ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಹರಿ

ಪ್ರೀತಿ ಗಂಧವನರಸುತ ಸಂಧ್ಯಾ ಶೆಣೈ ಫೋನ್ ರಿಂಗಾಯಿತು.. ಯಾರೆಂದು ನೋಡಿದರೆ ನಾನು ಆಗಾಗ ಊರಕಡೆಯ ತರಕಾರಿ ತೆಗೆದುಕೊಳ್ಳುತ್ತಿದ್ದ ತರಕಾರಿ ವ್ಯಾಪಾರದ ಹೆಂಗಸು. ” ಅಕ್ಕ ಒಳ್ಳೆ ಕಾಟು ಮಾವಿನ ಹಣ್ಣು ಬಂದಿದೆ ಸ್ವಲ್ಪ ತಗೊಂಡ್ ಹೋಗಿ “ಎಂದು ಹೇಳಿದಳು. ನಾನು ಹೇಳಿದೆ “ಬ್ಯಾಡ ಬ್ಯಾಡ ಮಾರಾಯ್ತಿ.. ಈ ಕೊರೋನಾ ಬಂದ ಮೇಲೆ ನಾನು ಮನೆಯಿಂದ ಹೊರಗೆ ಹೋಗಲೇ ಇಲ್ಲ. ಹೋಗುವುದೂ ಇಲ್ಲ. ಹಾಗಾಗಿ ಬೇಡ ನಂಗೆ ಬರಲಿಕ್ಕಿಲ್ಲ” ಎಂದೆ ಅದಕ್ಕವಳು” ಅಯ್ಯೋ ಅಷ್ಟೇಯಾ.. ಹೌದು ನೀವು ಹೇಳಿದಾಗೆ ಹೊರಗೆ ಬರೋದೇ ಬೇಡ. ನಾನು ರಾತ್ರಿ ಅಂಗಡಿ ಮುಚ್ಚಿ ವಾಪಸ್ ಹೋಗುತ್ತೇನಲಾ ಆಗ ತಂದುಕೊಡುತ್ತೇನೆ” ಎಂದು ಹೇಳಿದಳು .ಆದ್ರೂ ನಾನು ಹೇಳಿದೆ “ತುಂಬ ಹುಳಿಯಿದ್ದರೆ ಬ್ಯಾಡ ಮಾರಾಯಿತಿ. ಆಮೇಲೆ ಅದಕ್ಕೆ ಸಿಕ್ಕಾಪಟ್ಟೆ ಬೆಲ್ಲ ಹಾಕಬೇಕಾಗುತ್ತದೆ. ನಮಗೆ ಡಯಾಬಿಟಿಸ್ನವರಿಗೆ ಒಳ್ಳೆಯದೂ ಅಲ್ಲ ಅಲ್ಲವಾ” ಎಂದೆ . “ಅಯ್ಯೋ!! ಎಷ್ಟು ಒಳ್ಳೆಯದುಂಟು ಅಂದ್ರೆ ನೀವು ತಿಂದು ನೋಡಿ ಆಮೇಲೆ ಹೇಳಿ ನಾನು ನಿನ್ನೆ ನನ್ನ ಮನೆಯಲ್ಲಿ ಮಾಡಿದ್ದೆ ಹಾಗಾಗಿ ನಿಮ್ಮ ನೆನಪಾಯಿತು ಅದಕ್ಕೆ ಫೋನ್ ಮಾಡಿದೆ “ಎಂದಳು . ನಾನು “ಸರಿ ಹಾಗಾದ್ರೆ ಒಂದಿಷ್ಟು ತೆಕ್ಕೊಂಡು ಬಾ.. ನಿನ್ನತ್ರ ಪತ್ರೊಡೆ ಎಲೆ ಇದ್ದರೆ ಅದನ್ನೂ ತಗೊಂಡ್ಬಾ ಸ್ವಲ್ಪ” ..ಎಂದೆ.. ರಾತ್ರಿ ಅಂಗಡಿ ಮುಚ್ಚಿದ ಮೇಲೆ ಮನೆಗೆ ಹೋಗುವ ಮೊದಲು ಬಂದು ಕೊಟ್ಟು ಹೋದಳು. ಈ ವಿಚಾರವನ್ನು ನಾನು ನನ್ನ ಗೆಳೆಯರೊಬ್ಬರಿಗೆ ಹೇಳಿದೆ. ಅದಕ್ಕೆ ಅವರು “ದುಡ್ಡು ತಗೊಂಡಳಾ ಇಲ್ವಾ” ಎಂದು ಕೇಳಿದರು.ಅದಕ್ಕೆ ನಾನು ಹೇಳಿದೆ “ಮಾವಿನಹಣ್ಣು ಪತ್ರಡೆ ಎಲೆ ಅವಳ ಮನೆಯಲ್ಲಿ ಆಗತದಾ ಅವಳೂ ದುಡ್ಡು ಕೊಟ್ಟೇ ತಂದಿದ್ದಲ್ಲಾ . ದುಡ್ಡು ಕೊಟ್ಟೆ ಅಪ್ಪ” ಎಂದು ಹೇಳಿದೆ. ಅದಕ್ಕೆ ಅವರು “ದುಡ್ಡು ಕೊಟ್ಟಿದ್ದೀಯಾ ಇನ್ನೇನು ಅದರಲ್ಲಿ ವಿಶೇಷ” ಎಂದು ತಮ್ಮ ವ್ಯಾಪಾರಿ ಬುದ್ಧಿಯನ್ನು ತೋರಿಸಿಯೇ ಬಿಟ್ಟರು. ನನಗೆ ಬಹಳ ದುಃಖವಾಯಿತು ಯಾಕೆಂದರೆ ಅವಳ ವಸ್ತುವಿಗೆ ಹಣ ಕೊಟ್ಟು ಅವಳ ಪ್ರೀತಿಯನ್ನು ಅಳೆಯಲು ಸಾಧ್ಯವೇ ..ಅವಳು ಕೂತಲ್ಲೇ ಬಂದು ತೆಗೆದುಕೊಂಡು ಹೋಗುವಂತಹ ಗಿರಾಕಿಗಳು ಅವಳಿಗಿರುವಾಗ ಆ ಕೆಲಸದ ನಡುವೆ ನನ್ನ ನೆನಪಾಗಿ ಫೋನ್ ಮಾಡಿ ಮನೆತನಕ ತಂದುಕೊಟ್ಟಿದ್ದಾಳಲ್ಲ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಾದರೂ ಎಲ್ಲಿದೆ. ಪ್ರೀತಿಗೆ ಬೆಲೆ ಕಟ್ಟುವಷ್ಟು ಶ್ರೀಮಂತರೇ ನಾವು .ಅದರಲ್ಲೂ ನಾನು ಬದುಕುತ್ತಿರುವುದೇ ಇಂತಹ ಒಂದು ಮುಷ್ಟಿ ಪ್ರೀತಿಗಾಗಿ. ಬಿಡಿ ಇಂತಹ ಭಾವನಾತ್ಮಕ ವಿಚಾರಗಳು ಕೆಲವರಿಗೆ ಎಲ್ಲಿ ಅರ್ಥ ಆಗ್ತದೆ.. ಎಂದು ಅಂದುಕೊಂಡೆ. ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಅಡುಗೆ ಮನೆಯಲ್ಲಿ ಒಂದು ಪಾತ್ರೆಯಲ್ಲಿ ಹಾಕಿ ನಾಳೆ ಮಾವಿನ ಹಣ್ಣಿನ ಉಪ್ಪಕರಿ ಮಾಡುವ ಎಂದು ವಿಚಾರ ಮಾಡಿಕೊಂಡೆ. ಅದನ್ನು ಅಡಿಗೆ ಮನೆಯಲ್ಲಿ ಇಟ್ಟು ರಾತ್ರಿ ನನ್ನ ರೂಮಿನ ಬಾಗಿಲು ಮುಚ್ಚಿಕೊಂಡು ಮಲಗಿದ್ದವಳು ಬೆಳಿಗ್ಗೆ ಏಳುವಾಗ ಅದು ಸರಿಯಾಗಿ ಹಣ್ಣಾಗಿದ್ದು ಅಡುಗೆ ಮನೆಯಲ್ಲಿ ಒಂದು ರೀತಿಯ ಮುದ ಕೊಡುವಂತಹ ಪರಿಮಳ ತುಂಬಿತ್ತು .ನಾನಿದ್ದೇನೆ ಇಲ್ಲಿ ಎಂದು ಮಾವಿನ ಹಣ್ಣು ಬಾಯಿಬಿಟ್ಟು ಹೇಳುತ್ತಿರುವಂತೆ ಅನ್ನಿಸುತ್ತಿತ್ತು .ಬಾಗಿಲು ಮುಚ್ಚಿದ್ದರಿಂದಲೋ ಏನೋ ನನ್ನ ಕೋಣೆಗೆ ಆ ಪರಿಮಳ ಬಂದೇ ಇರಲಿಲ್ಲ. ನಾನು ಪುನಃ ಬಂದು ನನ್ನ ಕೋಣೆಯಲ್ಲಿ ಮಲಗಿದೆ .ಸ್ವಲ್ಪ ಹೊತ್ತು ಬಾಗಿಲು ತೆರೆದಿದ್ದರಿಂದಲೋ ಏನೋ ಹೊರಗಿನ ಈ ಮಾವಿನ ಹಣ್ಣಿನ ಮಧುರ ಸುವಾಸನೆ ನಿಧಾನವಾಗಿ ನನ್ನ ಕೋಣೆಯೊಳಗೆ ತುಂಬಲಾರಂಭಿಸಿತು. ಮೊದಮೊದಲು ಮಂದವಾಗಿ ಬರುತ್ತಿದ್ದಂತಹ ಈ ಸುವಾಸನೆ ನಿಧಾನವಾಗಿ ಒಂದು ಹತ್ತು ನಿಮಿಷದೊಳಗೆ ನನ್ನ ಕೋಣೆಯಲ್ಲೆಲ್ಲಾ ತನ್ನದೇ ವಿಶೇಷ ಪರಿಮಳವನ್ನು ತುಂಬಿ ಬಿಟ್ಟಿತು ..ನಾನಂತೂ ಪರಿಮಳವನ್ನು ಆಸ್ವಾದಿಸುತ್ತಾ ಮಲಗಿದಲ್ಲಿಯೇ ಇವತ್ತು ಉಪಕರಿ ಮಾಡಲೇಬೇಕು ಎನ್ನುವ ಲೆಕ್ಕಾಚಾರ ಹಾಕುತ್ತಲೇ ಇದ್ದೆ. ಈ ತನ್ನ ವಿಶಿಷ್ಟ ಪರಿಮಳದಿಂದಲೇ ಈ ಮಾವಿನ ಹಣ್ಣು ತನ್ನ ಅಸ್ತಿತ್ವವನ್ನು ಮನೆಯಲ್ಲೆಲ್ಲ ತೋರಿಸುತ್ತಿತ್ತು. ಆಗ ಆಕಸ್ಮಿಕವಾಗಿ ನನ್ನ ತಲೆಗೆ ಒಂದು ವಿಚಾರ ಬಂತು . ಯಾವ ರೀತಿ ಅಡುಗೆ ಮನೆಯ ಒಂದು ಬದಿಯಲ್ಲಿದ್ದ ಮಾವಿನ ಹಣ್ಣು ನಾನು ನನ್ನ ಕೋಣೆಯ ಬಾಗಿಲನ್ನು ತೆರೆದೊಡನೆ ನಿಧಾನವಾಗಿ ತನ್ನ ಪರಿಮಳವನ್ನು ನನ್ನ ಇಡೀ ಕೋಣೆಯ ತುಂಬ ಪರಿಮಳದೊಂದಿಗೆ ಆಕ್ರಮಿಸಿ ಬಿಟ್ಟಿತ್ತೋ …ಅದೇ ರೀತಿ ಎಲ್ಲೋ ಚೈನಾದಲ್ಲಿ ಹುಟ್ಟಿದ ಆ ಕೋರೋಣ ಕಾಯಿಲೆ ಇಲ್ಲಿ ಈ ಮೂಲೆಯ ಉಡುಪಿಯ ತನಕ ಬರಬೇಕಾದರೆ ಎಷ್ಟು ವಿಚಿತ್ರ . ಆದರೆ ನಿನ್ನೆ ಉಡುಪಿಯಲ್ಲಿ ಲಾಕ್ ಡಾನ್ ಅವಧಿಯನ್ನು ಮೊಟಕುಗೊಳಿಸಿ ಸಮಯ ನಿಗದಿ ಪಡಿಸಿದ ನಂತರ ಜನರ ಓಡಾಟವನ್ನು ನೋಡುವಾಗ ಹೊಟ್ಟೆಯಲ್ಲೆಲ್ಲಾ ಒಂದು ರೀತಿಯ ನಡುಕ ಶುರುವಾಗುತ್ತಾ ಇದೆ. ಯಾರ ಯಾರಲ್ಲಿ ಇದರ ಸೋಂಕಿದೆಯೋ.. ಯಾರನ್ನು ನೋಡಿದರೂ ಒಂದು ರೀತಿ ಅನುಮಾನದಿಂದಲೇ ನೋಡುವಂತಾಗಿದೆ ..ಇದರ ಬದಲು ಈ ಕೋರೋಣ ಎನ್ನುವ ರೋಗದೊಂದಿಗೆ ಅದರದ್ದೇ ಆದ ಒಂದು ವಿಶೇಷ ದುರ್ವಾಸನೆಯೋ ಸುವಾಸನೆಯೋ ಇದ್ದಿದ್ದರೆ ಎಷ್ಟು ದೂರದಿಂದಲೂ ಓಹ್ ಇವರು ಸೋಂಕಿತರು ಎಂದು ಗುರುತಿಸುವಂತಾಗಿದ್ದರೆ ಎಷ್ಟು ಒಳ್ಳೆಯದಿತ್ತು. ಓಡಾಡುವಾಗ ಆ ವಿಶೇಷ ಘಾಟು ಬಂದ ಕೂಡಲೇ ತಕ್ಷಣವೇ ನಾವು ಜಾಗೃತರಾಗ ಬಹುದಿತ್ತು. ದೇವರೇ!! ಇಷ್ಟೆಲ್ಲಾ ಪ್ರಪಂಚದಲ್ಲೆಲ್ಲ ಹರಡುತ್ತಿರುವ ಈ ಕೊರೋನಾಗೆ ತಕ್ಷಣ ಗುರುತಿಸಬಹುದಾದದಂತಹ ಒಂದು ಕಟು ವಾಸನೆಯನ್ನಾಗಲೀ ಸುಮಧುರ ಪರಿಮಳವನ್ನಾಗಲೀ ಕೊಡಬಹುದಿತ್ತಲ್ಲ.. ಎಂದು ನನ್ನ ಮನಸ್ಸು ಪದೇಪದೇ ಹೇಳುತ್ತಾ ಇದೆ ************

ಲಹರಿ Read Post »

