ಕಾವ್ಯಯಾನ
ಗಝಲ್ ಎ.ಹೇಮಗಂಗಾ ಬಾಳಿನೆಲ್ಲ ಏಳುಬೀಳುಗಳ ದಾಟಿದ್ದೇನೆ ಕಾಲವೇ ಮುನ್ನಡೆಸು ನನ್ನ ಗೋಳಿನೆಲ್ಲ ಸರಮಾಲೆಗಳ ಬಿಸುಟಿದ್ದೇನೆ ಕಾಲವೇ ಮುನ್ನಡೆಸು ನನ್ನ ನಂಜಾದ ಅವನ ಕಹಿನೆನಪುಗಳು ಅಸ್ತಿತ್ವವನ್ನೇ ಬಲಿಪಡೆಯುತ್ತಿವೆ ಅಂತರಾಳದಿ ನೋವನ್ನೆಲ್ಲ ಹೂಳಿದ್ದೇನೆ ಕಾಲವೇ ಮುನ್ನಡೆಸು ನನ್ನ ಹೂವಿಂದ ಹೂವಿಗೆ ಹಾರುವ ದುಂಬಿ ಅವನೆಂದು ತಿಳಿಯಲಿಲ್ಲ ತಪ್ಪಿನ ಅರಿವಾಗಿ ಎಚ್ಚೆತ್ತುಕೊಂಡಿದ್ದೇನೆ ಕಾಲವೇ ಮುನ್ನಡೆಸು ನನ್ನ ವಂಚನೆಯ ಕತ್ತಿಯೇಟಿಗೆ ಹೃದಯದ ಗಾಯವಿನ್ನೂ ಮಾಯಬೇಕಿದೆ ಸತ್ತ ಕನಸಿಗೆ ಜೀವ ತುಂಬಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ ಜೀವನಕ್ಕೆ ಬೆನ್ನು ತಿರುಗಿಸಿ ಹೇಡಿಯಂತೆ ಸಾವ ಬಯಸದಿರು ಹೇಮ ನನಗೆಂದೇ ನಾನಿನ್ನು ಬದುಕಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ ******









