ಗಝಲ್
ರತ್ನರಾಯ ಮಲ್ಲ ನಿನ್ನ ಆಶೀರ್ವಾದದಿಂದಲೇ ಸಂಪತ್ತನ್ನು ಗಳಿಸಿದೆ ಮಾ ಆ ದುಡ್ಡು ನನ್ನೆಲ್ಲ ಮನದ ಶಾಂತಿಯನ್ನು ಕಳೆದಿದೆ ಮಾ ಹಣದ ಮುಂದೆ ಪ್ರೀತಿ-ಪ್ರೇಮಗಳು ಗೌಣವಾಗಿದ್ದವು ಅಂದು ಜೇಬು ಭಾರವಾಗಿದ್ದರೂ ಇಂದು ನೆಮ್ಮದಿ ಗತಿಸಿ ಹೋಗಿದೆ ಮಾ ಸಾವಿನ ಸುದ್ದಿಯು ನನ್ನನ್ನು ಮತಿಭ್ರಮಣೆಗೆ ನೂಕುತ್ತಿದೆ ಕಣ್ಮುಂದಿನ ಅಂತರದಿಂದ ಹೃದಯಬಡಿತ ನಿಂತಿದೆ ಮಾ ಕರೆಗಳ ಕರತಾಡನ ನನ್ನ ಕರುಳನ್ನು ಕಿತ್ತು ತಿನ್ನುತಿದೆ ದೃಶ್ಯ ಕರೆಯಲ್ಲಿ ದರುಶನವ ಪಡೆದ ಪಾಪಿ ನಾನು ಹುಚ್ಚಾದೆ ಮಾ ವಾಹನಗಳ ಸಂಖ್ಯೆಗೆ ಮಿತಿಯಿಲ್ಲ ಮನೆಯ ಆವರಣದಲ್ಲಿ ಸಂಚಾರದ ದಟ್ಟಣೆಯು ನಿನ್ನಿಂದ ದೂರ ಮಾಡಿದೆ ಮಾ ಕಂಬನಿಯು ಮಳೆಯನ್ನು ನಾಚಿಸುತಿದ್ದರೂ ಅವನಿ ಒದ್ದೆಯಾಗಲಿಲ್ಲ ಹತ್ತಿರ ಬರಲಾಗದೆ ನಿಂತಲ್ಲಿಯೆ ಉಸಿರು ನಿಲ್ಲುತಿದೆ ಮಾ ಹಸಿ ಮಾಂಸದ ಮುದ್ದೆಯನ್ನು ಕಂಡು ಖುಷಿ ಪಟ್ಟವಳು ನೀನು ನಿನ್ನ ಋಣ ತೀರಿಸಲಾಗದೆ ‘ಮಲ್ಲಿ’ಯ ಮನವು ಗೋರಿಯನ್ನು ಅಗೆಯುತಿದೆ ಮಾ **********