ಇತರೆ

ಅಮ್ಮಂದಿರ ದಿನದ ವಿಶೇಷ- ಬರಹ

ಅಮ್ಮನದಿನ          ಎನ್.ಶೈಲಜಾ ಹಾಸನ   ಕಳೆದ ವರ್ಷವಷ್ಟೆ ಅಮ್ಮನ ದಿನ ಆಚರಿಸಿದೆವು.ಈ ವರ್ಷವೂ ಅಮ್ಮಂದಿರ ದಿನ ಬಂದಿದೆ. ಅಮ್ಮನಿಗಾಗಿ ಒಂದು ದಿನವೇ ಎಂದು ಹುಬ್ಬೇರಿಸುವವರ ನಡುವೆಯೂ ಅಮ್ಮನನ್ನು ನೆನೆಸಿಕೊಂಡು ಅಮ್ಮನಿಗಾಗಿ ಉಡುಗರೆ ನೀಡಿ ಅಮ್ಮನ ಮೊಗದಲ್ಲಿ ಸಂತಸ ತುಂಬಿzವರು, ಅಮ್ಮನ ದಿನ ಮಾತ್ರವೇ ನೆನಸಿಕೊಂಡು ಅಮ್ಮನ ದಿನ ಆಚರಿಸಿದವರೂ, ತಮ್ಮ ಜಂಜಾಟದ ನಡುವೆ ಅಮ್ಮನನ್ನೆ ಮರೆತವರೂ, ಈ ಅಮ್ಮಂದಿರ ದಿನದ ಆಚರಣೆಗಳೆÉಲ್ಲ ನಮ್ಮ ಸಂಸ್ಕ್ರತಿ ಅಲ್ಲ, ನಾವೂ ದಿನವೂ ಅಮ್ಮನನ್ನು ಜೊತೆಯಲ್ಲಿಯೇ ಇಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವೆ, ಈ ಒಂದು ದಿನ ಮಾತ್ರ ನೆನೆಸಿಕೊಂಡು ಉಡುಗೊರೆ ಕೊಟ್ಟು ಕೈ ತೊಳೆದುಕೊಂಡು ಮತ್ತೆ ಮುಂದಿನ ವರ್ಷವೇ ಅಮ್ಮನ ನೆನೆಸಿಕೊಂಡು ಬರುವ ವಿದೇಶಿ ಸಂಸ್ಕ್ರತಿ ನಮ್ಮದಲ್ಲ ಅಂತ ಮೂಗು ಮುರಿಯುವವರೂ ಇದ್ದಾರೆ. ಅದರೆ ಅಮ್ಮನ ದಿನ ಆಚರಿಸಿ ಉಡುಗೊರೆ ಕೊಟ್ಟಾಗ ಸಂಭ್ರಮಿಸುವ ಅಮ್ಮಂದಿರೇ ಹೆಚ್ಚಾಗಿದ್ದಾರೆ  ನನ್ನ ಮಗಳು ಕೂಡಾ ಬುದ್ದಿ ತಿಳಿದಾಗಿನಿಂದಲೂ ನನಗೆ ಪ್ರತಿ ವರ್ಷ ಉಡುಗರೆ ನೀಡುತ್ತಲೇ ಬಂದಿದ್ದಾಳೆ. ಅವಳು ನೀಡುವ ಪುಟ್ಟ ಪುಟ್ಟ ಉಡುಗರೆ ಕೂಡಾ ನನಗೆ ಅಮೂಲ್ಯವಾದದ್ದು ಹಾಗೂ ಆಪ್ಯಾಯಮಾನವಾದದ್ದು. ಇಂತಹ ಚಿಕ್ಕ ಚಿಕ್ಕ ವಿಚಾರಗಳು ಕೂಡಾ ಅಮ್ಮಂದಿರಿಗೆ  ಅದೆಷ್ಟು ಸಂತೋಷ ನೀಡುತ್ತದೆ ಅಂತ ಅಮ್ಮಂದಿರಿಗೆ ಗೊತ್ತು. ಆದರೆ ಅಂತಹ  ಸಣ್ಣ ಸಣ್ಣ ಸಂತೋಷವನ್ನೂ ಕೊಡಲಾರದ ಮಕ್ಕಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ.     ಅಮ್ಮ ಅಂದರೆ ದೇವತೆ, ದೇವರು ಎಲ್ಲಾ ಕಡೆ ಇರಲು ಸಾದ್ಯವಿಲ್ಲ ಎಂದೇ  ದೇವರು ಅಮ್ಮನನ್ನು ಸೃಷ್ಟಿಸಿದ್ದಾನೆ. ಅಮ್ಮ ಎನ್ನುವ ಮಾತಿನಲ್ಲೇ ಅಮೃತವಿದೆ. ಪ್ರೀತಿ. ಕರುಣೆ, ವಾತ್ಸಲ್ಯ , ಮಮತೆ, ಕ್ಷಮಾಗುಣ, ಆರ್ದತೆ,ತ್ಯಾಗ, ಸಹಿಷ್ಣುತೆ  ಮುಂತಾದ ಪ್ರಪಂಚದ ಎಲ್ಲಾ ಒಳ್ಳೆಯ ಗುಣಗಳನ್ನು ಅಮ್ಮನಲ್ಲಿ ಇಟ್ಟು  ದೇವರು ತನ್ನ ಪ್ರತಿನಿಧಿಯಾಗಿ ಈ ಲೋಕದಲ್ಲಿ ಸೃಷ್ಟಿಸಿದ್ದಾನೆ.  ಕರುಳ ಕುಡಿಯನ್ನು ನವ ಮಾಸಗಳು ತನ್ನ ಉದರದಲ್ಲಿ ಪೋಷಿಸಿ , ಪ್ರಾಣವನ್ನೇ ಒತ್ತೇ ಇಟ್ಟು ಮಗುವಿಗೆ ಜನ್ಮ ನೀಡಿ, ಹಸುಗೂಸನ್ನು  ಲಾಲಿಸಿ, ಪಾಲಿಸಿ, ಪೋಷಿಸಿ ಒಂದು ವ್ಯಕ್ತಿಯನ್ನಾಗಿ ಮಾಡುವಲ್ಲಿ ಅಮ್ಮನ ಪಾತ್ರದಿಂದಾಗಿಯೇ ಈ ಜಗದಲ್ಲಿ ಸರ್ವ ಶ್ರೇಷ್ಠ ಸ್ಥಾನ ಅಮ್ಮನಿಗೆ. ಸಿರಿ ಸಂಪತ್ತು. ವೈಭೋಗ. ಜೀವ ಸೃಷ್ಟಿಯಲ್ಲಿ ತಾಯಿ ಹಾಗೂ ಆಕೆಯ ಪ್ರೀತಿ, ವಾತ್ಸಲ್ಯಕೆ  ಸರಿಸಾಟಿಯಿಲ್ಲ, ಜಗಕೆ ಒಡೆಯನಾದರೂ ಅಮ್ಮನಿಗೆ ಮಗನೇ. ತಾಯಿ ದೇವರು ಸಕಲ ಸರ್ವಸ್ವ, ಪೂಜ್ಯ ಮಾತೆ. ಕರುಣ ಮಯಿ, ಬಂಧು ಬಳಗ ಮುಂತಾದುವುಗಳೆಲ್ಲಾ ಒಂದು ತೂಕ ಅಥವಾ ಒಂದು ಭಾಗವಾದರೆ, ತಾಯಿಯೇ ಒಂದು ಪ್ರತ್ಯೇಕ ಭಾಗ. ತಾಯಿ ಸ್ಥಾನವನ್ನು ಯಾರೂ ತುಂಬಲಾರರು. ಹಾಗಾಗಿಯೇ ಅಮ್ಮನೆಂದರೆ ಪೂಜನೀಯ. ಅಮ್ಮ ಎನ್ನುವ ಮಾತಿನಲ್ಲಿ ಅಮೃತವಿದೆ. ಕಷ್ಟ ಸುಖ ಆನಂದದಲ್ಲಿ ಮೊದಲು ಹೊರಡುವ ಪದವೇ ಅಮ್ಮ .” ಅಮ್ಮ ಎಂದರೆ ಮೈ ಮನವೆಲ್ಲಾ ಹೂವಾಗುವುದಮ್ಮಾ ನೋವೋ ನಲಿವೋ ಹೊರಡುವ ದನಿಯೇ ಅಮ್ಮಾ ಅಮ್ಮಾ “ಅಂತ ಹಾಡಿದ್ದಾರೆ. ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲಾರಳು ಅಂತ ಶಂಕರಚಾರ್ಯರು ಹೇಳಿದ್ದಾರೆ. ಈ ಕುರಿತು  ಪ್ರಚಲಿತವಿರುವ ಒಂದು ಕಥೆ ನೆನಪಾಗುತ್ತದೆ. ಒಂದು ಸಂಸಾರದಲ್ಲಿ ತಾಯಿ, ಮಗ , ಸೊಸೆ ಇರುತ್ತಾರೆ. ಸಂಸಾರವೆಂದ ಮೇಲೆ ಜಗಳ ಕದನ ಇದ್ದದ್ದೆ. ಅವರ ಮನೆಯಲ್ಲೂ ಅತ್ತೆ ಸೊಸೆಗೆ ಮುಗಿಯದ ಜಗಳ. ಯಾರ ಪರ ವಹಿಸಿದರೂ ಕಷ್ಟವೇ. ಇತ್ತ ಅಮ್ಮಾ, ಅತ್ತ ಹೆಂಡತಿ. ಯಾರಿಗೂ ಏನನ್ನು ಹೇಳದೆ ಸುಮ್ಮನಿದ್ದು ಬಿಡುತ್ತಿದ್ದ. ಅಮ್ಮಾ ಮಗನ ಮನೆಯಲ್ಲಿ ಇರಲಾರದೆ ಬೇರೆ ವಾಸಿಸ ತೊಡಗುತ್ತಾಳೆ. ಹಾಗೊಂದು ದಿನ ಹೆಂಡತಿ, ಅತ್ತೆಯನ್ನು ಹೇಗಾದರೂ ಮಾಡಿ ಅತ್ತೆಯನ್ನು ನೀವಾರಿಸಿಕೊಳ್ಳಬೇಕು ಅಂತ ಉಪಾಯಮಾಡಿ ತನಗೆ ತುಂಬಾ ಕಾಯಲೆ ಎಂಬಂತೆ ನಟಿಸುತ್ತಾಳೆ, ಯಾವ ವೈದ್ಯರಿಗೆ ತೋರಿಸಿದರೂ ವಾಸಿಯಾಗದಿದ್ದಾಗ ಗಂಡನಿಗೆ ಚಿಂತೆಯಾಗುತ್ತದೆ. ಆಗ ಹೆಂಡತಿ ಗಂಡನಿಗೆ ಹೇಳುತ್ತಾಳೆ ತನ್ನ ಕಾಯಲೆ ವಾಸಿಯಾಗ ಬೇಕಾದರೆ ನಿನ್ನ ತಾಯಿಯ ಹೃದಯ ಬೇಕು ಅದನ್ನು ತಂದು ಕೊಡು ಎಂದು ಹೇಳುತ್ತಾಳೆ. ಹೆಂಡತಿಯ ಕಾಯಲೆ ವಾಸಿಯಾದರೆ ಸಾಕು ಅಂತ ಮಗ ಅಮ್ಮನ ಬಳಿ ಬಂದು ಅಮ್ಮನನ್ನು ಕೊಂದು ಅವಳ ಹೃದಯ ತೆಗೆದು ಕೊಂಡು  ಆತುರ ಆತುರವಾಗಿ ಹೋಗುತ್ತಿರುವಾಗ ಎಡವುತ್ತಾನೆ. ಆಗ ಅವನ ಕೈಯಲ್ಲಿದ್ದ ಅವನ ಅಮ್ಮಾನ ಹೃದಯ ಮೆಲ್ಲಗೆ ಹೋಗಪ್ಪ ಎಡವಿ ಬಿದ್ದಿಯಾ ಜೋಕೆ ಅಂತ ಎಚ್ಚರಿಸುತ್ತದೆ. ಮಗ ತನ್ನನ್ನು ಕೊಂದರೂ ಮಗನನ್ನು ದ್ವೇಷಿಸದೆ, ಅವನಿಗಾಗಿ ಅವನ ಕ್ಷೇಮಕ್ಕಾಗಿ ಅಮ್ಮನ ಹೃದಯ ತುಡಿಯುತ್ತದೆ ಎಂಬುದಕ್ಕೆ ಈ ಕಥೆ ನಿದರ್ಶನವಾಗಿದೆ.      ಹತ್ತು ಜನ ಬೋಧಕರಿಗಿಂತ ಒಬ್ಬ ಜ್ಞಾನಿ ಹೆಚ್ಚು. ಹತ್ತು ಮಂದಿ ಜ್ಞಾನಿಗಳಿಗಿಂತ ಒಬ್ಬ ತಾಯಿಯೇ ಹೆಚ್ಚು. ತಾಯಿಗಿಂತ ಉತ್ತಮ ಗುರುವಿಲ್ಲ. ಹಾಗೆಂದೇ ಮನೆಯನ್ನು ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು ಅಂತ ಕೈಲಾಸಂ ಹೇಳಿದ್ದಾರೆ. ಮಗುವನ್ನು ತಿದ್ದಿ ತೀಡಿ ಒಬ್ಬ ಯೋಗ್ಯ ವ್ಯಕ್ತಿಯನ್ನಾಗಿ ಮಾಡುವ ಗುರುತರವಾದ ಹೊಣೆಗಾರಿಕೆ ತಾಯಿಯದ್ದೇ ಆಗಿದೆ. ಆ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುವ ತಾಯಿ ತನ್ನ  ಮಗುವನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜಕ್ಕೆ ನೀಡುವಳು. ತಾನು ಹೆತ್ತ ಮಗುವಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ದವಾಗಿರುವ ತಾಯಿಯ ಪ್ರೀತಿಗೆ, ವಾತ್ಸಲ್ಯಕ್ಕೆ ಎಣೆ ಇದೆಯೇ. ಅಮ್ಮಾ ಎನ್ನುವುದು ಮಧುರವಾದ ಮಾತು. ಜೀವನಕ್ಕೆ ಬೆಳಕು ನೀಡುವ ಜ್ಯೋತಿ. ಮಗುವಿಗೆ ಅಮ್ಮನ ರಕ್ಷಾಕವಚದಿಂದಾಗಿ ಸುರಕ್ಷತೆ. ದೇವರು ಇಲ್ಲಾ ಎಂದು   ಯಾರು ಬೇಕಾದರೂ ಹೇಳ ಬಹುದು, ಆದರೆ ಅಮ್ಮಾ ಇಲ್ಲ ಎಂದು ಹೇಳಲು ಸಾದ್ಯವೇ ಇಲ್ಲ ಈ ಜಗತ್ತಿನಲ್ಲಿ. ತ್ಯಾಗಕೆ, ಮಮತೆಗೆ, ವಾತ್ಸಲ್ಯಕೆ, ಅನುರಾಗಗಳಿಗೆ ಮತ್ತೊಂದು ಹೆಸರೆ ಅಮ್ಮಾ. ಮಕ್ಕಲ ಸುಖದಲ್ಲಿ ತನ್ನ ಸುಖ ಕಾಣುವ ಏಕೈಕ ಜೀವಿ ಎಂದರೆ ತಾಯಿ ಮಾತ್ರಾ. ಇಂತಹ ಅಮ್ಮನ ಋಣ ತೀರಿಸಲು ಸಾದ್ಯವೇ ಇಲ್ಲ, ಹಾಗಾಗಿಯೇ ಈ ದೇಶದಲ್ಲಿ ಅಮ್ಮನಿಗೆ ಪೂಜನೀಯ ಸ್ಥಾನ. ಇಂತಹ ಪೂಜನೀಯ ಅಮ್ಮನಿಗಾಗಿ ವಿದೇಶಗಳಲ್ಲಿ ವರ್ಷದಲ್ಲಿ ಒಂದು ದಿನವನ್ನು ತಾಯಿಗಾಗಿ ಮಿಸಲಿಟ್ಟು” ಮದರ್ಸ ಡೇ” ಎಂದು ಆಚರಿಸಿ ಅಂದು ಅಮ್ಮನನ್ನು ಕೊಂಡಾಡಿ ಅವಳಿಗೆ ಪ್ರೀತಿಯ ಉಡುಗರೆ ನೀಡಿ ಆ ದಿನದಲ್ಲಿ ಆಕೆ ಹೆಚ್ಚು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ.     ಜಾಗತೀಕರಣದಿಂದಾಗಿ ಆ ಹಬ್ಬ ನಮ್ಮ ದೇಶಕ್ಕೂ ಕಾಲಿಟ್ಟಿತು. ಮದರ್ಸ ಡೇಯನ್ನು  ಹುಟ್ಟಿದ ದೇಶವನ್ನು ಮಾತೃಭೂಮಿ ಎಂದು ಗೌರವಿಸುವ ಈ ದೇಶದಲ್ಲಿ ಕೂಡಾ   ಸಂತೋಷವಾಗಿ ಸ್ವಾಗತಿಸಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಂಟರ್‍ನೆಟ್ ಮತ್ತು ಮೊಬೈಲ್ ಕ್ರಾಂತಿಯಿಂದಾಗಿ ಭಾರತ ದೇಶದಲ್ಲಿಯೂ ಅಮ್ಮನಿಗಾಗಿ ಒಂದು ದಿನವನ್ನು ಮೀಸಲಿಟ್ಟು ಅಮ್ಮನ ದಿನದ ಗೆಲುವಿಗೆ ಕಾರಣರಾಗಿದ್ದಾರೆ. ಮಗುವಿಗೆ ಜನ್ಮ ನೀಡುವುದರಿಮದ ಮೊದಲುಗೊಂಡು ಉಸಿರು ಇರುವವರೆಗೂ ಮಕ್ಕಳ ಏಳ್ಗೆಗಾಗಿ ತಪಸ್ಸಿನಂತೆ ಸೇವೆ ಸಲ್ಲಿಸುವ ನಿಸ್ವಾರ್ಥ ಜೀವಿ ಅಮ್ಮನಿಗಾಗಿ ಮೇ ತಿಂಗಳ ಎರಡನೇ ಭಾನುವಾರ ಅಂತರಾಷ್ಟ್ರೀಯ ಮಾತೃ ದಿನೋತ್ಸವವನ್ನಾಗಿ ಆಚರಿಸಲಾಗುತ್ತಿದೆ,      ಬದಲಾಗುತ್ತಿರುವ ಈ ದಿನಗಳಲ್ಲಿ ಮಾನವ ಸಂಬಂಧಗಳು ತನ್ನ ಮೌಲ್ಯಗಳನ್ನು ಕಳೆದು ಕೊಂಡು ಮಾನವೀಯತೆ ಕ್ಷೀಣಸುತ್ತಿರುವ ಈ ಸಂದರ್ಭದಲ್ಲಿ ಅಮ್ಮಾ ಕೂಡಾ ಹೊರೆಯಾಗುತ್ತಿದ್ದು ಮಕ್ಕಳ ತಿರಸ್ಕಾರಕ್ಕೆ ಗುರಿಯಾಗುತ್ತಿರುವುದು ವಿಪರ್ಯಾಸವಾಗುತ್ತಿದೆ. ಹೆತ್ತ ಮಕ್ಕಳು ಸ್ವಾರ್ಥಿಗಳಾಗಿ ತಮ್ಮ ಭೋಗ ಲಾಲಸೆಯಲಿ ಮುಳುಗಿ ಹೆತ್ತ ತಾಯಿಯನ್ನೇ ಮರೆತು ಬಿಟ್ಟಿರುವ ನಿದರ್ಶನಗಳನ್ನು ನಾವು ಪ್ರತಿ ನಿತ್ಯನಾವು ಕಾಣುತ್ತಲೆ ಇರುತ್ತೆವೆ, ಹೈಟೆಕ್ ಯುಗದಲ್ಲಿ ವೃದ್ದಾಶ್ರಮಗಳು ತಲೆಯೆತ್ತಿ ಅಮ್ಮಂದಿರ ಆಶ್ರಯ ತಾಣಗಳಾಗುತ್ತಿರುವುದು ನೋವಿನ ಸಂಗತಿಯಾಗಿದೆ, ಅಲ್ಲಿ ಸೂಕ್ತ ಆರೈಕೆ, ಪೋಷಣೆ ಸಿಗದೆ ಹಿಡಿ ಪ್ರೀತಿಗಾಗಿ ಹಂಬಲಿಸುತ್ತ ಕಾಲನ ಕರೆಗೆ ಕಾಯುತ್ತಿರುವುದು ಕರುಳಿರಿವ ಸಂಗತಿ. ಈ ದುರಂತದ ಅಂತಿಮ ದಿನಗಳು ಯಾರ ಬಾಳಿನಲ್ಲೂ ಬರಬಾರದು. ಹೆತ್ತ ಅಮ್ಮ ತಮ್ಮ ಕಣ್ಮುಂದೆ ಸದಾ ನಗುತ್ತಿರಲಿ ಎಂದು ಬಯಸುವ ಮಕ್ಕಳೆ ಈ ಭೂಮಿ ಮೇಲೆ ತುಂಬಿರಲಿ . ಅಮ್ಮನ ಆರೋಗ್ಯಕ್ಕಾಗಿ,  ಆರೈಕೆಗಾಗಿ,ಆನಂದಕ್ಕಾಗಿ ಮಕ್ಕಳು ತಮ್ಮ ಬದುಕಿನ ದಿನಗಳ ಕೆಲ ಗಂಟೆಗಳನ್ನಾದರೂ ಮೀಸಲಿಟ್ಟು ಆ ತಾಯ ಕಣ್ಣಲಿ ಮಿಂಚರಿಸಲಿ ಎಂಬುದೇ ಈ ಲೇಖನದ ಆಶಯ. *****************                                                  

ಅಮ್ಮಂದಿರ ದಿನದ ವಿಶೇಷ- ಬರಹ Read Post »

