ಕಾವ್ಯಯಾನ
ಗುಪ್ತಗಾಮಿನಿ ವಿದ್ಯಾ ಶ್ರೀ ಎಸ್ ಅಡೂರ್. ಸಾಗರವ ಸೇರುವ ನದಿಯಾಗಿದ್ದೆ ನಾನು ಬಳುಕುತ್ತಿದ್ದೆ,ಕುಲು ಕುಲು ನಗುತ್ತಿದ್ದೆ. ನದಿಯೆಲ್ಲ ಬತ್ತಿ ನೀರೇ ಇಲ್ಲ ಈಗ ಯಾರಿಗೂ ಕಾಣದಂತೆ ಗುಪ್ತಗಾಮಿನಿ ಯಾಗಿದ್ದೇನೆ. ರೆಕ್ಕೆ ಬಿಚ್ಚಿ ಎತ್ತರೆತ್ತರಕ್ಕೆ ಹಾರುವ ಹಕ್ಕಿ ಯಾಗಿದ್ದೆ ನಾನು ಹಾಡುತ್ತಿದ್ದೆ,ನಲಿನಲಿದಾಡುತ್ತಿದ್ದೆ ಹಾರಾಡಲು ರೆಕ್ಕೆಗಳೇ ಇಲ್ಲ ಈಗ ಅನಂತ ದಿಗಂತ ವನ್ನು ಕಂಡು ,ಮೂಕವಾಗಿ ರೋಧಿಸುತ್ತಿದ್ದೇನೆ. ಅಂದಚೆಂದದಿ ಕಂಪಬೀರುವ ಹೂವಾಗಿದ್ದೆ,ನಾನು ಬೀಸುವ ತಂಗಾಳಿಗೆ ತೊಯ್ದಾಡುತ್ತಿದ್ದೆ ಕಂಪ ಬೀರಲು ಹೂವುಗಳೇ ಇಲ್ಲ ಈಗ ತಂಗಾಳಿಗೆ ಮೈ ಒಡ್ಡುವ ಮನಸಿಲ್ಲದೇ ನೋಯುತಿದ್ದೇನೆ. ಕನಸ ಹಕ್ಕಿಗಳಿಗೆ ಗೂಡು ಕಟ್ಟುವ ಮರವಾಗಿದ್ದೆ ನಾನು ಅವುಗಳ ಚಿಕ್ ಚೀವ್ ಕಲರವದಿಂದ ಮುದಗೊಳ್ಳುತ್ತಿದ್ದೆ ಅವುಗಳೆಲ್ಲ ವಲಸೆಹೋಗಿ ಮರವೆಲ್ಲ ಖಾಲಿ ಈಗ ಮೌನ ಆವರಿಸಿ ಕಿವಿ ಇದ್ದೂ ಕಿವುಡಿ ಯಾಗಿದ್ದೇನೆ. ಎಲ್ಲರ ರೀತಿ ನೀತಿ ನಿರ್ಧಾರ ಗಳಿಗೆ ಸಮ್ಮತಿಯಾಗಿದ್ದೆ ನಾನು ಎಲ್ಲರ ಮನಗಳಿಗೂ ತೆರೆದುಕೊಳ್ಳುತ್ತಿದ್ದೆ ಹಿಂದಿದ್ದ ಜೀವನದ ಉತ್ಸಾಹವೇ ಇಲ್ಲ ಈಗ ಮನದ ಬಾಗಿಲು ಮುಚ್ಚಿ ಒಂಟಿ ಯಾಗಿದ್ದೇನೆ. *******









