ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅಂತರಂಗದ ಅಲೆಗಳು

                         ಸುಜಾತ ರವೀಶ್ ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಳಾಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ ಹುಣ್ಣಿಮೆ ಅಮಾವಾಸ್ಯೆಗಳ ಹಂಗಿಲ್ಲ. ಅವಿರತ ನಿರಂತರ ಅನಂತ.ಎಂದೋ ಎಲ್ಲೋ ಆದ ಅನುಭವದ ನೆನಹು ಇನ್ನೆಂದೋ ಇನ್ನೆಲ್ಲೋ ಧುತ್ತನೆ ಮನದಂಗಳದಲಿ ಪ್ರತ್ಯಕ್ಷ.ಕವಿವಾಣಿ ನುಡಿದಂತೆ “ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ತಂಪು” ಇಂದಿಗೂ ತಾಜಾ ತಾಜಾ ಹಸಿ ಹಸಿ. ಇವತ್ತು ಬರೆಯಹೊರಟಿರುವ ವಿಷಯ ತುಂಬಾ ದಿನದಿಂದ ಮನದಲ್ಲಿತ್ತು. ಮುಂದೂಡೂತ್ತಲೇ  ಇದ್ದೆ. ಹಾಗಾಗಿ ಈಗ ನಿಮ್ಮ ಮುಂದೆ ನನ್ನ ಅಂತರಂಗದಲೆಯ ನರ್ತನ. ಮನೆಯ ಬಳಿಯೇ  ಉದ್ಯಾನವಿದ್ದರೂ ರಿಂಗ್ ರಸ್ತೆಯಲ್ಲಿ ಗೆಳತಿಯೊಡನೆ ನಡೆದಿತ್ತು ನನ್ನ ಮುಂಜಾವಿನ ವಾಯುವಿಹಾರ. ಗೆಳತಿ ಬೆಂಗಳೂರಿಗೆ ಶಿಫ್ಟ್  ಆದ್ದರಿಂದ ಒಬ್ಬಳೇ ತಾನೇ ಇನ್ನು ಮುಂದೆ ಉದ್ಯಾನವನಕ್ಕೇ ಹೋಗೋಣ ಎಂದು ನಿರ್ಧರಿಸಿದೆ. ಸರಿ ಆ ಬೆಳಿಗ್ಗೆ ಹೊರಟಿತು ನನ್ನ ಸವಾರಿ.ಹಿಂದಿನ ರಾತ್ರಿ ಜೋರಾಗಿ ಮಳೆ ಗಾಳಿ ಬಂದ ಕಾರಣ ವಾತಾವರಣವೆಲ್ಲಾ ತಂಪು ತಂಪು ಹಾಯಿ ಹಾಯಿ. ಗೇಟಿನ ಬಳಿ ಹೋಗುತ್ತಿದ್ದಂತೆ ತಡೆದು ನಿಲ್ಲಿಸಿತು  ಆ ಕಂಪು. ಏನೋ ಪರಿಚಿತ ಅನ್ನಿಸ್ತಿದೆ ಆದರೆ ನಿಖರವಾಗಿ ಗೊತ್ತಾಗ್ತಾಯಿಲ್ಲ.ಒಂದು ಕ್ಷಣ ನೆನಪಿಸಿಕೊಂಡ ನಂತರ ಯಾವುದೋ ಹೂವಿನದು ಅನ್ನಿಸಿತು.ಮೆದುಳಿಗೆ ಮತ್ತಷ್ಟು ಕೆಲಸ ಕೊಡುವಷ್ಟರಲ್ಲಿ ಕಣ್ಣಿಗೆ ಬಿತ್ತು ಆಕಾಶಮಲ್ಲಿಗೆಯ ಮರ. ತಕ್ಷಣ ಹೊಳೆಯಿತು ಅದು ಆಕಾಶಮಲ್ಲಿಗೆ ಹೂವಿನ ನರುಗಂಪು ಎಂದು.ಈ ಸುಗಂಧದ ಬಂಧ ಬಾಲ್ಯದ ನಂಟು.