ಕಾವ್ಯಯಾನ
ಸಿಗಲಾರದ ಅಳತೆ ವಸುಂದರಾ ಕದಲೂರು ನೀನು, ನಿನ್ನ ಕಣ್ಣು ಕೈ ಮನಸ್ಸು ನಾಲಗೆಗಳಲ್ಲಿ ಅಂದಾಜು ಪಟ್ಟಿ ಹಿಡಿದು ಅಳೆದೆ ಅಳೆದೆ ಅಳೆದೆ ಅಳೆಯುತ್ತಲೇ ಇದ್ದೀಯೆ.. ಸರಿ, ಅಳೆದುಕೋ ಹಾಗೆ ಅಳತೆಗೆ ದಕ್ಕುವುದಾದರೆ ನೀ ಅಳೆಯುವುದಾದರೂ ಏನನ್ನು! ಒಂದಷ್ಟು ಅಂದಾಜು ಸಿಗುವ ಗಾತ್ರ- ಗೋತ್ರ; ಉಬ್ಬುತಗ್ಗು ಅವಯವ- ಅವ್ವವ್ವಾ !! ಅಷ್ಟೇ. ಅಷ್ಟಕ್ಕೇ ನಿನಗೆ ದಕ್ಕಿಬಿಟ್ಟರೆ, ರೇ… ಅರೇ ಹೋಗು, ಅಳೆದುಕೋ ನಿನ್ನಾ ಅಳತೆಗೋಲು ಅಂದಾಜು ಶತಮಾನ ಹಳತು ಅದರ ಗೋಲು. ಮಾಡಿಕೊಂಡು ಬಂದದ್ದು ಬರೀ ರೋಲುಕಾಲು. ಅಳೆದೂ ಸುರಿದೂ; ಸುರಿದೂ ಅಳೆದೂ ಸರಕು ಎಂದೋ ಬರಿದಾದ ಒಂದು ಗುಜರಿ ಮಾಲು. ಅಕೋ.., ಅಳೆದು ಕೋ ನೀನು ಅಳೆದು ಕೋ.. ಖೋ.. ಖೋ.. ಹೋಗು ನೀ ಅತ್ತ, ನೀ ಸದಾ ಅತ್ತತ್ತ. ನಿನಗೆ ಈ ಅಳತೆ ಎಂಬುದು ಒಂದು ನಿಮಿತ್ತ. ಅಳತೆಯಿಂದ ಅವಳನು ಯಾರೂ ಗಿಟ್ಟಿಸಿಕೊಳಲಾಗದ್ದು ಎಂದೆಂದಿಗೂ ನಿಶ್ಚಿತ. ತಿಳಿ ಅಳತೆಗೆ ನಿಲುಕದ್ದು ಅಪಾರ ಅನೂಹ್ಯ ಅದೋ ಅವಳ ಚಿತ್ತ. ******









