯಲ್ಲಿ ನಾನು ಗಳಿಸಿದ್ದು ಅನುಭವದ ಮುತ್ತು ಜೀವನದ ಹಾದಿಯಲ್ಲಿ ಕರ್ತವ್ಯಗಳ ಭರದಲ್ಲಿ ಅಡೆತಡೆಗಳು ಬಂದಾಗ ನಲ್ಲನಿಂದ ಸಿಕ್ಕಿದ್ದು ಭರವಸೆಯ ಮುತ್ತು ಈ ಬಾಳಿನ ಹಾದಿಯಲ್ಲಿ ನಲ್ಲನ ಒಲುಮೆಯಿದ್ದಲ್ಲಿ ಸ್ವಾತಿಮಳೆ ಇಲ್ಲದೆಯೂ ನಾನಾಗಬಲ್ಲೆನು ಸ್ವಾತಿ ಮುತ್ತು
ಗಝಲ್ ಡಾ. ಗೋವಿಂದ ಹೆಗಡೆ ಸುಳಿಬಾಳೆಯಂಥ ಹೆಣ್ಣು ನೀನು ತಿಳಿಯದ್ದು ನನ್ನ ತಪ್ಪು ಆಲಿಕಲ್ಲ ಮಳೆಯಂತೆ ಸುರಿದೆ, ಸುರಿದಿದ್ದು ನನ್ನ ತಪ್ಪು ಕನಸಿನ ಪುಟದಲ್ಲಿ ಬರೆದೊಂದು ಹಾಡಂತೆ ಕಂಡೆನೇ ನಿನ್ನ ಎತ್ತಿ ಅಪ್ಪಿದೆ ನೀ ಗರುಕೆಯೆಸಳ, ಹೆಚ್ಚು ಬಯಸಿದ್ದು ನನ್ನ ತಪ್ಪು ಎದೆ ಕೊರೆದ ದುಗುಡಕ್ಕೆ ಹೊರದಾರಿ ಬಯಸಿದವಳು ನೀನು ಕಿವಿಯಾದ ಮಾತ್ರಕ್ಕೆ ಆಸರೆ ನಾನೆಂದು ಉಬ್ಬಿದ್ದು ನನ್ನ ತಪ್ಪು ಫೋಲ್ ವಾಲ್ಟ್ ನಲ್ಲಿ ಜಿಗಿದು ದಾಟಿ ಕೋಲನ್ನು ಕೈ ಬಿಡುವರು ಮಣ್ಣಿಗೆಸೆದೆ ನೀನೆಂದು ಮರುಗುತ್ತ ಉಳಿದಿದ್ದು ನನ್ನ ತಪ್ಪು ದಾಟಿ ಹೋಗಿದ್ದೀ ನೀನು ಗೊತ್ತು,ಮರಳಿ ಹರಿಯದು ನದಿ ಬಿದ್ದ ಪಕಳೆಯನೆತ್ತಿ ಸಖೀ,ತುಟಿಗೊತ್ತಿ ಕಳಲಿದ್ದು ನನ್ನ ತಪ್ಪು
ಬೆನ್ನ ಮೇಲೆ ಬರೆದ ಮುಳ್ಳಿನ ಚಿತ್ರ ಬಿದಲೋಟಿ ರಂಗನಾಥ್ ಮನುಷ್ಯತ್ವವನ್ನೇ ಗಾಳಿಗೆ ತೂರಿದ ನೀಚ ಮನಸೇ ಹೆಣದ ಮೇಲಿನ ಕಾಸಿಗೆ ನಾಲಿಗೆಯನ್ನೇಕೆ ಚಾಚಿದೆ ? ಜೀವ ಇರುವಾಗ ಇಲ್ಲದ ಹೆಸರಿನ ಮುಂದೆ ನಿನ್ನ ಹೆಸರನ್ನೇಕೆ ಜೋಡಿಸುತ್ತಿ? ನಿಷ್ಠೆ ಇಲ್ಲದ ಮನಸನು ಹೊತ್ತು ಹೊಲಸು ಆಗಿ ಕೆಸರು ರಸ್ತೆ ಚರಂಡಿಗಳಲ್ಲಿ ಉರುಳಿ ಕೈ ತೊಳೆಯದೇ ಹರಿವಿ ನೀರಿಗೆ ಕೈ ಅದ್ದುವ ನಿನ್ನ ನಡೆ ಎಂದಿಗೂ ಗಾಳಿಗೋಪುರ ಇದ್ದ ಸೀರೆಯನು ಉಡದೇ ಅಲ್ಲೆಲ್ಲೋ ಬೇಲಿ ಮೇಲಿರುವ ಸೀರೆಗೆ ಆಸೆ ಪಟ್ಟು ಮುಟ್ಟಲು ಹೋಗಿ ಜಾರಿ ಹಾರಿದ ಸೀರೆಯ ಬದುಕು ಮುರಾಬಟ್ಟೆ ! ನಂಬಿಕೆಯ ಎದೆಯ ಮೇಲೆ ಬೈರಿಗೆ ತಿರುವಿ ಹೋದ ಹೆಜ್ಜೆಯೇ ನಿನಗೂ ಕಾದಿದೆ ಬೆಂಕಿ ಬವಣೆ ಸುಖದ ಅಮಲಲಿ ತೇಲುವ ನೀನು ಕಮರಿ ಹೋಗುವ ಕಾಲ ದೂರವಿಲ್ಲ. ರೋಧಿಸುತ್ತಿರುವ ಮಣ್ಣಾದ ಮನಸಿನ ನೋವು ನಿನಗೆ ತಟ್ಟದಿರುವುದೆ? ಸುಳ್ಳಿನ ಪಾಯದ ಮೇಲೆ ಸತ್ಯದ ಗೋಪುರ ನಿಲ್ಲುವುದು ಕಷ್ಟ.! ಎಂದಿಗೂ. ನೀನಿಗ ಹಾರಾಡುವ ಹಕ್ಕಿಯಾಗಿರಬಹುದು ಆದರೆ ನೀನು ಎಷ್ಟೇ ಉಜ್ಜಿ ತೊಳೆದರು ನಿನ್ನ ಕೈಗೆ ಅಂಟಿದ ಪಾಪದ ಬಣ್ಣ ಎಂದೂ ಅಳಿಸದು ! ನೋವಿನಿಂದ ಹೋದ ಆ ಉಸಿರು ನಿನ್ನ ಬೆನ್ನ ಮೇಲೆ ಬರೆದ ಅಳಿಸಲಾಗದ ಮುಳ್ಳಿನ ಚಿತ್ರ ಕರುಳು ಕುಡಿಗಳಿಗೆ ಕೊಟ್ಟ ಅಪ್ಪನ ಉಸಿರಿಲ್ಲದ ಚಿತ್ರಪಟವನ್ನು ನೋಡಿದ ಪ್ರತಿಸಾರಿಯು ಅವು ಬಿಡುವ ನಿಟ್ಟುಸಿರು ನಿನ್ನ ಸುಡುತ್ತಲೇ ಇರುತ್ತದೆ ನೀನು ನರಳಿ ನರಳಿ ಸಾವಿನ ಮನೆಯ ತಟ್ಟುವಾಗ ನೀನು ಮಾಡಿದ ಮೋಸವನ್ನು ಉಂಡು ನೊಂದು ಬೆಂದು ತೊರೆದಿದ್ದ ಆ ಉಸಿರಿಗೆ ಬಹುಶಃ ರೆಕ್ಕೆ ಬಂದು ಮುಕ್ತಿಮಾರ್ಗದ ಕಡೆಗೆ ಹಾರಬಹುದು !
You cannot copy content of this page