ಚಿಂತಾಮಣಿಯಲ್ಲಿ ಅಜ್ಜಿಮನೆಯ ದಾರಿಯುದ್ದಕ್ಕೂ ಮತ್ತು ಅಲ್ಲಿದ್ದ ಪಾರ್ಕಿನಲ್ಲೂ ಇವೇ ಮರಗಳು. ಸಾಮಾನ್ಯವಾಗಿ ನಾವು ಹೋಗುತ್ತಿದ್ದುದು ಏಪ್ರಿಲ್ ಮೇ ತಿಂಗಳಾದ್ದರಿಂದ ಮರತುಂಬಾ ನಕ್ಷತ್ರದಂತಹ ಹೂಗಳುˌ! ಬೆಳಿಗ್ಗೆ ರಸ್ತೆಯಿಡೀ ಬಿದ್ದಿರುತ್ತಿದ್ದವು. ನೋಡಲು ಥೇಟ್ ಸುಗಂಧರಾಜದಂತೆಯೇ!ಅದರೆ ಅಷ್ಟು ತೀಕ್ಷ್ಣ ಪರಿಮಳವಿಲ್ಲ.ದೇವರ ಪೂಜೆಗೆ ಅರ್ಹವಿಲ್ಲ ಅಂತಿದ್ರು ದೊಡ್ಡವರು.ನಾವು ಮಕ್ಕಳು ಅವನ್ನು ಆರಿಸಿ ತೊಟ್ಟ ಲಂಗಗಳಲ್ಲಿ ಉಡಿ ತುಂಬಿಸಿಕೊಂಡು ತರುತ್ತಿದ್ದೆವು.ಆ ನಂತರ ರಂಗವಲ್ಲಿ ಚಿತ್ತಾರ ಮಾಡಿಯೋ ಮಾಲೆಯೋ ಕಟ್ಟುತ್ತಿದ್ದೆವು. ದೇಟು (ತೊಟ್ಟು) ಉದ್ದವಾದ್ದುದರಿಂದ ಹೊಸದಾಗಿ ಹೂ ಕಟ್ಟಲು ಕಲಿಯುವವರಿಗೆ ಸುಲಭ ಆಗುತ್ತಿತ್ತು. ನಂತರದ ದಿನಗಳಲ್ಲಿ ಅದರ ಒಡನಾಟವೇ ಇಲ್ಲ.ˌ ಹಾಂ! “ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ” ಹಾಡು ಕೇಳಿದಾಗಲೆಲ್ಲಾ ಈ ನೆನಪು ಸುಳಿದು ಹೋಗುತ್ತಿದ್ದುದು ಉಂಟು. 35_40 ವರ್ಷಗಳ ಹಿಂದೆ ಆಘ್ರಾಣಿಸಿದ ಆ ಕಂಪು ಇನ್ನೂ ಮನದಲ್ಲಿ ಉಳಿದಿದೆಯೆಂದರೆ ಮಾನವನ ಮಿದುಳು ಚಮತ್ಕಾರವಲ್ಲದೇ ಇನ್ನೇನು?ಆಗತಾನೇ ಬಿದ್ದಿದ್ದ ಕಾಲ್ತುಳಿತಕ್ಕೆ ಸಿಕ್ಕದ ಹೂಗಳನ್ನು ಆರಿಸಿ ತಂದು ಫೋಟೋ ತೆಗೆದು ಹೂದಾನಿಯಲ್ಲಿಟ್ಟೆ.3_4  ದಿನಗಳವರೆಗೂ ಬಾಡದೆ ಮನೆಯೆಲ್ಲಾ ಆ ಮಂದ್ರ ಪರಿಮಳ ಆವರಿಸಿತ್ತು ಅಂತೇ  ಮನದ ತುಂಬಾ ಕಳೆದ ಆ ಬಾಲ್ಯದ ದಿನಗಳ ಮೆಲುಕೂ! ಜೀವನವೇ ಹೀಗೇ….. ಬಾಳ ಕಡಲಿನಲಿ ನೆನಪಿನ ಹಾಯಿದೋಣಿಯ ಯಾನ. ಸುಜಾತ ರವೀಶ್ ಲೇಖಕರ ಪರಿಚಯ: ಜೀವ ವಿಮಾ ನಿಗಮದಲ್ಲಿ ಉನ್ನತ ದರ್ಜೆ ಸಹಾಯಕಿ.ಅಂತರಂಗದ ಆಲಾಪ ಕವನ ಸಂಕಲನ ಪ್ರಕಟಣೆಯಾಗಿದೆ. ಮುಖವಾಡಗಳು ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಪದವಿ ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿದೆ.ಕೆಲವು ಕವನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

ಅಂತರಂಗದ ಅಲೆಗಳು Read Post »

ಇತರೆ

ವಿಶೇಷ

ಕನ್ನಡ ಬರಹಗಾರ ಮತ್ತು ಜಾಲತಾಣಗಳು.  ಡಿ.ಎಸ್.ರಾಮಸ್ವಾಮಿ         ಕನ್ನಡಕ್ಕೂ ಮತ್ತು ಅದರ ಸಾಹಿತ್ಯ ಚರಿತ್ರೆಗೂ ಶತಮಾನಗಳ ಇತಿಹಾಸವೇ ಇದೆ. ಮೌಖಿಕ ಪರಂಪರೆಯಿಂದ ಹಿಡಿದು ಇವತ್ತು ನಾವು ನೀವೆಲ್ಲ ಬಳಸುತ್ತಿರುವ ಸಾಮಾಜಿಕ ಜಾಲತಾಣಗಳವರೆಗೂ ಅದರ ವಿಸ್ತರತೆ ಇದೆ. ಇಂಗ್ಲಿಷಿಗೆ ತರ್ಜುಮೆಯಾಗದ ಏಕೈಕ ಕಾರಣಕ್ಕೆ ಶ್ರೇಷ್ಠ ಸಾಹಿತ್ಯ ಕೃತಿಗಳಾಗಿದ್ದೂ ವಿಶ್ವ ಮನ್ನಣೆ ಪಡೆಯುವ ಹಲವಾರು ಬಹುಮಾನಗಳಿಂದ ಕನ್ನಡದ ಲೇಖಕರು ವಂಚಿತರಾಗಿರುವುದೂ ಮತ್ತು ಇಂಗ್ಲಿಷಿಗೆ ಅನುವಾದಗೊಂಡ ಕಾರಣಕ್ಕೇ ಸಾಮಾನ್ಯ ಲೇಖಕರೂ ವಿಶ್ವ ವ್ಯಾಪೀ ಪ್ರಚಾರ ಪಡೆದುದೂ ಇದೆ.      ಅಂದರೆ ಕನ್ನಡ ನೆಲದ ಅಸ್ಮಿತೆ ಲೋಕ ಖ್ಯಾತವಾಗಲು ಬಳಸಬಹುದಾದ ಹಲವು ಏರುಮಣೆಗಳನ್ನು ಬಳಸುವ ಚಾಕಚಕ್ಯತೆ ಇದ್ದವರು ಮುನ್ನೆಲೆಗೆ ಬಂದಿದ್ದಾರೆ ಹಾಗೇ ಆಯಾ ಕಾಲದ ಮಾಧ್ಯಮಗಳನ್ನು ಬಳಸಿಕೊಳ್ಳದ ಜಾಣ್ಮೆ ಇಲ್ಲದಿದ್ದವರು ಅವಕಾಶ ವಂಚಿತರಾಗಿದ್ದಾರೆ. ಇದು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದೊಟ್ಟಿಗೆ ಸಂಪರ್ಕವಿರಿಸಿಕೊಂಡಿರುವ ಎಲ್ಲರ ಅನುಭವವೂ ಹೌದು. ಸಣ್ಣ ಹಳ್ಳಿಯೊಂದರಲ್ಲಿ ತನ್ನ ಪಾಡಿಗೆ ತಾನು ಸ್ವಾದಿಷ್ಠವೂ ರಸಭರಿತವೂ ಆದ ಆಹಾರವನ್ನು ತಯಾರು ಮಾಡುವ ಬಾಣಸಿಗ ಸ್ಟಾರ್ ಹೋಟೆಲಿನ ಛೆಫ್ ತರಹ ಪ್ರಸಿದ್ಧನಾಗುವುದೇ ಇಲ್ಲ! ಏಕೆಂದರೆ ಛೆಫ್ ಗೆ ಇರುವ ಅವಕಾಶ ಮತ್ತು ಅವಕಾಶವಾದಿತನ ಹಳ್ಳಿಯ ಬಾಣಸಿಗನಿಗೆ ದಕ್ಕುವುದಿಲ್ಲ. ವರ್ತಮಾನದ ಸಾಹಿತ್ಯ ಸಂದರ್ಭವೂ ಇದಕ್ಕಿಂತ ಹೆಚ್ಚೇನೂ ವ್ಯತ್ಯಾಸದಲ್ಲಿ ಇಲ್ಲ. ತನ್ನ ಪಾಡಿಗೆ ತಾನು ಒಳ್ಳೆಯ ಓದು ಮತ್ತು ಬರಹದಲ್ಲಿ ಸುಖ ಕಂಡಂತೆ ಇರುವ ಅದೆಷ್ಟೋ ಬರಹಗಾರರು ಎಲೆ ಮರೆಯ ಕಾಯಂತೆ ಇದ್ದರೆ ಒಂದಷ್ಟು ಚಾಕಚಕ್ಯತೆ ಮತ್ತು