ಇತರೆ

ಅಮ್ಮಾ ಎಂಬ ಬೆಳದಿಂಗಳು

ಅಮ್ಮಾ ಎಂಬ ಬೆಳದಿಂಗಳು ನಾಗರೇಖಾ ಗಾಂವಕರ ಅಮ್ಮಾ! ಅಂದ ಕೂಡಲೇ ಅದೇನೋ ಮಧುರವಾದ ಭಾವ ಎದಗೂಡಲ್ಲಿ ಚಕ್ಕನೇ ಸುಳಿದಂತಾಗುತ್ತದೆ. ಆಪ್ತವಾದ ಹೃದಯವೊಂದರ ಬಡಿತ ದೂರದಲ್ಲಿದ್ದರೂ ನಮ್ಮ ಹತ್ತಿರವೇ ಸುಳಿದಾಡುತ್ತಿದೆ ಎಂಬಂತೆ ಭಾಸವಾಗುತ್ತದೆ. ಮಗಳಿಗೆ ಇಷ್ಟವೇನು? ಕಷ್ಟವೇನು ಎಂಬುದನ್ನು ನನ್ನಮ್ಮ ಅರಿತುಕೊಂಡಿದ್ದಳೇ? ಕೆಲವೊಮ್ಮೆ ಅನ್ನಿಸುತ್ತಿತ್ತು. ಅಮ್ಮನಾಗುವುದೆಂದರೆ ಆ ಪರಿಯ ಜವಾಬ್ದಾರಿಯೇ!  ನನ್ನಮ್ಮನೇಕೆ ಸಣ್ಣದಕ್ಕೂ ರೇಗುತ್ತಾರೆ? ಯಾಕೆ ನನ್ನ ಹುಟ್ಟಿಸಿಕೊಳ್ಳಬೇಕಿತ್ತು. ಬೈಯುವುದಾದರೂ ಏಕೆ? ಅಮ್ಮ ಬೈದಾಗ ತಂದೆ ಬೆಂಬಲಿಸುತ್ತಿದ್ದರೂ ಅಮ್ಮ ಅದಕ್ಕೂ ಹುಸಿಮುನಿಸು ತೋರುತ್ತಿದ್ದಾಗ  ಅಮ್ಮ ! ನಿನಗೆ ಹೊಟ್ಟೆ ಕಿಚ್ಚು ಅಂತೆಲ್ಲಾ ನಗುತ್ತಿದ್ದ  ನನಗೆ ಈಗ ಅದರರ್ಥವಾಗುತ್ತಿದೆ. ಒಳಗೊಳಗೆ ಖುಷಿ ಪಡುತ್ತಿದ್ದ ತಾಯಿ ಹೃದಯ, ಗಂಡನಾದವ ತನ್ನ ಮಕ್ಕಳನ್ನು ಮುದ್ದಿಸುತ್ತಿದ್ದರೆ ತಾಯಿ ತೋರುವ ಹುಸುಮುನಿಸು ವಿಚಿತ್ರ ಖುಷಿಯ ಸಂಭ್ರಮವೆಂದು. . ಬದುಕಿನ ಹಲವು ಪಾಠಗಳನ್ನು ಕಲಿಸಿದ್ದು ಹೆತ್ತವರಲ್ಲವೆ? ಆ ಪಾಠಗಳ ಇಂದಿಗೂ ನನ್ನ ಮಕ್ಕಳಿಗೆ ಮುದ್ದಾಂ ಆಗಿ ಹೇಳುವಾಗ ನನಗೆ ನನ್ನಮ್ಮ ನೆನಪಾಗುತ್ತಾರೆ. ಅಮ್ಮನ ಮಾತಿಗೆ ಅಂದು ಸಿಡಿಮಿಡಿಗುಡುತ್ತಿದ್ದ ನಾನು ಇಂದು ಅಮ್ಮನಾದ ಮೇಲೆ ಆ ಮಾತುಗಳನ್ನು, ನಡೆಯನ್ನು ಅನುಕರಿಸುವುದೇಕೆಂದು ಹಲವು ಬಾರಿ ನನ್ನಷ್ಟಕ್ಕೆ ಕೇಳಿಕೊಂಡಿದ್ದೇನೆ. ಕಾರಣ ಆ ಮಾತುಗಳು ಹೊರ ಮನಸ್ಸಿಗೆ ಕಹಿಯಾಗಿದ್ದರೂ, ಒಳಮನಕ್ಕೆ ಹಿತವಾಗಿರಬೇಕು. ಹಾಗಾಗೇ ಅವುಗಳನ್ನು ನನ್ನ ಸುಪ್ತ ಮನ ನೆನಪಿನಲ್ಲಿಟ್ಟುಕೊಂಡಿರಬೇಕು. ಅಲ್ಲವೇ?                                                   ಆಕೆಯ ಒಳಗುದಿ, ಹೆಣ್ಣು ಹೆತ್ತ ಕರುಳಿನ ಜವಾಬ್ದಾರಿ ಎಷ್ಟೆಂಬುದು ಆ ನಂತರವಷ್ಟೇ ನನಗರ್ಥವಾಗಿದ್ದು. ಹುಡುಗಿಯಾದ ತಪ್ಪಿಗೆ ನನಗಿಂತ ಶಿಕ್ಷೆ ಎಂದು ಆಗ ಅನ್ನಿಸುತ್ತಿತ್ತಾದರೂ, ಅಮ್ಮನ ಉಪದೇಶಗಳು ಕಿರಿಕಿರಿಗಳು, ಕೊರೆತದ ಗರಗಸವೆನ್ನಿಸುತ್ತಿತ್ತಾದರೂ ಅದು ನನ್ನನ್ನು ಕೊರೆಯಲಿಕ್ಕಲ್ಲ. ಬದಲಿಗೆ ನನ್ನ ಸುತ್ತ ಇದ್ದ ಮುಳ್ಳು ಹಿಂಡುಗಳನ್ನು ಕತ್ತರಿಸಿ ನನಗೊಂದು ಸುಂದರ ಉಪವನ ನಿಮರ್ಿಸಿಕೊಡುವ ಆಸೆಯಿಂದಾಗಿತ್ತು ಎಂಬುದು ನನಗರ್ಥವಾಗಿದ್ದು ನಾನು ತಾಯಿಯಾಗಿ ಆ ಹೊರೆ ಹೊತ್ತಾಗಲೇ. ಅಮ್ಮ ನನ್ನ ಎತ್ತಿ ಎತ್ತಿ ಮುದ್ದಿಸಿರಲಿಲ್ಲ. ಹೊಗಳಿ ಹಾಡುತ್ತಿರಲಿಲ್ಲ.  ಆದರೆ  ತೆಗಳಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹೀಯಾಳಿಸುವುದು, ನೋಯಿಸುವುದು ಮಾಡಿದಾಗಲೆಲ್ಲ ಅಮ್ಮ ಕ್ರೂರಿಯಂತೆ ಕಾಣುತ್ತಿದ್ದರು. ಮೂದಲಿಕೆ ಮಾಡಿಗೊತ್ತೆ ಹೊರತು ಮುದ್ದಿಸಿ ಗೊತ್ತಿಲ್ಲ ನಿನಗೆ ಎಂದು ದೊಡ್ಡವಳಾದಾಗ ಹೇಳುತ್ತಿದ್ದೆ ಅಮ್ಮನಿಗೆ. ಆಗ ಆಕೆ . ನಾ ಮುದ್ದಿಸ್ತಾ ಕೂತ್ರೆ, ನೀ ಮುದ್ದೆ ತಿನ್ನುಕಾತತೇ ಮಗನೇ?  ಎನ್ನುತ್ತಿದ್ದರು. ಅದೂ ನಮಗೂ ಅರಿವಿತ್ತು.                 ಆದರೆ ಅಮ್ಮ ಮಕ್ಕಳ ಬಗ್ಗೆ ಅದೆಷ್ಟು ಕಾಳಜಿ ಮಾಡುತ್ತಿದ್ದರು. ಮನೆಯಿಂದ  ಹೊರಹೋದ ಮಕ್ಕಳು  ಸರಿಯಾದ ಸಮಯಕ್ಕೆ ಬರದಿದ್ದಲ್ಲಿ ಅಮ್ಮ ಕಳವಳ ಪಡುತ್ತಿದ್ದಳು.  ಶಾಲೆಗೋ,ಇನ್ನಿತರ ಕೆಲಸಕ್ಕೋ  ಹೊರಹೋದ ಮಕ್ಕಳು  ಬರುವುದು  ಒಂದಿಷ್ಟು ವಿಳಂಬವಾದರೂ ಆಕೆಯ ಮನಸ್ಸು ಪರಿತಪಿಸುತ್ತಿತ್ತು.  ಮನೆಯಂಗಳದಲ್ಲಿ ನಿಂತು ಕಣ್ಣು ಹಾಯುವಷ್ಟು ದೂರ ನೋಡುತ್ತಾ ಕಾಯುತ್ತ ಉಳಿದು ಬಿಡುತ್ತಿದ್ದಳು. ದೂರದಲ್ಲಿ ಬರುವ ಮಕ್ಕಳನ್ನು ಕಂಡೊಡನೆ ಆಕೆಗೆ ಸಮಾಧಾನವಾಗುತ್ತಿತ್ತು. ಅಮ್ಮ ಆಗಾಗ ನನ್ನ ಎಣ್ಣೆಗಪ್ಪು ಮೈಬಣ್ಣವನ್ನು ಲೇವಡಿ ಮಾಡುತ್ತಿದ್ದರು. ಅಕ್ಕಂದಿರ ಬಿಳಿ ಚರ್ಮದೊಂದಿಗೆ ಹೋಲಿಸುತ್ತಿದ್ದರು. ಬಿಸಿಲಿಗೆ ಮುಖ ಕೊಟ್ಟು  ನಡೆವ ನನಗೆ ಬೈಯುತ್ತಿದ್ದರು. ಆಗೆಲ್ಲ ನನಗೆ ಅತಿಯಾದ ನೋವು, ಜಿಗುಪ್ಸೆ ಬರುತ್ತಿತ್ತು. ನನಗೂ ಬಂಗಾರದ ಬಣ್ಣವನ್ನು ದೇವರು ಕೊಡಲಿಲ್ಲವೇಕೆಂದು ದೇವರನ್ನು ದೂರುತ್ತಿದ್ದೆ. ಸದಾ ನನ್ನ ಕಾಡುವ ನನ್ನ ಬಣ್ಣವನ್ನು ಹಂಗಿಸುವ ಅಣ್ಣಂದಿರ ಜೊತೆ ಸೇರಿ ತಾನೂ ನನ್ನ ತಮಾಷೆ ಮಾಡುವುದರಲ್ಲಿ ಅದ್ಯಾಕೋ ಅಮ್ಮ ಖುಷಿ ಪಡುತ್ತಿದ್ದಳು. ಎಳೆಯ ಮನಸ್ಸಿಗೆ ನೋವಾಗುವುದೆಂಬ ಕನಿಷ್ಟ ತಿಳುವಳಿಕೆ ಅಮ್ಮನಾದವಳಿಗೆ ಇರಲಿಲ್ಲವೇ? ಎಂಬ ವಿಸ್ಮಯ ನನಗೀಗ ಆಗುತ್ತಿದೆ.  ಆಗೆಲ್ಲ ಮಾನಸಿಕವಾಗಿ ನಾನು ಎಷ್ಟು ಕುಗ್ಗಿ ಹೋಗುತ್ತಿದ್ದೆ ಎಂದರೆ ಯಾರೂ ಇಲ್ಲದಾಗ ಮನೆ ಹಿಂದಿನ ಹಳ್ಳದ ಕಡೆ ನಡೆದುಬಿಡುತ್ತಿದ್ದೆ. ನೀರಿನ ಝಳು ಝಳು ನಾದದೊಂದಿಗೆ ನನ್ನ ಆಕ್ರಂದನ ಬೆರೆದು ಹೋಗುತ್ತಿತ್ತು. ಈಗೆಲ್ಲ ನಾವು ಮಕ್ಕಳು ಅತ್ತರೆ ಅದೆಷ್ಟು ಮುದ್ದಿಸುತ್ತೇವೆ. ಆಗ ನಮಗೆ  ನೋವನ್ನು  ಉಂಟುಮಾಡಿಯೂ ಸಂತೈಸಲು ಇಷ್ಟಪಡದ, ಆ ಪರಿಯ ಪ್ರೀತಿಯನ್ನು ಎಂದೂ ತೋರದ ಹೆತ್ತವರು ಕೆಲವೊಮ್ಮೆ ಕ್ರೂರಿಗಳಂತೆ ಕಂಡಿದ್ದರು. ಪ್ರೀತಿ ಹೃದಯದಲ್ಲಿತ್ತೆಂದು ಈಗ ಅರಿವಾಗುತ್ತದೆ ಅಷ್ಟೇ! ಅದನ್ನು ಪ್ರಕಟಿಸಬಾರದಿತ್ತೇ ಆಗಲೇ ಎಂದೂ ಅನ್ನಿಸುತ್ತದೆ. ಇದೆಲ್ಲ ನಾನು ಪ್ರೌಢೆಯಾಗುತ್ತಾ ಅರಿವಾಗುತ್ತಿದೆ. ಕಾಲೇಜು ಮುಗಿಯುವವರೆಗೂ ಅಮ್ಮ ನನ್ನನ್ನೆಂದೂ ಪ್ರೀತಿಯಿಂದ ಮುದ್ದಿಸಿರಲಿಲ್ಲ. ಕಾಲೇಜು ಮುಗಿಸಿ ಮನೆಗೆ ಬರುತ್ತಲೇ ನನ್ನ ಅಣ್ಣಂದಿರು  ಹಾಗೂ ಎರಡನೇಯ ಅಕ್ಕನಿಗೆ ಅಮ್ಮನ ಕೈ ಅಡುಗೆಯೇ ಆಗಬೇಕಿತ್ತು. ಅಮ್ಮ ಬಡಿಸದಿದ್ದರೆ ಉಣ್ಣದೇ ಉಳಿಯುವ ಜಾಯಮಾನ ಅವರದು. ಆದರೆ ನನಗೆ? ಅಮ್ಮ ಗಟ್ಟಿಗಾತಿ. ಸ್ವಲ್ಪ ಕೋಪಿಷ್ಟೆ. ಇಪ್ಪತ್ತಾರು ವರ್ಷಕ್ಕೆ ಆರು ಮಕ್ಕಳ ತಾಯಿಯಾಗಿ ಸಂಸಾರದ ನೊಗ ಹೊತ್ತಿದ್ದರು. ಸರಕಾರಿ ನೌಕರನಾದ ತಂದೆ ವಗರ್ಾವಣೆಗೊಂಡಲ್ಲೆಲ್ಲಾ ಊರೂರು ಅಲೆಯುತ್ತಾ ಸುಮಾರು ಹತ್ತು ವರ್ಷ ಹೇಗೋ ಕಾಲ ತಳ್ಳಿದ ಮೇಲೆ ಮಕ್ಕಳ ವಿಧ್ಯಾಭ್ಯಾಸದ ಜೊತೆಗೆ  ತನ್ನದೇ ಸ್ವಂತ ಸೂರು, ಬಂಧುಬಾಂಧವರ ಜೊತೆ ಹತ್ತಿರದ ನೆಲೆಯನ್ನು, ಭದ್ರತೆಯನ್ನು ಆಪೇಕ್ಷಿಸಿ ಅಮ್ಮ  ಮಕ್ಕಳ ಕಟ್ಟಿಕೊಂಡು ಊರಿಗೆ  ಬಂದೇಬಿಟ್ಟರು. ತಂದೆಯನ್ನು ನಾವು ‘ದಾದ’ ಎಂದೇ ಕರೆಯುತ್ತಿದ್ದೆವು. ದಾದ  ಊರಲ್ಲಿ ಹತ್ತು ಹದಿನೈದು ಎಕರೆ ಜಮೀನು ಖರೀದಿಸುವಂತೆ ಮಾಡಿ, ಆ ಭೂಮಿಯಲ್ಲಿ ಕೃಷಿಗೆ ನಿಂತರು ಅಮ್ಮ. ಅವರ ಮಹತ್ವಾಕಾಂಕ್ಷೆಯನ್ನು ಮನಗಂಡ ದಾದ ಅದಕ್ಕೆ ಪೂರಕವಾಗಿ ಜಮೀನಿನಲ್ಲಿ ಭತ್ತದ ಜೊತೆ ತೆಂಗು ಕಂಗುಗಳ ಕೃಷಿಯನ್ನು ಮಾಡಿದರು. ಫಸಲು ಬರುವುದಕ್ಕೆ ಇನ್ನೂ ಕಾಲವಿತ್ತು ಎರಡೆರಡು ಬಾವಿಗಳು ತಲೆ ಎತ್ತಿದ್ದವು. ತಂದೆ ಸರಕಾರಿ ನೌಕರಿಯಲ್ಲಿ ತಮ್ಮ ತೊಡಗಿಸಿಕೊಂಡಿದ್ದರು.                     ಸದಾ ಸಮಾಜಮುಖಿ ಕೆಲಸದಲ್ಲಿ ಇತರರಿಗೆ ಸಹಾಯ, ಸಹಕಾರ, ಮಾರ್ಗದರ್ಶನ ಅಂತೆಲ್ಲ ತನ್ನನ್ನು ತೊಡಗಿಸಿಕೊಂಡಿದ್ದ ತಂದೆ, ಒಬ್ಬರೇ ಕೆಲಸದ ಸ್ಥಳದಲ್ಲಿ ಉಳಿಯಬೇಕಾಯ್ತು. ಯಾವತ್ತೂ ಕ್ರಿಯಾಶೀಲನಾಗಿರುತ್ತಾ, ಹಣವನ್ನೂ ನೀರಿನಂತೆ ಖರ್ಚು ಮಾಡುತ್ತಿದ್ದ ತಂದೆ ನನ್ನಮ್ಮನ ಮದುವೆಯಾದ ನಂತರವೇ ಒಂದು ಹದಕ್ಕೆ ಬಂದಿದ್ದು ಎಂದು ಅಮ್ಮ ಅವರೆದುರು ಹೇಳುತ್ತಿದ್ದರೆ ತಂದೆ ಸಣ್ಣಗೆ ನಗುತ್ತಿದ್ದರು. ಮತ್ತು ತಮಾಷೆಯಾಗೇ  ನನ್ನ ದುಡ್ಡು ತಕ್ಕಂಡೇ ನಂಗೆ ಆರತಿ ಮಾಡ್ತಾಳೇ ನಿಮ್ಮಮ್ಮ ಎನ್ನುತ್ತಿದ್ದರು. ಅಮ್ಮನದು ಒಂದಿಷ್ಟು ಜಾಸ್ತಿಯೇ ಎನ್ನುವ ಹಿಡಿತದ ಕೈ. ಮಕ್ಕಳ ಕುರಿತು ಮುದ್ದಿಗಿಂತ ಅವರ ಮುಂದಿನ ಭವಿಷ್ಯದ ಕುರಿತು ಚಿಂತೆ.                            ತಂದೆ ಹೊರ ಊರಲ್ಲಿ ಹೋಟೆಲ್ಲು ಊಟ ಎನ್ನುತ್ತ ಆರೋಗ್ಯವನ್ನು ಕೆಡಿಸಿಕೊಂಡಿದ್ದರು. ನಲವತ್ತೇಳು ವರ್ಷಕ್ಕೆ ಮೊದಲ ಭಾರಿಗೆ ಹೃದಯಬೇನೆಗೆ ಗುರಿಯಾಗಿದ್ದರು. ಗಟ್ಟಿಗಾತಿ ಅಮ್ಮ ಮೊದಲ ಬಾರಿಗೆ ಅತ್ತಿದ್ದನ್ನು ನೋಡಿದ್ದೆ. ಆಕೆ ಕಳವಳಗೊಂಡಿದ್ದಷ್ಟೇ ಅಲ್ಲ ಆರು ಮಕ್ಕಳ ಹೊತ್ತ ಒಡಲು ಅವರನ್ನು ಪೊರೆಯಬೇಕಾಗಿತ್ತಲ್ಲ. ಹಾಗಾಗಿ ತಂದೆಗೆ ಕಡ್ಡಾಯ ಪೆನಷನ್ ಪಡೆಯಲು ಹೇಳಿ ಮನೆಯಲ್ಲಿ ಆರಾಂ ಆಗಿ ಇರುವಂತೆ ಮಾಡಿದ್ದರು. ಅಂದಿನಿಂದ ತಾವೇ ಹೊಲ ತೋಟ ನೋಡಿಕೊಳ್ಳುತ್ತ ಇರತೊಡಗಿದರು.  ಹೊಲದಲ್ಲಿ ಕೆಲಸದವರೊಂದಿಗೆ ತಾವೂ ದುಡಿಯುತ್ತಿದ್ದರು. ಮನೆಯ ಅಡುಗೆ ಕೆಲಸ, ತೋಟದ ಕೆಲಸ ಗದ್ದೆಯ ಕೆಲಸ, ತೋಟಕ್ಕೆ, ಗದ್ದೆಗೆ  ಔಷಧಿ ಹೊಡೆಯುವುದು, ಗಂಡು ಆಳುಗಳು ಮಾಡುವ ಕೆಲಸಕ್ಕಿಂತ ಹೆಚ್ಚೆ ಮಾಡುತ್ತಿದ್ದರು. ತನ್ನ ದೈಹಿಕ ಆರೋಗ್ಯದ ಕಡೆ ಕಾಳಜಿ ಮಾಡದೇ ಇರುವ ಕಾರಣವೇ ಇರಬೇಕು. ಅಮ್ಮ ಮೂವತ್ತೊಂಬತ್ತು ವರ್ಷಕ್ಕೆ ಮೊದಲ ಬಾರಿ ವಿಪರೀತ ರಕ್ತಸ್ರಾವಕ್ಕೆ ಗುರಿಯಾಗಿ  ಹಾಸಿಗೆ ಹಿಡಿದರು. ಬಂಗಾರದ ಮೈಬಣ್ಣದ ಅಮ್ಮ ಬಿಳಿಚಿಕೊಂಡಿದ್ದರು. ಅಶಕ್ತರಾಗಿದ್ದರು.                                      ನಾನಾಗ ಎಂಟನೇ ತರಗತಿ ಪಾಸಾಗಿದ್ದೆ. ಅಮ್ಮನಿಗೆ ವಿಪರೀತ ರಕ್ತಸ್ರಾವ ಆಗಿ ಊರಲ್ಲಿಯ ಆಸ್ಪತ್ರೆಗಳಿಗೆ ಎಡತಾಕಿದರೆ, ಅಲ್ಲಿ ಗುಣಕಾಣದೇ ಹುಬ್ಬಳ್ಳಿಗೆ ಪೂರ್ತಿ ತಪಾಷಣೆಗೆ ಕೊಂಡೊಯ್ದರು. ಅಲ್ಲಿ ಅವರನ್ನು ಕಾನ್ಸರ್ ತನ್ನ ಮುಷ್ಟಿಯಲ್ಲಿ ಬಂಧಿಸಿರುವುದು ಗೊತ್ತಾಗುತ್ತಲೇ ನಾವೆಲ್ಲ ಮಾತು ಕಳೆದುಕೊಂಡಂತೆ ಅಸಹಾಯಕರಾಗಿದ್ದೆವು. ತಂದೆ ಕಣ್ಣಿರಿಟ್ಟಿದ್ದರು. ಎಲ್ಲ ಮಕ್ಕಳು ಕಲಿಯುತ್ತಿರುವ ಹಂತದಲ್ಲಿ, ಯಾರೂ ತಮ್ಮ ಜೀವನದ ಹಾದಿಯನ್ನು ಕಂಡುಕೊಳ್ಳದ ಹೊತ್ತಲ್ಲಿ, ಅಮ್ಮಾ1 ನೀವು ಎಷ್ಟು ನೋವುಂಡಿರಿ? ಅದೆಲ್ಲ ನಮಗೆ ತಾಕಬಾರದೆಂದು ನೀವಿಬ್ಬರೂ ಇರುವಾಗ ನೀವು ತಣೆಯ ಮೇಲೂ ದಾದ ತಣೆಯ ಮೇಲ್ಚಿಟ್ಟೆಯ ಮೇಲೂ ಕೂತು ಮನಸ್ಸನ್ನು ಹಗುರಮಾಡಿಕೊಳ್ಳುತ್ತಿದ್ದದ್ದನ್ನು ಕೊನೆಯವಳಾದ ನಾನು ಗ್ರಹಿಸುತ್ತಿದ್ದೆ. ಆಗ ಬುದ್ದಿ ಇರಲಿಲ್ಲ. ಸುಮ್ಮನೇ ಇಷ್ಟೊಂದು ನೋಯುತ್ತಾರೆ ಎಂದೆಲ್ಲಾ ಅವರಿಗೆ ಉಪದೇಶ ಮಾಡುತ್ತಿದ್ದೆ. ನೀವಾಗ ನಗುತ್ತಿದ್ದಿರಿ.                            ಅಮ್ಮ ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿ ಉಳಿದರು.  ಅರ್ಬುದ ರೋಗಕ್ಕೆ ನೀಡುತ್ತಿದ್ದ ಕರೆಂಟುಗಳು ಅವರ ನರಗಳನ್ನು ನಿರ್ಜೀವ ಮಾಡುತ್ತಿದ್ದವು. ಅಮ್ಮ ಸಾವನ್ನು ಗೆದ್ದು ಬಂದಿದ್ದಳು. ಆದರೆ ಈ ಸಂತೋಷ ಕೂಡಾ ಬಹಳ ದಿನ ಉಳಿಯಲಿಲ್ಲ. ತಂದೆ ಹೃದಯಬೇನೆ ದಿನವೂ ಔಷಧಿ ತಿಂದರೆ ಅಮ್ಮ ಅರ್ಬುದ ರೋಗಕ್ಕೆ. ಮನೆ ಎನ್ನುವದು ಸಣ್ಣ ಔಷಧಾಲಯವಾಗಿತ್ತಲ್ಲ. ಎರಡೇ ವರ್ಷಕ್ಕೆ ಪುನಃ ಅಮ್ಮನ ಮೈ ಮತ್ತೆ ಕ್ಯಾನ್ಸರ್ಗೆ ಬಲಿಯಾಗಿತ್ತು. ಆಗ ಮನೆ ಜನರೆಲ್ಲ ಆಶಾವಾದವನ್ನೆ ಕಳೆದುಕೊಂಡಿದ್ದರು. ಅಲ್ಲವೇ ಅಮ್ಮ?                 ತಂದೆ ಕೂಡಾ ಆಗ ಅತ್ತಿದ್ದರು. ಹಿರಿಯಣ್ಣ ಮನದಲ್ಲೆ ಸಂಕಟ ಪಟ್ಟಿದ್ದ. ಅಮ್ಮನ ಹಿಂದೆ ಯಾವಾಗಲೂ  ಇರುತ್ತಿದ್ದ ಎರಡನೇಯ ಅಣ್ಣ ಕಳವಳಪಟ್ಟಿದ್ದ. ಹಿರಿಯಕ್ಕ  ಕಿರಿಯರಾದ ನಮಗೆ ಅಮ್ಮನಂತೆ ಸಾಂತ್ವನ ಹೇಳುವುದು, ಮೊದಲಿಗಿಂತ ಹೆಚ್ಚು ಪ್ರೀತಿ ತೋರುವುದು ಮಾಡಲಾರಂಭಿಸಿದಳು. ಕಿರಿಯಣ್ಣ ಮೌನಿಯಾಗಿದ್ದ. ಒಟ್ಟು ದಿನಕ್ಕೆರಡು ಕರೆಂಟುಗಳನ್ನು ಕೊಡಿಸಿಕೊಳ್ಳುತ್ತಾ ತಿಂಗಳಾನುಗಟ್ಟಲೆ ಅಮ್ಮ ಹುಬ್ಬಳ್ಳಿ ಕಾನ್ಸರ್ ಆಸ್ಪತ್ರೆಯಲ್ಲಿ ಜನರಲ್ ವಾಡರ್ಿನ ಹಾಸಿಗೆಯಲ್ಲಿ ಮಲಗಿರುತ್ತಿದ್ದರು. ಸ್ವಚ್ಛತೆಯನ್ನು ಇಷ್ಟ ಪಡುತ್ತಿದ್ದ ಅಮ್ಮ ಹುಬ್ಬಳ್ಳಿ ಜನರ ಹಚ್ಚಿಕೊಳ್ಳುವ ಗುಣವನ್ನು ಇಷ್ಟ ಪಡುತ್ತಿದ್ದರೂ, ಅವರ ಸ್ವಚ್ಛವಲ್ಲದ ಜೀವನ ಶೈಲಿಗೆ ಕಷ್ಟ ಪಡುತ್ತಿದ್ದರು. ಬಾತರೂಮುಗಳು, ಟಾಯ್ಲೆಟ್ಗಳು ಎಲ್ಲರೂ ಬಳಸುತ್ತಿದ್ದರಿಂದ ಅಲ್ಲಿಯ ವ್ಯವಸ್ಥೆಯನ್ನು ಕಣ್ಣುಮುಚ್ಚಿ ಬಾಯಿ ಮುಚ್ಚಿ ಸಹಿಸಿಕೊಂಡಿದ್ದರು. ಕಾರಣವಿಷ್ಟೇ, ಖಚರ್ುಮಾಡಲು ಹಣವಿರಲಿಲ್ಲ. ಒಂದಿಷ್ಟು ಇದ್ದರೂ ಮುಂದೆ ಮೂರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳ ಭವಿಷ್ಯ ನೆಲೆಯಾಗಬೇಕಿತ್ತಲೇ? ಅಮ್ಮನೊಂದಿಗೆ ಆಸ್ಪತ್ರೆ ವಾಸಕ್ಕೆ ನಾನೂ ಜೊತೆಯಾಗಿದ್ದೆ.  ಒಂದೊಂದು ಅನುಭವವೂ ನನ್ನ ಮಿತಿಯನ್ನು ವಿಸ್ತರಿಸುತ್ತಲೇ ಇದ್ದವು.  ಸಹನೆಯನ್ನು, ಸಂಕಟಗಳನ್ನು ಎದುರಿಸುತ್ತಾ ಬೆಳೆದೆ. ಆಸ್ಪತ್ರೆಯಲ್ಲಿ ಅಕ್ಕಪಕ್ಕದ ಜನರ ಜೊತೆ ಮಾತನಾಡುತ್ತಾ, ಅಮ್ಮ ಒಮ್ಮೊಮ್ಮೆ ಕಣ್ಣಲ್ಲಿ ನೀರು ತಂದುಕೊಳ್ಳುತ್ತಿದ್ದರು. ನನಗೂ ಅಳು ಬರುತ್ತಿತ್ತು.  ಅಂತೂ ಎರಡನೇ ಬಾರಿಯೂ ಸಾವಿನೊಡನೆ ಹೋರಾಡಿ ಗೆದ್ದು ಮನೆಗೆ ಬಂದಳು ಅಮ್ಮ. ಅಕ್ಕನ ಮದುವೆ ಮಾಡುವ ನಿಧರ್ಾರಕ್ಕೆ ಬಂದರು. ಮದುವೆಯೂ ಆಯಿತು. ಅಣ್ಣನಿಗೆ ಆಗಷ್ಟೇ ನೌಕರಿ ಸಿಕ್ಕಿತು. ಎರಡು ಮೂರು ವರ್ಷಗಳಲ್ಲಿ ಎರಡನೇ ಅಕ್ಕನ ಮದುವೆಯೂ ಆಗಿ ಸಮಾಧಾನ ಎಂದುಕೊಳ್ಳುತ್ತಿರುವಾಗ ಅಮ್ಮನಿಗೆ ಸಕ್ಕರೆ ಕಾಯಿಲೆ ಗಂಟುಬಿದ್ದಿತ್ತು. ಸಿಹಿ ಎಂದರೆ ಪ್ರಾಣವಾಗಿದ್ದ ಅಮ್ಮ ಸಿಹಿಯನ್ನು ಬಿಟ್ಟೆ ಬಿಟ್ಟರು. ಕಟ್ಟು ನಿಟ್ಟಾಗಿ ಪಥ್ಯ ಮಾಡತೊಡಗಿದರು. ಡಯಾಬೀಟಿಸ್ ಮಹಾಶಯ ಕ್ಯಾನ್ಸರ್ಗೆ ಕೊಟ್ಟ ಕರೆಂಟ್ನ ಬಳುವಳಿಯಾಗಿ ಬಂದಿದ್ದ. ಮತ್ತೇ ಶೋಕ! ತಂದೆ ಮೂರನೇ ಬಾರಿ ಹೃದಯಾಘಾತಕ್ಕೆ ಒಳಗಾದಾಗ ಮತ್ತೆ ಬದುಕಲಿಲ್ಲ. ಆ ಒಂದು ಕೆಟ್ಟ ಮುಂಜಾನೆ ಬೆಳಿಗ್ಗೆಯ ನಾನೇ ಕೊಟ್ಟ ಚಹಾ ಲೋಟ ಕೈಯಲ್ಲಿ ಹಿಡಿದಿದ್ದರಷ್ಟೇ! ಮರುಕ್ಷಣ ಮಂಚದ ಮೇಲಿನ  ಹಾಸಿಗೆಯಿಂದ ಕೆಳಗೆ ಬಿದ್ದವರು ಹೊರಟೇ ಹೋಗಿದ್ದರು. ಅಮ್ಮ ಈಗ ಒಂಟಿಯಾಗಿದ್ದರು. ಮಕ್ಕಳನ್ನು ಇನ್ನೂ ಜಾಸ್ತಿ ಜಾಸ್ತಿ ಪ್ರೀತಿಸತೊಡಗಿದರು. ಎಲ್ಲರ ಮದುವೆಯೂ ಆಯಿತು. ಅಮ್ಮ ಅದೆಷ್ಟು ನಿರಾಶೆ, ನೋವು, ಮೂದಲಿಕೆಗಳನ್ನು ಮಾಡಿ ನನ್ನ ತಿದ್ದುವ ಪ್ರಯತ್ನ ಮಾಡುತ್ತಿದ್ದರೋ, ಅಷ್ಟೇ ಪ್ರೀತಿ,ವಿಶ್ವಾಸ, ಕರುಣೆಯನ್ನೂ ಬಡಿಸಿದ್ದರು.  ಒಂದಿಷ್ಟು ಹೇಳಿದ್ದನ್ನು ಕೇಳದ ಅಧಿಕಪ್ರಸಂಗಿ ಎಂದು ಬೈಯುತ್ತಿದ್ದರೋ ಅವರೇ ನನ್ನ ಹಚ್ಚಿಕೊಳ್ಳತೊಡಗಿದರು. ಅದೂ ಅತಿಯಾಗಿ ಪ್ರೀತಿಸಿದ್ದ ಅಕ್ಕ ಮದುವೆಯಾಗಿ ಹೋದ ಮೇಲೆ.  ಎರಡನೇಯ ಅಣ್ಣನ ಮದುವೆಯಾದ ಮೇಲೆ. ಅಮ್ಮ ನನ್ನ ಪ್ರೀತಿಸತೊಡಗಿದ್ದರು. ನಾನು ಅಮ್ಮನ ಮಗಳಾಗಿದ್ದೆ.

