ಕಾವ್ಯಯಾನ
ಘನಿತ ಡಾ.ಗೋವಿಂದ ಹೆಗಡೆ ಘನಿತ ಇಬ್ಬನಿಯಲ್ಲಿ ತೊಯ್ದ ಪುಲಕದಲ್ಲಿ ಹೂವು ಇನ್ನೇನು ಆರಿಹೋಗುವ ಆತಂಕದಲ್ಲಿ ಇಬ್ಬನಿ ಬಿಂದು ನೋಡುತ್ತ ನಿಂತ ನಾನು-ನೀನು ಇನ್ನೇನು ಇದೇ ಇಬ್ಬನಿ ನಿನ್ನ ಕಂಗಳ ತೋಯಿಸುತ್ತದೆ ನಿನ್ನ ಮಡಿಲಿಗೆ ನನ್ನ ತಲೆಗೆ ಅವಿನಾ ಸಂಬಂಧ ಅದಕ್ಕೆ ಗೊತ್ತೇ ಈಗ ನೀನು ಸೆಳೆಯುವೆ ಮಡಿಲಿಗೆ ತಬ್ಬಿ ಮುದ್ದಿಸುವೆ ಅದುರುವ ತುಟಿಗಳಲ್ಲಿ “ನಾನಿದೀನಿ ಕಣೋ” ಹೇಳುವ ಹೇಳದಿರುವ ಸಂಭವದಲ್ಲಿ ತಾರೆಗಳು ಕಂಪಿಸಿವೆ ಅಲೆಗಳು ಮರ್ಮರ ನಿಲ್ಲಿಸಿವೆ ಎಷ್ಟೊಂದು ದೇಶಕಾಲಗಳು ಈ ಒಂದು ಕ್ಷಣಕ್ಕಾಗಿ ಮಿಡಿದಿವೆ ತುದಿಗಾಲಲ್ಲಿ, ಮೊರೆದಿವೆ ಇದೇ ಒಂದು ಚಣ ಅದೇ ಇಬ್ಬನಿಯ ಒಂದೇ ಒಂದು ಬಿಂದು ಜಾರಿ ಹನಿಯಲು ನಿನ್ನ ರೆಪ್ಪೆಯ ಅಂಚಿನಿಂದ ನನ್ನ ಎದೆಗೆ ಘನೀಭವಿಸುತ್ತದೆ ಆಗ ಕಾಲದ ಈ ಬಿಂದು ಅನಂತಕ್ಕೆ ಸಲ್ಲುವ ಚಿತ್ರವಾಗಿ ಹಾಗಲ್ಲದೆ ಮುಕ್ತಿಯೆಲ್ಲಿ ಹೂವಿಗೆ ಇಬ್ಬನಿಗೆ ನನಗೆ-ನಿನಗೆ. ********









