ಕಾವ್ಯಯಾನ
ಜೀವನಕ್ಕೊಂದು ಕ್ಲಾಸ್ ಶೀಲಾ ಭಂಡಾರ್ಕರ್ ನಾನೊಂದು ಹೆಜ್ಜೆ ಇಡುವುದರಲ್ಲಿ..ಸಾಗುತ್ತದೆ. ನಾಲ್ಕು ಹೆಜ್ಜೆ ಮುಂದೆ ನನ್ನ ಜೀವನ. ಪುನಃ ನನ್ನ ಒಂದು ಹೆಜ್ಜೆಗೆ ಅದು ಮತ್ತೆ ನಾಲಕ್ಕು. ಆದರೂ ನಗುತ್ತಲೇ ಇದ್ದ ನನ್ನ ನೋಡಿ. ಕೇಳಿತೊಮ್ಮೆ ನನ್ನದೇ ಮನಸ್ಸು. ನಗುತ್ತಲೇ ಇರುವಿಯಲ್ಲ.. ಬದುಕೇ ನಿನ್ನಿಂದ ಬಲು ಮುಂದೆ ಸಾಗಿದ್ದರೂ..!! ನಾನಂದೆ.. ಎಷ್ಟು ವೇಗವಾಗಿ ಸಾಗಿದರೂ ಇದ್ದೇ ಇದೆಯಲ್ಲ ಮುಂದೆ ಗಡಿ.. ಅಲ್ಲಿಂದ ಇಡಲಾದೀತೆ ಒಂದೇ ಒಂದು ಅಡಿ. ಅಲ್ಲಿ ನಿಂತು ಕಾಯುತ್ತಿರಲಿ. ತಲುಪುತ್ತೇನೆ ನಾನು ನನ್ನದೇ ವೇಗದಲ್ಲಿ ನನ್ನದೇ ಗತಿಯಲ್ಲಿ ತಿರುಗಿ ನೋಡಿ ನಗುತ್ತೇನೆ. ಕಳೆದ ದಿನಗಳನ್ನೊಮ್ಮೆ. ಓಡುವ ಭರದಲ್ಲಿ ನಿಲ್ಲದೆ ಓಡಿದ ಜೀವನವನ್ನೊಮ್ಮೆ ಮಾತನಾಡಿಸಿ… ಜೀವಿಸುವುದು ಹೇಗೆಂದು ತಿಳಿಸಿಕೊಡುತ್ತೇನೆ.. *******