ಅಮ್ಮಾ ಎಂಬ ಬೆಳದಿಂಗಳು Read Post »

ಇತರೆ

ಲಹರಿ

ಮತ್ತೊಮ್ಮೆ ನಿನ್ನ ಭೇಟಿಯಾಗುವೆ. ಅಮೃತಾ ಪ್ರೀತಮ್ ಶೀಲಾ ಭಂಡಾರ್ಕರ್ मैं तैनू फ़िर मिलांगी. ಅಮೃತಾ ಪ್ರೀತಂ ತಾನು ಸಾಯುವ ಮೊದಲು ಇಮ್ರೋಜ್‍ನಿಗಾಗಿ ಪಂಜಾಬಿಯಲ್ಲೊಂದು ಕವಿತೆ ಬರೆದಳು. ಪ್ರತಿಯೊಂದು ಶಬ್ದವೂ ಪ್ರೀತಿಯನ್ನು ತುಂಬಿಸಿಕೊಂಡು ಕವಿತೆಯಾಗಿತ್ತು. ಅಮೃತಾ ಒಂದು ವಿಶಿಷ್ಟ ವ್ಯಕ್ತಿತ್ವ. ಹದಿನಾರನೆ ವಯಸ್ಸಿನಲ್ಲೇ ಮನೆಯವರು ನಿಶ್ಚಯಿಸಿ ಪ್ರೀತಮ್ ಸಿಂಗ್ ಜತೆ ಮದುವೆ ಮಾಡಿದ್ದರೂ ಆ ಮದುವೆ ಊರ್ಜಿತವಾಗಲಿಲ್ಲ. ನಂತರದ ದಿನಗಳಲ್ಲಿ ಬರವಣಿಗೆಯಲ್ಲಿ ತನ್ನನ್ನು ವಿಶೇಷವಾಗಿ ಈ ಜಗತ್ತಿಗೆ ಪರಿಚಯಿಸಿಕೊಂಡ ಅಮೃತಾ ಲಾಹೋರ್ ವಿಭಜನೆಯ ಸಮಯದಲ್ಲಿ ಆ ಕಾಲದ ಪ್ರತಿಭಾವಂತ ಯುವ ಕವಿ ಸಾಹಿರ್ ಲುಧಿಯಾನ್ವಿಯಿಂದ ಆಕರ್ಷಿತಳಾಗಿ, ಅವನನ್ನೇ ಮನಸ್ಸಿನಲ್ಲಿ ಆರಾಧಿಸತೊಡಗಿದಳು. ಅಮೃತಾ ಸಾಹಿರನನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತಿದ್ದಳು. ಆದರೆ ಅವಳಿಗೆ ಅವನಿಂದ ಅಂತಹ ಪ್ರೀತಿ ಸಿಗಲಿಲ್ಲ. ಸುಧಾ ಮಲ್ಹೋತ್ರಾ ಎಂಬ ಗಾಯಕಿಯ ಕಡೆಗೆ ಆಕರ್ಷಿತನಾದ ಸಾಹಿರ್ ಅಮೃತಾಳಿಂದ ವಿಮುಖನಾದ. ಸಾಹಿರ್ ಯಾರನ್ನೂ ಗಂಭೀರವಾಗಿ ಪ್ರೀತಿಸಲಿಲ್ಲವೆಂದೇ ಹೇಳಬಹುದು. ಅವನೇ ಹೇಳಿದಂತೆ, ಪ್ರತೀ ಸಲ ಅವನ ಹೊಸ ಪ್ರೇಮ ಹುಟ್ಟಿದಾಗೆಲ್ಲ ಅದ್ಭುತ ಕವಿತೆಗಳ ರಚನೆಯಾದವು. ಆದರೆ ಅಮೃತಾಳಿಂದ ಮಾತ್ರ ಅವನನ್ನು ಮರೆಯಲಾಗಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಮತ್ತೆ ಅವಳ ಜೀವನದಲ್ಲಿ ಬಂದವನು ಇಮ್ರೋಜ್, ಅವಳ ಬಾಲ್ಯದ ಗೆಳೆಯ. ಬಾಲ್ಯದಿಂದಲೇ ಅಮೃತಾಳನ್ನು ಅತೀವವಾಗಿ ಇಷ್ಟ ಪಡುತ್ತಿದ್ದ. ಅವನೊಬ್ಬ ಚಿತ್ರ ಕಲಾವಿದ. ಅಮೃತಾಳನ್ನು ಅದ್ಯಾವ ಪರಿಯಲ್ಲಿ ಪ್ರೀತಿಸುತ್ತಿದ್ದನೆಂದರೆ, ಅವಳಿಂದ ಏನನ್ನೂ ಅಪೇಕ್ಷಿಸುತ್ತಿರಲಿಲ್ಲ. 40 ವರ್ಷಗಳ ಕಾಲ ಅವರಿಬ್ಬರೂ ಜತೆಯಲ್ಲೇ ಇದ್ದರು. ಹೆಸರಿಲ್ಲದ ಬಂಧದಲ್ಲಿ ಬಂಧಿತರಾಗಿ ಇದ್ದ ಅಮೃತಾ ಇಮ್ರೋಜರ ಜೋಡಿಯು ಎಲ್ಲರಿಗೂ ವಿಸ್ಮಯವಾಗಿತ್ತು. ಖುಷ್‍ವಂತ್ ಸಿಂಗ್ ಅವರು ತಮ್ಮ ಮನೆಯಲ್ಲಿ ಆಗಾಗ ಚಿಕ್ಕ ಚಿಕ್ಕ ಬೈಠಕ್‍ಗಳಿಗಾಗಿ ಸ್ನೇಹಿತರನ್ನು ಕರೆಯುತಿದ್ದರು. ಅಮೃತಾ ಇಮ್ರೋಜರನ್ನೂ ಕರೆದರೂ ಅವರಿಬ್ಬರೂ ಬರುತ್ತಿರಲಿಲ್ಲ. ಒಮ್ಮೆ ದೂರವಾಣಿ ಕರೆಮಾಡಿ ಅಮೃತಾಳ ಬಳಿ, ” ಈಗೀಗ ಮನೆಯಿಂದ ಹೊರಗೆ ಹೋಗುವುದನ್ನೇ ನಿಲ್ಲಿಸಿರುವ ಹಾಗೆ ಕಾಣುತ್ತಿದೆ. ಅದೇನು ಮಾಡುತ್ತೀರಿ ಇಬ್ಬರೂ ಮನೆಯಲ್ಲಿ?” ಆಗ ಅಮೃತಾ ಕೊಟ್ಟ ಉತ್ತರ ” ಮಾತಾಡುತ್ತೇವೆ”. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಮಾತುಗಳಲ್ಲಿ, ಅವಳು ಬರೆಯುವ ಕವಿತೆಗಳಲ್ಲಿ, ಅವನು ಬರೆಯುವ ಚಿತ್ರಗಳಲ್ಲಿ, ಅಥವಾ ಮೌನವಾಗಿಯೂ ಅವರಿಬ್ಬರೂ ಮಾತನಾಡುತಿದ್ದರು. ಕೊನೆಯದಾಗಿ ಸಾಯುವ ಸಮಯ ಹತ್ತಿರ ಬರುತಿದ್ದಂತೆ ಅವಳೊಂದು ಕವಿತೆಯನ್ನು ಅವನಿಗಾಗಿ ಬರೆದಳು. मैं तैनू फ़िर मिलांगी. ಮತ್ತೊಮ್ಮೆ ನಿನ್ನ ಭೇಟಿಯಾಗುವೆ. ಮತ್ತೊಮ್ಮೆ ನಿನ್ನ ಭೇಟಿಯಾಗುವೆ. ಎಲ್ಲಿ ಹೇಗೆ ಎಂದು ತಿಳಿಯದು. ಬಹುಶಃ ನಿನ್ನ ಕಲ್ಪನೆಗೆ ಪ್ರೇರಣೆಯಾಗಿ ನಿನ್ನ ಕ್ಯಾನ್ವಾಸಿನ ಮೇಲೆ ಇಳಿಯುತ್ತೇನೆ ಅಥವಾ ನಿನ್ನ ಕ್ಯಾನ್ವಾಸಿನಲ್ಲಿ ಗುಟ್ಟಾಗಿ ಒಂದು ಗೆರೆಯಾಗಿ ನಿನ್ನನ್ನೇ ನೋಡುತ್ತಾ ಮೌನವಾಗಿ ಇದ್ದು ಬಿಡುತ್ತೇನೆ. ಮತ್ತೊಮ್ಮೆ ನಿನ್ನ ಭೇಟಿಯಾಗುವೆ. ಎಲ್ಲಿ, ಹೇಗೆ ? ಅದು ತಿಳಿಯದು. ಸೂರ್ಯನ ಕಿರಣಗಳಾಗಿ ಬೆಚ್ಚಗೆ ನಿನ್ನ ಬಣ್ಣಗಳೊಳಗೆ ಸೇರಿಕೊಳ್ಳುತ್ತೇನೆ. ಅಥವಾ ಬಣ್ಣಗಳ ತೋಳುಗಳ ಮೇಲೆ ಕೂತು ನಿನ್ನ ಕ್ಯಾನ್ವಾಸಿನ ಮೇಲೆ ಹರಡಿಕೊಳ್ಳುವೆ. ಎಲ್ಲಿ ? ಹೇಗೆ? ಎಂದು ತಿಳಿಯದು ಆದರೂ ಖಂಡಿತ ನಿನ್ನ ಮತ್ತೆ ಭೇಟಿಯಾಗುವೆ. ನೀರಿನ ಝರಿಗಳಿಂದ ಹನಿಯೊಂದು ಚಿಮ್ಮಿದಂತೆ.. ನಿನ್ನ ದೇಹವನ್ನು ಆವರಿಸಿ, ಹೃದಯದೊಳಗೊಂದು ತಣ್ಣನೆಯ ಅನುಭವವನ್ನು ನೀಡಲು ಬರುವೆ. ನನಗಿನ್ನೇನೂ ತಿಳಿಯದು. ತಿಳಿದಿರುವುದಿಷ್ಟೆ. ಏನೇ ಆದರೂ ಈ ಜನ್ಮವು ನನ್ನ ಜತೆಗೇ ಬರುವುದು. ಈ ದೇಹದ ಜತೆಗೇ ಮುಗಿದುಹೋಗುವುದು. ಎಲ್ಲವೂ ಮುಗಿದೇ ಹೋಗುವುದು. ಆದರೆ ನೆನಪಿನ ದಾರಗಳು ಮತ್ತು ಸೃಷ್ಟಿಯ ಅಮೂಲ್ಯ ಕಣಗಳು ಉಳಿಯುವವು. ಆ ಕಣಗಳನ್ನು ಹೆಕ್ಕಿಕೊಂಡು, ನೆನಪಿನ ದಾರದೊಳಗೆ ಪೋಣಿಸಿಕೊಂಡು ಮತ್ತೆ ನಿನ್ನನ್ನು ಭೇಟಿಯಾಗುವೆ. ಎಲ್ಲಿ ಹೇಗೆಂದು ನಾನರಿಯೆ. ಅಮೃತಾ ಮತ್ತು ಇಮ್ರೋಜ್ ಹತ್ತಿರ ಹತ್ತಿರ ಅರ್ಧ ಶತಕಗಳ ಕಾಲ ಒಟ್ಟಿಗೆ ಒಂದೇ ಮನೆಯಲ್ಲಿದ್ದರೂ ಬೇರೆ ಬೇರೆ ಕೊಠಡಿಗಳಲ್ಲಿ ವಾಸಿಸುತಿದ್ದರು. ಆಗಿನ ಕಾಲದಲ್ಲಿ ಮದುವೆಯಾಗದೆ ಗಂಡು ಹೆಣ್ಣು ಒಟ್ಟಿಗೆ ವಾಸಿಸುವುದು ಬಹಳ ದೊಡ್ಡ ತಪ್ಪು ಎಂದಿದ್ದರೂ ಅವರಿಬ್ಬರ ಸಂಬಂಧ ಯಾವ ರೀತಿಯದೆಂದು ಜನರ ಊಹೆಗೂ ಮೀರಿದ್ದಾಗಿತ್ತು. ಇಮ್ರೋಜ್ ಒಬ್ಬ ಉತ್ಕಟ ಪ್ರೇಮದ ಪ್ರತೀಕ. *************

ಲಹರಿ Read Post »

ಇತರೆ

ಪ್ರಸ್ತುತ

ಹೋಮ್ ಕೇರ್ ಹಗರಣ. ಮಾಲತಿಶ್ರೀನಿವಾಸನ್. ಇತ್ತೀಚೆಗೆ ನಗರಗಳಲ್ಲಿ ವೃದ್ಧರ,ರೋಗಿಗಳ,ಮತ್ತು ಮಕ್ಕಳ ಆರೈಕೆಗೆ ಮನೆಯಲ್ಲಿದ್ದು ಮನೆಯವರೊಡನೆ ಸಹಕರಿಸಿಸಹಾಯಮಾಡಲು ಜನರನ್ನುಒದಗಿಸುವ ಸಂಘಗಳುಹೆಚ್ಚಳವಾಗಿವೆ ,ಹಿಂದೆ, ಒಂದೋ ಎರಡೋ nightingale,Red cross,ನಂತಹ ಸಂಸ್ಥೆಗಳು ಈ ಜವಾಬ್ದಾರಿ ಹೊರುತ್ತಿದ್ದವು,ಈಗ ಪ್ರತಿ ಸರ್ಕಾರಿ/ಹಾಗೂಖಾಸಗಿ ಅಸ್ಪತ್ರೆಯಲ್ಲೂಇಂತಹ ಸಂಸ್ಥೆಗಳ ಸಂಚಾಲಕರು ಈ ಕೆಲಸ ಒಪ್ಪಿಕೊಂಡು, ನುರಿತ ಜನರನ್ನು ಒದಗಿಸುತ್ತಿರುವುದು ಶ್ಲಾಘನೀಯವಾದ ಸಮಾಜಸೇವ.     ಅವರ ಶುಲ್ಕ ,ಮುಂಗಡ ಹಣ ದುಬಾರಿ ಅನಿಸಿದರೂತುರ್ತುಪರಿಸ್ಥಿತಿಯಲ್ಲಿ ಅವಶ್ಯಕತೆ ಇದ್ದಾಗ ಸಿಗುವ ನೆರವುಅಪ್ಯಾಯಮಾನ ಹಾಗೂ ಉಪಯುಕ್ತ.      ಇಂತಹ ಸಂಸ್ಥೆಗಳು ಕಳುಹಿಸಿದ ಅಪರಿಚಿತ ಸಹಾಯಕರನ್ನುತಿಂಗಳುಗಳು ಒಮೊಮ್ಮೆವರುಷಗಳುಜೊತೆಯಲ್ಲಿಟ್ಟುಕೊಂಡು,ವೃದ್ಧರ ,ರೋಗಿಗಳ ಆರೈಕೆಯ ಜೊತೆಗೆ ಇವರ ಅವಶ್ಯಕತೆಗಳನ್ನು ಪೂರೈಸುವುದು ಸುಲುಬದ ಕೆಲಸವಲ್ಲ. ಅನುಭವಕ್ಕೆ ಬಂದಾಗಮಾತ್ರಅದರ ಒಳಿತು ಕೆಡುಕು ಮುಜುಗರಗಳ ಅರಿವಾಗುವುದು.    ಹತ್ತಿರದವರು,ತಾಯಿ ತಂದೆ ,ಅತ್ತೆ ಮಾವ,ಖಾಯಿಲೆ ಮಲಗಿದಾಗ,ಅವರ ಆರೈಕೆ ಮತ್ತು ದೈನಂದಿನ, ಒಳಗಿನ ಮತ್ತು ಹೊರಗಿನ ಕೆಲಸಗಳ ಒತ್ತಡ, ಸಹಾಯಕ್ಕೆ ಜನ ಬೇಕೆನಿಸುವುದು ಸಹಜ.     ಎಪ್ಪತ್ತುದಾಟಿರುವ ನಮ್ಮಿಬ್ಬರಿಗೂ ಇಂತಹ ಸಂಧರ್ಭಎದುರಾಗಿದ್ದು ಸ್ವಂತ ತಂಗಿಯನ್ನು (65ವಯಸ್ಸು,) ಬಿದ್ದು ತೊಡೆಮೂಲೆ ಮುರಿದುಕೊಂಡು ಶಸ್ತ್ರ ಚಿಕಿತ್ಸೆಯನಂತರಅವಳನ್ನು ನನ್ನ ಮನೆಗೆ ಆರೈಕೆಗಾಗಿ ಕರೆದುಕೊಂಡು ಬಂದಾಗ.  ಸಹಾಯಕ್ಕೆ ಬಂದವರ ರೀತಿ ರಿವಾಜು ನೆನೆಸಿಕೊಂಡರೆ ಈಗ ನಗುಬರುತ್ತೆ.    ಅಸ್ಪತ್ರೆಯವರೆ ಸಂಪರ್ಕಿಸಲು ಹೇಳಿದ “ಹೋಮ್ ಕೇರ್”ಸಂಸ್ಥೆಯೊಡನೆ ಮಾತಾಡಿದಾಗ,ಸಹಾಯಕ್ಕೆ ಬಂದದ್ದು ಮಧ್ಯವಯಸ್ಸಿನ ಹೆಂಗಸು. ನಾನುಅನುಭವಸ್ಥೆ ರೋಗಿಗಳ ಎಲ್ಲ ರೀತಿಯ ಆರೈಕೆ ನನಗೆ ಗೊತ್ತು ಅಂತ ಹೇಳಿಕೊಂಡು ಬಂದ ಹೆಂಗಸು.    ತಂಗಿಗೆ ಸ್ನಾನ,ಓಡಾಟಕ್ಕೆ ಸಹಾಯ ಮಾಡುವುದರ ಜೊತೆಗೆ ಚರವಾಣಿಯಲ್ಲಿ ಸೀರಿಯಲ್ ನೋಡುವ ಹವ್ಯಾಸ,ಮೊದಲು ಸರಿ ಎನಿಸಿದರೂ,ವೈಫೈ ಪಾಸ್ವರ್ಡ್ಕೊಡಿ ಅಂತ ದಿನಕ್ಕೆ ಹತ್ತು ಸರಿ ಕೇಳುತ್ತಿದದ್ದು ಮುಜುಗರವೆನ್ನಿ ಸುತ್ತಿತ್ತು.ಇಳೆವಯಸ್ಸಿನಲ್ಲಿ ಮಕ್ಕಳು ದೂರದ ಪರದೇಶದಲ್ಲಿ, ಇಬ್ಬರೇಮನೆಲಿ ಬಿಟ್ಟಿಬಿಡೆಯಾಗಿ ಇದ್ದು ರೂಢಿ ಯಾದನಮಗೆ 24 ಘಂಟೆ ಅಪರಿಚಿತರೊಡನೆ ಇರುವಂತಹ ಸ್ಸನ್ನಿವೇಶ,ಜೊತೆಯಲ್ಲಿ ಊಟ ಉಪಚಾರಬೇಕು ಬೇಡಿಕೆಗಳ ಜವಾಬ್ದಾರಿ.   ನಮ್ಮ ಸಹಾಯಕ್ಕೆ ತಮ್ಮ ಮನೆ ಮನೆಯವರನ್ನು ಬಿಟ್ಟುಬಂದಿರುವುದರ ಅರಿವು ಸಹಜವಾಗೆ ನಮ್ಮಲ್ಲಿ ಅವರ ಬಗ್ಗೆ ದಯೆ ಮೂಡಿಸಿದರು,ನಮ್ಮಮನೆಯ ಊಟ ತಿಂಡಿ ವಿಚಾರಗಳಿಗೆ ಹೊಂದಿಕೊಳ್ಳದೆ ತಮ್ಮದೇ ಬೇಕು ,ಬೇಡದ ಅಭ್ಯಾಸಗಳನ್ನು ಹೇರಿದಾಗ ಸಹಜವಾಗಿ ಮುಜುಗರ ಅನಿಸಿತ್ತು.   “ಅಮ್ಮನಾವು ಕಾಫಿಕುಡಿಯೋಲ್ಲ,ಟೀ ನೆ ಅಭ್ಯಾಸ ,ಜೊತೆಗೆ Marie ಬಿಸ್ಕುಟ್ ಬೇಕು,ಬರಿ ಟೀಕುಡಿದ್ರೆ gaastrikku”.ಅಂತ ಹೇಳಿದಾಗ,“ಮಾರೀ ಬಿಸ್ಕುತ್ತು ನಾಯಿ ಇದ್ದಾಗ ತರ್ತಾ ಇದ್ದಿವಿ,ಈಗ ಇದ್ಯೆನೆ?” ಪತಿದೇವರ ನಗಾಡ್ತಾ ಒಗ್ಗರಣೆ.ನೀವ್ ಸುಮ್ನಿರಿ ಅಂತ ಕೂಗಿ,ಕೆಲಸದ ಹುಡುಗನ್ನ ಟೀಪಟ್ನಾ ಬಿಸ್ಕುತ್ ತರೋದಕ್ಕೆ ಓಡಿಸಿದೆ.  ಮುಂದಿನ ಬೇಡಿಕೆ ಕೇಳಿ ಸುಸ್ತಾದೆ ನಾನು,”ಆಂಟಿನಂಗೆ ತಂಗಳಪೆಟ್ಟಿಗೆ ಇಂದ ತೆಗದ ತಣ್ಣಗಿನ ಪದಾರ್ಥ್ಮೈಗಾಗೋಲ್ಲ,ಮೊಸರು ಹೊರಗೆಇಟ್ಟು ಹಾಕಿ ಅಂದುತಂಗಿ ಕೋಣೆ ಸೇರಿದ್ಲು.ಅಯ್ಯೋ ದೇವರೇ ಬೇಸಿಗೆ ಸೆಕೆಲಿ ಮೊಸರು ಫ್ರಿಡ್ಜ್ ನಿಂದ ಹೊರಗೆ,  ದುಬಾರಿ ಬೆಲೆಗಳ ಕಾಲದಲ್ಲಿ ಉಳಿದದ್ದನ್ನುಮಾರನೆದಿನ ಬಿಸಿಮಾಡಿನಾವೆ ತಿನ್ನೋವಾಗ,4-5ಜನ ತಿನ್ನೋಮನೆಯಲ್ಲಿ ಸರಿಯಾಗೇ ಅಳತೆ ಮಾಡಿ ಮಾಡೋದ್ ಹೇಗೆ?,ಮಂಡೆ ಬಿಸಿಯಾಯ್ತು.ಈ ಮನೇಲಿಕದ್ದು ಮುಚ್ಚಿ ಮಾಡೋ ಛಾನ್ಸೆ ಇಲ್ಲ,open kitchenಎಲ್ಲ ಒಪೆನ್ನೇ,ತಂಗಿಗಾಗಿ ಹಾಲು,ಜ್ಯುಸು ಅಂತ ಅವಳುಒಳಗು ಹೊರಗೂ ಓಡಾಡ್ತಾ ಒಂದ್ ಕಣ್ ನನ್ಮೇಲೆ.   ಇದೊಂದು ರೀತಿ  “camel in the camp”ತರ ಆಯ್ತುತಂಗಿ ನಿದ್ದೆ ಮಾಡ್ತಾಯಿದ್ರೆ ಜೋರಾಗಿ ವೂಟ್ನಲ್ಲಿ ಸಿರಿಯಲ್ನೋಡೋದು.,ಗಳಿಗೆ ಒಂದುಸಲ ಇಂಟರ್ನೆಟ್ ಇಲ್ವ ಅಕ್ಕ ಅಂತ ಕೇಳೋದು, ತಾಳ್ಮೆ ಪರೀಕ್ಷೆ ನಡೆದಿತ್ತು.ಇನ್ನು ರೋಗಿಗೆ ಕೊಡೋ ಔಷಧಿಗಳನ್ನು ಪರಕಿಸಿ ಇದು ಸರಿ ಅದು ಸರಿಇಲ್ಲ ಅಂತ ,ವೈದ್ಯರಿಗಿಂತ ತನಗೆ ಗೊತ್ತುಅನ್ನೋಜೋರು.  ಒಂದು ಸಂಜೆ ನೋವು ಜಾಸ್ತಿ ಅಂತ ತಂಗಿ ಹೇಳಿದಾಗ ಅವಳ ವೈದ್ಯರು ಹೇಳಿದ್ದ ಮಾತ್ರೆ ಕೊಡಲು ಹೋದಾಗ“ಅಯ್ಯೋ ಇದೇನ್ ಕೊಡ್ತಿದ್ದೀರ ನೋವಿಗೆ ಎನೂ ಕೆಲಸ ಮಾಡಲ್ಲ,ಬೇರೆ ಹೇಳ್ತೀನಿ ಕೊಡಿ,ಇದರಲ್ಲಿ 10 ವರುಷದ ಅನುಭವ ನಂದು”ಅಂತ ವರಸೆ ತೆಗೆದ್ಲು ,ಮಾನಸಿಕವಾಗಿ ನೋವಿನಿಂದ ಕುಗ್ಗಿದ ತಂಗಿ ಅವಳ ಹೇಳಿದ ಮಾತ್ರೆನೆ ಬೇಕು ಅಂತ ರಾತ್ರಿ ಶುರು ,ನಗರದ ಹೊರಾವಲಯದಲ್ಲಿಮನೆ, ಔಷದಿ ಅಂಗಡಿ ಹತ್ತಿರಿಲ್ಲ ,ಪತಿರಾಯರ ಸಿಟ್ಟುನೆತ್ತಿಗೇರಿತ್ತು.  ಇಂತಹ ಎಡಬಿಡಂಗಿ ಸಹಾಯಕರನ್ನು ಕಳುಹಿಸಿದ ಸಂಸ್ಥೆಗೆ ದೂರಿತ್ತರೆ, ಮುಂಗಡ ಹಣದ ಜೊತೆಗೆ 15ದಿನದ ಒಪ್ಪಂದದ ಪತ್ರ ನೆನಪಿಸಿ,ಬೇರೆಯವರನ್ನು ಕಳುಹಿಸಲು ಒಪ್ಪಿದಾಗ ಸರಿ ಎನಿಸಿತು.   15ದಿನದ ನಂತರ ಇವಳು ಹೊರಟುನಿಂತಾಗ ಪಾಪ ಎನಿಸದಿರಲಿಲ್ಲ, ಕೆಲಸ ಸರಿಯಿದ್ದರು ದಾಷ್ಟೀಕತೆ,ತಲೆಹರಟೆ ತಡೆಯುವುದು ಕಷ್ಟವಾಗಿತ್ತು,ಕಾಂಚಾನಮ್ ಕರ್ಮ ವಿಮೋಚನಮ್ ,ಅಂತ ಮನ ಹಗುರಮಾಡಿಕೊಳ್ಳಲುಕೈಗಿಷ್ಟು ಹಣ ಕೊಟ್ಟು ಕಳುಹಿಸಿ,,ಮಾರನೇ ದಿನ ಬರುವವಳ ಬಗ್ಗೆ ಯೋಚನೆ ಆರಂಭ.    ಮಾರನೇ ದಿನ ಬಂದ ಹುಡುಗಿ ಧಾರವಾಡದ ಪುಟ್ಟಗೌರಿ.”ಇವಲಿಂದ್ದ ಏನು ತೊಂದರೆ ಆಗೋಲ್ಲ ಅಮ್ಮ ಅಂತ ವ್ಯವಸ್ಥಾಪಕ ಭರವಸೆ ಕೊಟ್ಟು ಹೊರಟ.ಎರಡನೇ ಅಂಕ ಪ್ರಾರಂಭವಾಯಿತು,ರಾತ್ರಿ ಮಲಗೊಕ್ಕೆಅಂತ ಕೊಟ್ಟ ಹಾಸಿಗೆ ಮೇಲ್ ಕೂತು”ಅಮ್ಮವರೆ ಇದರಮೇಲ್ ಹಾಸ್ಕೊಳ್ಳೋಕ್ಕೆ ಒಂದ್ ದುಪಟ್ಟಿ ಕೋಡ್ರಲ್ಲ,  “ಬೀರುಯಿಂದ ಹಳೆ ಬೆಡ್ಶೀಟ್ ಹೊರ ತೆಗೆದು ಕೊಟ್ಟಿದ್ದಾಯ್ತು.  ಏಪ್ರಿಲ್  ಬಿಸಿಲು ಶೆಕೆಕಾಲ,ಕಿಟಕಿತೆಗದ್ರೆ ಸೊಳ್ಳೆ,ಫ್ಯಾನ್ ಹಾಕೋದು ಅನಿವಾರ್ಯ, ಹೀಗಿರಲು,ಎಲ್ಲರೂಮಲಗಿದ ನಂತರ ಮಧ್ಯರಾತ್ರಿ ತಂಗಿ ಕೂಗು,”ಫ್ಯಾನ್ ಹಾಕು ಶೆಕೆ, ಎಸ್ಟುಸಲಾ ಹೇಳೊದು,” ಎದ್ದು ನೋಡಿದರೆ ಪುಟ್ಟಗೌರಿ ಪಂಕ ಬಂದ್ ಮಾಡಿ ಕೂತಿದ್ಲು,ಯಾಕ್ ಪಂಕ ಬಂದ್ ಮಾಡ್ದೆ ಗೌರಮ್ಮ,ಅಂದ್ರೆ,”ಪಂಕ ಚಾಲು ಮಾಡಿದ್ರೆ ನಂಗ್ ತಲೀ ನೋಯ್ತದ್ರಿ ನಿದ್ದಿ ಬರಹಂಗಿಲ್ಲ,ಪಂಕದ್ ಗಾಳಿ ಆಗೋಹಂಗಿಲ್ಲ, ನಿದ್ದಿ ಕೆಟ್ಟರೆ ನ ಮುಂಜಾನ್ ಕೆಲಸ ಮಾಡೋಹಂಗೇ ಇಲ್ ನೋಡ್ರಿ”ಅಂದ್ಲು ಪುಟ್ಟಗೌರಿಖಡಕ್ ಭಾಷೆಲಿ. ಅರೆ ಬೇಸಿಗೆ ಕಾಲ ಶೆಕೆ ಪಂಕ ಇಲ್ಲದಿದ್ರೆ ಹೇಗೆ ಗೌರಿ ಅಂದ್ರೆ”ಹಂಗಾರ್ ನಾ ಹೊರಗ್ ಮಲಗ್ ಲೇನು,ನೀವೇ ಇಲ್ ಮಲಾಗ್ರಿ ಅಕಿ ಕೂಡ”ಅಂದ್ಲು ಗೌರಮ್ಮ ,”ಅರೆ ನಿನ್ನ ಕರೆಸಿದ್ ಯಾಕೆ”ಅಂತ ಸ್ವಲ್ಪ ಜೋರ್ ಮಾಡಿದಾಗ,ಸರಿ ಪಂಕ ಹಾಕ್ರಿ ನಾ ಮುಸುಖ್ ಹಾಕ್ಕೊಂಡ ಮಲಗ್ತೇನೆ ಅಂತ ಮುಸುಕೆಳದಳು.ಮತ್ತೆ ಮಧ್ಯ ರಾತ್ರಿ ತಂಗಿ ಕೂಗು,ನೀಡಗನ್ನಲಿ ಎದ್ದು ಬಂದು ನೋಡಿದ್ರೆ,ಫ್ಯಾನ್ ಬಂದ್,ಕೂಗಿದ್ದು ಕೇಳಿಸಲಿಲ್ಲಾರಿ,ಚಳಿ ಆಯ್ತು,ತಿಳೀದೆ ಪಂಕ ಬಂಧ್ಮಾಡಿದೆ ನೋಡ್ರಿ ಅಂತ ಮತ್ತೆ ಸ್ವಿಚ್ ತಿರುಗಿಸಿದಳು.ಮಲಗೊಕ್ಕೆ ಕೊನೆಗ್ ಬಂದಾಗ”ಖಾತ್ರಿ ಹೋಯ್ತು ಚಾಕು ಬಂತು ಡುಂ ಡುಂ ಅಂತ ಪತಿರಾಯರು ಕಿಚಾಯಿಸದಾಗ,ಮೌನವಾಗಿ ಮುಸುಕೆಳೆದು ಬೆಳಗಾಗೋದನ್ನೇ ಕಾಯೋ ಹಾಗಾಯ್ತು.   ಅಂತೂ ಒಂದು ತಿಂಗಳು ಇಂತಹ ಇಟ್ಟುಕೊಂಡು ತಂಗಿವಾಳ್ಕರ್ ಇಟ್ಟುಕೊಂಡು ನಡೆಯೋಷ್ಟು ಆದಾಗ ಪುಟ್ಟುಗೌರಿಗೂ ವಿದಾಯ ಹೇಳೋ ಸಮಯಬಂತು.      ಹೊರತು ನಿಂತ ಪುಟ್ಟಗೌರಿ ಆಡಿದ ಮಾತು ಕೇಳಿಮನಸ್ಸು ಬೆಚ್ಚಗಾಯ್ತು.”ಅಕ್ಕಾವ್ರೆ ನಿಮ್ಮ ಮನಿಸಾರು ತಿಂಡಿ ಹೊಟ್ಟಿಗ್ ಚಂದ್ ಆತು,ಕೈತುಂಬಾ ತಾಟಲ್ಲಿ ,ತಟ್ಟಿ ತುಂಬಾ ಬಡಿಸ್ತಿರಿ ,ಬೇರೆ ಕಡಿ ಮಂದಿ ಹಾಂಗ್ ಇರೋಹಂಗಿಲ್ರಿ, ಲೆಕ್ಕಮಾಡಿ ಉಣಲಿಕ್ಕೆ ಕೊಡತ್ತರ್ರಿ,ನೀವ್ ಉಡೋದು ಒಂದೆರಡು ಕಾಟನ್ ಸೀರೆ ಕೋಡ್ರಲ್ಲಒಂದ್ ನಾಉಟ್ಟು ಇನ್ನೊಂದ್ ನನ್ ಅವ್ವನ್ಗೆ ಕೊಡ್ತೀನಿ,ನೋಡುತ್ಲು ಕೇಳ್ತಾಳ ಆಕಿ ಎನ್ ತಂದಿ ಅಂತ” ಅಂದ್ಲು   ಒಗದು ಇಟ್ಟಿದ್ದ ಎರಡು ಕಾಟನ್ ಸೀರೆ ಜೊತೆಗೆಸ್ವಲ್ಪ ಹಣ ಕೈಲಿಟ್ಟಾಗ,ಖುಷಿಯಾಗ್ ಕಾಲಹಿಡ್ಕೊಂಡ್ “ಆಶೀರ್ವಾದ ಮಾಡ್ರಿ ಅಕ್ಕಾವ್ರೆ ಒಳ್ಳಿ ದಾಗ್ಲಿ ಅಂತ”ನಮಸ್ಕಾರ ಮಾಡಿದಾಗ,ಈ ಸಂಸ್ಕಾರ ,ಮುಗ್ದತೆಈ ಪಟ್ಟಣದಲ್ಲಿ ಬೆಳೆದ ಹೆಣ್ಣು ಮಕ್ಕಳಲ್ಲಿ ಯಾಕೆಮರೆಯಾಗ್ತಿದೆ ಅನಿಸಿ ಮನಸ್ಸಿಗೆ ಕಸಿವಿಸಿಯಾಯಿತು.    ತಮ್ಮ ಸಂಸಾರ ,ಮನೆಯವರನ್ನು ಬಿಟ್ಟು ಸಂಪಾದನೆಗಾಗಿ ಬೇರೊಬ್ಬರ ಮನೆಯಲ್ಲಿದ್ದುವೃದ್ಧರ ಮಕ್ಕಳ ರೋಗಿಗಳ ಆರೈಕೆ ಮಾಡುವಈ ಸಹಾಯಕರ ಸೇವೆ ಕರ್ತವ್ಯ ನಿಷ್ಠೆಯ ಎರಡು ಮುಖಗಳು ಕಾಣುತ್ತೇವೆ ಸಮಾಜದಲ್ಲಿ.   ಮಗ ಸೊಸೆ ಕೆಲಸಕ್ಕೆ ಹೊರಡುತ್ತಲೇ ಮೇಲೆಳಲಾರದವಯೋವೃದ್ಧೆಯ ಸಹಾಯಕರು,ಹಿರಿಯರ ಮೇಲೆ ಒಮ್ಮೊಮ್ಮೆ ಮಕ್ಕಳ ಮೇಲೆ ನಡೆಸುವ ದೌರ್ಜನ್ಯ ಅಸಹನೀಯ.ಊಟ ತಿಂಡಿ ಎಲ್ಲ ವ್ಯವಸ್ಥೆ ಮಾಡಿದ್ದರುಹೊತ್ತುಹೊತ್ತಿಗೆ ಕೊಡುವತಾಳ್ಮೆತೋರಿಸದೆ ,ಚರವಾಣಿ ಸಂಭಾಷಣೆ,ದೂರದರ್ಶನದ ಸೀರಿಯಲ್ ಆಕರ್ಷಣೆ,ಇವರನ್ನುಸೆಳೆಯುತ್ತವೆ.ಇಷ್ಟ ಬಂದಾಗ ಊಟ ತಿಂಡಿಕೊಡುವ ದೋರಣೆ,ಕೆಟ್ಟ ಭಾಷೆಯ ಪ್ರಯೋಗ.ಎಲ್ಲೆಡೆ ಹೀಗೆ ಅಂತ ಹೇಳಲಾಗುವುದಿಲ್ಲ,ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರೀತಿ ಕಾಳಜಿಯಿಂದನೋಡಿಕೊಳ್ಳುವವರು ಇದ್ದಾರೆ,ಅವರ ಸೇವಾಭಾವ ದುಡ್ಡಿನಲ್ಲಿ ಅಳೆಯಲಾಗುವುದಿಲ್ಲ.   ಹಿಂದಿನ ಅವಿಭಕ್ತ ಕುಟುಂಬಗಳಲ್ಲಿ ಈ ರೀತಿಯ ಸಮಸ್ಯೆಗಳಿಗೆ ಅಷ್ಟು ಅವಕಾಶವಿರುತ್ತಿರಲಿಲ್ಲ,ಮನೆತುಂಬಾ ಜನ, ಬಾಣಂತಿಯರ ,ರೋಗಿಗಳ ಆರೈಕೆ,ವೃದ್ಧರ ಸೇವೆ,ಮಕ್ಕಳಲಾಲನೆ-ಪಾಲನೆ,ಸಾಮೂಹಿಕ ಕ್ರಿಯೆಗಳಾಗಿಭಾರವೆನಿಸುತ್ತಿರಲಿಲ್ಲ.ಇಂದುಚಿಕ್ಕ ಒಮ್ಮೊಮ್ಮೆ ಚೊಕ್ಕವಲ್ಲದ ಸಂಸಾರಗಳ ವ್ಯವಸ್ಥೆ,ಸ್ವಾರ್ಥ,ಸಿಟ್ಟು,ಅಸಹನೆ,ಅಹಮಿಕೆಯಂತಹನಕಾರಾತ್ಮಕ ಭಾವಗಳ ನರ್ತನ,ಪರಿಣಾಮ ಒತ್ತಡಹಾಗೂ ಖಿನ್ನತೆ ಸಮಸ್ಯೆಗಳು.   ನಾ ಕಂಡ ರೀತಿಯ ರ್ಹೊಂಕೇರ್ ವ್ಯವಸ್ಥೆಯ ಬಗ್ಗೆಸಣ್ಣ ನೋಟ.ಈ ವ್ಯವಸ್ಥೆ ಹಲವಾರು ಕುಟುಂಬಗಳಿಗೆಜೀವನಾಧಾರ.  ಇವರಸೇವೆ ಅವಶ್ಯಕತೆ ಬಿದ್ದಾಗ ಅನಿವಾರ್ಯ ಸಂಸಾರಗಳಿಗೆ/ಸಮಾಜಕ್ಕೆ. ಈ ವ್ಯವಸ್ಥೆ ಯ ರೂವಾರಿಗಳು ತಮ್ಮ ಕಾರ್ಯ ಮತ್ತಷ್ಟು ದಕ್ಷತೆಯಿಂದ ನಡೆಸಿದರೆ ಜನಸೇವೆಗೆ ಒಳಿತು. ಕ