ಲೋಕನುಭವದಿಂದ ಸತ್ಯವನ್ನು ಅರಿತವರು ಯಾರನ್ನು ಯಾವಾಗ ಮತ್ತು ಹೇಗೆ ಹಿಡಿದರೆ ತಾವು ಸಲ್ಲಬಹುದು ಖ್ಯಾತರಾಗಬಹುದು ಎಂಬ ಅಂದಾಜಿದ್ದವರೇ ಇವತ್ತು ವೇದಿಕೆಗಳಲ್ಲಿ ಮಿಂಚುತ್ತಿದ್ದಾರೆ. ಅಂಥವರೇ ತಮ್ಮದೇ ಗುಂಪುಗಳನ್ನು ಕ್ಷಮಿಸಿ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ ಸಾಹಿತ್ಯ ಸಾಂಸ್ಕೃತಿಕ ಲೋಕದ ನಿಯಂತ್ರಣಕ್ಕೆ ಕಟಿಬದ್ಧರಾಗಿರುತ್ತಾರೆ. ಆದರೂ ಖುಷಿಯೆಂದರೆ ಈ ಎಲ್ಲ ಗುಂಪು ಗದ್ದಲ ಮತ್ತು ಗೋಜುಗಳಾಚೆಯೂ ಅತ್ಯುತ್ತಮ ಎನ್ನಬಹುದಾದ ಹಲವು ಸಂಕಲನಗಳು ಬರುತ್ತಿವೆ ಮತ್ತು ಘೋಷಿತ ವಲಯಕ್ಕೂ ಅಚ್ಚರಿ ಮತ್ತು ಗಾಬರಿಗಳನ್ನು ಹುಟ್ಟಿಸುತ್ತಲೂ ಇವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಣುಕು ಹಾಕದ ಬರಹಗಾರರು ಇಲ್ಲವೇ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು. ಅಂಡ್ರಾಯ್ಡ್ ಫೋನು ಮತ್ತು ಅಂತರ್ಜಾಲ ಸುಲಭಕ್ಕೆ ಸಿಗುತ್ತಿರುವ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮತ್ತು ಭಾಗವಹಿಸುವಿಕೆ ಪ್ರತಿಷ್ಠೆಯಾಗಿಯೂ ಬದಲಾಗುತ್ತಿದೆ. ಫೋನಿನ ಡಾಟ ಬಟನ್ ಒತ್ತಿದ ತಕ್ಷಣವೇ ಓತ ಪ್ರೋತ ಬಂದೆರಗುವ ಹೆಚ್ಚಿನ ಸಂದೇಶಗಳು ಓದದೇ ಫಾರ್ವರ್ಡ್ ಆದವೇ ಆಗಿರುತ್ತವೆ. ಓದುವ ಮುನ್ನವೇ ಲೈಕ್ ಕೊಡುವ ಇಮೋಜಿಯನ್ನೋ ಚಿತ್ರವನ್ನೋ ಪ್ರತಿಕ್ರಿಯೆಯಾಗಿ ಹರಿಯಬಿಡುವುದು ತೀರ ಸುಲಭದ ಕೆಲಸವಾಗಿ ಬಿಟ್ಟಿದೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಸಾಹಿತ್ಯದ ಬೆಳವಣಿಗೆಗೆ ಪೂರಕವೋ ಮಾರಕವೋ ಎಂದು ಚಿಂತಿಸುವುದು ಪ್ರೌಢಶಾಲೆಯ ಚರ್ಚಾ ಸ್ಪರ್ದೆಯ ವಿಷಯವಾಗಬಹುದೇ ವಿನಾ ಅದರಾಚೆಗೆ ಅದರ ವ್ಯಾಪ್ತಿ ಇಲ್ಲ. ಏಕೆಂದರೆ ಈ ಜಾಲತಾಣಗಳ ಭೇಟಿ ಇವತ್ತು ಚಟವಾಗಿ ಬದಲಾಗಿದೆಯೇ ವಿನಾ ಅದು ರಸಾನುಭವದ ಕೊಡು ಕೊಳ್ಳುವಿಕೆಯ ವೇದಿಕೆಯಾಗಿ ಉಳಿದಿಲ್ಲ. ಜೊತೆಗೆ ಈ ಜಾಲತಾಣಗಳು ಸಾಮಾಜಿಕ ಆರ್ಥಿಕ ರಾಜಕೀಯ ವಲಯಗಳ ಸುಳ್ಳು ವದಂತಿಗಳ ಹಂಚುವಿಕೆಗೆ ಮತ್ತು ವ್ಯಕ್ತಿ ಹಾಗು ಪಂಥದ ವಿರುದ್ಧದ ವ್ಯವಸ್ಥಿತ ಸಂಚಾಗಿ ಬಳಕೆಯಾಗುತ್ತಿರುವುದನ್ನೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲವಾಗಿದೆ.    ಆದರೂ ಅಪರೂಪಕ್ಕೆಂಬಂತೆ ಒಂದೆರಡು ವಾಟ್ಸ್ ಅಪ್ ಗುಂಪುಗಳು ಒಳ್ಳೆಯ ಊಟ ಉಪಾಹಾರಗಳ ತಯಾರಿಕೆ ಮತ್ತು ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಿದಂತೆಯೇ ಕತೆ, ಕವಿತೆಗಳ ಪ್ರಕಟಣೆಗೆ ವಿಮರ್ಶೆಗೆ ಪರಸ್ಪರರ ಭೇಟಿ ಮಾತುಕತೆಗೆ ನೆರವಾಗುತ್ತಿವೆ. ಆದರೆ ಇವುಗಳ ಸಂಖ್ಯೆ ತೀರ ಕಡಿಮೆ. ಜಾತಿ,ಕೆಲಸ,ನಂಬಿಕೆಯ ತಳಹದಿಯ ಮೇಲೇ ರಚಿತವಾಗುವ ಜಾಲತಾಣಗಳು ಹೆಚ್ಚೇನನ್ನೂ ಸೃಜಿಸಲಾರವು.   ನಿಜಕ್ಕೂ ಹೇಳಬಹುದೆಂದರೆ ಸಾಮಾಜಿಕ ಜಾಲತಾಣ ಒಂದು ಬಗೆಯ ಸಂತೆ ಇದ್ದಂತೆ. ಇಲ್ಲಿ ಎಲ್ಲರಿಗೂ ಬೇಕಾದ ವಿವಿಧ ಬಗೆಯ ಸಾಮಾನು ಸರಂಜಾಮು ಮಾರಾಟಕ್ಕೆ ಇದೆ. ತನಗೆ ಬೇಕಾದ್ದನ್ನು ಬೇಕಾದವರು ಅರಸಿ ಹೋಗಿ ಖರೀದಿಸುವಂತೆ ತನ್ನಿಷ್ಟದ ಸಾಹಿತ್ಯದ ಪ್ರಕಾರಕ್ಕೆ ಚಂದಾದಾರನಾಗುವುದು ಚಂದಾ ನೀಡುವುದು ಅಥವ ಚಂದವಾಗಿ ಎದ್ದು ಹೊರ ನಡೆಯುವುದು ಆಯಾಯ ವ್ಯಕ್ತಿಯ ಬೌದ್ಧಿಕ ಮಾನಸಿಕ ಮತ್ತು ಸಾಮಾಜಿಕ ನಿಲುವು ಮತ್ತು ಒಲವುಗಳ ವಿಷಯವಾಗಿದೆಯೇ ವಿನಾ ಅದೇ ಸಾಹಿತ್ಯ ಜಗತ್ತಿನ ಹೆಬ್ಬಾಗಿಲಾಗಿಲ್ಲ ಎನ್ನುವುದು ನನ್ನ ನಿಲುವು. ಡಿ.ಎಸ್.ರಾಮಸ್ವಾಮಿ. ಲೇಖಕರ ಪರಿಚಯ: ಭಾರತೀಯ ಜೀವವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿರುವ ಇವರು ಮೂಲತ: ಕವಿಯಾಗಿದ್ದು,ಇವರ ಉಳಿದ ಪ್ರತಿಮೆಗಳು ಕವನಸಂಕಲನಕ್ಕೆ 2006ರ ಮುದ್ದಣ ಕಾವ್ಯ ಪ್ರಶಸ್ತಿ ಬಂದಿರುತ್ತದೆ.

ವಿಶೇಷ Read Post »

You cannot copy content of this page

Scroll to Top