ಪ್ರಸ್ತುತ Read Post »

ಇತರೆ

ಹರಟೆ

ಇಲಿ ಪುರಾಣ ಶೀಲಾ ಭಂಡಾರ್ಕರ್ “ಇಲಿಗಳ ಸಂಸಾರದಲ್ಲೂ ಅಜ್ಜಿಯರು ಇರ್ತಾರಾ? ರಾತ್ರಿ ಮಲಗುವಾಗ ಒಳ್ಳೊಳ್ಳೆ ನೀತಿ ಕತೆಗಳನ್ನು ಹೇಳಿ ಮಲಗಿಸ್ತಾರಾ? ಹೇಗೆ ತಪ್ಪಿಸಿಕೊಳ್ಳುವುದು ಅನ್ನುವ ಟಿಪ್ಸ್ ಹೇಳಿ ಕೊಡ್ತಾರಾ?” ಗೊಣಗ್ತಾ ಇದ್ದೆ ನಾನು. ಮಕ್ಕಳಿಬ್ಬರೂ ಮುಖ ಮುಖ ನೋಡಿಕೊಂಡು “ಅಮ್ಮ ಶಶಿಕಪೂರ್” ಅಂತ ಮುಸಿ ಮುಸಿ ನಗ್ತಾ ಇದ್ರು. ನಮ್ಮನೇಲಿದ್ದ ಗೊಣಗುವ ಶೇಷಿಯ ಕತೆ ಹೇಳಿದ್ನಲ್ಲ. ಶೇಷಿಗೆ ದಿನ್ನು, ಶಶಿಕಪೂರ್ ಅಂತ ಹೆಸರಿಟ್ಟಿದ್ದನ್ನೂ ಹೇಳಿದ್ದೇನೆ. ನಿಮಗೆ ಮರೆತಿರಬಹುದು. ನನಗೆ ಕೋಪ ಬಂತು. “ನಿಮಗೇನು ಗೊತ್ತು? ನಗ್ತಿದಿರಲ್ಲ ನೀವು!” ಅಂತ ಬೈದೆ. ದೊಡ್ಡವಳು ಕೂಡಲೇ ಕೂತಲ್ಲಿಂದ ಎದ್ದು ಅಡುಗೆ ಮನೆಗೆ ಬಂದು ನನ್ನ ಭುಜ ಹಿಡಿದು ಪ್ರೀತಿಯಿಂದ “ಏನಾಯ್ತಮ್ಮ?” ಅಂದಾಗ.. ಚಿಕ್ಕವಳೂ ಬಂದು ನಿಂತಳು. “ಏನಿಲ್ವೆ… ಇಷ್ಟು ವರ್ಷದಲ್ಲಿ ಮೊದಲ ಸಲ ನಮ್ಮನೇಲಿ ಇಲಿ ಸೇರಿಕೊಂಡಿದೆ. ಒಂದೆರಡು ಸಲ ನೋಡಿದೆ” ಅನ್ನುವುದರೊಳಗೆ, … ಚಿಕ್ಕವಳು “ಅಬಾ….” ಅಂದವಳೇ ಒಂದೇ ಉಸಿರಿಗೆ ಓಡಿ ಡೈನಿಂಗ್ ಟೇಬಲ್ ಚೇರ್ ಹತ್ತಿ ನಿಂತು ಬಿಟ್ಟಳು. ದೊಡ್ಡವಳು ಸ್ವಲ್ಪ ಧೈರ್ಯದಿಂದ “ಎಲ್ಲಿ!?” ಅಂತ ಕೇಳಿದಳು. “ಇಲ್ಲೇ ಈಗ ನೋಡಿದೆ. ಆದರೆ ಪಕ್ಕದ ಮನೆಯವರ ಹತ್ತಿರ ಇಲಿ ಹಿಡಿಯುವ ಬೋನು ತಂದು ಇಟ್ಟು ಮೂರು ದಿನ ಆಯ್ತು. ಬೋನ್ ಹತ್ರ ಮಾತ್ರ ಹೋಗ್ತಿಲ್ಲ. ಜಾಗ ಬದಲಿಸಿ ಬದಲಿಸಿ ಇಟ್ಟು ನೋಡಿದೆ.” ಅಂದೆ. ಅಡುಗೆ ಮನೆಯ ಒಳಗಿದ್ದವಳು ಮೆಲ್ಲ ಮೆಲ್ಲ ಹೊರಗೆ ಹೋಗುತ್ತಾ.. “ಇರು ಗೂಗಲ್ ಮಾಡ್ತೇನೆ. ಮೌಸ್ ಹೇಗೆ ಹಿಡಿಯುವುದು ಅಂತ” ಅನ್ನುತ್ತಾ ಮೊಬೈಲ್ ತಗೊಂಡು ಕೂತಳು. “ಅದಕ್ಕೆಲ್ಲ ಗೂಗಲ್ ಯಾಕೆ? ಬೋನಿನೊಳಗೆ ಬೀಳುತ್ತೆ. ಆದರೆ ನನಗೆ ಡೌಟ್ ಅದರಜ್ಜಿ ಎಲ್ಲೋ ಹೇಳಿಕೊಟ್ಟಿರಬೇಕು.” ಅನ್ನುತ್ತಾ ದೋಸೆ ತಟ್ಟೆಗೆ ಹಾಕಿ ಚಟ್ನಿ ಬೆಣ್ಣೆ ಡೈನಿಂಗ್ ಟೇಬಲ್ ಮೇಲಿದೆ ತಗೊಂಡು ತಿನ್ನು ಅಂತ ಚಿಕ್ಕವಳನ್ನು ಕರೆದರೆ. ಅಲ್ಲಿಂದಲೇ “ನೀನೇ ಹಾಕಿ ಕೊಡು ನಾನಿಲ್ಲಿ ನಿಂತೇ ತಿನ್ನುತ್ತೇನೆ.” ದೊಡ್ಡವಳು ಮೊಬೈಲಿಂದ ತಲೆ ಎತ್ತದೆ “ಇಷ್ಟು ಡುಮ್ಮಿ ಇದಿಯಾ. ನಿನ್ನ ಒಂದು ಬೆರಳಿನಷ್ಟಿರೋ ಇಲಿಗೆ ಹೆದರ್ತಿಯಲ್ಲ” ಅಂತ ಛೇಡಿಸಿದಾಗ, ಫಕ್ಕನೆ ಕುರ್ಚಿಯಿಂದ ನೆಗೆದು, ನಂಗೆ ಡುಮ್ಮಿ ಅಂತಿಯಾ ಅಂತ ಅವಳಿಗೆ ಹೊಡೆಯಲು ಹೋದಳು. “ಅಮ್ಮಾ…. ಇಲಿ” ಅಂತ ದೊಡ್ಡವಳು ಕಿರುಚಿದಾಗ ಡುಮ್ಮಿ ಒಂದೇ ನೆಗೆತಕ್ಕೆ ಕುರ್ಚಿಯ ಮೇಲೆ ಕಣ್ಣು ಮುಚ್ಚಿ ನಿಂತಾಯ್ತು. ಪಾಪ ಅಂತ ಅಲ್ಲಿಯೇ ತಟ್ಟೆ ಕೈಗೆ ಕೊಟ್ರೆ ತಿನ್ನುತ್ತಾ ” ಬೋನಿನೊಳಗೆ ಹೇಗೆ ಹೋಗುತ್ತೆ?”  ಅವಳು ಹಾಗೆಯೇ. “ಅಬ್ಬಾ!! ಶುರುವಾಯ್ತು ಇನ್ನು ಪ್ರಶ್ನೆಗಳ ಸರಮಾಲೆ. ಅಮ್ಮ ನೀನೇ ಹೇಳ್ತಾ ಹೋಗು. ಇವಳಿಗೆ ಪ್ರಶ್ನೆ ಕೇಳಲಿಕ್ಕೆ ಬಿಡಬೇಡ.”  ದೊಡ್ಡವಳು ಅಂದಾಗ. ಕುರ್ಚಿಯ ಮೇಲಿನವಳು ” ಇರು ನಿಂಗೆ. ಇಲಿ ಹೋಗ್ಲಿ. ಆಮೇಲೆ ಮಾಡ್ತಿನಿ”. “ದೇವರೇ… ಇಲಿ ಇಲ್ಲೇ ಇರಲಿ.” ದೊಡ್ಡವಳಿಗೆ ಆಟ. ಚಿಕ್ಕವಳಿಗೆ ಸಂಕಟ. ಹೊಟ್ಟೆ ತುಂಬಿತೇನೋ ಚಿಕ್ಕವಳಿಗೆ ಯೋಚನೆ ಶುರುವಾಯ್ತು. “ನಾನು.. ಶಾಲೆಗೆ, ಟ್ಯೂಷನ್ ಗೆ ಹೇಗೆ ಹೋಗ್ಲಿ” “ಮೊದಲು ಇಳಿದು ಕೈ ತೊಳೆಯಲು ಹೋಗು” ಅಂದೆ. “ಅಯ್ಮಮ್ಮಾ…… ಆಗಲ್ಲ. ನಂಗೆ ಭಯ” ನಾನು ಹೇಳಿದೆ, “ಪಕ್ಕದ ಮನೆಯವರ  ಇಲಿ ಬೋನು ತಂದು ಇಟ್ಟಿದ್ದೇನೆ. ಅವರಂದ್ರು, ಕಾಯಿ ಚೂರಾಗಲಿ, ವಡೆ ಬೋಂಡ ಅಂತಾದ್ದು ಏನಾದರೂ ಆ ತಂತಿಗೆ ಸಿಕ್ಕಿಸಿಡಿ ಅಂತ. ಈ ನಿಮ್ಮಪ್ಪ, ಒಂದು ಈರುಳ್ಳಿ ಹೆಚ್ಚಿ ನಾಲ್ಕು ಬೋಂಡ ಮಾಡು ಮೂರು ನನಗಿರಲಿ, ಒಂದು ಇಲಿಗೆ ಇಡು. ಪಾಪ ನಮ್ಮನೆಗೆ ಬಂದಿದೆ ಅಷ್ಟಾದರೂ ನೋಡಿಕೊಳ್ಳಬೇಕಲ್ವಾ. ಅಂತೆ. ಈರುಳ್ಳಿ ಬೋಂಡ ಇಟ್ಟು ಮೂರು ದಿನ ಆಯ್ತು, ಇನ್ನೂ ಬಿದ್ದಿಲ್ಲ” ಅಂದೆ. ” ಏನೂ… ಮೂರು ದಿನ ಆಯ್ತಾ? ಯೆಬ್ಬೇ. ದಿನಾ ಫ್ರೆಶ್ ಆಗಿ ಇಡಬೇಕಮ್ಮ. ಪಾಪ.” ಅಂದ ದೊಡ್ಡವಳ ತಲೆಯ ಮೇಲೊಂದು ಮೊಟಕಿ ಹೇಳಿದೆ, ” ಅಥವಾ ನಿಮ್ ತರ ಈಗಿನ ಜಮಾನಾದ ಇಲಿಗೂ ಪಿಜ಼ಾ, ಬರ್ಗರ್ ಬೇಕೇನೋ ಯಾರಿಗ್ಗೊತ್ತು.” ಇದೊಳ್ಳೆ ಮಾಡರ್ನ್ ಇಲಿ ಆಯ್ತಲ್ಲ. ಏನು ಮಾಡುವುದೀಗ? ಪಕ್ಕದ ಮನೆಯವರ ಬಳಿ ಹೇಳಿದಾಗ ಅವರಂದರು ಈವಾಗ ಏನೋ ಮ್ಯಾಟ್ ತರ ಬಂದಿದೆಯಂತೆ ಅದನ್ನು ಬಿಡಿಸಿಟ್ಟರೆ ಅದರಲ್ಲಿರೋ ಜೆಲ್ ಗೆ ಇಲಿ ಅಂಟಿ ಕೊಳ್ಳುತ್ತಂತೆ ಅಂತ. ಅದನ್ನು ತಂದಿಟ್ಟು ನೋಡೋಣ ಅಂದೆ. “ನಿನ್ನ ಮಾಡರ್ನ್ ಇಲಿ ಮರಿ ಅದನ್ನೂ ಗೂಗಲ್ ಮಾಡಿ ನೋಡಿರಬಹುದು, ಅದನ್ನು ದಾಟೋದಕ್ಕೆ ಉಪಾಯವನ್ನು ಕೂಡ ಕಂಡು ಹಿಡಿದಿರಬಹುದು” ಅಂದಳು ನಮ್ಮ ಗೂಗಲ್ ರಾಜಕುಮಾರಿ. ನಮ್ಮಜ್ಜಿ, ನಮ್ಮಮ್ಮ ಎಲ್ಲಾ ಹೇಳ್ತಿದ್ರು, ಗಣಪತಿಗೇನಾದರೂ ಹರಕೆ ಹೇಳಿದ್ದು ಮರೆತು ಹೋಗಿದ್ದರೆ ನೆನಪಿಸಲು ಇಲಿಯನ್ನು ಕಳಿಸ್ತಾನೆ ಅಂತ. ಮರೆತಿರಬಹುದಾದ ಎಲ್ಲ ಹರಕೆಗಳನ್ನು ತೀರಿಸುತಿದ್ದೇನೆ. ನೋಡೋಣ ಯಾವಾಗ ಹೋಗುತ್ತೋ. ಅದರ ಬಾಯಿಗೆ ಯಾವುದೂ ಸಿಗದ ಹಾಗೆ ಇಡುವ ಕೆಲಸವೇ ಇಡೀ ದಿನ. ಅಥವಾ ಹೊಸ ಬಜ್ಜಿ ಬೋಂಡದ ಆಸೆಗೆ ಕಾಯ್ತಾ ಇದೆಯೋ. ಇವಳು ಈ ಜನ್ಮದಲ್ಲಿ ಫ್ರೆಶ್ ಬೋಂಡ ಇಡಲ್ಲ ಅಂತ ಗೊತ್ತಾಗ್ಲಿ. ಮತ್ತೆ ಯಾವತ್ತೂ ನಮ್ಮನೆ ದಾರಿಲಿ ಬರಕೂಡದು. ಹಾಗಂದುಕೊಂಡಿದ್ದೇನೆ ***********************

ಹರಟೆ Read Post »

ಇತರೆ

ಬುದ್ಧ ಪೂರ್ಣಿಮಾ ವಿಶೇಷ

ಆಸೆಯೇ ದು:ಖಕ್ಕೆ ಮೂಲ ಚಂದ್ರು ಪಿ.ಹಾಸನ ಆಸೆಯೇ ದುಃಖಕ್ಕೆ ಮೂಲ ಎಂಬುದೇ ಜ್ಞಾನ಻ಯೋಗಿಯ ಪ್ರಸಿದ್ಧ ತತ್ವ ಏಕತೆಯು ನಿಸ್ವಾರ್ಥ ಗುಣಗಳನ್ನು ಎತ್ತಿ ಹಿಡಿಯುತ್ತದೆ. ಆಗ ಸ್ವಾರ್ಥತೆ ಕಡಿಮೆಯಾಗಿ ಮಾನವೀಯ ಮೌಲ್ಯಗಳು ಹೊರಹೊಮ್ಮುತ್ತದೆ. ಒಟ್ಟಾರೆಯಾಗಿ ಮಾನವ ತನ್ನ ಜೀವನದಲ್ಲಿ ಸ್ವಾರ್ಥತೆಯ ಬಿಟ್ಟು ನಿಸ್ವಾರ್ಥ ಸೇವೆ ಮಾಡುವುದಲ್ಲಾ ಮಾನವೀಯ ಮೌಲ್ಯಗಳಾಗುತ್ತವೆ. ಅದಕ್ಕಾಗಿ ಮಾನವ ಬೆಳೆಸಿಕೊಳ್ಳಬೇಕಾದ ಒಳ್ಳೆಯ ಗುಣಗಳೇ  ಮೌಲ್ಯಗಳು. ನಮ್ಮ ಸಮಾಜದಲ್ಲಿ ಅಂಧಕಾರ, ದಾರಿದ್ರ್ಯ, ಅನಾಚಾರಗಳು ತಾಂಡವ ಮಾಡುತ್ತಿದ್ದಾಗ ಈ ಮಾನವೀಯ ಮೌಲ್ಯಗಳು ತಲೆಎತ್ತಿದರೆ ಈ ಸಮಸ್ಯೆಗಳಿಗೆ ಭಹುಶಃ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳ ತನ್ನಲ್ಲಿ ಅಡಗಿಸಿಕೊಂಡು, ಅಹಿಂಸೆಯ ಮಾರ್ಗ ಹಿಡಿದು,ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ, ಬೌದ್ಧ ಧರ್ಮದ ಸಂಸ್ಥಾಪಕ ಶ್ರೀ ಭಗವಾನ್ ಗೌತಮ ಬುದ್ಧರು.  ಜನನ (ಕ್ರಿ ಪೂ ೫೫೭) ಗೌತಮ ಬುದ್ಧರ ಹುಟ್ಟಿದ ಸ್ಥಳ ಲುಂಬಿನಿ ಗ್ರಾಮ. ತಂದೆ ಶುದ್ಧೋಧನ ತಾಯಿ ಮಾಯದೇವಿ. ಮೊದಲ ಹೆಸರು ಸಿದ್ದಾರ್ಥ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಬುದ್ಧನನ್ನು ಗೌತಮಿ ಎಂಬ ಸ್ತ್ರೀಯೊಬ್ಬಳು ಸಾಕುತ್ತಾಳೆ. ಆದುದರಿಂದ ಸಿದ್ದಾರ್ಥ ‘ಗೌತಮ’ನೆಂದು ಕರೆಯಲ್ಪಡುತ್ತಾರೆ. ತಂದೆ ಶುದ್ಧೋಧನ ಮಗ ಚಕ್ರವರ್ತಿಯಾಗಬೇಕೆಂಬ ಆಶಯದಿಂದ ಅವನಿಗೆ ದುಃಖದ ಸನ್ನಿವೇಶಗಳೇ ಕಾಣದಂತಹ ಕೃತಕ ವಾತಾವರಣವನ್ನು ಸೃಷ್ಟಿಸಿ, ಅವನನ್ನು ಬೆಳೆಸುತ್ತಾರೆ. ಯಶೋಧರೆ ಎಂಬ ಸುಂದರ ಕನ್ಯೆಯೊಂದಿಗೆ ಅವನ ವಿವಾಹವನ್ನು ಮಾಡುತ್ತಾರೆ. ಗೌತಮನಿಗೆ ‘ರಾಹುಲ’ ಎಂಬ ಮಗನು ಹುಟ್ಟುತ್ತಾನೆ. ಮಗುವಿಗೆ ವರ್ಷ ತುಂಬುವುದರೊಳಗೆ ಸಿದ್ದಾರ್ಥನಿಗೆ ದುಃಖದ ‘ದಿವ್ಯದರ್ಶನ’ವಾಗುತ್ತದೆ. ಇಡೀ ಜಗತ್ತಿನ ಘೋರ ದುಃಖವನ್ನು ಕಂಡು ಬೆಚ್ಚಿಬಿದ್ದ ಸಿದ್ದಾರ್ಥ, ಸೇವಕ ಚೆನ್ನನೊಡನೆ ಜಗವೆಲ್ಲಾ ಮಲಗಿರುವಾಗ ಬುದ್ದನಾಗಲೂ ಹೊರಟು, ದುಃಖಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ.  ಸನ್ಯಾಸಿ ಜೀವನ ಮತ್ತು ಬೋಧನೆ ವಿವಿಧ ಪಂಥಗಳ ಗುರುಗಳ ಹತ್ತಿರ ಸತತವಾಗಿ ೬ ವರ್ಷಗಳ ಕಾಲ ಅವರು ಹೇಳಿದಂತೆ ದೇಹ ದಂಡನೆ ಮಾಡಿ ಇದರಿಂದ ಯಾವುದೇ ಪ್ರತಿ ಫಲ ಮತ್ತು ಶಾಂತಿ ಸಿಗದೆ ಅಂತಿಮವಾಗಿ ಪರಮ ಸತ್ಯ ಕಾಣಲು ಮುಂದಿನ ೬ ವರ್ಷಗಳು ಬೋಧಿ ವೃಕ್ಷದ ಕೆಳಗೆ ನಿರಂತರ ಧ್ಯಾನ ತಪಸ್ಸು ಮಾಡುವುದರ ಮೂಲಕ ಪರಿಪೂರ್ಣ ಜ್ನಾನೋದಯ ಪಡೆದುಕೊಂಡರು. ಗೌತಮ ಬುದ್ಧರು ಮುಂದಿನ ೪೫ ವರ್ಷಗಳು ನಿರಂತರವಾಗಿ ಧಮ್ಮೋಪದೇಶಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಮಾನವನ ದುಖ ನಿವಾರಣೆಗೆ ತ್ರಿಸರಣ ಬೋಧನೆ ಮಾಡಿದರು. ಈ ಮೂರು ಬೌದ್ಧ ಧಮ್ಮದ ಮೂಲ ಸಂಕೇತಗಳು.ಇವುಗಳನ್ನು ಪ್ರತಿಯೋಬ್ಬರ ಜೀವನ ಧ್ಯೇಯಗಳಾಗಿ ಒಪ್ಪಿಕೊಂಡು ಸಂತೋಷವಾಗಿರುವುದು. ಅವುಗಳೆಂದರೆ, ಬುದ್ಧಂ ಶರಣಂ ಗಚ್ಚಾಮಿ(ನಾನು ಬುದ್ಧನಿಗೆ ಶರಣಾಗುತ್ತೆನೆ.) ಧಮ್ಮಂ ಶರಣಂ ಗಚ್ಚಾಮಿ(ನಾನು ಧಮ್ಮಕ್ಕೆ ಶರಣಾಗುತ್ತೆನೆ.) ಸಂಘಂ ಶರಣಂ ಗಚ್ಚಾಮಿ(ನಾನು ಸಂಘಕ್ಕೆ ಶರಣಾಗುತ್ತೆನೆ.) ಗಚ್ಚಾಮಿ ಎಂದರೆ, ಸತ್ಯದಿಂದ ಬೌದ್ಧ ಧಮ್ಮ ಸ್ವೀಕರಿಸುತ್ತೆನೆ ಎಂದು ಅರ್ಥೈಸುತ್ತದೆ. ಈ ಮೂರು ಶರಣ್ಯಗಳನ್ನು ಉಪಾಸಕರು ಮೂರು ಬಾರಿ ಉಚ್ಚರಿಸುವ ಮೂಲಕ ತಾವು ಬೌದ್ಧ ಧಮ್ಮಾಚಾರಿಗಳೆಂದು ಘೋಷಿಸುತ್ತಾರೆ.  ಸಂರ್ಪೂರ್ಣ ಮುಕ್ತಿ ಮಾರ್ಗ ಸಿದ್ಧಿಗೆ ಭಿಕ್ಕುಗಳ ಮತ್ತು ಸಂಘಗಳು ಜೀವನ ನಡವಳಿಕೆಗೆ ಸಂಬಂಧಿಸಿದಂತೆ ತ್ರಿಪಿಠಕಗಳನ್ನು ಭೋಧಿಸಿದ್ದಾರೆ. ಅವುಗಳೆಂದರೆ: ೧.ವಿನಯ ಪಿಟಕ: ಭಿಕ್ಕು ಮತ್ತು ಭಿಕ್ಕು ಸಂಘಗಳ ನಡವಳಿಕೆಗಳಿದೆ ಸಂಬಂಧಿಸಿದ ನಿಯಮಗಳನ್ನು ಕ್ರೋಢೀಕರಿಸಲಾಗಿದ ಗ್ರಂಥವಾಗಿದೆ. ೨.ಸುತ್ತ ಪಿಟಕ: ನಾಲ್ಕು ಆರ್ಯ ಸತ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಭಾಷಣೆಗಳು, ಗೀತೆಗಳು, ಕಥೆ ಉಪಕಥೆಗಳು ಮುಂತಾದವುಗಳನ್ನು ಸಂಗ್ರಹಿಸಿದ ಗ್ರಂಥವಾಗಿದೆ. ೩. ಅಭಿಧಮ್ಮ ಪಿಟಕ : ಸುತ್ತ ಪಿಟಕದಲ್ಲಿನ ಬೋಧನೆಗಳನ್ನು ಮೂಲ ತತ್ವಗಳನ್ನು ವಿಶಾದೀಕರಿಸಿದ ಗ್ರಂಥವಾಗಿದೆ. ಈಗೆ ತನ್ನ ಸ್ವಸಾಮಾರ್ಥ್ಯದಿಂದ , ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ ಮಹಾಗುರು.ಮದ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ,ದಯೇ , ಸಮತೆ, ಪ್ರೀತಿ, ಅನುಕಂಪ, ಮತ್ತು ಜ್ಞಾನದೊಂದಿಗೆ ಅಷ್ಠಾಂಗ ಮಾರ್ಗಗಳನ್ನು ತೋರಿಸಿಕೊಟ್ಟರು. ಈ ಸತ್ಯ ವನ್ನು ನಾವು ಪರಿಪಾಲಿಸಿದರೆ ನಮ್ಮ ಜೀವನದಲ್ಲಿ ಬುದ್ಧತ್ವವನ್ನು ಪಡೆಯಬಹುದು. ಪರಿಶುದ್ದವಾದ ಜೀವನ ನಡೆಸುವುದು ಪ್ರತಿಯೋಬ್ಬರ ಕರ್ತವ್ಯವಾಗಿದೆ. ಇದರಿಂದ ದುಃಖ ನಿವಾರಣೆ ಸಾದ್ಯ. ಧರ್ಮವೆಂದರೆ  ಸತ್ಯದ ಬೆಳಕು ಇದರಿಂದ ಜೀವನ ಸಾಕ್ಷಾತ್ಕಾರವನ್ನು ಪಡೆಯ ಬಹುದು. ಮನುಷ್ಯರು ಮನಸ್ಸಿನ ಶುದ್ಧಿ ಮತ್ತು ಅಂತರ್ ದೃಷ್ಟಿಯಿಂದ ಅಂತಿಮವಾಗಿ ನಿಬ್ಬಾಣ ಹೊಂದಬಹುದು ಎಂದಿದ್ದಾರೆ. ಬುದ್ಧರ ಉಪದೇಶಗಳು ಜ್ಞಾನ ಮಾರ್ಗವನ್ನು ಬೋಧಿಸಿದೆ. ಅದರೊಂದಿಗೆ  ಅಹಿಂಸಾ ಮಾರ್ಗ ಕರುಣೆ, ಅನುಕಂಪಗಳ ದಾರಿ ಹಿಡಿದು ಸಮಾಜ ಸುಧಾರಣೆಗಳನ್ನು ಮಾಡಿದ್ದರು. ಇಂತಹ ದಿವ್ಯ ಮಾರ್ಗ ದರ್ಶಕರು ಪ್ರತೀ ಸಹಸ್ರ ವರ್ಷಗಳಿಗೊಮ್ಮೆ ಉದಯವಾಗತಿದ್ದರೇ ಬಹುಶಃ ನೈತಿಕತೆ ಸಾತ್ವಿಕತೆ ಹೆಚ್ಚಿ ಅಪರಾಧ ಗಂಟು ಕಡಿತಗೊಳಿಸಬಹುದು. *********

ಬುದ್ಧ ಪೂರ್ಣಿಮಾ ವಿಶೇಷ Read Post »

ಇತರೆ

ಬುದ್ಧ ಪೂರ್ಣಿಮಾ ವಿಶೇಷ

  ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’  ವಸುಂಧರಾ ಕದಲೂರು   ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’              ಈ ಸಾಲುಗಳು ಮಾಸ್ತಿಯವರ ‘ಯಶೋಧರ’ ನಾಟಕದಲ್ಲಿದೆ ಎಂಬ ನೆನಪು.            ರಾಜಕುಮಾರನಾಗಿದ್ದ ಸಿದ್ಧಾರ್ಥನು ಬುದ್ಧನಾಗಿ, ಜೀವನದ ಪರಮಸತ್ಯವನ್ನು ಕಂಡು, ಅದನ್ನು ಜಗತ್ತಿಗೆ ಬೋಧಿಸಿದ. ತನ್ನ ಉಪದೇಶ ಮಾತ್ರದಿಂದಲೇ ಲೋಕದ ಕಣ್ತೆರೆಸಿದವನು, ಜನರ ದುಃಖ ಮರೆಸಿದವನು, ಕಣ್ಣೀರನು ಒರೆಸಿದವನು ಹೀಗೆಲ್ಲಾ ಹೇಳುತ್ತಾರೆೆ. ಬುದ್ಧನ ವಿಚಾರದಲ್ಲಿ ಇದೆಲ್ಲಾ ನಿಜವಿರಬಹುದು.        ಮುಂದೆ ಯಾವಾಗಲೋ ಸಿದ್ಧಾರ್ಥನಿಂದ ಬುದ್ಧನಾಗಿ ಪರಿವರ್ತಿತನಾದ ಮಹಾನುಭಾವನು  ಒಮ್ಮೆ ಮರಳಿ ತನ್ನೂರಿಗೆ ಬಂದಿರುತ್ತಾನೆ. ಆತನಿಂದ ಆಶೀರ್ವಚನ ಪಡೆಯಲು ಗುಂಪುಗಟ್ಟುವ ಮಂದಿಯಲ್ಲಿ  ಪೂರ್ವಾಶ್ರಮದ ಪತ್ನಿ ‘ಯಶೋಧರಾ’ ಸಹ ತನ್ನ ಮಗ ರಾಹುಲನೊಡನೆ ನಿಂತಿರುತ್ತಾಳೆ.     ಒಂದು ಕಾಲದ ತನ್ನ ಪ್ರಿಯ ಪತಿ ಈಗ ಜಗತ್ತಿನ ಮಹತ್ತಿನ ಧರ್ಮಶ್ರೇಷ್ಠನಾಗಿದ್ದಾನೆ. ಆತನನ್ನು ಇದಿರುಗೊಂಡಿರುವ ತಾನು ಆತನನ್ನು ಮುಟ್ಟಿ ಆಶೀರ್ವಾದ ಪಡೆಯಬಹುದೇ? ಮುಟ್ಟುವುದು ತಪ್ಪೇ..? ಮುಟ್ಟದಿರುವುದು ಸರಿಯೇ..? ಹೀಗೆ ಜಿಜ್ಞಾಸೆಯಲಿ ಮುಳುಗಿರುವ ಯಶೋಧರಾ ತನ್ನ ಈ ಗೊಂದಲ ನಿವಾರಿಸುವಂತೆ ಬುದ್ಧನನ್ನೇ ಕೇಳಿಕೊಂಡಾಗ ಆ ಮಹಾನುಭಾವ “ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು” ಎಂದನಂತೆ..!       ಇದು ಮಾಸ್ತಿಯಂತಹ ಮಹಾನ್ ಮಾನವತಾವಾದಿ ಬರಹಗಾರರ ಕಲ್ಪನಾ ಮೂಸೆಯಿಂದ ಮೂಡಿ ಬಂದಿರುವ ಪರಮಾದ್ಭುತ ಸಾಲು!           ಈ ಸಾಲಿನಲ್ಲಿ ನಮಗೆ, ಬಿಟ್ಟು ಹೋದ ಗಂಡ ಮರಳಿ ಬಂದಾಗ ಆತನ ರೂಪಾಂತರವನ್ನು ಒಪ್ಪುವ ಯಶೋಧರೆ ಒಂದೆಡೆ ಕಂಡರೆ, ಪತ್ನಿ ಪರಿತ್ಯಜಿಸಿ ಪರಿವ್ರಾಜಕನಾಗಿ ಬಂದರೂ ಸಹ ಪೂರ್ವಾಶ್ರಮದ ವಾಸನೆಗೆ ಪುನಃ ಸಿಲುಕುವ ಅಭದ್ರತೆಯ ಭಾವ ಕಾಡಿರಬಹುದಾದ ಬುದ್ಧನನ್ನು ಮತ್ತೊಂದೆಡೆ ಕಾಣದಿರಲಾಗದು.  ಇರಲಿ, ಇದೆಲ್ಲಾ ಓದುಗರ ಊಹೆಗೆ ಬಿಟ್ಟ ವಿಚಾರಗಳು.       ಬುದ್ಧನನ್ನು ‘ಏಷ್ಯಾದ ಜ್ಯೋತಿ’ ಎನ್ನುತ್ತಾರೆ. ಅದರ ಬಗ್ಗೆ ಸ್ವತಃ ಯಶೋಧರೆಗೂ ತಕರಾರಿರಲಾರದು. ಆದರೆ ಆತ ಕೆಲವು ನಿರ್ವಹಿಸಲೇಬೇಕಾದ ಕರ್ತವ್ಯಗಳನ್ನು ಮರೆತುದಕ್ಕೆ, ನಿರ್ವಹಿಸದೇ ಇದ್ದುದಕ್ಕೆ ಹೆಣ್ಣಾಗಿ ಆಕೆ ಒಮ್ಮೆಯಾದರೂ ಆಕ್ಷೇಪಿಸದಿರಲಾರಳೇ?! ಅಂದು ಯಶೋಧರೆಯ ಮನಸ್ಥಿತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಹೆಣ್ಣಾಗಿ ನಮ್ಮ ಭಾವಕೋಶದ ಆದ್ಯತೆಯನ್ನು ನಾವು ಊಹಿಸಲಾರೆವೆ?             ನನ್ನ ಹೆರಿಗೆಯ ದಿನ ವೈದ್ಯರೊಡನೆ ಚರ್ಚೆ, ನಿಗದಿತ ಫಾರ್ಮ ಭರ್ತಿ ಮಾಡುವುದು, ಶುಲ್ಕ ತುಂಬುವುದು, ಆಸ್ಪತ್ರೆ- ಮನೆಯ ನಡುವಿನ ಓಡಾಟ, ಆಪರೇಷನ್ ಥಿಯೇಟರಿನ ಮುಂದೆ ಚಡಪಡಿಕೆಯಲ್ಲಿ ಕಾಯುವುದು ಹೀಗೆ ಇಡೀ ದಿನ ಅವಿಶ್ರಾಂತರಾಗಿದ್ದ ನನ್ನ ಗಂಡ, ಮಗುವನ್ನೂ ನನ್ನನ್ನೂ ವಾರ್ಡ್ ಗೆ ಸ್ಥಳಾಂತರಿಸಿದ ಮೇಲೆ ತಡರಾತ್ರಿಯವರೆಗೂ ಜೊತೆಯಲ್ಲಿದ್ದರು. ಆಸ್ಪತ್ರೆಯ ಸಮಯ ಮೀರಿದಂತೆ, ಬಾಣಂತಿ ಹಾಗೂ ಮಗುವಿನೊಡನೆ ಒಬ್ಬರಿಗೆ ಮಾತ್ರ ಆಸ್ಪತ್ರೆಯಲ್ಲಿ ಇರಬಹುದಾದ ಅವಕಾಶ ಇದ್ದುದರಿಂದ ಸಹಜವಾಗಿ ನನ್ನ ತಾಯಿ ನನ್ನೊಡನೆ ಉಳಿದರು. ಗಂಡ, ಅತ್ತೆ-ನಾದಿನಿ, ಅಕ್ಕ- ಭಾವ ಮೊದಲಾದ ಸಕಲ ಬಂಧುಗಳು ಅನಿವಾರ್ಯ ಮನೆಗೆ ಮರಳಿದರು.        ನನಗೋ ಹೆರಿಗೆಯ ಅನಂತರ ಮುದ್ದು ಮಗುವಿನ ಮುಖ ನೋಡಿದ ಸಂಭ್ರಮ ಒಂದೆಡೆಯಾದರೆ, ಸಿಸೇರಿಯನ್ನಿನ ನೋವು, ಹಾಲು ಕುಡಿಯಲೂ ಬಾರದ ಮಗುವಿನ ಅಸಹಾಯಕತೆ, ಹೊಟ್ಟೆ ಹಸಿವಿನಿಂದಲೋ ಅಥವಾ ಸುರಕ್ಷಿತವಾಗಿದ್ದ ಗರ್ಭದಿಂದ ಈಗ ಎಲ್ಲಿಗೆ ಬಂದಿರುವೆ ಎಂಬ ಅಭದ್ರತೆಯ ಭಾವದಿಂದಲೋ ಅಳುವ ಮಗುವನ್ನು ನೋಡಿ ನನಗೂ ಅಳು. ವಾಸ್ತವ ಹಾಗೂ ಕಲ್ಪನೆಯ ಸಮ್ಮಿಶ್ರಭಾವದಲ್ಲಿ, ಸುಖದುಃಖಗಳ  ಮೇಳೈಸುವಿಕೆಯಲ್ಲಿ ಮುಳುಗೇಳುತ್ತಿದ್ದೆ. ನನಗೆ ಯಾವಾಗ ನಿದ್ದೆ ಬಂತೋ…         ಬೆಳಗಾದುದೇ ತಡ ಮಗುವಿನ ಅಪ್ಪ ಯಾವಾಗ ಬಂದಾರೋ ಎಂಬ ಕಾತರ. ಆಗಲೇ ಗಂಡನ ಸ್ಥಾನದಿಂದ ಅಪ್ಪನ ಸ್ಥಾನದಲ್ಲಿಟ್ಟು ನೋಡಬಯಸಿದ ನನ್ನ ಮನಸ್ಥಿತಿಯ ಬಗ್ಗೆ ನನಗೇ ಅಚ್ಚರಿಯಾಗಿತ್ತು. ಡ್ಯೂಟಿ ಡಾಕ್ಟರ್ ಬಂದು ನನ್ನ ಆರೋಗ್ಯ ವಿಚಾರಿಸಿಕೊಂಡರು, ಮಕ್ಕಳ ತಜ್ಞರು ಬಂದು ಮಗುವಿನ ಆರೋಗ್ಯ ಪರೀಕ್ಷಿಸಿದರು, ಆಸ್ಪತ್ರೆಯ ನರ್ಸ್ ಮಗುವನ್ನು ಶುಚಿಗೊಳಿಸಿ ತಂದುಕೊಟ್ಟರು, ಗಂಟೆ ಅಂತೂ ಇಂತು ಒಂಬತ್ತೂವರೆ ದಾಟಿ ಹತ್ತರ ಬಳಿ ಸಾಗುತ್ತಿತ್ತು. ನಾನೂ ಸಹ ಅಮ್ಮ ಹಾಗೂ ಆಸ್ಪತ್ರೆಯ ಸಹಾಯಕರ ಸಹಕಾರದಿಂದ ಶುಚಿಯಾಗಿ, ಬೇರೆ ಬಟ್ಟೆ ಧರಿಸಿದೆ. ಆಸ್ಪತ್ರೆಯವರೇ ಕೊಟ್ಟ ಕಾಫಿ- ತಿಂಡಿ ಮುಗಿಸಿದೆ.. ಆದರೆ ಇನ್ನೂ ‘ಅವರು’ ಬಂದಿರಲಿಲ್ಲ…     ಇಷ್ಟು ಬೇಗ ನನ್ನನ್ನೂ ಮಗುವನ್ನೂ ಮರೆತು ಬಿಟ್ಟರೇ…? ಎಂದು ತಳಮಳಿಸಿದೆ. ಮಗುವಿನ ಅಳುವನ್ನು ನೆಪವನ್ನಾಗಿ ಇಟ್ಟುಕೊಂಡು ನಾನೂ ಅಳಲು ಶುರುಮಾಡಿದ್ದೆ. ಅಷ್ಟರಲ್ಲಿ ‘ಇವರು’ ಬಂದರು.        ಛೇ, ನೆನ್ನೆ ಇಡೀ ದಿನ ಒಬ್ಬರೇ ಓಡಾಡಿ ದಣಿದಿರುತ್ತಾರೆ. ತಡ ರಾತ್ರಿ ಮನೆ ತಲುಪಿದ್ದರಿಂದ ಮಲಗುವುದೂ ತಡವಾಗಿರುತ್ತದೆ. ಹಾಗಾಗಿ ಆಯಾಸದಿಂದ ಬೆಳಿಗ್ಗೆ ಬೇಗನೆ ಎದ್ದಿಲ್ಲ ಎಂದು ಆ ದಿನ ಅವರು ತಡವಾಗಿ ಬಂದುದೇಕೆ ಎಂಬುದರ ಸತ್ಯ ನನಗೆ ಬಹಳ ದಿನಗಳಾದ ಮೇಲೆ ಹೊಳೆಯಿತು.         ’ಇವರು‘ ಬಂದದ್ದೇ ಅಮ್ಮ ಎದ್ದು ಹೊರಗೆ ಹೋದರು.  ಯಾರೂ ಇಲ್ಲದ್ದರಿಂದ ನನ್ನ ಹತ್ತಿರ ಬಂದವರೇ ಹೂಮುತ್ತನಿತ್ತು, ಮೃದುವಾಗಿ ಕೆನ್ನೆಚಿವುಟಿ, ಮಗು ಮಲಗಿದ್ದ ತೊಟ್ಟಿಲಿನತ್ತ ಬಾಗಿದಾಗ ನನ್ನ ಅಳು ಮಾಯವಾಗಿ ಹೃದಯ ಒಲವಿನ ನಗಾರಿ ಬಾರಿಸಿತ್ತು.        ಆ ಯಶೋಧರೆ ಕೂಡ ಸಾವಿರಾರು ವರ್ಷಗಳ ಹಿಂದೆ ಹೀಗೇ ಹಡೆದು ಮಲಗಿದ್ದಳಲ್ಲವೇ? ಮಗುವಿನ ಬಳಿ ಅದರ ಅಪ್ಪ ಎಂದು ಬಂದಾನೆಂದು ಕಾದಿದ್ದಳಲ್ಲವೇ? ಅವಳ ಕಾಯುವಿಕೆ ಕೊನೆಗೊಂಡದ್ದು ಯಾವಾಗ? ಆ ಯಶೋಧರೆ ಬಯಸಿದ್ದು ಅಥವಾ ಕಳೆದುಕೊಂಡದ್ದು ಏನು? ಹೆಣ್ಣೊಬ್ಬಳ ಮನಸ್ಸಿನ ವಿಚಾರಗಳು ಜಗತ್ತಿನ ಉದ್ಧಾರದ ವಿಷಯ ಬಂದಾಗ ಮಹತ್ತಿನದ್ದು ಎನಿಸುವುದೇ ಇಲ್ಲವಲ್ಲ…!      ಏಕೋ ಬುದ್ಧನ ವಿಷಯ ಪ್ರಸ್ತಾಪವಾದಾಗೆಲ್ಲಾ ಹಡೆದು ಮಲಗಿದ ಯಶೋಧರೆ ; ಅಪ್ಪನಿಗಾಗಿ ಅರಸಿದ ರಾಹುಲ ನೆನಪಾಗುತ್ತಾರೆ…. ಬುದ್ಧ ನನಗೆ ಮರೆಯಾಗುತ್ತಾನೆ. *******

ಬುದ್ಧ ಪೂರ್ಣಿಮಾ ವಿಶೇಷ Read Post »

ಇತರೆ

ಬುದ್ಧ ಪೂರ್ಣಿಮಾ ವಿಶೇಷ

ಜ್ಞಾನದ ದಿವ್ಯ ಬೆಳಕು ಚೆಲ್ಲುವ ‘ಬುದ್ಧ ಪೌರ್ಣಿಮೆ’ ಜ್ಞಾನದ ದಿವ್ಯ ಬೆಳಕು ಚೆಲ್ಲುವ ‘ಬುದ್ಧ ಪೌರ್ಣಿಮೆ’..! ಬುದ್ಧ ಪೌರ್ಣಿಮೆಯ ದಿನ ಇದೇ ದಿನಾಂಕ 7 ರಂದು ಇದೆ. ಆ ನೆಪದಲ್ಲಿ ಈ ಬುದ್ಧನ ನೆನೆದು ಈ ಲೇಖನ… ಬೆಳದಿಂಗಳ ತಂಪು, ಆಹ್ಲಾದ, ನಿರ್ಲಿಪ್ತತೆ, ಶಾಂತಿ, ಏಕಾಂತ, ಪ್ರೇಮ, ಪ್ರಶಾಂತತೆ, ತೇಜಸ್ಸು- ಇವೆಲ್ಲಕ್ಕೂ ಸಂಕೇತವಾಗಿದೆ ಬುದ್ಧ ಪೌರ್ಣಿಮೆ. ತನ್ನ ಅಂಗಳದಲ್ಲಿ ಚೆಲ್ಲಿರುವ ಬೆಳದಿಂಗಳು ತನ್ನದೆಂಬಂತೆ ಕಂಡರೂ ಅದು ತನ್ನದಲ್ಲ ಎಂಬುದು ಮನುಷ್ಯರಲ್ಲಿ ಅಂತರ್ಗತವಾದ ಎಚ್ಚರ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಈ ಎಚ್ಚರವನ್ನೂ ಕಾಪಿಟ್ಟುಕೊಳ್ಳುವುದೇ ಗುರು ಗೌತಮನ ಉಪದೇಶಗಳಲ್ಲಿ ಮಹತ್ವದ್ದಾಗಿದೆ..! ಬುದ್ಧ ಹೇಳುವಂತೆ ಬದುಕೆಂಬುದು ಶುದ್ಧ ಬೆಳಕು. ಇಲ್ಲಿ ಯಾವುದೂ ಯಾರ ಸ್ವತ್ತೂ ಅಲ್ಲ. ಸುಖವನ್ನು ವಸ್ತುಗಳಲ್ಲಿ ಅರಸಲು ಹೋಗುವುದರಿಂದಲೇ ಮನುಷ್ಯ ದುಃಖಕ್ಕೀಡಾಗುತ್ತಾನೆ ಎಂದು ಗೌತಮ ಬುದ್ಧ ಹೇಳಿದ್ದರು. ಯಾವುದನ್ನೂ ಸ್ವಂತವೆಂದು ಪರಿಗಣಿಸದವನಿಗೆ ನೋವೂ ಇಲ್ಲ, ನಲಿವೂ ಇಲ್ಲ… ಅಂತಹ ನಿರ್ಲಿಪ್ತ ಸಮಚಿತ್ತ ಮಾತ್ರ ಬುದ್ಧನ ನಗೆಯಂತಹ ಕಿರು ನಗೆಯನ್ನು ಹೊಳೆಯಬಹುದು. ಆ ನಿರ್ಮಲ ಧ್ಯಾನಸ್ಥ ಮಂದಹಾಸದಲ್ಲಿ ಆತ ಪೂರ್ಣಚಂದ್ರನಷ್ಟು ಶಾಂತ, ದೇದೀಪ್ಯಮಾನ. ತನ್ನ ಮಾತುಗಳು ಮನುಷ್ಯನ ಆಂತರಿಕ ಗುಣವನ್ನು ಕುರಿತು ಹೇಳುವುದರಿಂದ ಅವನ್ನು ಗ್ರಹಿಸುವುದು ಲೌಕಿಕದ ಲಾಲಸೆಗಳಲ್ಲಿ ಮುಳುಗಿರುವವರಿಗೆ ಸುಲಭವಲ್ಲ ಎಂದು ಗೌತಮನಿಗೆ ತಿಳಿದಿತ್ತು… ಬಯಕೆಗಳ ಗಾಢಾಂಧಕಾರದಲ್ಲಿ ದಾರಿತಪ್ಪಿದವರಿಗೆ ತನ್ನ ಮಾತು ಪಥ್ಯವಾಗುವುದೆ? ಅಂಥವರಿಗೆ ಉಪದೇಶ ನೀಡಲು ಹೋಗಿ ತಾನು ದಣಿಯಲಾರೆನೆ? ಪ್ರಶ್ನೆಗಳು ಎದುರಾಗಿದ್ದವು. ಅದು ತರ್ಕದ ನಿಲುಕಿಗೆ ಮೀರಿದ್ದು. ಒಳಗಣ್ಣಿಗೆ ಮಾತ್ರ ಸ್ವಷ್ಟವಾಗುವಂಥದ್ದು ಅಂತ ತಿಳಿದಿದ್ದರೂ ಸಹಜೀವಿಗಳ ಬಗ್ಗೆ ಅಮಿತ ಕರುಣೆಯ ಬುದ್ಧ ಯಾರ ಆತ್ಮಗಳು ಸತ್ಯವನ್ನು ಕಾಣಲು ತೆರೆದಿರುತ್ತವೋ ಅಂಥವರಿಗೆ ನಾನು ಹೇಳುವುದು ಅರ್ಥವಾದೀತು ಎಂಬ ನಂಬಿಕೆಯಿಂದ ಜನರಲ್ಲಿ ಆತ್ಮಜ್ಞಾನದ ಬಗ್ಗೆ ಒಲವು ಮೂಡಿಸಿದ… ಒಮ್ಮೆ ಝೆನ್ ಗುರು ಲಿಂಜಿ ಭಿಕ್ಷುಗಳನ್ನುದ್ದೇಶಿಸಿ ಮಾತನಾಡುತ್ತ, ನಾವು ಯಾವುದೇ ಧಾರ್ಮಿಕ ರೀತಿಯಲ್ಲಿ ವರ್ತಿಸಬೇಕಾದ ಅಗತ್ಯವಿಲ್ಲ. ಸಹಜವಾಗಿದ್ದರಷ್ಟೇ ಸಾಕು. ಯಾವುದನ್ನೂ ಹುಡುಕುವ ಅಗತ್ಯವೂ ಇಲ್ಲ. ಕಡೆಗೆ ಬುದ್ಧನನ್ನೂ ಕೂಡ. ಎಷ್ಟೆಂದರೂ ಬುದ್ಧ ಎನ್ನುವುದು ಕೇವಲ ಒಂದು ಶಬ್ದ ಅಷ್ಟೆ, ಸಂಕೇತವಷ್ಟೇ ಎನ್ನುತ್ತಾನೆ… ಬುದ್ಧ ವ್ಯಕ್ತಿ ಪೂಜೆಯನ್ನು ಪ್ರೋತ್ಸಾಹಿಸಲಿಲ್ಲ ಎಂಬುದರ ನಿರ್ದಿಷ್ಟ ಸಾಕ್ಷಿ ಇದು. ಪೂರ್ಣಚಂದ್ರ ತೇಜಸ್ಸಿನ ಬುದ್ಧ ಅರಮನೆ, ಗುಡಿಸಲು ಎನ್ನದೆ ಎಲ್ಲರ ಅಂಗಳದಲ್ಲೂ ಯಥೇಚ್ಛ ಬೆಳದಿಂಗಳು ಹರಿಸುತ್ತ ನಡೆದ. ರಾಜ ಬಿಂಬಸಾರನೂ, ಕೊಲೆಗಡುಕ ಅಂಗುಲೀಮಾಲನೂ ಅವನ ಕರುಣೆಗೆ ಸಮಾನ ಪಾತ್ರರು… ಬೆಳದಿಂಗಳನ್ನು ನೋಡಿ ದಣಿವ ಚೇತನ ಪ್ರಾಯಶಃ ಇರಲಾರದು. ಮನಸ್ಸು ಸಂಪೂರ್ಣ ಶಾಂತವಾದಾಗ. ಯೋಗಸೂತ್ರದಲ್ಲಿ ಹೇಳಿರುವಂತೆ ಉಂಟಾಗುವ ಕೇವಲ ಕುಂಭಕ ಅಥವಾ ಕೆಲ ಗಳಿಗೆಗಷ್ಟೆ ಉಸಿರು ಸ್ತಂಭಿತಗೊಳಿಸುವ ಅನುಭವ ಕೊಡುವಂಥದು ಪೌರ್ಣಮಿಯ ಚಂದಿರನ ಬೆಳ್ಳಿ ಕಿರಣಗಳು. ಕ್ಷಣಾರ್ಧದಲ್ಲಿ ಒಳಗಣ್ಣನ್ನು ತೆರೆಸಿ, ಬದುಕಿನ ಕ್ಷಣಭಂಗುರತೆ, ಪ್ರಕೃತಿಯ ಅಗಾಧತೆಗಳ ಕುರಿತು ಧ್ಯಾನಿಸುವಂತೆ ಮಾಡುವಂಥದು… ವೈಶಾಖ ಶುದ್ಧ ಪೌರ್ಣಿಮಿಯ ರಾತ್ರಿ ಸಿದ್ಧಾರ್ಥ ಬಿಟ್ಟು ಹೊರಟಿದ್ದು ಅರಮನೆಯನ್ನಲ್ಲ. ಸಹಜೀವಿಗಳೊಂದಿಗೆ ಬೆರೆಯಲಾಗದಂತೆ ಮೇಲು-ಕೀಳು ಎಂಬುದನ್ನು ಸೃಷ್ಟಿಸುವ ಅಧಿಕಾರದ ಗದ್ದುಗೆಯನ್ನು; ಪದವಿ, ಐಶ್ವರ್ಯಗಳಿಂದ ಸುಖ ಸಿಗುತ್ತದೆ ಎಂಬ ಭ್ರಾಂತಿಯನ್ನು ಮನುಷ್ಯನ ಮೂಲಭೂತ ಕೊರತೆಗಳನ್ನು ಅರಸೊತ್ತಿಗೆಯಿಂದ ನೀಗಿಸಲು ಸಾಧ್ಯವಿಲ್ಲ ಎಂಬುದನ್ನು ಸಿದ್ಧಾರ್ಥ ಗಮನಿಸುತ್ತಾನೆ..! ರಾಜಕುಮಾರನೆಂಬ ಭ್ರಮಾಕೋಶ ಕಳಚಿ ಜನರಲ್ಲಿಗೆ ಹೋದಾಗ ಮಾತ್ರ ಅವರ ದುಃಖವನ್ನು ತಾನು ಅರ್ಥಮಾಡಿಕೊಳ್ಳಬಲ್ಲೆ. ಮನುಕುಲಕ್ಕೆ ಸುಖ-ಸಂತೃಪ್ತಿ ದೊರಕುವ ಮಾರ್ಗ ಯಾವುದು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಬಲ್ಲೆ ಎಂದು ಬೆಳದಿಂಗಳ ಆ ಇರುಳಿನಲ್ಲಿ ರಾಜ ಪದವಿ ತೊರೆದು ಜನರ ನಡುವೆಯೇ ಹುಡುಕಹೊರಟವನು ಸಿದ್ಧಾರ್ಥ… ಮಾನವರ ದುಃಖವನ್ನು ದೂರಮಾಡುವ ಮುನ್ನ ಅದರ ಮೂಲವನ್ನು ಆತ ಅರಿಯ ಬೇಕಿತ್ತು. ಆ ಅರಿವಿನ ಹಾದಿ ಹುಡುಕುತ್ತ ಆತ ಮೊದಲು ದೇಹ ದಂಡಿಸಿಕೊಳ್ಳುತ್ತಾನೆ. ಎಷ್ಟೋ ದಿನ ಅನ್ನ, ನೀರು ತೊರೆದು ಪ್ರಕೃತಿಯ ಸರ್ವ ಕಾಠಿಣ್ಯವನ್ನು ತನ್ನನ್ನು ತೆರೆದುಕೊಂಡು ಸತ್ಯ ಅರಿಯಲು ಯತ್ನಿಸುತ್ತಾನೆ… ಮೂಲತಃ ಪ್ರಜ್ಞಾವಂತನಾದ ಆತ, ದೇಹ ದಂಡನೆಯಿಂದ ಹೆಚ್ಚಿನ ಲಾಭವಿಲ್ಲವೆಂದು ಬೇಗ ಕಂಡುಕೊಳ್ಳುತ್ತಾನೆ. ಸುಜÁತಳಿಂದ ಆಹಾರ ಸ್ವೀಕರಿಸಿ ತನ್ನ ಉಪವಾಸ ಅಂತ್ಯಗೊಳಿಸುತ್ತಾನೆ. ಮೋಕ್ಷವನ್ನರಸುತ್ತಿದ್ದಾನೆ ಎಂದು ನಂಬಿ ಅವನೊಂದಿಗೆ ತಪಶ್ಚರ್ಯೆ ಪಾಲಿಸುತ್ತಿದ್ದ ಐದು ಮಂದಿ ಅನುಯಾಯಿಗಳು ಆತ ಕಷ್ಟಗಳಿಗೆ ಮಣಿದು ಲೌಕಿಕಕ್ಕೆ ಮರಳಿದನೆಂದು ಭ್ರಮಿಸಿ ಆತನ ಸಖ್ಯ ತೊರೆದು ಬಿಡುತ್ತಾರೆ..! ಇಷ್ಟರಲ್ಲಿ ಬುದ್ಧನಿಗೆ ತಾನು ನಡೆಯಬೇಕಾದ ಹಾದಿ ಧ್ಯಾನ ಮಾರ್ಗವೆಂದು ಮನವರಿಕೆಯಾಗುತ್ತದೆ. ಜಗತ್ತಿನ ಆಗುಹೋಗುಗಳಿಗೆ, ಮನುಷ್ಯನ ತುಮುಲಗಳಿಗೆ ಕಾರ್ಯಕಾರಣ ಸಂಬಂಧದ ಎಳೆ ಹಿಡಿದು ಧ್ಯಾನಿಸಿ ಆತ ಕಂಡುಕೊಂಡದ್ದು ಅತ್ಯಂತ ಸರಳವೆಂದು ಕಾಣುವ ಆಸೆಯೇ ದುಃಖಕ್ಕೆ ಮೂಲ-ಎಂಬ ಸತ್ಯವನ್ನು. ತನ್ನ ಹುಟ್ಟಿದ ದಿನವೂ ಆದ ಒಂದು ಪೌರ್ಣಮಿಯ ದಿನ ಬೋಧಿವೃಕ್ಷದ ಕೆಳಗೆ, ಜಗತ್ತು ಜ್ಞಾನೋದಯ ಎಂತ ಕರೆಯುವ ಅರಿವಿನ ಬೆಳದಿಂಗಳಿನಲ್ಲಿ ಮಿಂದು ಸಿದ್ದಾರ್ಥ ನಿರ್ಮೋಹಿ ಬುದ್ಧನಾದ..! ಹೀಗೆ ಬುದ್ಧ ಅರಿವಿನ ಪರಮಾನಂದವನ್ನು ಸವಿಯುತ್ತಿದ್ದಾಗ ಒಬ್ಬ ಗರ್ವಿಷ್ಟ ಪಂಡಿತನೊಬ್ಬ ನಿಜವಾದ ಪಂಡಿತನ ಗುಣವಿಶೇಷಗಳೇನು ಎಂದು ಸವಾಲೆಸೆದ. ಅಹಂಕಾರದಿಂದ ಮುಕ್ತನಾದವನು, ಶುದ್ಧನಾಗಿದ್ದು ಆತ್ಮ ನಿಗ್ರಹವುಳ್ಳವನು, ತಿಳಿದವನೂ ಜ್ಞಾನಿಯೂ ಆದವನು. ಪಾಪಕೃತ್ಯಗಳನ್ನು ತೊರೆದವನು, ತನ್ನ ವರ್ತನೆಯಿಂದ ಇತರ ಜೀವಿಗಳಿಗೆ ಹಾನಿಯುಂಟು ಮಾಡದವನು ಮತ್ತು ಈ ಎಲ್ಲ ಕಾರಣಗಳಿಂದಾಗಿ ಪೂಜ್ಯನಾದವನು ಮಾತ್ರ ನಿಜವಾದ ಪಂಡಿತ ಎಂದ ಬುದ್ಧ… ಒಮ್ಮೆ ಟೊಕುಸಾನ್ ಎಂಬ ಭಿಕ್ಷು ರುಟಾನ್ ಎಂಬ ಹಿರಿಯ ಭೀಕ್ಷುವನ್ನು ಭೇಟಿಯಾದ. ಆದಾಗಲೇ ಮುಸ್ಸಂಜೆಯಾಗಿತ್ತು. ಟೊಕುಸಾನ್ ತನ್ನನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದ. ಕೆಲ ಸಮಯದ ಬಳಿಕ, ಈಗ ರಾತ್ರಿ ಬಹಳವಾಗಿದೆ. ಮಲಗಿ ವಿಶ್ರಾಂತಿ ತೆಗೆದುಕೋ ಹೋಗು ಅಂತ ರುಟಾನ್ ಅವನನ್ನೆಬ್ಬಿಸಿದ. ಟೊಕುಸಾನ್ ತಲೆಬಾಗಿ, ತೆರಳುವುದಕ್ಕೆಂದು ಬಾಗಿಲ ಬಳಿ ಹೋದವನು, ಹೊರಗೆ ಬಹಳ ಕತ್ತಲೆ ಎಂದು ನಿಂತುಕೊಂಡ… ದೀಪವೊಂದನ್ನು ಹಚ್ಚಿ ಅದನ್ನು ಟೊಕುಸಾನ್‍ಗೆ ಕೊಡಲು ಹೋದ ರುಟಾನ್, ಇನ್ನೇನು ಟೊಕುಸಾನ್ ಅವನ ಕೈಯಿಂದ ದೀಪ ತೆಗೆದುಕೊಳ್ಳಬೇಕು ಎನ್ನುವಾಗ ಅದನ್ನು ಊದಿ ಆರಿಸಿಬಿಟ್ಟ ಒಡನೆಯೇ ಜ್ಞಾನೋದಯವಾದ ಟೊಕುಸಾನ್ ಬೆಳಿಗ್ಗೆ ಎದ್ದವನೇ ರುಟಾನ್ ಬಳಿ ಬಂದು, ಕೇಳಲು ನನ್ನಲ್ಲಿ ಯಾವ ಪ್ರಶ್ನೆಯೂ ಉಳಿದಿಲ್ಲ. ಬರುತ್ತೇನೆ ಎಂದು ಹೇಳುತ್ತಾ ಹೊರಟೇಬಿಟ್ಟ. ಇದು ಝೇನ್ ಕತೆ. ಎಷ್ಟೋ ಬಾರಿ ಅನೇಕ ಪ್ರಶ್ನೆ, ತರ್ಕ, ಜಿಜ್ಞಾಸೆಗಳಿಂದ ದೊರಕದ ಉತ್ತರ ಯಾವುದೋ ಪುಟ್ಟ ಘಟನೆಯಿಂದ ಕ್ಷಣಮಾತ್ರದಲ್ಲಿ ಹೊಳೆದುಬಿಡುತ್ತದೆ..! ಝೇನ್ ಗುರುವೊಬ್ಬ ಹೇಳುವಂತೆ ಸಂಪೂರ್ಣ ಜ್ಞಾನವನ್ನು ಒಂದು ಕ್ಷಣಮಾತ್ರ, ಒಂದು ಕ್ಷಣ ಮಾತ್ರವೇ, ಸಾಕ್ಷಾತ್ಕರಿಸಿಕೊಳ್ಳಬಹುದು. ಮೋಡ ಕವಿದ ಒಂದು ಹುಣ್ಣಿಮೆಯ ರಾತ್ರಿ ಆಗಸದಲ್ಲಿ ನೋಡ ನೋಡುತ್ತಿರುವಂತೆಯೇ ಮೂಡುವ ದಟ್ಟ ಕಾರ್ಮೋಡಗಳ ನಡುವಿನ ಕಿರು ಅಂತರದಲ್ಲಿ ಪೂರ್ಣ ಚಂದ್ರ ಫಕ್ಕನೆ ಪ್ರತ್ಯಕ್ಷವಾಗಿ ಮತ್ತೆ ಮೋಡದ ಮರೆಗೆ ತೆರಳಿದರೆ ಹೇಗೋ ಹಾಗೆ… ನೋಡುಗನ ಮನಸ್ಸಿನಲ್ಲಿ ಉಳಿಯುವುದು ಕಾರ್ಮೋಡವಲ್ಲ. ಹಾಗೆ ಚಕ್ಕನೆ ದರ್ಶನ ನೀಡಿದ ಪೌರ್ಣಮಿಯ ಚಂದಿರ. ಅರಿವಿಲ್ಲದೇನೇ ಆ ಕ್ಷಣದಲ್ಲಿ ಆಹ್ ಎಂಬ ಉದ್ಗಾರ ಹೊರಟು ಸ್ತಬ್ಧವಾಗಿ ನಿಲ್ಲಬಹುದು… ಜಗತ್ತಿನ ಮತ್ತು ತನ್ನ ನಡುವಿನ ಸಂಬಂಧದ ಗೂಢವನ್ನು ಮನುಷ್ಯ ಅರ್ಥಮಾಡಿಕೊಂಡಾಗಲೂ ಇದೇ ಬಗೆಯ ದಿವ್ಯ ಆನಂದದ ಅನುಭವವಾಗುತ್ತದೆ ಎನ್ನುತ್ತಾನೆ ಗೌತಮ… ಮಾನವ ಜೀವಿತದಲ್ಲಿ ಬರುವ ಹುಣ್ಣಿಮೆಗಳು ಅವೆಷ್ಟೋ. ಎಷ್ಟೆಷ್ಟೊ ಬೆಳದಿಂಗಳ ರಾತ್ರಿಗಳಲ್ಲಿ ಆತ ಅನುಭವಿಸಿದ ನೋವು, ಅಪಮಾನ, ಹತಾಶೆ, ಕ್ರೌರ್ಯಗಳ ನೆರಳಿನಲ್ಲಿ ಬೆಳದಿಂಗಳ ತಂತ್ರ ಕಿರಣಗಳೂ ಆತನಿಗೆ ನೋವು ತರಲು ಸಾಧ್ಯವಿದೆ… ಪ್ರಕ್ಷುಬ್ಧ ಮನಸ್ಸಿನ ಎಲ್ಲ ನೇತ್ಯಾತ್ಮಕ ಭಾವನೆಗಳನ್ನು ಬಡಿದೆಬ್ಬಿಸಿ ನಿಟ್ಟುಸಿರಿಡುವಂತೆ ಮಾಡುವ ಆ ಎಲ್ಲ ಧಗೆಯ ಬೆಳದಿಂಗಳ ರಾತ್ರಿಗಳಲ್ಲಿ ಮತ್ತದೇ ಬುದ್ಧನ ಸ್ನೇಹಮಯಿ, ಪ್ರಶಾಂತ ಬೆಳದಿಂಗಳಿನಂತಹ ಅರಿವಿನ ನಗೆಯಷ್ಟೆ ಸಾಂತ್ವನ, ಸ್ಥೈರ್ಯ ನೀಡಬಲ್ಲದು. ಅಂತಹ ಪ್ರತಿ ಬೆಳದಿಂಗಳ ಜ್ಞಾನಿಗೆ, ಗುರುವಿಗೆ ಶರಣೋ ಶರಣು..! ************************** ಕೆ.ಶಿವು. ಲಕ್ಕಣ್ಣವರ

ಬುದ್ಧ ಪೂರ್ಣಿಮಾ ವಿಶೇಷ Read Post »

ಇತರೆ

ನಿತ್ಯೋತ್ಸವ ಕವಿ

ಬದುಕು-ಬರಹ ನಿತ್ಯೋತ್ಸವ ಕವಿ ಹಾಗೂ ವಿಮರ್ಶಕ ಮತ್ತು ವೈಚಾರಿಕ ಬರಹಗಾರ ಪ್ರೊ.ಕೆ.ಎಸ್. ನಿಸಾರ್ ಮಹಮದ್..! ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ 05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು… ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ, ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು ಸೇರಿಕೊಂಡರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್‌ ಪದವಿ ಪಡೆದರು. ಹೀಗೆ ಬೆಂಗಳೂರಿನಲ್ಲಿ ಭೂವಿಜ್ಞಾನದಲ್ಲಿ ಎಂ.ಎಸ್ಸಿ. ವರೆಗಿನ ಅಧ್ಯಯನವನ್ನು ಮುಗಿಸಿ 1958ರಲ್ಲಿ ಗುಲ್ಬರ್ಗದಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ಸರಕಾರಿ ಸೇವೆಯನ್ನು ಆರಂಭಿಸಿದರು.ಆದರೆ ತಾನು ಮಾಡುತ್ತಿರುವ ಕೆಲಸ ಅವರಿಗೆ ತೃಪ್ತಿ, ಸಂತೋಷವನ್ನು ತಂದುಕೊಡಲಿಲ್ಲ. ಹೀಗಾಗಿ ಆ ಉದ್ಯೋಗವನ್ನು ತೊರೆದು, ಅಧ್ಯಾಪನ ವೃತ್ತಿಗೆ ಸೇರಿಕೊಂಡರು. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ ಮಾಡಿದ್ದ ನಿಸಾರ್ ಅಹಮದ್ ನಂತರದಲ್ಲಿ ಚಿತ್ರದುರ್ಗ,ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಕಾಲೇಜಿನ ಪ್ರಾಧ್ಯಾಪಕರಾಗಿರುವಾಗ ಎನ್.ಸಿ.ಸಿ.ಯಲ್ಲಿ ಲೆಪ್ಟಿನೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಅವರಿಗಿದೆ. ಅವರ ಸಾಹಿತ್ಯಾಸಕ್ತಿ ಎಳವೆಯಲ್ಲೇ ಚಿಗುರಿತ್ತು. ತನ್ನ 10ನೇ ವಯಸ್ಸಿನಲ್ಲೇ ‘ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅನರ್ಸ್ ಅಧ್ಯಯನ ಸಮಯದಲ್ಲಿ ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ರಾಜರತ್ನಂ, ವಿ.ಸೀ. ಇವರ ಗುರುಗಳಾಗಿದ್ದರು. ಇದರಿಂದ ನಿಸಾರ್ ರವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಲು ಸಾಧ್ಯವಾಯಿತು. ಸೇವೆಯಲ್ಲಿದ್ದಾಗಲೇ ರಾಜ್ಯಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಪ್ರಕಟಿಸಿದ ‘ಚಂದನ’ ತ್ರೈಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ ಹೊರತಂದ ನಿಸಾರ್ ದೆಹಲಿಯಲ್ಲಿ CONTEMPORARY INDIAN LITERATURE ಸೆಮಿನಾರ್ ವ್ಯವಸ್ಥೆ ಮಾಡಿದ ಹೆಗ್ಗಳಿಕೆ.ಯನ್ನೂ ಹೊಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಮಂಡಲಿಯ ಸದಸ್ಯರಾಗಿದ್ದರು… ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನ ಒಡನಾಟ, ಅಲ್ಲಿನ ಪ್ರಕೃತಿಯ ಸೊಬಗು, ಕವಿಗಳಿಗೆಂದೇ ಹೇಳಿ ಮಾಡಿಸಿದ ಹವಾಗುಣ, ಇವೆಲ್ಲ ನಿಸಾರ್ ಅಹಮದರ ಕವಿ ಹೃದಯವನ್ನು ಪಕ್ವಗೊಳಿಸಿ ಅವರನ್ನೊಬ್ಬ ಶ್ರೇಷ್ಠ ಕವಿಯನ್ನಾಗಿ ರೂಪಿಸಿತು. 1960ರಲ್ಲಿ ಪ್ರಕಟಗೊಂಡ ‘ಮನಸು ಗಾಂಧಿಬಜಾರು’ ಎಂಬ ಕವಿತಾ ಸಂಕಲನದಿಂದ ತೊಡಗಿ 2013ರ ‘ವ್ಯಕ್ತಿಪರ ಕವನಗಳು’ ಕೃತಿಯವರೆಗೆ 19 ಕವನ ಸಂಕಲನಗಳನ್ನೂ 12 ಗದ್ಯ,ಪ್ರಬಂಧ, ವಿಮರ್ಶೆಯ ಲೇಖನ ಸಂಕಲನಗಳನ್ನೂ, 5 ಮಕ್ಕಳ ಸಾಹಿತ್ಯಗ್ರಂಥಗಳನ್ನೂ, 5 ಅನುವಾದ ಗ್ರಂಥಗಳನ್ನೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಹಿರಿಮೆ ಇವರದು. ಇವರ ಹಲವು ಕವನ ಸಂಕಲನಗಳು ಮೂರು ಮೂರು ಆವೃತ್ತಿಗಳನ್ನು ಕಂಡಿವೆ. ‘ನಿತ್ಯೋತ್ಸವ’ ಎಂಬ ಕವನ ಸಂಕಲನವು 24 ಬಾರಿ ಮುದ್ರಿತವಾಗಿರುವುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಶೇಕ್ಸ್‌ಪಿಯರನ ನಾಟಕಗಳನ್ನೂ, ರಷ್ಯನ್ ಕಥೆಗಳನ್ನೂ , ಸ್ಪಾನಿಷ್ ಕವಿ ಪಾಬ್ಲೊ ನೆರುಡನ ಕವಿತೆಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ. 1978ರಲ್ಲಿ ಭಾರತೀಯ ಭಾಷೆಗಳಲ್ಲೇ ಮೊತ್ತಮೊದಲನೆಯದಾಗಿ ಭಾವಗೀತಗಳ ದನಿಸುರುಳಿಯನ್ನು ಹೊರತಂದು ಸುಗಮಸಂಗೀತ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ನಿರ್ಮಿಸಿದ ಹಿರಿಮೆ ಇವರದು. ‘ನಿತ್ಯೋತ್ಸವ’ ಎಂಬ ಭಾವಗೀತಗಳ ಆ ದ್ವನಿ ಸುರುಳಿಯು ಕನ್ನಡದ ಸುಗಮಸಂಗೀತ ಕ್ಷೇತ್ರದಲ್ಲಿ ಇಂದಿಗೂ ಜನಪ್ರಿಯವಾಗಿ ಉಳಿದಿದೆ… ಇವರ ಯಾವುದೇ ಕವನವು ನಮ್ಮನ್ನು ಕ್ಷೋಭೆಗೀಡು ಮಾಡದೇ, ಯಾವುದೇ ಸಂದರ್ಭದಲ್ಲೂ ಮುದನೀಡುವ ರಸೋನ್ನತಿಯನ್ನೂ ಭಾವಸಂಚಾರವನ್ನೂ ಹೊಂದಿರುತ್ತದೆ. ನಿಸಾರ್ ಅಹಮದರ ಕವಿತೆಗಳು ಬರೀ ಹೆಣ್ಣನ್ನೇ ಅಥವಾ ಬರೀ ಪ್ರೇಮವನ್ನೇ ಮುಖ್ಯ ವಸ್ತುವಾಗಿಸಿಲ್ಲ. ಅವರ ಕವಿತೆಗಳು ಮಾಸ್ತಿಯವರ ವಾಕಿಂಗನ್ನು,ಕಾಲೇಜು ಯೂನಿಯನ್ನು ಪ್ರೆಸಿಡೆಂಟನ ತಳಮಳವನ್ನು, ಬುರ್ಖಾ ಎಂಬ ಸಾಮಾಜಿಕ ಮೌಢ್ಯವನ್ನು, ವಿಮರ್ಶಕರ ಕಿರಿಕಿರಿಯನ್ನು, ರಾಜಕಾರಣಿಗಳ ದೊಂಬರಾಟವನ್ನು, ಸೋಗಲಾಡಿ ಶಿಕ್ಷಣವನ್ನು ಬಿಂಬಿಸುತ್ತದೆ… ಇದೇ ಕಾರಣದಿಂದಾಗಿಯೇ ‘ಉತ್ತನೆಲದ ಗೆರೆ’ ‘ಆಗಷ್ಟೇ ಕೊಂದ ಕುರಿಮರಿಯ ರಕ್ತದ ಬಿಸುಪು’, ‘ಕೊಯ್ದ ಹಸಿಮರದ ಕಂಪು’, ‘ಸಮಾಜವಾದದ ರೊಟ್ಟಿಯ ತುಣುಕು’ ಇಂಥ ಸಾಮಾನ್ಯ ವಿಷಯಗಳ ಮೇಲೆ ಕವನ ಬರೆದ ಪಾಬ್ಲೊ ನೆರೂಡ ಇವರಿಗೆ ಅತ್ಯಂತ ಪ್ರಿಯರಾಗುತ್ತಾರೆ. ನೆರುಡನನ್ನು ಆಳವಾಗಿ ಅಭ್ಯಸಿಸಿರುವ ಇವರು ಅವನನ್ನು ಸುಮ್ಮನೇ ಕೋಟ್ಮಾಡುವವರ ವಿರುದ್ಧ ಸಹಜವಾಗಿ ಕೋಪಗೊಳ್ಳುತ್ತಾರೆ… ನಿಸಾರರ ಕವನಗಳಲ್ಲಿ ಮಷಾಲು, ನಾಚು, ಖುಲ್ಲಾ ಮುಂತಾದ ಅರಬ್ಬೀ ಪದಗಳ ಹಾಸುಹೊಕ್ಕು ಹೇರಳವಾಗಿರುತ್ತದೆ. ‘ಇಪ್ಪತ್ತೆಂಟನಾಡುವುದು ನಡುವೆ ಅದೂ ಇದೂ ಇಪ್ಪತ್ತೆಂಟನಾಡುವುದು’ ಎಂಬಂಥ ಪದಚಮತ್ಕಾರಗಳೂ ಇರುತ್ತದೆ. ‘ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನಿನ್ನೆಯ ಪುನರಾವರ್ತನೆಯ ಏಕತಾನತೆಯಲ್ಲಿ’ ಎಂಬಂಥ ತರ್ಕ ಜಿಜ್ಞಾಸೆಯೂ ಇರುತ್ತದೆ… ಅದೇ ರೀತಿಯಲ್ಲಿ ಇವರ ‘ಇದು ಬರಿ ಬೆಡಗಲ್ಲೋ ಅಣ್ಣ’ ಎಂಬ ವಿಮರ್ಶಾ ಕೃತಿ ಇತರ ವಿಮರ್ಶೆಗಳಂತೆ ಕಹಿಯೂ ಆಗದೆ ತೇಲಿಕೆಯೂ ಆಗದೆ ಅತ್ಯಂತ ಭಾವಪೂರ್ಣವೂ ತೂಕವುಳ್ಳದ್ದೂ ಆಗಿ ವಿಮರ್ಶಾಲೋಕದಲ್ಲಿ ಕುವೆಂಪುರವರ ಸಮಾನರಾಗಿ ನಿಲ್ಲುವ ಶಕ್ತಿಯನ್ನು ಅವರಿಗೆ ದೊರಕಿಸಿದೆ… ತಮ್ಮ ಹಲವು ಕೃತಿಗಳಿಗೆ ರಾಜ್ಯಸಾಹಿತ್ಯ ಅಕಾಡೆಮಿಯ ಬಹುಮಾನಗಳನ್ನು ನಿಸಾರ್ ಅಹಮದ್ ಪಡೆದಿದ್ದಾರೆ. ‘ಹಕ್ಕಿಗಳು’ ಎಂಬ ಕೃತಿಗೆ 1978ರಲ್ಲಿ, ‘ಇದು ಬರಿ ಬೆಡಗಲ್ಲೊ ಅಣ್ಣ’ ಎಂಬ ಕತಿಗೆ 1981ರಲ್ಲಿ ‘ಅನಾಮಿಕ ಆಂಗ್ಲರು’ ಕೃತಿಗೆ 1982ರಲ್ಲಿ, ‘ಹಿರಿಯರು ಹರಸಿದ ಹೆದ್ದಾರಿ’ ಕೃತಿಗೆ 1992ರಲ್ಲಿ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. 1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1996ರಲ್ಲಿ ಕುವೆಂಪು ಹೆಸರಿನ ವಿಶ್ವಮಾನವ ಪ್ರಶಸ್ತಿ, 1992ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 1993ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, 2003ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, 2006 ರ ಅರಸು ಪ್ರಶಸ್ತಿ, 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ, ’73ನೇ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷ’ರಾಗಿ ಆಯ್ಕೆಯಾಗಿದ್ದ ನಿಸಾರ್ ರವರಿಗೆ 2012ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ 2014ರಲ್ಲಿ ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ– ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇವರದಾಗಿದೆ… ಇದಲ್ಲದೆ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಸಾಂಸ್ಕೃತಿಕ ಸಂಘಟನೆಗಳು ಹಾಗೂ ದುಬೈ, ಅಬುದಾಬಿ, ಕುವೈತ್, ಇಂಗ್ಲೆಂಡ್, ಸಿಂಗಾಪುರ ಮೊದಲಾದೆಡೆಗಳ ಕನ್ನಡ ಬಳಗಗಳು ಇವರನ್ನು ಸಮ್ಮಾನಿಸಿವೆ. 1967 ಮತ್ತು 1985ರಲ್ಲಿ ಎರಡು ಬಾರಿ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕನ್ನಡವನ್ನುಪ್ರತಿನಿಧಿಸಿದ ಹಿರಿಮೆ ಇವರಿಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ದುಡಿದಿದ್ದಾರೆ ಇವರು. ಡಾ.ಕೆ. ಎಸ್. ನಿಸಾರ್ ಅಹಮದ್ ಅವರ ಕವಿತೆಗಳು ಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ಮಲಯಾಳಂ, ಮರಾಠಿ, ತಮಿಳು ಹಾಗೂ ಚೀನಿ ಭಾಷೆಗಳಿಗೆ ಅನುವಾದಿತವಾಗಿವೆ. ಇವರ ಬದುಕು ಬರವಣಿಗೆಗಳ ಕುರಿತು ಬೆಂಗಳೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಪಿ‌ಎಚ್. ಡಿ. ಮಟ್ಟದ ಅಧ್ಯಯನಗಳು ನಡೆದು ಪುಸ್ತಕಗಳು ಹೊರಬಂದಿವೆ. ಕರ್ನಾಟಕ ಸರಕಾರವು ಇವರನ್ನು 2011ರಲ್ಲಿ ರಾಜ್ಯಮಟ್ಟದ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಿತ್ತು… 2006ರಲ್ಲಿ ಡಾ. ಕೆ. ಎಸ್. ನಿಸಾರ್ ಅಹಮದ್ ಅವರಿಗೆ ‘ನಿಸಾರ್ ನಿಮಗಿದೋ ನಮನ’ ಎಂಬ ಬೃಹತ್ ಅಭಿನಂದನ ಗ್ರಂಥವನ್ನು ಸಮರ್ಪಿಸಿ ಗೌರವಿಸಲಾಯಿತು. ಅವರ ಬಗೆಗೆ ಸಾಕ್ಷ್ಯಚಿತ್ರ, ಸಂದರ್ಶನ, ಕವನ ವಾಚನ ಮೊದಲಾದ ಸಿ.ಡಿಗಳು ಹೊರಬಂದಿವೆ. ‘ಕುರಿಗಳು ಸಾರ್ ಕುರಿಗಳು’ ಎಂಬ ಕವಿತೆಯ ಮೂಲಕ ಸಾಹಿತ್ಯಲೋಕಕ್ಕೆ ಆತ್ಮೀಯರಾದ ಡಾ. ಕೆ. ಎಸ್.ನಿಸಾರ್ ಅಹಮದ್ ಅವರು ಇಂದೂ ಆ ಜನಪ್ರಿಯತೆಯನ್ನೂ ವೈಚಾರಿಕತೆಯನ್ನೂ ಉಳಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು… ಇಷ್ಟೆಲ್ಲಾ ಪ್ರಶಸ್ತಿ, ಗೌರವಗಳೊಂದಿಗೆ ಕನ್ನಡಿಗರ ಹೃದಯ ಗೆದ್ದಿರುವ ಇವರು ಒಬ್ಬ ವಿವಾದಾತೀತ ವ್ಯಕ್ತಿ. ಕನ್ನಡ ಸಾಹಿತ್ಯ ಲೋಕದಲ್ಲಿ ಜಾತಿಯ, ರಾಜಕಾರಣದ, ಪ್ರಾದೇಶಿಕತೆಯ ಲಾಬಿಗಳೇ ರಾರಾಜಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯಾವ ಲಾಬಿಗೂ ಇಳಿಯದೇ ಸ್ವಯಂ ತೇಜೋಮಾನರಾಗಿದ್ದರು. ಯುಗದ ಕವಿಯಾಗಿದ್ದರು. ಅವರೊಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಜೊತೆಯಲ್ಲಿ ತಮ್ಮ ಪತ್ನಿಯನ್ನೂ ಕರೆದೊಯ್ಯಬೇಕಿತ್ತು. ಸರಿ ಶುರುವಾಯಿತು ಅವರ ಪತ್ನಿಯ ಮೇಕಪ್ಪು. ವಸ್ತ್ರಾಲಂಕಾರ, ಪ್ರಸಾಧನ, ಒಡವೆಗಳ ಭೂಷಣ ಎಲ್ಲವೂ ಆದವು. ನಮ್ಮ ಕವಿಯೂ ಪತ್ನಿಯ ಸರ್ವಾಲಂಕಾರ ಸೊಬಗನ್ನು ಕಣ್ತಣಿಯೆ ನೋಡಿ ಹೆಮ್ಮೆಪಟ್ಟುಕೊಂಡರು. ಇನ್ನೇನು ಹೊರಡಬೇಕು ಆಗ ಅವರ ಪತ್ನಿ ಬುರ್ಖಾತೊಟ್ಟುಕೊಂಡರಂತೆ. ಎಲ್ಲ ಅಲಂಕಾರವನ್ನೂ ಆ ಬುರ್ಖಾ ಮರೆ ಮಾಡಿದ ಬಗೆಯನ್ನು ಕಂಡು ವಿಷಾದಿಸುತ್ತಾ ಅವರು ಕವನ ಬರೆದರು. ನವಿರು ಹಾಸ್ಯ ಮತ್ತು ವಿಚಾರವಂತಿಕೆಯಿಂದ ಕೂಡಿದ ಆ ಕವನಕ್ಕೆ ಮುಸ್ಲಿಂ ಬಾಂಧವರು ಕೋಪಗೊಳ್ಳಲಿಲ್ಲ, ಫತ್ವಾ ಹೊರಡಿಸಲಿಲ್ಲ. ಇದು ಕವಿ ಕೆ ಎಸ್ ನಿಸಾರ್ ಅಹಮದರ ಸರ್ವವಂದ್ಯ ವರ್ಚಸ್ಸಿಗೆ ಸಾಕ್ಷಿಯಾಗಿದೆ..! ಇಂತಹ ಸಹೃದಯ ಕವಿವರ್ಯರು ಇಂದು ನಮನ್ನಗಲಿದ್ದಾರೆ. ಅವರಿಗೆ ನಮಸ್ಕಾರಗಳು… ************************************** ಕೆ.ಶಿವು.ಲಕ್ಕಣ್ಣವರ

ನಿತ್ಯೋತ್ಸವ ಕವಿ Read Post »

You cannot copy content of this page

Scroll to Top